

ಆಮ್ಸ್‌ಟೆಲ್ವೀನ್: FIH ಪುರುಷರ ಹಾಕಿ ವಿಶ್ವಕಪ್ 2026ರ ತನ್ನ ಮೊದಲ ಪಂದ್ಯದಲ್ಲೇ ಭಾರತ ಭರ್ಜರಿ ಪ್ರದರ್ಶನ ನೀಡಿ ವೇಲ್ಸ್ ತಂಡವನ್ನು 3-1 ಗೋಲುಗಳಿಂದ ಮಣಿಸಿದ್ದು, ಈ ಮೂಲಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಆಮ್ಸ್‌ಟೆಲ್ವೀನ್‌ನ ವಾಗ್ನರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪೂಲ್ D ಪಂದ್ಯದಲ್ಲಿ ಭಾರತ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. ಪಂದ್ಯದ 8ನೇ ನಿಮಿಷದಲ್ಲಿ ಸಂಜಯ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ನೀಡಿದರು.
ಕೇವಲ ಮೂರು ನಿಮಿಷಗಳ ಬಳಿಕ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಮ್ಮ ಅದ್ಭುತ ಡ್ರ್ಯಾಗ್-ಫ್ಲಿಕ್ ಮೂಲಕ ಮತ್ತೊಂದು ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿದರು.
ಎರಡನೇ ಕ್ವಾರ್ಟರ್‌ನಲ್ಲಿ ಭಾರತ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಮತ್ತೆ ಮಿಂಚಿದ ಹರ್ಮನ್‌ಪ್ರೀತ್ 43ನೇ ನಿಮಿಷದಲ್ಲಿ ತಮ್ಮ 2ನೇ ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 3-0ಕ್ಕೆ ಕೊಂಡೊಯ್ದರು.
ಕೊನೆಯ ಹಂತದಲ್ಲಿ ವೇಲ್ಸ್ ಒಂದು ಗೋಲು ಗಳಿಸಿದರೂ, ಭಾರತ ರಕ್ಷಣಾತ್ಮಕವಾಗಿ ಗಟ್ಟಿಯಾಗಿ ನಿಂತು ಪಂದ್ಯವನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು. ವೇಲ್ಸ್‌ನ ಗೋಲು ದೀರ್ಘ ರಿವ್ಯೂ ಬಳಿಕ ಮಾನ್ಯಗೊಂಡಿತ್ತು.
51 ವರ್ಷಗಳ ಬರ ನೀಗಿಸುವ ಗುರಿ
1975ರಲ್ಲಿ ವಿಶ್ವಕಪ್ ಗೆದ್ದ ಬಳಿಕ ಭಾರತ ಪುರುಷರ ಹಾಕಿ ತಂಡಕ್ಕೆ ಮತ್ತೊಮ್ಮೆ ವಿಶ್ವಕಪ್ ಎತ್ತಿಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ 2026ರ ಅಭಿಯಾನವನ್ನು ಭಾರತ 51 ವರ್ಷಗಳ ವಿಶ್ವಕಪ್ ಪ್ರಶಸ್ತಿ ಬರ ಅಂತ್ಯಗೊಳಿಸುವ ಗುರಿಯೊಂದಿಗೆ ಆರಂಭಿಸಿದೆ.
ಪೂಲ್ Dಯಲ್ಲಿ ಭಾರತಕ್ಕೆ ವೇಲ್ಸ್ ಜೊತೆಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಎದುರಾಳಿಗಳಾಗಿವೆ. ಭಾರತದ ಮುಂದಿನ ಪಂದ್ಯ ಆಗಸ್ಟ್ 17ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಬಳಿಕ ಆಗಸ್ಟ್ 19ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಎದುರಿಸಲಿದೆ.
ಆಗಸ್ಟ್ 15ರಿಂದ 30ರವರೆಗೆ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ವಿಶ್ವಕಪ್‌ನಲ್ಲಿ ಭಾರತ ಮೊದಲ ಪಂದ್ಯದಲ್ಲೇ ಗೆಲುವಿನ ಮೂಲಕ ತನ್ನ ಪ್ರಶಸ್ತಿ ಕನಸಿಗೆ ಬಲವಾದ ಚಾಲನೆ ನೀಡಿದೆ.