

ನವದೆಹಲಿ: ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ನಿವೃತ್ತಿಯ ಬಗ್ಗೆ ಭಾರಿ ಸುಳಿವು ನೀಡಿದ್ದು, 2026-27ರ ಸೀಸನ್ ತಮ್ಮ ವೃತ್ತಿಪರ ಫುಟ್‌ಬಾಲ್ ಜೀವನದ "ಬಹುಶಃ" ಕೊನೆಯ ವರ್ಷ ಎಂದು ಒಪ್ಪಿಕೊಂಡಿದ್ದಾರೆ.
41 ವರ್ಷದ ಪೋರ್ಚುಗಲ್ ಸೂಪರ್‌ಸ್ಟಾರ್, 'ವೋಗ್' (Vogue) ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪೋರ್ಚುಗಲ್‌ನ ಕ್ಯಾಸ್ಕೈಸ್‌ನಲ್ಲಿ ತಮ್ಮ ಬಹುಕಾಲದ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಅವರೊಂದಿಗೆ ನಡೆದ ಖಾಸಗಿ ವಿವಾಹ ಮಹೋತ್ಸವಕ್ಕೆ ಕೆಲವು ದಿನಗಳ ಮುನ್ನ ಈ ಸಂಭಾಷಣೆ ನಡೆದಿದೆ.
"ಇದು ಬಹುಶಃ ನನ್ನ ಫುಟ್‌ಬಾಲ್‌ನ ಕೊನೆಯ ವರ್ಷ, ಮತ್ತು ನಾನು ಒಂದು ಅದ್ಭುತವಾದ ಪರಂಪರೆಯನ್ನು ಬಿಟ್ಟು ಹೋಗಲು ಬಯಸುತ್ತೇನೆ." ಎಂದು ಹೇಳಿದ್ದಾರೆ.
ತಮ್ಮ ಮುಂದಿನ ಭವಿಷ್ಯ "ಈಗಾಗಲೇ ಸಂಪೂರ್ಣವಾಗಿ ಸಿದ್ಧವಾಗಿದೆ" ಎಂದು ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ನಿವೃತ್ತಿಯ ನಂತರ ಪ್ರವಾಸ ಮಾಡುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು ಮತ್ತು ಪ್ಯಾಡೆಲ್ (Padel) ಆಡುವುದಾಗಿ ರೆನಾಲ್ಡೋ ತಿಳಿಸಿದ್ದಾರೆ.
1,000 ಗೋಲುಗಳ ಗುರಿ: ರೊನಾಲ್ಡೊ ಪ್ರಸ್ತುತ 976 ವೃತ್ತಿಪರ ಸೀನಿಯರ್ ಗೋಲುಗಳನ್ನು ಗಳಿಸಿದ್ದು, ತಮ್ಮ ವೃತ್ತಿಜೀವನದ ಕೊನೆಯ ಹಂತಕ್ಕೆ ಕಾಲಿಡುತ್ತಿದ್ದಾರೆ. ಅವರು ಇತಿಹಾಸದಲ್ಲೇ ಮೊದಲ ಬಾರಿಗೆ 1,000 ವೃತ್ತಿಪರ ಗೋಲುಗಳ ಮೈಲಿಗಲ್ಲು ತಲುಪಲು ಕೇವಲ 24 ಗೋಲುಗಳಷ್ಟೇ ಬಾಕಿ ಇವೆ.
ಒಪ್ಪಂದದ ಮುಕ್ತಾಯ: ಸೌದಿ ಪ್ರೊ ಲೀಗ್ ಕ್ಲಬ್ ಅಲ್-ನಾಸರ್ ಜೊತೆಗಿನ ಅವರ ಭಾರಿ ಮೊತ್ತದ ಒಪ್ಪಂದವು ಜೂನ್ 2027 ಕ್ಕೆ ಕೊನೆಗೊಳ್ಳಲಿದ್ದು, ಇದು ಅವರ ನಿವೃತ್ತಿಯ ಸಮಯಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ.