
ಗುಳಿಕೆನ್ನೆಯ ಹುಡುಗಿ...
ಈ ಪತ್ರವನ್ನು ನಿನಗೆ ಬರೆಯದೆ ಇರಲಾರೆ ಎಂಬ ಒಳಮನಸ್ಸಿನ ಬೇಗುದಿ ಅಕ್ಷರ ದೋಣಿಯ ಸಾಂಗತ್ಯ ಬಯಸಿದೆ. ನಿನಗೆ ಹಾಸ್ಯಾಸ್ಪದ ಅನ್ನಿಸಬಹುದು. ಮೊಬೈಲ್, ಟ್ಯಾಬ್ಲೆಟ್, ಫೇಸ್ ಬುಕ್‌ನ ಈ ಕಾಲದಲ್ಲಿ ಇವನೇನಪ್ಪ ಒಬೇರಾಯನ ಓಲೆಗರಿಗೆ ಅಂಟಿಕೊಂಡಿದ್ದಾನೆ ಎಂದು. ಅವೆಲ್ಲದರಲ್ಲೂ ತೆರೆದಿಡಲಾಗದ ತಲ್ಲಣವನ್ನು, ಬಿಚ್ಚಿಡಲಾಗದ ಅಹವಾಲನ್ನು ಪತ್ರದಲ್ಲಿ ನಿಸ್ಸಂಕೋಚವಾಗಿ ಹೇಳಿಬಿಡಬಹುದು ಕಣೇ ಹುಡುಗೀ. ಇದರಲ್ಲಿ ಬರೆದ ಪ್ರತಿ ಅಕ್ಷರವೂ ಎದೆಯ ಒಲವಿನಲ್ಲಿ ಅದ್ದಿ ಬರೆದಿದ್ದು ಎಂದು ನಿನಗೆ ತಿಳಿದೀತು ಎಂಬ ಅಕ್ಕರಾಸ್ಥೆ ನನಗಿದೆ.
ಹುಡುಗಿಯರು ತಮಗಿಷ್ಟವಾದ ಹುಡುಗರಿಗೆ ಪ್ರಪೋಸ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತು. ಹುಡುಗಿಯರ ಒಲವು ಗಿಟ್ಟಿಸಿಕೊಳ್ಳಲು ಏನೆಲ್ಲಾ ಹರಸಾಹಸ ಮಾಡಬೇಕು ಎಂಬುದೂ ನನಗೆ ಗೊತ್ತು. ಆದರೆ ಹುಡುಗರ ಸುಪ್ತಮನಸಿನ ಗುಪ್ತ ಬಯಕೆಗಳು ಹೊರಬರಲು ತವಕಿಸುತ್ತವೆ. ಪ್ರೀತಿಭಾಷೆಯನ್ನು ಮೊದಲು ಕಣ್ಣುಗಳು ಮಾತನಾಡಿದರೂ ಹುಡುಗಿಯರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ನನಗೆ ಇಡೀ ಕಾಲೇಜಿನಲ್ಲಿ ಕಂಡ ಕ್ಷಣವೇ ಇಷ್ಟವಾದದ್ದು ನೀನು ಮತ್ತು ನಿನ್ನ ಗುಳಿಬಿದ್ದ ಕೆನ್ನೆ. ನೋಡಲು ಥೇಟ್ ಐಂದ್ರಿತಾಳಂತೇ ಕಾಣುತ್ತಿದ್ದೆ. ನಿನ್ನ ಇಷ್ಟಗಲ ನಗೆ, ಬೊಗಸೆ ಕಂಗಳು, ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಮುದ್ದು ಮುಖದ ಅಪ್ಸರೆ ಕಣೇ ನೀನು. ನಿನ್ನ ಅರಳು ಹುರಿದ ಮಾತು ಒಂದೇ ಸಾರಿ ಹೃದಯದೊಳಹೊಕ್ಕು ಭಾವನೆಗಳನ್ನೆಲ್ಲ ಬಡಿದೆಬ್ಬಿಸಿದಂತೆ. ಹುಡುಗರು ಹಳ್ಳಕ್ಕೆ ಬೀಳಲು ಇದಕ್ಕಿಂತ ಬೇರೆ ಕಾರಣ ಬೇಕಿಲ್ಲ. ಎಷ್ಟೋ ಸಲ ನಿನ್ನ ಮುಂದೆ ವಿನಾಕಾರಣ ಹಾದು ಹೋದರೂ ನೀನು ಕಮಂಡಲ ಹಿಡಿದ ಸನ್ಯಾಸಿನಿಯಂತೆ ಧ್ಯಾನಸ್ಥ ಸ್ಥಿತಿಯಿಂದ ಈಚೆ ಬರಲೇಇಲ್ಲ. ಅದ್ಹೇಗಪ್ಪ ಇವಳನ್ನ ಒಲಿಸಿಕೊಳ್ಳೋದು? ಎಂಬ ಚಿಂತೆ ಜೀವ ತಿನ್ನುತ್ತಿತ್ತು. ಒಂದೇ ಒಂದ್ಸಾರಿ ಐ ಲವ್ ಯು ಕಣೋ ಅಂತ ಹೇಳೇ, ನೂರು ಜನ್ಮಕ್ಕಾಗುವಷ್ಟು ಒಲವನ್ನು ಮೊಗೆ ಮೊಗೆದು ಕೊಡ್ತೀನಿ ಅಂತ ಒಳಮನಸ್ಸು ಚೀರಿ ಚೀರಿ ಹೇಳಿತಿತ್ತು. ಪಾಪಿ, ನೀನು ಕಿವುಡಳಂತೆ ವರ್ತಿಸುವುದನ್ನು ಕಂಡರೆ ಕೊಂದು ಬಿಡಲೇ ಎಂಬ ಕೋಪವುಕ್ಕಿ ಬರುತ್ತಿತ್ತು.
ಕೊನೆಗೆ, ಕಾಗದದ ದೋಣಿಯೇ ಸಂಪರ್ಕ ಸೇತುವೆ ಅಂತನ್ನಿಸಿ ಬರೆಯಲು ಕುಳಿತಿದ್ದೇನೆ. ಇದೇನಪ್ಪ ಇವನು ತುಂಬಾ ಫಾಸ್ಟ್ ಇದ್ದಾನೆ ಅಂತ ನೀನಂದುಕೊಂಡರೂ ಪರವಾಗಿಲ್ಲ. ನನ್ನ ಪುಟ್ಟ ಹಾರ್ಟ್‌ನಲ್ಲಿ ಬೆಟ್ಟದಷ್ಟು ಪ್ರೀತಿ ಬಚ್ಚಿಟ್ಟುಕೊಂಡು ನಿನ್ನೆದುರು ಹೇಳಲಾಗದೇ ಒದ್ದಾಡ್ತಾ ಇದ್ದೀನಿ. ಒಂದ್ಸಾರಿ ಹ್ಞೂಂ ಅನ್ನು ಕಣೇ, ಸಾಯೋವರ್ಗೂ ಜೊತೆಗಿರುವ ಭಾಷೆ ಕೊಡ್ತೀನಿ. ನಿನಗೆ ಒಂಚೂರು ದುಃಖ ಆದ್ರೂ ಕಣ್ಣೀರಾಗ್ತೀನಿ, ತುಟಿಯಂಚಿನ ನಗು ಯಾವತ್ತೂ ಕಳೆದು ಹೋಗದಂತೆ ಖುಷ್ ಖುಷಿಯಾಗಿ ನೋಡಿಕೊಳ್ತೀನಿ. ತಲೆಯಲ್ಲಿ ಬೆರಳಾಡಿಸ್ತಾ ಮಗುವಿನ ತರಹ ಮುದ್ದಾಡ್ತೀನಿ. ಕಷ್ಟದ ದಿನಗಳಲ್ಲಿ ಹೆಜ್ಜೆಗೆ ಹೆಜ್ಜೆಗೂಡಿಸ್ತೀನಿ. ಇಷ್ಟು ಸಾಕಲ್ಲವೇನೇ ಬದುಕನ್ನು ನನ್ನ ಜೊತೆಯಲ್ಲಿ ಕಳೆಯೋಕೆ?
ಅಂದ ಹಾಗೆ ನೀನು ಪದೇ ಪದೇ ಮುನಿಸಿಕೊಳ್ಳೋ ಹಾಗಿಲ್ಲ. ಬೇರೆ ಹುಡುಗರ ಜೊತೆ ಮಾತಾಡೋ ಹಾಗಿಲ್ಲ. ಬೇಕಂತಲೇ ನನ್ನ ಕಾಯಿಸಬಾರದು. ಸುಳ್ಳು ನೆಪಗಳ ಆಸರೆ ಖಂಡಿತ ಬೇಡ. ಕೊನೆಯದಾಗಿ ಜೀವಕ್ಕಿಂತ ಹೆಚ್ಚು ನನ್ನನ್ನು ಪ್ರೀತಿಸಬೇಕು. ನಿನಗೆ ಒಪ್ಪಿಗೇನಾ? ಮೊದಲೇ ಇಷ್ಟೆಲ್ಲ ರೂಲ್ಸ್ ಹಾಕ್ತಿದಾನಲ್ಲಪ್ಪ ಇವನು ಅಂತ ಬೇಜಾರಾಗ್ತಾ ಇದೆಯಾ? ಡೊಂಟ್ ವರಿ ಚಿನ್ನು, ಮದುವೆಯಾದ ಮೇಲೆ ಇನ್ನಷ್ಟು ರೂಲ್ಸ್ ಹೇಳ್ತಿನಿ. ನಿನ್ನನ್ನು ತುಂಬಾ ಇಷ್ಟಪಡೋ, ಜೀವಕ್ಕಿಂತ ಹೆಚ್ಚು ಪ್ರೀತಿಸೋ ಹುಡುಗ, ಪ್ರಪೋಸ್ ಮಾಡುವಾಗ ನೀನು ತಿರಸ್ಕರಿಸೊಲ್ಲ ಅನ್ನೋ ನಂಬಿಕೆ ನನಗಿದೆ. ನೀನು ನನ್ನವಳು, ನಾನು ಎಂದೆಂದಿಗೂ ನಿನ್ನವನು, ಜಸ್ಟ್ ಫಿಲ್ ಇಟ್...!
- ನಾಗೇಶ್ ಜೆ. ನಾಯಕ
Advertisement