
'ಸೀನಿಯರ್ಸ್' ಅನ್ನೋ ಪದ ಕೇಳಿದ್ರೇನೇ ಮನಸಲ್ಲಿ ಏನೋ ಭಯ ದುಗುಡ. ಸೀನಿಯರ್ಸ್ ಅಂದಾಗ ನೆನಪಾಗೋದೇ ರ್ಯಾಗಿಂಗ್. ಜೂನಿಯರ್ಸ್ ಕಾಲೇಜಿಗೆ ಎಂಟ್ರಿ ಕೊಟ್ಟಾಗ ಅವರಿಗೆ ಏನೋ ಒಂದು ಹುಮ್ಮಸ್ಸು. ಪಾಪದ ಸ್ಟೂಡೆಂಟ್ಸ್ ಸಿಕ್ಕಿದ್ರಂತೂ ಅವರು ಹೇಳಿದ್ದೆಲ್ಲಾ ಮಾಡಬೇಕಾಗುತ್ತೆ.
ನಾವೂ ಕೂಡ ಒಂದು ವರ್ಷದ ಹಿಂದೆ ಇದೇ ಭಾವನೆ ಇಟ್ಕೊಂಡು ಕಾಲೇಜಿಗೆ ಕಾಲಿಟ್ಟಿದ್ವಿ. ಆದ್ರೆ ನಾವ್ ಅಂದ್ಕೊಂಡಿದೆಲ್ಲಾ ತಪ್ಪು ಅನಿಸುವಂತೆ ನಡ್ಕೊಂಡಿದ್ರು ನಮ್ ಸೀನಿಯರ್ಸ್. ಬೇರೆ ಬೇರೆ ಕಾಲೇಜುಗಳಿಂದ ಪದವಿ ಮುಗಿಸ್ಕೊಂಡು ಬಂದಿದ್ದ ನಮ್ಮನ್ನ ತುಂಬಾ ಪ್ರೀತಿಯಿಂದ ಬರ ಮಾಡಿಕೊಂಡಿದ್ದರು. ನಮಗೊಂದು ಒಳ್ಳೆಯ ಫಂಕ್ಷನ್ ಮಾಡಿ ಒಬ್ಬರನ್ನೊಬ್ರು ಪರಿಚಯ ಮಾಡಿಕೊಟ್ಟಿದ್ರು. ಹೀಗೆ ಸಾಗಿದ ನಮ್ಮ ಗೆಳೆತನ ಗಟ್ಟಿಯಾಗಿದ್ದೇ ದೈತೋಟದಲ್ಲಿ ನಡೆದ ಎರಡು ದಿನದ ವರ್ಕ್‌ಶಾಪ್ ಮೂಲಕ. ಅಲ್ಲಿ ತಳವೂರಿದ ನಮ್ಮ ಗೆಳೆತನ ಮುಂದಿನ ಒಂದು ವರ್ಷವನ್ನು ತುಂಬಾ ಸುಂದರವಾಗಿಸಿತ್ತು.
ನಾವೇನೇ ತಪ್ಪು ಮಾಡಿದ್ರೂ ಸೂಕ್ತ ಸಲಹೆ ಕೊಡ್ತಾ, ನಮ್ಮ ಏಳು - ಬೀಳು ಸುಖ-ದುಃಖಗಳಲ್ಲಿ ಜೊತೆಗೆ ಇದ್ದವರು ಪ್ರೀತಿ ವಿಶ್ವಾಸದಿಂದ ನಮ್ಮೆಲ್ಲರನ್ನೂ ಗೆದ್ದೋರು ನಮ್ಮ ಸೀನಿಯರ್ಸ್. ಅವರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಟ್ಯಾಲೆಂಟ್. ಏನೇ ಮಾಡಿದ್ರೂ ಆತ್ಮವಿಶ್ವಾಸದಿಂದ ಮಾಡಿ ಅನ್ನೋದೇ ಅವರು ಕಲಿಸಿದ ಪಾಠ. ನಮ್ ಸೀನಿಯರ್ಸ್‌ನ ನೋಡಿದಾಗ ಸೀನಿಯರ್ಸ್ ಅಂದ್ರೆ ಹಿಂಗಿರ್ಬೇಕಪ್ಪಾ ಅನ್ನೋಥರ ಇದ್ರು.
ಆದ್ರೆ ಇಂದು ಅವರೇ ನಮ್ಮನ್ನ ಒಂಟಿಯಾಗಿ ಬಿಟ್ಟು ತಮ್ಮ ಪಯಣ ಮುಂದುವರೆಸುತ್ತಿದ್ದಾರೆ. ಕಾಲೇಜು ಜೀವನ ಮುಗಿಸ್ಕೊಂಡು ಹೋಗ್ತಿದಾರೆ. ನೀವು ಹೋಗೋದು ನಮ್ಗೆ ಖುಷಿನೇ. ಇನ್ನು ನಾವೇ ಸೀನಿಯರ್ಸ್ ಎಂದು ಅವರ ಮುಂದೆ ಬೀಗಿಕೊಂಡ್ರೂ ಮನಸ್ಸು ಮಾತ್ರ ಹೇಳಲಾಗದ ವೇದನೆ ಪಡುತ್ತಿತ್ತು. ಏನೋ ಒಂದು ಸೂತಕದ ಛಾಯೆ ಮನೆ ಮಾಡಿತ್ತು. ಯಾವತ್ತೂ ಒಬ್ಬರಿಗೊಬ್ಬರು ತಮಾಷೆ ಮಾಡುತ್ತಾ ಜಗತ್ತು ಮರೆಯುತ್ತಿದ್ದ ನಾವು ಅಂದು ಮಾತ್ರ ಮೌನಕ್ಕೆ ಶರಣಾಗಿದ್ವಿ.
ಜೀವನ ಅನ್ನೋದು ಒಂದು ಪಯಣ. ಅದು ಮುಂದೆ ಸಾಗುತ್ತಲೇ ಇರಬೇಕು. ಕಾಲೇಜು ಜೀವನ ಅನ್ನೋದು ಅದರ ಒಂದು ಘಟ್ಟ ಅಷ್ಟೇ ಎಂಬುದು ಗೊತ್ತಿದ್ರೂ ಅವರನ್ನು ಕಳುಹಿಸಿಕೊಡಲು ಮನಸ್ಸು ಒಪ್ಪುತ್ತಿರಲಿಲ್ಲ. ಕೆಲವೊಂದು ಬಂಧನಗಳೇ ಹಾಗೆ, ರಕ್ತ ಸಂಬಂಧಿಗಳನ್ನೇ ಮೀರಿಸಿ ನಿಲ್ಲುತ್ತದೆ. ಅಂತಹುದೇ ಒಂದು ಸೆಂಟಿಮೆಂಟಲ್ ಅಟ್ಯಾಚ್‌ಮೆಂಟ್ ಈ ಒಂದು ವರ್ಷದಲ್ಲಿ ಬೆಳೆದು ಹೆಮ್ಮರವಾಗಿ ನಿಂತು ಬಿಟ್ಟಿತ್ತು. ಆದರೂ ಅವರನ್ನು ಕಳುಹಿಸಿ ಕೊಡಲೇಬೇಕಾದ ಅನಿವಾರ್ಯತೆ.
ಈಗ ನಮ್ಮೊಂದಿಗೆ ಅವರಿಲ್ಲ, ಆದರೆ ಅವರು ಕೊಟ್ಟ ನೆನಪಿನ ಬುತ್ತಿ ಮಾತ್ರ ನಮ್ಮೊಂದಿಗೆ ಸದಾ ಇರುತ್ತೆ. ಅವರಿಲ್ಲದ ಆ ಕಾರಿಡಾರ್ ಬಿಕೋ ಅನ್ನುತ್ತಿದೆ, ಕ್ಲಾಸ್ ರೂಂ ಶಾಂತವಾಗಿ ಅವರ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂದೆ ಬರಲಿರುವ ನಮ್ಮ ಜೂನಿಯರ್ಸ್‌ನ ಎದುರು ನೋಡುತ್ತಿದೆ.
ಸೀನಿಯರ್ಸ್ ನೆನಪಾದಾಗಲೆಲ್ಲ ಮನಸ್ಸಿಗೆ ಬರೋ ಹಾಡು ಅಂದ್ರೆ "ವಿ ಮಿಸ್ ಆಲ್ ದಿ ಫನ್... ವಿ ಮಿಸ್ ಆಲ್ ದಿ ಚಾಯ್ಸ್... ವಿ ಮಿಸ್ ಯೂ..."
-ದೀಪ್ತಿ, ಪತ್ರಿಕೋದ್ಯಮ ವಿಭಾಗ, ಉಜಿರೆ
Advertisement