
ನವದೆಹಲಿ: ಏಷ್ಯಾಕಪ್ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇತಿಹಾಸ ಬರೆದಿದ್ದು ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿ 8 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದೆ.
ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025 ರ ಹಾಕಿ ಏಷ್ಯಾಕಪ್ (Hockey Asia Cup 2025) ಫೈನಲ್ನಲ್ಲಿ ಹರ್ಮನ್ಪ್ರೀತ್ ಸಿಂಗ್ (Harmanpreet Singh) ನಾಯಕತ್ವದ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ 8 ವರ್ಷಗಳ ಬಳಿಕ ನಾಲ್ಕನೇ ಬಾರಿಗೆ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ.
ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ
ಟೂರ್ನಿಯ ಸೂಪರ್ 4 ಸುತ್ತಿನಲ್ಲಿ ಇದೇ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯವನ್ನು 2-2 ರಿಂದ ಡ್ರಾ ಮಾಡಿಕೊಂಡಿದ್ದ ಭಾರತ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಮೇಲೆ ಅಕ್ಷರಶಃ ಸವಾರಿ ಮಾಡಿತು. ಕೊರಿಯಾ ತಂಡಕ್ಕೆ ಯಾವುದೇ ಅವಕಾಶ ನೀಡದ ಭಾರತ ತಂಡ ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು.
ನಾಲ್ಕನೇ ಬಾರಿಗೆ ಚಾಂಪಿಯನ್
9ನೇ ಫೈನಲ್ ಆಡುವ ಮೂಲಕ ಭಾರತ ತಂಡ ನಾಲ್ಕನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಟೀಂ ಇಂಡಿಯಾ ಕೊನೆಯ ಬಾರಿಗೆ 8 ವರ್ಷಗಳ ಹಿಂದೆ ಅಂದರೆ 2017 ರಲ್ಲಿ ಪ್ರಶಸ್ತಿ ಗೆದ್ದಿತ್ತು. ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ದಕ್ಷಿಣ ಕೊರಿಯಾ 5 ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಇದಕ್ಕೂ ಮೊದಲು, ಉಭಯ ದೇಶಗಳ ನಡುವೆ 3 ಫೈನಲ್‌ಗಳು ನಡೆದಿದ್ದು, ಅದರಲ್ಲಿ 2 ರಲ್ಲಿ ದಕ್ಷಿಣ ಕೊರಿಯಾ ಮತ್ತು ಒಂದು ಪಂದ್ಯದಲ್ಲಿ ಭಾರತ ಜಯಗಳಿಸಿದೆ.
ವಿಶ್ವಕಪ್ ಗೆ ಅರ್ಹತೆ
ಈ ಗೆಲುವಿನೊಂದಿಗೆ, ಭಾರತ ತಂಡ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ 2026 ರ FIH ಪುರುಷರ ವಿಶ್ವಕಪ್ಗೆ ನೇರವಾಗಿ ಅರ್ಹತೆ ಪಡೆದುಕೊಂಡಿದೆ.
Advertisement