ದಯವಿಟ್ಟು ಗಮನಿಸಿ.. ಮೈಸೂರಿಗೆ ಹೊರಡಲಿರುವ ಕಾವೇರಿ ಎಕ್ಸ್ಪ್ರೆಸ್ ರೈಲು ಇನ್ನು ಕೆಲವೇ ನಿಮಿಷಗಳಲ್ಲಿ ಪ್ಲಾಟ್ಫಾರಂ ನಂ. 5ರಿಂದ ತೆರಳಲಿದೆ ಎಂಬ ಘೋಷಣೆ ಕೇಳಿ ಒಳಗೆ ಕುಳಿತು ದಿನಪತ್ರಿಕೆ ಓದುತ್ತಿದ್ದ ನಾನು ತಲೆ ಎತ್ತಿ ಹೊರಗೆ ನೋಡಿದೆ. ರೈಲು ನಿಧಾನವಾಗಿ ಚಲಿಸಿತು. ಸ್ಟೇಷನ್ನ ವಿಶಾಲವಾದ ಕಬ್ಬಿಣದ ಬಾಗಿಲಿನಿಂದ ಒಬ್ಬಳು ಮಹಿಳೆ ಓಡೋಡಿ ಬಂದು, ಚಲಿಸುವ ರೈಲನ್ನು ನೋಡಿ ಹತಾಶೆಯಿಂದ ನಿಂತುಬಿಟ್ಟಳು. ಅನಿರೀಕ್ಷಿತವಾಗಿ ರೈಲು ಸ್ವಲ್ಪ ನಿಂತಿತು. ಚಿಗುರಿದ ಆಸೆಯಿಂದ ಮತ್ತೆ ಆಕೆ ಓಡಿ ಬಂದು ನನ್ನ ಡಬ್ಬಿಗೇ ಹತ್ತಿದಳು. ನಾನು ಅವಳ ತಗೇಜ್ ಬ್ಯಾಗನ್ನು ಒಳಗೆಳೆದುಕೊಂಡೆ. ಥ್ಯಾಂಕ್ಸ್ ಹೇಳಿ ಸೀಟಿನಲ್ಲಿ ಕುಸಿದಳು. ನೋಡಿದರೆ- ತಾರಾ..! 'ಅರೆ ನೀವಾ' ಎಂದೆ. 'ಹೌದು ನಾನೇ' ಎಂದು ಮೌನವಹಿಸಿ ಮ್ಯಾಗಝಿನ್ನಲ್ಲಿ ಮುಖ ಮುಚ್ಚಿದಳು. ರೈಲು ವೇಗ ಹೆಚ್ಚಿಸಿ ಓಡಲು ತೊಡಗಿತು. ನನ್ನ ನೆನಪಿನ ದೋಣಿ ಹಿಂದಕ್ಕೆ ಹೊರಳಿತು.
ಈಗ್ಗೆ ಐದು ವರ್ಷಗಳಾಯ್ತು. ಗೆಳೆಯ ಸಂಗೀತ ನಿರ್ದೇಶಕ ನಟರಾಜನ ಮದುವೆಗೆಂದು ನಮ್ಮ ತಂಡ ಹೊರಟಿದ್ದು... ಹೀಗೆಯೇ ಅವಸರದಲ್ಲಿ ತಾರೆಯ ಕುಟುಂಬ ರೈಲು ಹತ್ತಿದ್ದು.. ನಮ್ಮ ನಟರಾಜನ ಮದುವೆಗೇ ಅವರೂ ಹೊರಟಿದ್ದು.. ಈ ಕಾರಣಗಳಿಂದ ಸ್ನೇಹದ ನವನೀತ ತೇಲಿತು. ಸುಂದರಿ ತಾರಾಳ ಮೇಲಿಂದ ನನ್ನ ಕಣ್ಣು ಬೇರೆಡೆಗೆ ಸರಿಯಲೇ ಇಲ್ಲ. ಗೆಳೆಯನ ಮದುವೆ ಮುಗಿಯುವುದರೊಳಗೆ ಇನ್ನೂ ಹತ್ತಿರ... ಹತ್ತಿರ ಬಂದೇಬಿಟ್ಟೆವು. ತಾರೆಯ ಸೋದರ ಅತ್ತೆ ಸೌದಾಮಿನಿಯವರ ಪ್ರಯತ್ನಗಳಿಂದ ಎಲ್ಲ ಕುದುರಿ ನಿಶ್ಚಿತಾರ್ಥವೂ ಆಗಿಹೋಯ್ತು.
ರೈಲು ಯಾವುದೋ ಸ್ಟೇಷನ್ನಲ್ಲಿ ಸಿಗ್ನಲ್ಗೆ ಕಾಯುತ್ತಿತ್ತು. ತಿಂಡಿಪೊಟ್ಟಣ ತರುತ್ತೇನೆ ನಿಮಗೂ ತರಲೆ ಎಂದೆ 'ಬೇಡ' ಎಂದಳು. 'ಕಾಫಿ' ಎಂದೆ. 'ನಾನು ಕುಡಿಯಲ್ಲ'. ರೈಲು ಮತ್ತೆ ಓಡಲು ತೊಡಗಿತು. ನಾನು ತಾರಾ ಜೋಡಿ ಹಕ್ಕಿಗಳಂತೆ ವಿಹರಿಸಿದ್ದೆವು. ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಅಮ್ಮ ಅಪ್ಪ, ಅಕ್ಕ-ಭಾವ ತಾರೆಯ ಮನೆಗೆ ಹೋಗಿದ್ದರು. ಹಿಂದಿರುಗಿದಾಗ ಎಲ್ಲರೂ ಕಳೆಗುಂದಿದ್ದರು. ಒತ್ತಾಯದ ನಂತರ ಅಕ್ಕನಿಂದ ಉತ್ತರ ಸಿಕ್ಕಿತು. 'ನೋಡೋ ಧೃವ.. ನಾವು ಅಲ್ಲಿದ್ದಾಗ ತಾರೆಯ ದೊಡ್ಡಪ್ಪ ಬಂದಿದ್ದರು. ಉತ್ತರಭಾರತ ಪ್ರವಾಸದ ಕಾರಣ ಎಂಗೇಜ್ಮೆಂಟ್ಗೆ ಬರಲಿಲ್ಲವಂತೆ.. ಅವರಿಗೆ.. ಮೈತುಂಬಾ ತೊನ್ನು ರೋಗ ಹಬ್ಬಿಬಿಟ್ಟಿದೆ. ಅಮ್ಮನ ಅಪ್ಪನಿಗೆ ಷಾಕ್ ಆಗೋಯ್ತು. ನಿಮ್ಮ ಮಾವ ಆಗೋರು ಈ ವಿಷಯದ ಬಗ್ಗೆ ಒಂದು ಮಾತು ತಿಳಿಸಬೇಕಾಗಿತ್ತು. ನಮಗೆಲ್ಲಾ ತುಂಬಾ ಬೇಜಾರಾಯ್ತು'.
'ಆದ್ರೆ ಎಂಗೇಜ್ಮೆಂಟ್ ಆಗಿಹೋಗಿದೆಯಲ್ಲಕ್ಕ.. ಆ ಹುಡುಗಿ ಭವಿಷ್ಯದ ಗತಿ ಏನು?'
'ಆಗಿದ್ರೆ ತಾನೆ ಏನೋ. ಇದು ಜೀವಮಾನದ ಪ್ರಶ್ನೆ. ಮದುವೆ ಅಂದ್ರೆ ಮಕ್ಕಳಾಟ ಅಲ್ಲ.'
'ಹಾಗಾದ್ರೆ ಈಗ ಮುಂದೇನು?' 'ನೋಡೋಣ. ಮುಂದಿನ ವಾರ ಮತ್ತೆ ಅವರ ಮನೆಗೆ ಹೋಗೋಣ. ದೇವರ ಇಚ್ಛೆ ಹೇಗಿದೆಯೋ ಹಾಗಾಗಲಿ'.
ಆ ಮುಂದಿನ ವಾರವೂ ಬಂತು. 'ಲಗ್ನಪತ್ರಿಕೆ ಗಡಿಬಿಡೀಲಿ ಈ ವಿಷಯ ಹೇಳಕ್ಕೆ ಮರೆತುಬಿಟ್ಟೆ, ಕ್ಷಮಿಸಿ' ಅಂತ ತಾರೆಯ ಅಪ್ಪ ಸಾರಿ ಕೇಳಿದರು. ತಾರಾ ಕುಳಿತಿದ್ದ ಕುರ್ಚಿಯ ಕೆಳಗಿನಿಂದ ಒಂದು ಜಿರಳೆ ಅವಳ ಕಾಲಮೇಲೆ ಹತ್ತಿಬಿಟ್ಟಿತು. ತಾರಾ ಗಾಬರಿಯಿಂದ ಸೀರೆ ಕೊಡವಿದಾಗ ಕಾಲಿನ ಮೇಲೆ ಮಂಡಿಯ ಹತ್ತಿರ ಒಂದು ರು. ಅಗಲದ ಮಚ್ಚೆ ಸ್ಪಷ್ಟವಾಗಿ ಕಂಡಿತು. ಅವಳು ಹೈಸ್ಕೂಲ್ ಓದುತ್ತಿದ್ದಾಗ ಎದುರು ಮನೆಯ ಹುಡುಗ ಹಾರಿಸಿದ ರಾಕೆಟ್ ದಿಕ್ಕುತಪ್ಪಿ ತಾರೆಯ ಕಾಲಿಗೆ ಬಡಿದು ಸುಟ್ಟುಹೋಯ್ತು ಎಂಬ ಸಮಜಾಯಿಷಿ ಬಂತು. 'ನಮಗೆ ಯಾರಿಗೂ ಈ ಸಂಬಂಧ ಇಷ್ಟ ಇಲ್ಲ. ಇಷ್ಟರ ಮೇಲೆ ನಿನ್ನ ಇಷ್ಟ' ಎಂದು ನಮ್ಮ ಮನೆಯಲ್ಲಿ ತೀರ್ಪು ಕೊಟ್ಟರು. ಮದುವೆ ಮುರಿದುಬಿತ್ತು.
ರೈಲು ನಿಲ್ದಾಣದಲ್ಲಿ ನಿಂತಿತ್ತು. ತಾರೆಯನ್ನು ಮಾತಿಗೆ ಎಳೆದೆ. ಮೈಸೂರಿನಲ್ಲಿ ಮನೆ. ಶಾರದಾ ವಿಲಾಸ ಶಾಲೆಯಲ್ಲಿ ಕೆಲಸ. ಪಿಎಚ್.ಡಿಗೆ ಓದು. ತಂಗಿಯದು ಲವ್ ಮ್ಯಾರೇಜ್. ಅಪ್ಪ ಸತ್ತಿದ್ದಾರೆ ಎಂಬ ವಿಷಯಗಳು ತಿಳಿದುಬಂತು. 'ನಾನು ಹಿಂದಿನದ್ದನ್ನೆಲ್ಲಾ ಮರೆತು ಅಳಿಸಿಹಾಕಿಬಿಟ್ಟಿದ್ದೇನೆ. ಆದರೂ ನನ್ನ ಕಾಲಿನ ಮಚ್ಚೆಯ ಬಗ್ಗೆ ಸಂಶಯ
ಇದ್ದರೆ ಪರೀಕ್ಷೆ ಮಾಡಬಹುದಿತ್ತು. ವಂಶವಾಹಿನಿ ತಂದೆಯಿಂದ ಮಕ್ಕಳಿಗೆ ದೊಡ್ಡಪ್ಪನಿಂದ ತಮ್ಮನ ಮಗಳಿಗಲ್ಲ' ಎಂದಳು. 'ನಿಜ. ಆದರೆ ನಮ್ಮ ಮನೆಯವರೆಲ್ಲರ ವಿರೋಧ ಕಟ್ಟಿಕೊಂಡು ನಿಮ್ಮನ್ನು ಮದುವೆಯಾಗೋ ಧೈರ್ಯ ಬರಲಿಲ್ಲ. ನಾನು ಹೇಡಿಯಾಗಿಬಿಟ್ಟೆ' ಎಂದೆ.
ರೈಲು ಚಲಿಸಿತು. 'ಹೋಗಲಿ ಬಿಡಿ. ನೀವಾದರೂ ಚೆನ್ನಾಗಿದ್ದೀರಲ್ಲ. ಅಷ್ಟು ಸಾಕು. ನಿಮ್ಮ ಹೆಂಡತಿ..' 'ಅನುಸೂಯ'. 'ಮಕ್ಕಳು?' 'ಮಗ ಹೇಮಂತ್. ಮೈಸೂರಿನಲ್ಲಿ ಅಜ್ಜಿಯ ಮನೆಯಲ್ಲಿದ್ದಾನೆ.' 'ಯಾಕೆ...? ನಿಮ್ಮ ಹೆಂಡತಿ ಜತೆಗಿಲ್ಲವೆ?..' 'ಇಲ್ಲ, ಅವಳಿಲ್ಲ'. 'ಅಂದರೆ ತವರುಮನೆಗೆ ಹೋಗಿದ್ದಾರ?' 'ಇಲ್ಲ, ಎರಡು ವರ್ಷದ ಕೆಳಗೆ ಬಸ್ ಆಕ್ಸಿಡೆಂಟ್ನಲ್ಲಿ ತೀರಿಕೊಂಡುಬಿಟ್ಟಳು..' 'ಓ ಗಾಡ್.. ಸಾರಿ ಧೃವಾ. ಸೋ ಸಾರಿ ಈ ವಿಷಯ ಕೇಳಿ ತುಂಬಾ ಬೇಜಾರಾಗ್ತಾ ಇದೆ..' 'ಏನು ಮಾಡೋದು.. ಎಲ್ಲಾ ದೇವರ ಇಚ್ಛೆ'. 'ಇನ್ನೊಂದು ಹುಡುಗೀನ ನೋಡಿ ಮದುವೆ ಮಾಡಿಕೊಳ್ಳಿ.. ಮಗನನ್ನು ಅನಾಥ ಮಾಡಬೇಡಿ.'.
ತಾರೆಯ ಬೋಳು ಕತ್ತು, ಬರಿಯ ಕಾಲ್ಬೆರಳುಗಳು ಇನ್ನೂ ಮದುವೆ ಇಲ್ಲ. ನನ್ನ ಮನಸ್ಸಿನಲ್ಲೊಂದು ಆಶಾಕಿರಣ ಚಿಮ್ಮಿತು. ಅವಳನ್ನೇ ಕೇಳೋಣ. 'ತಾರಾ, ನನ್ನ ದೌರ್ಬಲ್ಯದಿಂದ ನಿಮ್ಮ ಬಾಲ್ಯ ಹಾಳಾಗಿದ್ದು ನಿಜ. ನನ್ನನ್ನು ಕ್ಷಮಿಸಿ. ನನ್ನ ಮಡದಿಯಾಗಿ, ಹೇಮಂತ್ಗೆ ತಾಯಾಗಿ ಬನ್ನಿ. ನನ್ನ ಮನೆ ದೀಪ ಬೆಳಗಿಸಿ' ಎಂದು ಬೇಡೋಣ ಎಂದು ಗಂಟಲು ಸರಿಮಾಡಿಕೊಂಡೆ. ರೈಲು ನಿಲ್ದಾಣ ತಲುಪುತ್ತಿತ್ತು.
ತಟ್ಟನೆ ಎದ್ದ ತಾರಾ 'ಬಾಯ್ ಧೃವಾ. ಟೇಕ್ ಕೇರ್' ಎಂದು ಹೇಳಿ ಇಳಿದೇಬಿಟ್ಟಳು. ಸ್ಫುರದ್ರೂಪಿ ಯುವಕನ ಕೈಯಿಂದ ಮಗುವನ್ನು ಎತ್ತಿಕೊಂಡು ಮುದ್ದಿಸುತ್ತ ಇರುವಾಗಲೇ ರೈಲು ಹೊರಟುಬಿಟ್ಟಿತು.
- ರಮೇಶಚಂದ್ರ
honnudike.ramesh@gmail.com