
ಶರವೇಗದಲ್ಲಿ ಟ್ರ್ಯಾಕ್‌ನಲ್ಲಿ ಸಾಗುವ ರೇಸ್‌ನ ಕುದುರೆಗಳ ಬಗ್ಗೆ ನೀವು ಕೇಳಿರುತ್ತೀರಿ ಆದರೆ, ಆ ಕುದುರೆಯನ್ನು ಹಿಂದಿಕ್ಕುವ ವ್ಯಕ್ತಿಯೊಬ್ಬನ ಬಗ್ಗೆ ಕೇಳಿದ್ದೀರಾ? ತನ್ನ ಜೀವವನ್ನೇ ಪಣಕ್ಕಿಟ್ಟು ಓಡುವ ಈತ ವಿಚಿತ್ರ ಸಾಹಸಿ.
ಈತ ನಿಜಕ್ಕೂ ಚಾಲೆಂಜಿಂಗ್ ಸ್ಟಾರ್!
ಹೌದು, ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ವಿಚಿತ್ರ ಹಠವಾದಿ. ಕುದುರೆ ಸವಾರಿಯೇ ಒಂದು ಅಪಾಯಕಾರಿ ಆಟ. ಕುದುರೆ ತುಸು ಯಾಮಾರಿದರೆ ಜಾಕಿಯ ಜೀವವೇ ಅಪಾಯಕ್ಕೆ ಸಿಲುಕಬಹುದು. ಅಂಥ ಕುದುರೆಯನ್ನೇ ಈತ ಓಡುತ್ತಾ ಹಿಂದಿಕ್ಕುತ್ತಾನೆಂದರೆ ನಿಜಕ್ಕೂ ಹುಚ್ಚು ಸಾಹಸವೇ ಸರಿ.
ಹೆಸರು ಫ್ರೆಡ್ಡೀ ಟಿಲಿಕಿ. ಹುಟ್ಟಿದ್ದು ಜರ್ಮನಿಯಲ್ಲಿ. ವಯಸ್ಸು 23. ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸ. ಕುದುರೆ ಸವಾರಿಯೇ ಈತನ ಹವ್ಯಾಸ. ನಿತ್ಯ ಐದಾರು ತಾಸು ಅದಕ್ಕಾಗಿ ವಿನಿಯೋಗಿಸುತ್ತಾನೆ. ಬೆಳಗ್ಗೆ 5 ಗಂಟೆಗೆ ಅಭ್ಯಾಸ ಶುರು. 14 ಕುದುರೆಗಳ ಜತೆ, ಈತ ನಿತ್ಯ ಕಾದಾಟ ನಡೆಸುತ್ತಾನೆ.
ಅಭಿಮಾನಿಗಳ ದಂಡು
ಇಷ್ಟೇ ಆಗಿದ್ದರೆ ಈತ ಪರಿಚಯದ ಅವಶ್ಯಕತೆ ಇರಲಿಲ್ಲ. ಯಾವಾಗ ಈತ ರೇಸಿನ ಕುದುರೆ ಬೆನ್ನು ಹತ್ತಿದನೋ ಇವನಿಗೆ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡರು. ರೇಸಿನ ಕುದುರೆ ಹಿಂದಿಕ್ಕುವ ಹುಚ್ಚು ಕಂಡು ಬಹಳಷ್ಟು ಮಂದಿ ಮೂಕವಿಸ್ಮಿತರಾದರು. ಅಷ್ಟೇ ಅಲ್ಲ, ಆತ ಆ ರೀತಿ ಓಡುವಾಗ ಒಂದೇ ಒಂದು ಬಾರಿ ಅಪಘಾತಕ್ಕೀಡಾಗಿಲ್ಲ.
ಅಪಾಯಕಾರಿ
ರೇಸಿನ ಕುದುರೆಯನ್ನು ಬೆನ್ನಟ್ಟುವುದು ನೀರು ಕುಡಿದಷ್ಟು ಸುಲಭದ ಮಾತಲ್ಲ ಬಿಡಿ. ಟ್ರ್ಯಾಕ್‌ನಲ್ಲಿ ಕುದುರೆ ಓಡುವಾಗ ಜನರನ್ನು ಸಾಕಷ್ಟು ದೂರದಲ್ಲಿ ನಿಲ್ಲಿಸಿರುತ್ತಾರೆ. ಇದರ ಉದ್ದೇಶ ಪ್ರೇಕ್ಷಕರಿಗೆ ಕುದುರೆಯಿಂದ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂಬುದು. ಆದರೆ, ಫ್ರೆಡ್ಡೀ ಟಿಲಿಕಿ ಮಾತ್ರ ಇದಕ್ಕೆ ತದ್ವಿರುದ್ಧ. ಓಡುವ ಕುದುರೆಯನ್ನು ಹಿಂದಿಕ್ಕುವುದನ್ನೆ ಹವ್ಯಾಸವನ್ನಾಗಿಸಿಕೊಂಡಿದ್ದಾನೆ ಈ ಪುಣ್ಯಾತ್ಮ. ಹೀಗೆ ಹಿಂದಿಕ್ಕುವಾಗ ಕುದುರೆಯ ಕಾಲು ಅಥವಾ ಅದರ ಇತರ ಯಾವುದೆ ಭಾಗ ತಗುಲಿದರೂ ಜೀವಕ್ಕೆ ಹೆಚ್ಚು- ಕಮ್ಮಿ ಆಪಾಯ ಆಗುವ ಸಾಧ್ಯತೆ ಅಧಿಕ. ಆದರೂ ಆತನ ವಿಚಿತ್ರ ಹವ್ಯಾಸಕ್ಕೆ ಮಾತ್ರ ಇಲ್ಲಿವರೆಗೆ ಚ್ಯುತಿ ಬಂದಿಲ್ಲ.
ಪ್ರೇರಣಾ ಶಕ್ತಿ
ಫ್ರೆಡ್ಡೀ ಟಿಲಿಕಿಯನ್ನು ಈ ರೀತಿ ತರಬೇತುಗೊಳಿಸಿದ ವ್ಯಕ್ತಿ. ಜೂಲಿ ಕೆಮ್ಯಾಚೊ. ಈತನೇ ಟಿಲಿಕಿ ಹಿಂದಿನ ಪ್ರೇರಣಾ ಶಕ್ತಿ. ಟಿಲಿಕಿ ಈ ರೀತಿ ಕುದುರೆ ಬೆನ್ನಟ್ಟಿ ಹಲವು ಬಾರಿ ಗೆದ್ದಿದ್ದಾನೆ. ಇದೊಂದು ಅಪಾಯಕಾರಿ ಆಟ ಅಂಥ ಆತನಿಗೆ ಗೊತ್ತಿದ್ದರೂ, ಆತ ಮಾತ್ರ ಓಡೊದನ್ನು ಬಿಟ್ಟಿಲ್ಲ.
-ಮಹೇಶ್ ಅರಳಿ
Advertisement