ನನಗೆ ಅವನ ಹೆಬ್ಬೆರಳೇ ಬೇಕಿತ್ತು!

ನನಗೆ ಅವನ ಹೆಬ್ಬೆರಳೇ ಬೇಕಿತ್ತು!
Updated on

ಎಲ್ಲಿಯವರೆಗೆ ಭರತಖಂಡದಲ್ಲಿ ಕುರುವಂಶಜರ ಕತೆ ಉಳಿದಿರುತ್ತದೆಯೋ ಅಲ್ಲಿಯವರೆಗೆ ಈ ದ್ರೋಣಾಚಾರ್ಯನ ಹೆಸರು, ಕೀರ್ತಿ, ಅಪಕೀರ್ತಿಯೂ ಉಳಿದಿರುತ್ತದೆ. 'ಏಕಲವ್ಯನ ವಿಚಾರದಲ್ಲಿ ದ್ರೋಣಾಚಾರ್ಯರು ಮಾಡಿದ್ದು ತಪ್ಪು. ಅರ್ಜುನನ ಸಲುವಾಗಿ ವಿನಾಕಾರಣ ಏಕಲವ್ಯನ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದಿದ್ದು ದ್ರೋಣಾಚಾರ್ಯರ ಪಕ್ಷಪಾತ ನಿರ್ಧಾರ' ಎಂದು ಮುಂದಿನ ಜನಾಂಗ ಗುರುತಿಸುತ್ತದೆ ಎಂಬುದನ್ನೂ ಬಲ್ಲೆ. ಹಾಗಾದರೆ ನಾನು ಮಾಡಿದ್ದು ಅಪರಾಧವೇ? ನಾನು ಯಾವ ಕಾರಣದಿಂದ ಹೀಗೆ ನಡೆದುಕೊಂಡೆ? ನನ್ನ ನಡೆ ಮೇಲ್ನೋಟಕ್ಕೆ ತಪ್ಪೆನ್ನಿಸಿದರೂ ಅದರ ಒಳಗುಟ್ಟೇನು? ಇದರಿಂದ ಪ್ರಪಂಚಕ್ಕಾದ ಉಪಯೋಗವೇನು? ಎಂಬ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತೇನೆ, ಕೇಳಿ:
ಗುರುವಾಗಿ ಆಚಾರ್ಯ ಪಟ್ಟ ಒಪ್ಪಿಕೊಂಡ ಕ್ಷಣದಲ್ಲಿ ನನಗೆ ಆಶ್ರಯ, ಅಂತಸ್ತು, ಸ್ಥಾನಮಾನವನ್ನಿತ್ತ ಕುರುಸಾಮ್ರಾಜ್ಯಕ್ಕೆ ನನ್ನ ಪೂರ್ಣ ವಿದ್ಯೆಯನ್ನು ಧಾರೆ ಎರೆಯುತ್ತೇನೆ. ನನ್ನ ಮಗ ಅಶ್ವತ್ಥಾಮನ ಹೊರತಾಗಿ ಬೇರಾವ ಕ್ಷತ್ರಿಯೇತರನಿಗೆ ಧನುರ್ ವಿದ್ಯೆ ಕಲಿಸುವುದಿಲ್ಲ ಎಂಬುದಾಗಿ ನಿರ್ಧರಿಸಿದ್ದೆ. ನನ್ನ ಸಂಕಲ್ಪವನ್ನು ಪ್ರಕಟಪಡಿಸಿದೆ. ಅದರಂತೆ ನಾನು ನಡೆದುಕೊಳ್ಳುವುದು ನನ್ನ ಧರ್ಮ. ಆದ್ದರಿಂದಲೇ ಬೇಡರ ಹುಡುಗ ಏಕಲವ್ಯ, ಸೂತನ ಸಾಕುಮಗ ಕರ್ಣ, ನೇರವಾಗಿ ನನ್ನಲ್ಲಿಗೆ ಬಂದು, ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿರೆಂದು ಕೇಳಿಕೊಂಡಾಗ, ನೇರವಾಗಿ ಅಸಮ್ಮತಿ ಸೂಚಿಸಿದ್ದೆ. ಆದರೆ ಅಂದೇನಾಗಿ ಹೋಯಿತು? ನನ್ನ ಮೂರ್ತಿಯನ್ನೇ ಗುರುವೆಂದು ಪೂಜಿಸಿ, ಬಿಲ್ವಿದ್ಯೆ ಅಭ್ಯಾಸ ಮಾಡಿದ್ದ ಏಕಲವ್ಯ. ಅಂದು ತನ್ನ ಅದ್ಭುತ ಬಿಲ್ವಿದ್ಯಾ ಚಾತುರ್ಯ ಪ್ರದರ್ಶಿಸಿದ. ನೋಡಿ ಸುಮ್ಮನಿರಲಾದೀತೇ?
ನನ್ನ ಗುರುಕುಲದಲ್ಲಿ ಅತ್ಯಂತ ಶ್ರದ್ಧೆಯಿಂದ ಬಿಲ್ವಿದ್ಯೆ ಸಿದ್ಧಿಸಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದು ಅರ್ಜುನ. ಅವನ ಆಸಕ್ತಿ, ಶ್ರದ್ಧೆ, ಏಕಾಗ್ರತೆ ನೋಡಿ ಅವನನ್ನು ಮೆಚ್ಚಿಕೊಂಡಿದ್ದರಲ್ಲಿ ಅಸಹಜತೆ ಏನೇನೂ ಇರಲಿಲ್ಲ. 'ನಿನ್ನನ್ನು ಬಿಲ್ವಿದ್ಯಾ ಪ್ರಾವೀಣ್ಯದಲ್ಲಿ ಅದ್ವಿತೀಯನನ್ನಾಗಿಸುತ್ತೇನೆ' ಎಂಬ ವಚನ ನನ್ನ ಬಾಯಲ್ಲಿ ಆಯಾಚಿತವಾಗಿ ಬಂದುಹೋಯಿತು. ಅದಕ್ಕವನು ಅರ್ಹನಿದ್ದ, ಸಮರ್ಥನಿದ್ದ ಎಂಬುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ಅದಕ್ಕೂ ಏಕಲವ್ಯನ ಕತೆಗೂ ಈ ಜಗತ್ತು ನಂಟು ಹಾಕುತ್ತದೆ ಎಂಬುದನ್ನೂ ನಾನು ಬಲ್ಲೆ.
ಹಸ್ತಿನಾವತಿಯಲ್ಲಾಗಲಿ, ಪಾಂಚಾಲದಲ್ಲಾಗಲಿ ಶಸ್ತ್ರವಿದ್ಯೆ ಕಲಿಯುವ ಹಕ್ಕು ಇರುವುದು ಕೇವಲ ಬ್ರಾಹ್ಮಣ ಮತ್ತು ಕ್ಷತ್ರಿಯರಿಗೆ ಮಾತ್ರ. ನಾನು ವರ್ಣ ವ್ಯವಸ್ಥೆಯ ಪರವೂ ಅಲ್ಲ, ವಿರೋಧಿಯೂ ಅಲ್ಲ. ಕಾಲಕ್ಕೆ ರಾಜಧರ್ಮವನ್ನು ಪಾಲಿಸಲು, ನಿರ್ವಹಿಸಲು ಬೇಕಿರುವ ಜಾಣ್ಮೆ ಮತ್ತು ಅರ್ಹತೆ. ಅವೆರಡು ವರ್ಣಗಳಲ್ಲಿತ್ತು ಎನ್ನುವುದು ಸರಿಯೇನೋ. ವೈಶ್ಯ ಅಥವಾ ಶೂದ್ರನೇನಾದರೂ ಶಸ್ತ್ರವಿದ್ಯೆ ಕಲಿತರೆ ಅವರ ಧನುರ್ ವಿಧ್ಯಾ ಕೌಶಲ್ಯವನ್ನು ಆಯಾ ರಾಜ್ಯದ ರಾಜವಂಶದವರು ಬಲಾತ್ಕಾರದಿಂದ ತಮ್ಮ ಸ್ವತ್ತನ್ನಾಗಿ ಮಾಡಿಕೊಂಡಾರು... ತಮ್ಮ ಅಧರ್ಮ ಪುಷ್ಠೀಕರಿಸುವುದಕ್ಕೆ ದಾಳವನ್ನಾಗಿ ಮಾಡಿಕೊಂಡಾರು... ಸಾಮಾನ್ಯ ಜನ ಜೀವನಕ್ಕೆ ಅದರಿಂದ ಭಂಗ ಬಂದೀತು.... ಅಷ್ಟಿಲ್ಲದೆ ಸುಮ್ಮನೆ ನಿಯಮವನ್ನು ಮಾಡುತ್ತಾರೆಯೇ? ಪ್ರಸ್ತುತ ಮಗಧ ದೇಶದಲ್ಲಿ ಮಾತ್ರ ಕ್ಷತ್ರಿಯೇತರನೂ ಶಸ್ತ್ರವಿದ್ಯೆ ಕಲಿಯಬಹುದಾಗಿತ್ತಾದರೂ ಅಲ್ಲಿಯ ರಾಜನಾದ ಜರಾಸಂಧನನ್ನು ವಿರೋಧಿಸುವಂತಿಲ್ಲ ...
ಕುರು ರಾಜಕುಮಾರರಿಗೆ ವಿದ್ಯೆ ಕಲಿಸುವ ಜೊತೆ ಜೊತೆಯಲ್ಲಿ ಕುರುಕುಲದ ಒಳಿತನ್ನೂ ನಾನು ಯೋಚಿಸಬೇಡವೇ? ಸ್ವಯಂ ಶಕ್ತಿವಂತರಾದವರಿಗೆ, ಬೇರೆಯವರ ಶಕ್ತಿಯನ್ನು ತನ್ನದಾಗಿಸಿಕೊಳ್ಳುವ, ಅವರನ್ನು ತಮ್ಮ ಉದ್ಧೇಶ ಸಾಧನೆಗೆ ಬಳಸಿಕೊಳ್ಳುವ ಯಾವುದೇ ಆಸಕ್ತಿ ಇರುವುದಿಲ್ಲ ಮತ್ತು ಬರುವುದಿಲ್ಲ. ಯಾರಿಗೆ ತಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ಅಪನಂಬಿಕೆಯೋ ಅವರು, ತಮ್ಮ ಉದ್ದೇಶ ಸಾಧನೆಗೆ ಹೊಸ ಹೊಸ ಅಡ್ಡ ದಾರಿಗಳನ್ನು ಹುಡುಕುತ್ತಿರುತ್ತಾರೆ. ತನ್ನ ಸಂಪರ್ಕಕ್ಕೆ ಬರುವ ಶಕ್ತಿವಂತರನ್ನು, ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಎದುರು ನೋಡುತ್ತಿರುತ್ತಾರೆ ಎಂಬುದಂತೂ ಸತ್ಯ. ನನ್ನ ಆಶ್ರಯದಲ್ಲೇ ಬೆಳೆಯುತ್ತಿದ್ದ ದುರ್ಯೋಧನ, ದುಶ್ಯಾಸನಾದಿಗಳ ಮನಸ್ಸಿನಲ್ಲಿ ಏನು ಯೋಜನೆ ಇರಬಹುದೆಂದು ಗ್ರಹಿಸಲಾರದಷ್ಟು ಹೆಡ್ಡ ನಾನಾಗಿರಲಿಲ್ಲ...
ಆದರೆ ನನ್ನ ಯೋಚನೆ ಬೇರೆಯೇ ಇದೆ. ಈ ಏಕಲವ್ಯ ಮಗಧ ದೇಶದವನು. ಪೂರ್ಣವಿದ್ಯೆ ಕಲಿತು ಮಗಧರಾಷ್ಟ್ರವನ್ನು ಸೇರಿದನಾದರೆ ಕುರುಸಾಮ್ರಾಜ್ಯಕ್ಕೊಂದು ಪ್ರಬಲ ವಿರೋಧಿ ಹುಟ್ಟಿಕೊಂಡಂತೆ. ಅಲ್ಲಿನ ರಾಜ ಜರಾಸಂಧನಾದರೋ ಅಧರ್ಮಿ. ತನ್ನ ತೋಳ್ಬಲದಿಂದಲೇ ಅಧಿಕಾರ ನಡೆಸುತ್ತಿರುವವನು. ಅವನ ಜೊತೆ ಏಕಲವ್ಯನ ಬಿಲ್ವಿದ್ಯಾ ಪ್ರಾವೀಣ್ಯವೂ ದಕ್ಕಿಬಿಟ್ಟಿತ್ತಾದರೆ, ಮಗಧ ರಾಜ್ಯ ಇನ್ನಷ್ಟು ಬಲಿಷ್ಠವಾಗಿಬಿಡುತ್ತಿತ್ತು.  ಕುರುಸಾಮ್ರಾಜ್ಯಕ್ಕೆ ಧಕ್ಕೆ ಬರುತ್ತಿತ್ತು. ಊಹೂಂ... ಹಾಗಾಗಕೂಡದು....
'ಗುರುವರ್ಯಾ...' ಎನ್ನುತ್ತಾ ಕಾಲಿಗೆರಗಿದ ಏಕಲವ್ಯನಲ್ಲಿ ಮನಸ್ಸು ಕರಗುವ ಹೊತ್ತು... 'ನೀವೇ ನನ್ನ ಗುರು' ಎಂದು ಪ್ರಾಂಜಲ ಮನಸ್ಸಿನಿಂದ ಹೇಳುತ್ತಿರುವ ಏಕಲವ್ಯನನ್ನು ಏನು ಮಾಡಲಿ? ಭುಜಗಳನ್ನು ಹಿಡಿದೆತ್ತಿ, ಆಲಂಗಿಸಿ, ನೆತ್ತಿಯನ್ನು ಆಘ್ರಾಣಿಸಿಬಿಡಲೇ? ಪಾಪದ ಹುಡುಗ... ಎಷ್ಟು ಶ್ರದ್ಧೆಯಿಟ್ಟು ಅಭ್ಯಾಸ ಮಾಡಿದ್ದಾನೆ... ಒಂದು ಮುಗ್ಧ ಹುಡುಗನ ಇಷ್ಟು ದಿನದ ಪರಿಶ್ರಮವ ಗಣಿಸದೆ ಹೇಗಿರಲಿ? ಇಲ್ಲ, ಮುಂದಿನ ಪರಿಣಾಮ ಸ್ಪಷ್ಟವಾಗಿ ಕಾಣುತ್ತಿರುವಾಗ ನಾನದನ್ನು ಕಡೆಗಣಿಸುವಂತಿರಲಿಲ್ಲ... ಮನಸ್ಸನ್ನು ಕಲ್ಲಾಗಿಸಿಕೊಳ್ಳದೆ ನನಗೆ ಬೇರೆ ಆಯ್ಕೆ ಇಲ್ಲ. ನನ್ನನ್ನಲ್ಲದೆ ಬೇರಾವುದಾದರೂ ಗುರುವನ್ನು ಆಯ್ದು ಧನುರ್ವಿದ್ಯೆ ಕಲಿತಿದ್ದರೆ ಪ್ರಪಂಚದ ಶ್ರೇಷ್ಠ ಧನುರ್ಧಾರಿಯಾಗುವ ಅರ್ಹತೆ ಇದ್ದವ ಏಕಲವ್ಯ. ಏನು ಮಾಡಲಿ? ಏಕಲವ್ಯನನ್ನು ಶಿಷ್ಯನಾಗಿ ಸ್ವೀಕರಿಸಿಬಿಡಲೇ?  ಅದು ನಾನು ಕುರುಕುಲ ಆಚಾರ್ಯನಾಗುವಾಗ ಮಾಡಿದ ಸಂಕಲ್ಪವನ್ನು ನಾನೇ ಮೀರಿದಂತೆ. ಅಲ್ಲದೆ ಅದು ಪ್ರಪಂಚದ ದೃಷ್ಟಿಯಿಂದಲೂ ಒಳಿತಲ್ಲ. ಏಕಲವ್ಯನನ್ನು ಹೀಗೇ ಬಿಟ್ಟುಬಿಡಲೇ? ಈ ದ್ರೋಣನೇ ಗುರುವೆಂದು ನಂಬಿ, ನನ್ನ ಪಾಠಗಳನ್ನು ಮರೆಯಲ್ಲಿ ನಿಂತು ಆಲಿಸಿ, ನಂತರ ಸ್ವಂತ ಪರಿಶ್ರಮದಿಂದ ಸಿದ್ಧಿಸಿಕೊಂಡರೂ, ಈ ವಿದ್ಯೆ ದುರುಪಯೋಗವಾದರೆ? ಅದನ್ನು ತಡೆಯುವುದೂ ನನ್ನ ಕರ್ತವ್ಯವಲ್ಲವೇ?
ಕುರುಕುಲದ ಹಿತಕ್ಕಾಗಿ ನಾನು ಏನಾದರೊಂದು ಕ್ರಮ ಕೈಗೊಳ್ಳಲೇಬೇಕು. ಕುರುಕುಲದ ಒಳಿತು, ಪ್ರಪಂಚದ ಶ್ರೇಯಸ್ಸೇ ನನ್ನ ಏಕಮಾತ್ರ ಗುರಿ. ಹೀಗೆಲ್ಲ ಯೋಚಿಸಿ, ಮನಸ್ಸನ್ನು ಕಲ್ಲಾಗಿಸಿಕೊಂಡು ಏಕಲವ್ಯನ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳಿ ಪಡೆದೆ. ಪ್ರಪಂಚ ನನ್ನ ಬಗ್ಗೆ ಏನು ಬೇಕಾದರೂ ಅಂದುಕೊಳ್ಳಲಿ... ಇನ್ನು ಇದರ ಬಗ್ಗೆ ನನಗೆ ಯಾವ ಪಶ್ಚಾತ್ತಾಪವೂ ಇಲ್ಲ...

= ಸುರೇಖಾ ಭಟ್ ಭೀಮಗುಳಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com