social_icon

ಯಕ್ಷಮೇರು

ಯಕ್ಷಗಾನ ರಂಗದಲ್ಲಿ 64 ವರ್ಷ ಸುದೀರ್ಘ ಕಾಲ ತಿರುಗಾಟ ಮಾಡಿದವರು ತೆಂಕು ತಿಟ್ಟಿನ ಅಗ್ರಮಾನ್ಯ ಕಲಾವಿದ...

Published: 04th June 2013 02:00 AM  |   Last Updated: 04th June 2013 12:32 PM   |  A+A-


ಯಕ್ಷಗಾನ ರಂಗದಲ್ಲಿ 64 ವರ್ಷ ಸುದೀರ್ಘ ಕಾಲ ತಿರುಗಾಟ ಮಾಡಿದವರು ತೆಂಕು ತಿಟ್ಟಿನ ಅಗ್ರಮಾನ್ಯ ಕಲಾವಿದ ಸೂರಿಕುಮೇರು ಕೆ.ಗೋವಿಂದ ಭಟ್. ಶ್ರೀಧರ್ಮಸ್ಥಳ ಮೇಳವೊಂದರಲ್ಲೇ ಕಳೆದ 45 ವರ್ಷದಿಂದ ಕಲಾಸೇವೆಯಲ್ಲಿದ್ದಾರೆ. ಪ್ರಸಕ್ತ 76ರ ಇಳಿವಯಸ್ಸಿನಲ್ಲಿರುವ ಕೆ.ಗೋವಿಂದ ಭಟ್ಟರು ಇಂದಿಗೂ ರಂಗಸ್ಥಳ ರಾಜ. ಅವರ ಕೌರವ, ಋತುಪರ್ಣ, ಕುಮಾರಯ್ಯ ಹೆಗ್ಗಡೆ ವೇಷಗಳು ಕಲಾಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ.
'ಗೋವಿಂದಣ್ಣ'ನ ಶರೀರ ಮಾಗಿದರೂ ಮಾತು, ನಡೆ, ನುಡಿ, ಕುಣಿತ ಯೌವನದಲ್ಲೇ ಇದೆ. ದಣಿವರಿಯದ ಕಲಾವಿದ ಕೆ.ಗೋವಿಂದ ಭಟ್ ನಿವೃತ್ತಿ ಬಯಸುತ್ತಿದ್ದರೂ ಕಲಾಭಿಮಾನಿಗಳ ಒತ್ತಾಸೆ ಅವರನ್ನು ಮತ್ತೆ ಮತ್ತೆ ರಂಗಸ್ಥಳದಲ್ಲಿ ಕುಣಿಸುವತ್ತಿದೆ. ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ. ಈ ವರ್ಷದ ಮೇಳ ತಿರುಗಾಟದ ಕೊನೆಯ ಪತ್ತನಾಜೆ ಸಂದರ್ಭ ಗೋವಿಂದ ಭಟ್ಟರ ಜತೆ 'ಬೈ ಟು ಕಾಫಿ' ನಡೆಸಿದ ಝಲಕ್.
1951ರಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ ಗೋವಿಂದ ಭಟ್ಟರು ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ ಮೇಳಗಳಲ್ಲಿ ಮೆರೆದಾಡಿ ಬಳಿಕ ಧರ್ಮಸ್ಥಳ ಮೇಳಕ್ಕೆ ಬಂದವರು. ಯಾವುದೇ ಪ್ರಸಂಗವಿರಲಿ ಎಲ್ಲ ವೇಷಕ್ಕೆ ಇವರು ಸೈ. ರಂಗಸ್ಥಳ ಪ್ರವೇಶಿಸಿದರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು, ಸಹ ಕಲಾವಿದರಲ್ಲದೆ, ಕಿರಿಯ ಕಲಾವಿದರ ಜತೆಯೂ ಉತ್ತಮ ಒಡನಾಟ.

ಸಂಧ್ಯಾವಂದನೆ, ಯೋಗಾಸನ
ಈ ವಯಸ್ಸಲ್ಲೂ ಗೋವಿಂದ ಭಟ್ಟರ ಕಂಠ ಹಾಗೆಯೇ ಇದೆ. ಇದರ ಗುಟ್ಟೇನು ಎಂದು ಪ್ರಶ್ನಿಸಿದರೆ, ನಿತ್ಯ ಸಂಧ್ಯಾವಂದನೆ, ಪ್ರಾಣಾಯಾಮ, ಪಾರಾಯಣ. ಮಿತ ಆಹಾರ, ವಿಹಾರ, ಸರಳ ಸಜ್ಜನಿಕೆಯ ಮೂರ್ತರೂಪ, ವೃತ್ತಿ ಮೇಳಗಳಲ್ಲಿ ಗೋವಿಂದ ಭಟ್ಟರಂಥ ಕಲಾವಿದರು ಸಿಗುವುದೇ ಅಪರೂಪ ಎನ್ನುವುದು ಸಹೋದ್ಯೋಗಿಗಳ ಅಭಿಮಾತು.

ಅಂಗಶುದ್ಧಿಯ ಗಿಮಿಕ್!
ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸುವಾಗ ಅತಿಯಾಗಿ ಮಾಡುವುದಿಲ್ಲ. ಪದ್ಯಕ್ಕೆ ತಕ್ಕ ಅಭಿನಯ. ಪದ್ಯದಲ್ಲೇ ಅಭಿನಯಕ್ಕೆ ಬಹಳಷ್ಟು ಅವಕಾಶ ಇದೆ. ಪ್ರೇಕ್ಷಕರ ಅಭಿರುಚಿ ಬದಲಾಗಿರುವುದರಿಂದ ಅಭಿನಯದಲ್ಲಿ ಗಿಮಿಕ್ ಮಾಡಬೇಕಾಗುತ್ತದೆ. ಹಾಗೆಂದು ಕಲಾವಿದನಿಗೆ ಅಂಗಶುದ್ಧಿ, ಲಯಶುದ್ಧಿ ಇರಬೇಕು ಎನ್ನುತ್ತಾರೆ.

ಕಾಲಮಿತಿಗೆ ಒಂದೇ ಪ್ರಸಂಗ

ಟೆಂಟ್ ಮೇಳಗಳು ಬಯಲಾಟ ಮೇಳಗಳಾಗುತ್ತಿದ್ದರೂ ಕಲೆಕ್ಷನ್ ಕಮ್ಮಿ ಆಗಿರಬಹುದು. ಆದರೆ ಜನರ ಆಸಕ್ತಿ ಕಡಿಮೆಯಾಗಿಲ್ಲ. ಹಿಂದಿನಂತೆ ಕುಟುಂಬ ವ್ಯವಸ್ಥೆ ಈಗ ಇಲ್ಲದಿರುವುದೇ ಇದಕ್ಕೆ ಕಾರಣ. ಕಾಲಮಿತಿ ಯಕ್ಷಗಾನವನ್ನು ಸರಿಯಾಗಿ ಮಾಡಿದರೆ ಒಳ್ಳೆಯದು. ಒಂದೇ ಪ್ರಸಂಗವಾದರೆ ಉತ್ತಮ. ಇಂದಿನ ಕಾಲಘಟ್ಟದಲ್ಲೂ ಯಕ್ಷಗಾನದ ಜನಪ್ರಿಯತೆ ಜಾಸ್ತಿಯಾಗುತ್ತಲೇ ಇದೆ. ಆದರೂ ಯಕ್ಷಗಾನದಲ್ಲಿ ಭರತನಾಟ್ಯ, ಕಥಕ್ಕಳಿ ನೃತ್ಯ ಸಂಯೋಜನೆ, ದಶಾವತಾರ ಪ್ರದರ್ಶನ ಇತ್ಯಾದಿಗಳ ಬಗ್ಗೆ ಸಮಗ್ರ ಸಂಶೋಧನೆ, ವಿಮರ್ಶೆ ಆಗಬೇಕು ಎನ್ನುತ್ತಾರೆ.
ರಂಗಸ್ಥಳದಿಂದ ನಿವೃತ್ತಿಯಾದ ನಂತರ ತೀರ್ಥಹಳ್ಳಿಯ ಹೆದ್ದೂರು ಸಂತೆಕೊಪ್ಪದಲ್ಲಿರುವ ತಮ್ಮದೇ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡುತ್ತೇನೆ ಎನ್ನುತ್ತಾರೆ. ಇವರ ಪುತ್ರರಿಬ್ಬರು ದೇವಸ್ಥಾನದ ಉಸ್ತುವಾರಿ ಹೊಂದಿದ್ದು, ಇನ್ನೊಬ್ಬ ಪುತ್ರ ಬಿ.ಸಿ.ರೋಡ್‌ನಲ್ಲಿ ವಕೀಲರಾಗಿದ್ದಾರೆ. ಭಟ್ಟರ ಕಲಾಸೇವೆಗೆ ಪತ್ನಿಯ ಅವಿರತ ಪ್ರೋತ್ಸಾಹ. ಸಾವಿರಕ್ಕೂ ಮಿಕ್ಕಿ ಶಿಷ್ಯರಿದ್ದು, ತರಬೇತಿ ನೀಡುತ್ತಿದ್ದಾರೆ.  <

ಭಟ್ಟರ ಟಿಪ್ಸ್
ಉತ್ತಮ ಕಲಾವಿದರಿಗೆ ಈಗಲೂ ಸಮಾಜದಲ್ಲಿ ಗೌರವ ಇದೆ. ಕಲಾವಿದರಲ್ಲಿ ಅಧ್ಯಯನ ಕೊರತೆ ಇದೆ. ಪಾತ್ರ ಸ್ವರೂಪವನ್ನು ಆಲೋಚಿಸುವುದಿಲ್ಲ. ಹಾಗಾಗಿ ಪರಿಣಾಮಕಾರಿಯಾಗಿ ಪಾತ್ರ ನಿರ್ವಹಣೆ ಸಾಧ್ಯವಾಗುತ್ತಿಲ್ಲ.
- ಗೋವಿಂದ ಭಟ್ ಸೂರಿಕುಮೇರು

ತಲೆನೋವಿಲ್ಲದ ಕಲಾವಿದ
ಮೇಳಕ್ಕೆ ಗೋವಿಂದ ಭಟ್ಟರು ತಲೆನೋವಿಲ್ಲದ ಕಲಾವಿದ. ಅವರಿದ್ದರೆ ಗಟ್ಟಿ ಮೆನೇಜರ್ ಬೇಡ. 50 ವರ್ಷ ದಾಟಿದ ಕಲಾವಿದರು 2 ಪಾತ್ರ ಮಾಡುವುದೇ ಕಷ್ಟ ಎನ್ನುತ್ತಿರುವಾಗ ಭಟ್ಟರು ರಜೆಯಲ್ಲಿರುವವರ ಪಾತ್ರವನ್ನೂ ಮಾಡುತ್ತಾರೆ. ಯಾವುದೇ ಪಾತ್ರ ಕೊಟ್ಟರೂ ಮರುಮಾತಿನಲ್ಲದೆ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ವರ್ಷದ 180 ಆಟದಲ್ಲಿ ಗೋವಿಂದ ಭಟ್ಟರು ಮಾಡುವ ರಜೆ ಬರೇ ಹತ್ತು. ಅವರಂಥ ಕಲಾವಿದ ಬೇರೊಬ್ಬ ಸಿಗಲಿಕ್ಕಿಲ್ಲ ಎನ್ನುತ್ತಾರೆ ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ.

-ಆತ್ಮಭೂಷಣ್
ಚಿತ್ರ: ರಾಜೇಶ್ ಶೆಟ್ಟಿ


Stay up to date on all the latest ಬೈಟುಕಾಫಿ news
Poll
Rajasthan Chief Minister Ashok Gehlot and Congress leader Sachin Pilot ( File Photo | PTI)

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯವು ಈ ವರ್ಷ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಾನಿ ಮಾಡುತ್ತದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp