

ನವದೆಹಲಿ: ಕ್ರೀಡಾ ವಲಯದಲ್ಲಿ ಈ ವರ್ಷದ 100 ಅತ್ಯಂತ ಪ್ರಭಾವಿಗಳ ಪಟ್ಟಿಯನ್ನು ಟೈಮ್ ಮ್ಯಾಗಜಿನ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಹೆಸರಿದ್ದು, ಇದರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದಾರೆ.
2026 ರ ಸಾಲಿನಲ್ಲಿ ಕ್ರೀಡೆಯಲ್ಲಿ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಟೈಮ್ ಪಟ್ಟಿಯಲ್ಲಿ ಕ್ರೀಡಾಪಟುಗಳು, ತರಬೇತುದಾರರು, ಮಾರ್ಗದರ್ಶಕರು ಮತ್ತು ಹೂಡಿಕೆದಾರರು ಇದ್ದಾರೆ.
ಈ ಪಟ್ಟಿಯಲ್ಲಿ ಅಮೆರಿಕದ ಬ್ಯಾಸ್ಕೆಟ್ಬಾಲ್ ದಂತಕಥೆ ಲೆಬ್ರಾನ್ ಜೇಮ್ಸ್ ಮೊದಲ ಸ್ಥಾನ ಪಡೆದಿದ್ದು, ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ, ಚೀನೀ-ಅಮೇರಿಕನ್ ಸ್ಕೀಯರ್ ಐಲೀನ್ ಗು, ಟೆನಿಸ್ ತಾರೆ ಕಾರ್ಲೋಸ್ ಅಲ್ಕರಾಜ್, ಬ್ಯಾಸ್ಕೆಟ್ಬಾಲ್ ಆಟಗಾರ ವಿಕ್ಟರ್ ವೆಂಬನ್ಯಾಮಾ, ದಂತಕಥೆ ಗಾಲ್ಫ್ ಆಟಗಾರ ರೋರಿ ಮ್ಯಾಕ್ಲ್ರಾಯ್ ಸೇರಿದಂತೆ ಕ್ರೀಡಾ ಜಗತ್ತಿನ ಸೂಪರ್ಸ್ಟಾರ್ಗಳು ಸೇರಿದ್ದಾರೆ.
ಪಟ್ಟಿಯಲ್ಲಿರುವ ಇತರ ದೊಡ್ಡ ಹೆಸರುಗಳಲ್ಲಿ ಮತ್ತೊಬ್ಬ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೊ ರೊನಾಲ್ಡೊ, ಕಳೆದ ವರ್ಷ ಭಾರತದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಗೆಲುವಿಗೆ ಕಾರಣರಾದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ನಾಯಕ ಟೆಂಬಾ ಬವುಮಾ, ನ್ಯೂಯಾರ್ಕ್ ನಿಕ್ಸ್ನ ಬ್ಯಾಸ್ಕೆಟ್ಬಾಲ್ ಆಟಗಾರ ಜಲೆನ್ ಬ್ರನ್ಸನ್ ಮತ್ತು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಸೇರಿದ್ದಾರೆ. ಭಾರತೀಯ ಕ್ರಿಕೆಟ್ ಆಟಗಾರ್ತಿ ಮಂಧಾನಾ ಈ ಎಲೈಟ್ ಕ್ಲಬ್ನ ಭಾಗವಾಗಿದ್ದಾರೆ.
ಮುಂಬೈನಲ್ಲಿ ಜನಿಸಿದ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಆಗಿರುವ 29 ವರ್ಷದ ಮಂಧಾನಾ "ದೇಶೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಮೂರು ಮಾದರಿಗಳಲ್ಲಿ ಶತಕ ಗಳಿಸಿದ ಮೊದಲ ಮಹಿಳೆಯಾಗಿದ್ದು, ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿನಲ್ಲಿ 17 ಶತಕಗಳನ್ನು ಗಳಿಸಿದ ಆಟಗಾರ್ತಿ ಎಂದು ಟೈಮ್ನ ಪ್ರೊಫೈಲ್ ಹೇಳಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಮಹಿಳೆ ಕೂಡ ಆಗಿದ್ದಾರೆ.
Advertisement