

ಕೆಲ ವರ್ಷಗಳ ಹಿಂದೆ ದೇಶದಲ್ಲಿ ದೂರವಾಣಿ ಕರೆಗಳ 'ಕದ್ದಾಲಿಕೆ' ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದವು. ರಾಜಕಾರಣಿ ಅಮರ್ಸಿಂಗ್ ಸೆಕ್ಸ್ ಸ್ಕ್ಯಾಂಡಲ್ ಸೇರಿದಂತೆ 2ಜಿ ಹಗರಣದ ಹಿನ್ನೆಲೆಯಲ್ಲಿ ಕೆಲ ಧುರೀಣರ ಮನೆಗಳಿಗೆ ಕಳ್ಳ ಕಿವಿಗಳನ್ನು ನೇಮಿಸಿದ್ದು ಜನ ಇನ್ನೂ ಮರೆತಿಲ್ಲ. ಈ 'ಕದ್ದಾಲಿಕೆ'ಯ ಕಳ್ಳ ಕಿವಿಗಳು ಜನ ಸಾಮಾನ್ಯರ ಬದುಕಿನೊಳಗೆ ಪ್ರವೇಶಿಸಿದರೆ ಏನಾಗಬಹುದು?
ಅನುಮಾನ, ಭದ್ರತೆಯ ಹೆಸರಿನಲ್ಲಿ ಸಾಮಾನ್ಯ ಜನರ ಖಾಸಗಿ ಬದುಕನ್ನು ಬೆನ್ನಟ್ಟಿದರೆ ಆ ಬೇಟೆ ಎಲ್ಲಿಗೆ ಬಂದು ಮುಟ್ಟುತ್ತದೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸುವ ಆ ಚಿತ್ರದ ಹೆಸರು 'ದಿ ಲಿವ್ಸ್ ಆಫ್ ಅದರ್ಸ್'. ಅದು ಪೂರ್ವ ಜರ್ಮನ್. ದೇಶದ ಆಡಳಿತ ಕಮ್ಯೂನಿಷ್ಟರ ಕೈಯಲ್ಲಿದ್ದ ದಿನಗಳವು. ಜನ ಬೆಂಬಲದಿಂದಲೇ ಅಧಿಕಾರಕ್ಕೇರಿದ ಜನ ಪ್ರತಿನಿಧಿಗಳ ಕಣ್ಣಲ್ಲಿ ಜನಸಾಮಾನ್ಯರು 'ಸಂಚುಕೋರ'ರಂತೆ ಕಾಣಲಾರಂಭಿಸುತ್ತಾರೆ! ಹೆಜ್ಜೆ ಹೆಜ್ಜೆಗೂ ಸರ್ಕಾರದ ಕಿವಿಗಳು ಜನರನ್ನು ಬೇಟೆಯಾಡುತ್ತದೆ. ಪೊಲೀಸು, ಮಿಲಿಟರಿ, ಗುಪ್ತಚರ ಇಲಾಖೆ ಮೂಲಕ ತನ್ನ ಅನುಮಾನದ ನೋಟ ಬೀರುವ ಸರ್ಕಾರ, ರಹಸ್ಯ ಕ್ಯಾಮೆರಾಗಳಿಂದಲೂ ಬೇಟೆ ಆರಂಭಿಸುತ್ತದೆ. ಸಾಹಿತಿಗಳು, ಪ್ರಜಾಪ್ರಭುತ್ವ ವಾದಿಗಳು, ವಾಕ್ ಸ್ವಾತಂತ್ರ್ಯದ ಪರ ಧ್ವನಿ ಎತ್ತುವ ಒಂದು ವರ್ಗದ ಜನ ಸೇರಿದಂತೆ ಸಾಮಾನ್ಯ ಜನರ ಖಾಸಗಿ ಬದುಕಿನೊಳಗೂ ವ್ಯವಸ್ಥೆಯ ಈ ಅನುಮಾನದ ಬೇಟೆ ಪ್ರವೇಶಿಸುತ್ತದೆ. ಜನರ ಪ್ರತಿ ಹೆಜ್ಜೆಯನ್ನೂ ತೀಕ್ಷ್ಣವಾಗಿ ನೋಡುತ್ತಲೇ ಹೋಗುವ ಗುಪ್ತಚರ ಇಲಾಖೆಯ ಕೇಂದ್ರ ಸಮಿತಿಗೆ ಹೊಸದೊಂದು ಕೆಲಸ ಬರುತ್ತದೆ. ಅದು ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ಕುಟುಂಬವೊಂದರ ಚಲನವಲನಗಳ ಮೇಲೆ ನಿಗಾ ಇಡುವಂತೆ ಮಂತ್ರಿಯ ಅದೇಶ.
ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಪತ್ನಿ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗಂಡ. ಇವರಿಬ್ಬರು ವಾಸ ಮಾಡುವ ಮನೆಗೆ ಮೈಕ್ರೋ ಫೋನ್ಗಳನ್ನು ರಹಸ್ಯವಾಗಿ ಪಿಕ್ಸ್ ಮಾಡಿ ಕದ್ದಾಲಿಸುವ ಗುಪ್ತಚರ ಇಲಾಖೆಯ ಅಧಿಕಾರಿ. ಗಂಡ- ಹೆಂಡತಿಯ ಪ್ರತಿ ಖಾಸಗಿ ವಿಷಯವೂ ಗುಪ್ತಚರ ಅಧಿಕಾರಿಗಳ ನೋಟ್ಬುಕ್ನಲ್ಲಿ ದಾಖಲಾಗುತ್ತ ಹೋಗುತ್ತದೆ. ಹಾಗೆ ದಾಖಲು ಮಾಡುವವರಲ್ಲಿ ಒಬ್ಬಾತ ಮನೆಯಾಕೆಯನ್ನು ಹಿಂಬಾಲಿಸುತ್ತಾನೆ. ಮತ್ತೊಬ್ಬನಿಗೆ ಆ ಮನೆಯ ವಿಷಯಗಳು ಮನರಂಜನೆಯಾಗಿ ಕಾಣುತ್ತದೆ!
ಆದರೆ ಮನೆಯವಳನ್ನು ಹಿಂಬಾಲಿಸುವ ಅಧಿಕಾರಿ ಆರಂಭದಲ್ಲಿ ಸರ್ಕಾರ ವಹಿಸಿಕೊಟ್ಟಿರುವ ಕೆಲಸ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಾನೆ. ಆದರೆ ತಾನು ಕೆಲಸ ಮಾಡುತ್ತಿರುವುದು ಕೇಂದ್ರ ಮಂತ್ರಿಯೊಬ್ಬರ ಹಿತಾಸಕ್ತಿ ಕಾಯಲು ಹಾಗೂ ತಾನು ರಹಸ್ಯ ಕ್ಯಾಮೆರಾ ಇಟ್ಟಿರುವ ಮನೆಯವಳ ಮೇಲೆ ಮಂತ್ರಿಯ ಕಣ್ಣು ಬಿದ್ದಿದ್ದು, ಆಕೆಯ ಗಂಡ ಬಂಧನವಾದರೆ ಆ ಮಂತ್ರಿ ಅವಳನ್ನು ಬಳಸಿಕೊಳ್ಳಲು ಅನುಕೂಲವಾಗಲೆಂದು ತಮ್ಮನ್ನು ಈ ಕೆಲಸಕ್ಕೆ ನೇಮಿಸಲಾಗಿದೆ ಎಂದು ತಿಳಿಯುವ ಹೊತ್ತಿಗೆ ಸರ್ಕಾರದ ಕಳ್ಳ ಕಿವಿಗೆ ಗುರಿಯಾದ ಕಲಾವಿದನ ಕುಟುಂಬದ ಬದುಕು ಬೀದಿಗೆ ಬಂದಿರುತ್ತದೆ. ಈ ನಡುವೆ ಮತ್ತು ಬರಿಸುವ ಪದಾರ್ಥಗಳನ್ನು ಮಾರುತ್ತಿದ್ದಾನೆಂದು ಸಾಹಿತಿಯನ್ನು ಬಂಧಿಸಲಾಗುತ್ತದೆ. ಹೆದರಿಕೊಂಡ ಆತನ ಪತ್ನಿ 'ತನ್ನ ಗಂಡ ಸರ್ಕಾರಿ ವಿರೋಧಿ ಸಾಹಿತ್ಯ ಪ್ರಚಾರ ಮಾಡುತ್ತಿದ್ದಾರೆ' ಎಂದು ಒಪ್ಪಿಕೊಳ್ಳುತ್ತಾಳೆ.
ಅಮೆರಿಕ ಸಿನಿಮಾ ಅಕಾಡೆಮಿಯಲ್ಲಿ ಸ್ಟೆಡಿ ಮೆಟಿರಿಯಲ್ ಆಗಿರುವ ಹಾಗೂ ಅತ್ಯುತ್ತಮ ವಿದೇಶಿ ಚಿತ್ರಗಳ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡ ಈ ಚಿತ್ರದ ಮುಂದಿನ ಕಥೆ ನಿರೀಕ್ಷೆಯಂತೆ ನಡೆಯುತ್ತದೆ. ನಟಿ ಮಂತ್ರಿಯ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾಳೆ, ಕೊನೆಗೆ ಸಾವನ್ನಪ್ಪುತ್ತಾಳೆ. ಮೆಲೋ ಡ್ರಾಮದಿಂದ ಕೂಡಿದ್ದರೂ ಒಂದು ಚಾರಿತ್ರಿಕ ವಾಸ್ತವದೊಂದಿಗೆ ವಿಷಾದವನ್ನುಳಿಸುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ. ನಿರ್ದೇಶಕ ತನ್ನ ಮೊದಲ ಚಿತ್ರದಲ್ಲೇ ಅತ್ಯಂತ ಕ್ಲಿಷ್ಟಕರವಾದ ಸನ್ನಿವೇಶಗಳ ಮೂಲಕ ಒಂದು ದೇಶದ ಪರಿಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಫ್ಲೋರಿಯನ್ ಹೆಂಕೆಲ್ ವಾನ್ ಹಾನೆರ್ಸ್ಮಾರ್ಕ್ರ ಮೊದಲ ನಿರ್ದೇಶನದ ಚಿತ್ರವಿದು ಎಂದು ಹೇಳಲಾಗದು.
ಇಂತದ್ದೇ ಕಥೆ ಒಳಗೊಂಡ 'ದಿ ಕನ್ವರ್ಶನ್' ಚಿತ್ರ ಹಾಲಿವುಡ್ನಲ್ಲಿ ಬಂದಿದೆ. ಇದು ವ್ಯಕ್ತಿಗತವಾಗಿ ಮೂಡಿ ಬಂದಿದ್ದರೆ, 'ದಿ ಲಿವ್ಸ್ ಆಫ್ ಅದರ್ಸ್' ಒಂದು ಕುಟುಂಬದ ಮೂಲಕ 30 ವರ್ಷಗಳ ಹಿಂದಿನ ಜರ್ಮನ್ ಸ್ಥಿತಿಯನ್ನು ತೆರೆದಿಡುತ್ತದೆ. <
ಚಿತ್ರ: ದಿ ಲಿವ್ಸ್ ಆಫ್ ಅದರ್ಸ್ (2006)
ಭಾಷೆ: ಜರ್ಮನಿ
ನಿರ್ದೇಶನ: ಫ್ಲೋರಿಯನ್ ಹೆಂಕೆಲ್ ವಾನ್ ಹಾನೆರ್ಸ್ಮಾರ್ಕ್
ಅವಧಿ: 138 ನಿಮಿಷ
ತಾರಾಗಣ: ಅಲ್ರಿಚ್ ಮುಹೆ, ಮಾರ್ಟಿನ್ ಗೆಡೆಕ್, ಸೆಬಾಸ್ಟಿಯನ ಕೋಚ್, ಅಲ್ರಿಚ್ ಟುಕುರ್
= ಆರ್. ಕೇಶವಮೂರ್ತಿ
್ಞಜಝಛಢಛ್ಠ್ಞಟ1ಅ್ಜಟಛ್ಝಟ.್ಛ್ಟಟ