ಭಕ್ತಿಯ ಉತ್ತುಂಗ

ಭಕ್ತಿಯ ಉತ್ತುಂಗ
Updated on: 

ಇತ್ತೀಚೆಗೆ ಬೆಂಗಳೂರಿನ ಚಿಕ್ಕಲಸಂದ್ರದ ಮನೋರಂಜಿನಿ ಸಾಂಸ್ಕೃತಿಕ ವೇದಿಕೆಯಲ್ಲಿ 'ಕಲಾಕದಂಬ' ಆರ್ಟ್ ಸೆಂಟರ್‌ನ ಸಹಯೋಗ ಮತ್ತು ರಾಧಾಕೃಷ್ಣ ಉರಾಳರ ಪರಿಕಲ್ಪನೆಯಲ್ಲಿ ಮೂಡಿಬಂದ 'ಸುಭದ್ರ ಕಲ್ಯಾಣ' ಪ್ರಸಂಗ ಮನೋಹರವಾಗಿತ್ತು.
ಹಟ್ಟಿಯಂಗಡಿ ರಾಮಭಟ್ಟ ರಚಿಸಿದ ಈ ಪ್ರಸಂಗವನ್ನು ಸಮಕಾಲೀನವಾಗಿ ಕಾಣುವಂತೆ ಮಾಡುವಲ್ಲಿ ಕಲಾವಿದರು ಯಶಸ್ವಿಯಾದರು. ಬಲರಾಮನ ಪಾತ್ರವನ್ನು ನಿರ್ವಹಿಸಿದ ಅಂಬರೀಷ್ ಭಟ್, ಕೃಷ್ಣನ ಪಾತ್ರದಲ್ಲಿ ರಾಧಾಕೃಷ್ಣ ಉರಾಳ, ಸುಭದ್ರೆಯಾಗಿ ವಿಶ್ವನಾಥ ಉರಾಳ,ಅರ್ಜುನ ಸಂನ್ಯಾಸಿಯ ಪಾತ್ರದಲ್ಲಿ ದೇವರಾಜ್ ಕರಬ, ವನಪಾಲಕನ ಪಾತ್ರದಲ್ಲಿ ಗಣೇಶ್ ನಾಯಕ್ ತಮ್ಮ ಪ್ರತಿಭೆಯನ್ನು ಧಾರೆಯೆರೆದರು.
ಪ್ರಥಮ ಪ್ರಯೋಗದಲ್ಲಿ ಕಾಣಬಹುದಾದ ಕೆಲವು ಹೊಂದಾಣಿಕೆಯ ಕೊರತೆ, ದೋಷಗಳ ಹೊರತಾಗಿಯೂ ಪ್ರಸಂಗದಲ್ಲಿ ಗಟ್ಟಿತನವಿತ್ತು. ಇಂದಿನ ಕಪಟ ಸನ್ಯಾಸಿಗಳ ಅವಾಂತರ, ದೇವರನ್ನು ಕಾಣುವ ಭಕ್ತಿಯ ಪರಾಕಾಷ್ಠೆಯಿಂದಾಗಿ ಬೀದಿಗೆ ಬಿದ್ದ ಸಂಸಾರ, ಮದುವೆಯ ದಿನವೇ ವಧುವರರು ಅನ್ಯ ಪ್ರೇಮ ಪ್ರಸಂಗದ ಕಾರಣದಿಂದ ಮಂಟಪದಿಂದ ಓಡಿಹೋದ ಪ್ರಕರಣಗಳು ಪ್ರಸ್ತಾಪಗೊಂಡು ಅಂದಿನ ಕಥೆ ಇಂದಿಗೂ ಎಷ್ಟು ಪ್ರಸ್ತುತ ಎಂಬುದರ ಮೇಲೆ ಬೆಳಕು ಚೆಲ್ಲಿತು. ಅರ್ಜುನನ ಮೇಲೆ ಮನಸಿಟ್ಟ ಸುಭದ್ರೆಯನ್ನು ದುರ್ಯೋಧನನಿಗೆ ಕೊಟ್ಟು ಮದುವೆ ಮಾಡಿಸುವುದಕ್ಕೆ ಹೊರಟ ಬಲರಾಮನ ಭಕ್ತಿಯ ಪರಾಕಷ್ಠೆಯನ್ನು ಅರಿತ ಕೃಷ್ಣ ತಂತ್ರ ಹೂಡುತ್ತಾನೆ. ತೀರ್ಥಯಾತ್ರೆಗೆ ಬಂದ ಅರ್ಜುನನ್ನೇ ಶ್ರೇಷ್ಠ ಸನ್ಯಾಸಿಯೆಂಬಂತೆ ಬಿಂಬಿಸುತ್ತಾನೆ. ಅರಮನೆಗೆ ಕರೆತಂದು ಸುಭದ್ರೆಯನ್ನೇ ಅವನ ಸೇವೆಗೆ ಬಲರಾಮ ನೇಮಿಸುತ್ತಾನೆ. ಮದುಮಗನಾಗಿ ದುರ್ಯೋಧನ ಬಂದಾಗ ವಧುವಾಗಬೇಕಿದ್ದ ಸುಭದ್ರೆ ಅರ್ಜುನನೊಂದಿಗೆ ಓಡಿಹೋಗಿರುತ್ತಾಳೆ. ನಾಟಕ ಸೂತ್ರಧಾರಿ ಕೃಷ್ಣ, ಅರ್ಜುನನೊಂದಿಗೆ ಯುದ್ಧಕ್ಕೆ ಸಿದ್ಧನಾದ ಬಲರಾಮನ ಮನವೊಲಿಸುತ್ತಾನೆ. ಸುಭದ್ರೆಗೆ ಅರ್ಜುನನೊಂದಿಗೆ ಮದುವೆ ಮಾಡಿಸುತ್ತಾನೆ.
ಯಕ್ಷಗಾನವನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಹಿಮ್ಮೇಳದ ಪ್ರಬುದ್ಧತೆ ಅತಿ ಮುಖ್ಯ. ಸಾಂಪ್ರದಾಯಿಕ ಶೈಲಿಗೆ ಹೊಸತನದ ಲೇಪಕೊಡುವ ಪ್ರಯತ್ನವನ್ನು ಭಾಗವತರಾಗಿ ಶಂಕರ್ ಬಾಳಕುದ್ರು ಮಾಡಿದರೆ ಮದ್ದಲೆ ವಾದನದಲ್ಲಿ ರಾಜೇಶ್ ಸಾಗರ, ಚಂಡೆ ನುಡಿಸುವಲ್ಲಿ ಅದಿತ್ಯ ಜೊತೆಯಾದರು. ನೇಪಥ್ಯದಲ್ಲಿ ನಿತ್ಯಾನಂದ ನಾಯಕ್, ಮುರಳೀಧರ ನಾವಡ ಚಿದಾನಂದ ಕುಲಕಣರ್, ಸತ್ಯನಾರಾಯಣ್, ಪ್ರತಾಪ್, ಕೆ.ಎನ್. ಅಡಿಗ, ಅಶೋಕ ಉಡುಪ, ಮಮತಾ ಆರ್.ಕೆ. ಅವರ ಸಹಕಾರವಿತ್ತು.
ಈ ಪ್ರದರ್ಶನಕ್ಕೆ ಜಯನಗರ ವಿಭಾಗದ ಸಹಾಯಕ ಪೋಲಿಸ್ ಕಮಿಷನರ್ ವೀರಭದ್ರೆಗೌಡ, ಕರ್ಣಾಟಕ ಬ್ಯಾಂಕ್‌ನ ಹಿರಿಯ ಶಾಖಾ ಪ್ರಬಂಧಕ ನಾಗರಾಜ ಉಪಾಧ್ಯ ಹಾಗೂ ಶ್ರೀ ಸಿದ್ಧಿ ಗಣಪತಿ ದೇಗುಲದ ಅಧ್ಯಕ್ಷ  ಸಚ್ಚಿದಾನಂದ ಮೂರ್ತಿ ಮುಖ್ಯ ಅತಿಥಿಗಳಾಗಿದ್ದರು.

-ಡಾ. ಕೌಶಿಕ್ ಉರಾಳ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com