

ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟದ ಪುರುಷರ ಹಾಕಿ ಫೈನಲ್‌ನಲ್ಲಿ ಭಾರತ ಮಲೇಷ್ಯಾವನ್ನು 5-1 ಅಂತರದಿಂದ ಭರ್ಜರಿಯಾಗಿ ಸೋಲಿಸಿ, ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿತು.
ಈ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಈ ವಿಭಾಗದಲ್ಲಿ ತನ್ನ ಚಿನ್ನದ ಪದಕವನ್ನು ಉಳಿಸಿಕೊಂಡಿರುವುದು ಇದೇ ಮೊದಲು. ಈ ಗೆಲುವಿನೊಂದಿಗೆ, ಭಾರತ LA 2028 ಒಲಿಂಪಿಕ್ಸ್‌ನಲ್ಲಿ ನೇರ ಅರ್ಹತೆಯನ್ನು ಖಚಿತಪಡಿಸಿಕೊಂಡಿದೆ.
ನಾಯಕ ಹರ್ಮನ್‌ಪ್ರೀತ್ ಸಿಂಗ್ 11ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಡ್ರ್ಯಾಗ್ ಫ್ಲಿಕ್ ಮೂಲಕ ಗೋಲು ಗಳಿಸಿ ಖಾತೆ ತೆರೆದರು, ಆದರೆ 14ನೇ ನಿಮಿಷದಲ್ಲಿ ಮಲೇಷ್ಯಾದ ಶೆಲ್ಲೊ ಸಿಲ್ವೆರಿಯಸ್ ಗೋಲು ಗಳಿಸಿ ಮೊದಲ ಕ್ವಾರ್ಟರ್ ಅಂತ್ಯಕ್ಕೆ ಸ್ಕೋರ್ ಅನ್ನು 1-1 ಸಮಬಲಗೊಳಿಸಿದರು.
ಎರಡನೇ ಕ್ವಾರ್ಟರ್‌ನಲ್ಲಿ ಜುಗ್ರಾಜ್ ಸಿಂಗ್ ಪೆನಾಲ್ಟಿ ಕಾರ್ನರ್ ನ್ನು ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟರು; ಇದರೊಂದಿಗೆ ಹಾಲಿ ಚಾಂಪಿಯನ್ ಭಾರತ ತಂಡ 2-1 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ನಂತರ ಮೂರನೇ ಕ್ವಾರ್ಟರ್‌ನ 12ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ಹೆಚ್ಚಿಸಿದರು.
ಅಂತಿಮ ಕ್ವಾರ್ಟರ್ ಮುಗಿಯಲು ಆರು ನಿಮಿಷಗಳು ಬಾಕಿ ಇರುವಾಗ, ಶಿಲಾನಂದ್ ಲಾಕ್ರಾ 'ಫಾರ್-ಪೋಸ್ಟ್ ಡಿಫ್ಲೆಕ್ಷನ್' ಮೂಲಕ ಫೀಲ್ಡ್ ಗೋಲು ಗಳಿಸಿ ಸ್ಕೋರ್ ನ್ನು 4-1ಕ್ಕೆ ಏರಿಸಿದರು. ಮಲೇಷ್ಯಾ ತಂಡವು ಆಕ್ರಮಣಕಾರಿ ಆಟಕ್ಕೆ ಮುಂದಾದಾಗ, ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ತಮ್ಮ ಎರಡನೇ ಗೋಲು ಗಳಿಸಿ ಸ್ಕೋರ್ ನ್ನು 5-1ಕ್ಕೆ ತಲುಪಿಸಿದರು ಮತ್ತು ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು.
ಒಂದೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಚಿನ್ನದ ಪದಕಗಳನ್ನು ಗೆದ್ದಿರುವುದು ಕೂಡ ಇದೇ ಮೊದಲು.