ತಲೆ ಅಂದ್ರೆ ಶಕುಂತಲೆ!

ಬಸವನಗುಡಿಯ ನನ್ನ ಮನೆಗೆ ಕೂಗಳತೆ ಎನ್ನುವಷ್ಟು ದೂರದಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಶಕುಂತಲಾ ದೇವಿ...
ತಲೆ ಅಂದ್ರೆ ಶಕುಂತಲೆ!
Updated on: 

ಬಸವನಗುಡಿಯ ನನ್ನ ಮನೆಗೆ ಕೂಗಳತೆ ಎನ್ನುವಷ್ಟು ದೂರದಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಶಕುಂತಲಾ ದೇವಿ, ಏಪ್ರಿಲ್ 21ರಂದು ಭಾನುವಾರ ಸಂಜೆ, ಈ ಲೋಕದ ಎಲ್ಲ ಲೆಕ್ಕ ಚುಕ್ತಾ ಮಾಡಿ ಹೊರಟೇಹೋದರು. ಅವರು ಬದುಕಿದ್ದಾಗ ನಾನು ಎಂದೂ ಅವರನ್ನು ಭೇಟಿಯಾಗಲು, ಮಾತುಕತೆಯಾಡಲು ಪ್ರಯತ್ನಿಸಲಿಲ್ಲವಲ್ಲ ಎಂದು ಖೇದವಾಯಿತು.
ನಾವು ಶಾಲೆ ಕಲಿಯುವಾಗ ಶಕುಂತಲಾ ದೇವಿ- ಒಂದು ಪವಾಡ, ಗಣಿತದ ಚಮತ್ಕಾರ, ನೂರಾರು ಅಂಕೆಗಳ ಸಂಖ್ಯೆಗಳನ್ನು ಮನಸ್ಸಿನಲ್ಲೇ ಗುಣಿಸಿ, ಭಾಗಿಸಿ, ಮೂಲಗಳನ್ನು ಕಂಡುಹಿಡಿದು ಎದುರುಕೂತ ಕಂಪ್ಯೂಟರುಗಳನ್ನೇ ಮಂಕಾಗಿಸುತ್ತಿದ್ದ ಚತುರೆ ಎಂದೆಲ್ಲ ಕೇಳಿದ್ದೆ. ಆರನೇ ವಯಸ್ಸಿನಲ್ಲೇ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಶೋ ಕೊಟ್ಟು  ಗಣಿತದ ದೊಡ್ಡ ಹೆಸರಿನ ಪ್ರೊಫೆಸರುಗಳೆಲ್ಲ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರಂತೆ. ಹದಿನೈದನೆ ವಯಸ್ಸಿಗೆ ಲಂಡನ್ನಿನ ದೊಡ್ಡ ಗಣಿತಜ್ಞರೂ ಬೆಕ್ಕಸಬೆರಗಾಗುವಂತೆ ಕೂಡುಕಳೆ ಲೆಕ್ಕಗಳನ್ನು ಮಾಡಿ ತೋರಿಸಿದರಂತೆ. 201 ಅಂಕೆಗಳ ಒಂದು ಬೃಹತ್ ಸಂಖ್ಯೆಯ 23ನೇ ಮೂಲ ಯಾವುದು ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಲು ಕಂಪ್ಯೂಟರು 62 ಸೆಕೆಂಡ್ ತೆಗೆದುಕೊಂಡರೆ, ಶಕುಂತಲಾ ಕೇವಲ 49 ಸೆಕೆಂಡುಗಳಲ್ಲಿ ಉತ್ತರ ಮುಂದಿಟ್ಟರಂತೆ. ಇಂತಹ ಅನೇಕ ವಿಚಿತ್ರ ಆದರೂ ಸತ್ಯ ಅನ್ನಿಸುವ ಕತೆಗಳು ಅವರ ಸುತ್ತ ಚಲಾವಣೆಯಲ್ಲಿದ್ದವು.
ಶಕುಂತಲಾ ದೇವಿ ಒಂದು ದಂತಕತೆಯಾಗಿ ಹೋಗಿದ್ದರು. ಒಬ್ಬ ಮನುಷ್ಯನಿಂದ ಇಷ್ಟೆಲ್ಲ ಸಾಧನೆ ಸಾಧ್ಯವಾ ಎಂದು ನಾನು ಕಣ್ಕಣ್ಣು ಬಿಡುತ್ತ ಯೋಚಿಸುತ್ತಿದ್ದೆ. ಅವರ ಹಾಗೆಯೇ ಆಗಬೇಕು ಅಂತ ಯೋಚಿಸಿಯೂ ಇದ್ದೆ ಅಂತ ಕಾಣುತ್ತದೆ. ಅದಾಗಿ ಹಲವಾರು ವರ್ಷಗಳಾದ ಮೇಲೆ, ನಾನು ಗಣಿತ ಪದವೀಧರನಾಗಿ ಬಸವನಗುಡಿಗೆ ಬಂದು ಉದ್ಯೋಗಕ್ಕೆ ಸೇರಿಕೊಂಡಮೇಲೆ ಒಂದು ದಿನ ಗಾಂಧಿಬಜಾರಿನಲ್ಲಿ ಗೆಳೆಯರ ಜೊತೆ ವಾಕ್ ಹೋಗುತ್ತಿದ್ದಾಗ, ನಮ್ಮ ಮಾತುಕತೆಯಲ್ಲಿ ಶಕುಂತಲಾ ದೇವಿ ಪ್ರಸ್ತಾಪ ಬಂತು. ಅವರ ಆಫೀಸು ಇಲ್ಲೇ ಇರೋದು ಅಂತ ಒಬ್ಬ ಹೇಳಿದಾಗ ನನಗೆ ನಿಜಕ್ಕೂ ರೋಮಾಂಚನವಾಯಿತು. ಈಗಲೇ ಅಲ್ಲಿಗೆ ಹೋಗಿ ಅವರನ್ನು ಕಣ್ಣಾರೆ ನೋಡ್ಕೊಂಡು ಬರೋಣ ಎಂದೆ. ಆಗ ಗೆಳೆಯನೊಬ್ಬ, ಬೇಡ ಕಣೋ. ಅವರು ಹಾಗೆಲ್ಲ ಹಾದೀಲಿ ಹೋಗಿಬರೋರಿಗೆ ಮುಖ ತೋರಿಸೋದಿಲ್ಲ. ವಿಐಪಿಗಳಿಗೆ ಮಾತ್ರವೇ ದರ್ಶನ ಕೊಡುತ್ತಾರೆ ಎಂದೆಲ್ಲ ಹೇಳಿದ. ನಂಬಲಿಕ್ಕೇ ಆಗಲಿಲ್ಲ. ಆದರೆ, ಮುಂದೆ ಅವರ ಜ್ಯೋತಿಷ್ಯದ ಪ್ರಚಾರಪತ್ರಗಳು, ಜಾಹೀರಾತುಗಳನ್ನು ಆಗಾಗ ಪತ್ರಿಕೆಗಳಲ್ಲಿ ನೋಡತೊಡಗಿದ ಮೇಲೆ ಗೆಳೆಯನ ಮಾತು ಸತ್ಯ ಇರಬಹುದು ಎನ್ನಿಸಿತು.
ದೇವಿಯವರದ್ದು ಸಂಪ್ರದಾಯಸ್ಥ ಬ್ರಾಹ್ಮಣ ಮನೆತನ. ತಂದೆ ಸುಂದರರಾಜ ರಾಯರಿಗೆ, ಆ ಕಾಲಕ್ಕೆ ತಕ್ಕ ಹಾಗೆ, ಎಂಟು ಜನ ಮಕ್ಕಳು. ಇಬ್ಬರು ಗಂಡು, ಆರು ಹೆಣ್ಣು. ಹಿರಿಯಕ್ಕ ಶಕುಂತಲ. ತಂದೆ ಸಂಪಾದಿಸಿ ತರುತ್ತಿದ್ದ ಪುಡಿಗಾಸಿನಲ್ಲೇ ಇಡೀ ಕುಟುಂಬದ ದಿನ ಸಾಗಬೇಕು. ಸುಂದರರಾಜರು, ಬ್ರಾಹ್ಮಣ್ಯವನ್ನೇ ಧಿಕ್ಕರಿಸಿ ಹೊರಬಂದು ಸರ್ಕಸ್ ಕಲಾವಿದರಾದರಂತೆ. ಇಸ್ಪೀಟು, ಗೋಲಿ ಹಿಡಿದುಕೊಂಡು ಸಣ್ಣಪುಟ್ಟ ಕಣ್ಕಟ್ಟು ಜಾದೂ ಮಾಡುತ್ತ ಹೊಟ್ಟೆಹೊರೆಯುತ್ತಿದ್ದ ಅವರನ್ನು ಶಾಲಾಮಕ್ಕಳು ಬೆಳ್ಳಿಕೋಲು ತಾತ ಎಂದೇ ಕರೆಯುತ್ತಿದ್ದವಂತೆ. ಜಾದೂ ತೋರಿಸಲು ಹೋದ ಕಡೆ ಮಕ್ಕಳಿಗೆ ಸಣ್ಣಪುಟ್ಟ ಗಣಿತದ ಸರಳಲೆಕ್ಕಗಳನ್ನು ಮಾಡಿತೋರಿಸುತ್ತಿದ್ದರು. ತಂದೆಯ ಜೊತೆ ಹೆಲ್ಪರ್ ಆಗಿ ಶಾಲೆಗಳನ್ನು ಸುತ್ತುತ್ತಿದ್ದ ಪುಟ್ಟಹುಡುಗಿ ಶಕುಂತಲೆಗೆ ಅದುವೇ ಗಣಿತದ ಮೊದಲ ಪಾಠ.
ಶಕುಂತಲಾ ಬಾಲ್ಯದ ವಿವರಗಳು ಅಸ್ಪಷ್ಟ. ತಮ್ಮ ಗಣಿತ ಪ್ರದರ್ಶನ ಮತ್ತು ಜ್ಯೋತಿಷ್ಯ ಬಿಟ್ಟು ಬೇರೇನನ್ನೂ ಯಾರೊಂದಿಗೂ ಚರ್ಚಿಸಲು ನಿರಾಕರಿಸುತ್ತಿದ್ದ ಅವರ ಅಂತರ್ಮುಖಿ ವ್ಯಕ್ತಿತ್ವದಿಂದಾಗಿ, ಜಗತ್ತಿಗೆ ಅವರ ವೈಯಕ್ತಿಕ ಬದುಕಿನ ವಿವರಗಳು ಸಿಕ್ಕಿರುವುದು ಅಷ್ಟಕ್ಕಷ್ಟೆ. ಹೇಗೇ ಇದ್ದರೂ, ಶಕುಂತಲಾ ಅವರಿಗೆ ಸಾಂಪ್ರದಾಯಿಕ ಶಿಕ್ಷಣದ ಭಾಗ್ಯ ಇರಲಿಲ್ಲ ಎನ್ನುವುದು ಸ್ಪಷ್ಟ. ಕಾಲೇಜು ಮೆಟ್ಟಿಲು ಹತ್ತಲು ಅವರಿಗೆ ಸಾಧ್ಯವಾಗಲಿಲ್ಲ.
ಶಕುಂತಲಾ ಸ್ಮರಣಶಕ್ತಿ ಅಸಾಧಾರಣವಾಗಿತ್ತು. ಮೂರುವರ್ಷದ ಎಳವೆಯಲ್ಲೇ ಅವರು ತಂದೆ ಮಾಡುತ್ತಿದ್ದ ಒಂದು ಕಾರ್ಡ್ ಟ್ರಿಕ್ಕನ್ನು ಅರ್ಥ ಮಾಡಿಕೊಂಡು ತಾನೂ ಮಾಡಿ ತೋರಿಸಿದರಂತೆ. ಈ ಅದ್ಭುತ ಸಾಮರ್ಥ್ಯವನ್ನು ಎಳವೆಯಲ್ಲೇ ಗುರುತಿಸಿದ ತಂದೆ, ಮಗಳನ್ನು ಪ್ರದರ್ಶನದ ಗೊಂಬೆಯಂತೆ ಅಲ್ಲಿ-ಇಲ್ಲಿ ಕರೆದುಕೊಂಡು ಹೋಗಿ ಮ್ಯಾಜಿಕ್ ಮಾಡಿಸಿ, ದೊಡ್ಡ ಸಂಖ್ಯೆಗಳ ಕೂಡುಕಳೆ ಲೆಕ್ಕಾಚಾರ ಮಾಡಿಸಿ ಕಾಸು ಸಂಪಾದಿಸಿದರು. ಅವರ ಬಡತನ ಮುಚ್ಚಲು ಅವು ಅನಿವಾರ್ಯವೂ ಆಗಿದ್ದವು.
ಶಕುಂತಲಾ ದೇವಿ ಗಣಿತದಲ್ಲಿ ಏನಾದರೂ ಸಾಧಿಸಿದ್ದರೇ ಎಂದು ಹುಡುಕಹೊರಟ ನನಗೆ ಅಂತಹ ಅಚ್ಚರಿಯೆನಿಸುವ ಫಲಿತಾಂಶವೇನೂ ದೊರೆಯಲಿಲ್ಲ. ಕಾಲೇಜುಮಟ್ಟದ ಶಿಕ್ಷಣವನ್ನು ಸಾಂಪ್ರದಾಯಿಕವಾಗಿಯೋ ಸ್ವಾಧ್ಯಾಯದಿಂದಲೋ ದಕ್ಕಿಸಿಕೊಂಡು ಮುಂದುವರಿದಿದ್ದರೆ ಇನ್ನೊಂದು ರಾಮಾನುಜನ್ ಆಗಬಹುದಾಗಿದ್ದ ಶಕುಂತಲಾ, ಅಂತಹ ಅವಕಾಶವನ್ನು ತಪ್ಪಿಸಿಕೊಂಡರು ಎಂದು ಅನ್ನಿಸುತ್ತದೆ. ಅವರ ಜೀವನದ ಚೈತನ್ಯವೆಲ್ಲವೂ ದೊಡ್ಡದೊಡ್ಡ ಸಂಖ್ಯೆಗಳನ್ನು ಮನಸ್ಸಿನಲ್ಲೇ ಗುಣಿಸುವುದರಲ್ಲಿ, ಘನಮೂಲ ಚತುರ್ಥಮೂಲಗಳನ್ನು ತೆಗೆಯುವುದರಲ್ಲಿ ಇತ್ಯಾದಿಯಲ್ಲೇ ಸೋರಿಹೋಯಿತು. ಆರರ ಎಳವೆಯಲ್ಲಿ ತಾನು ತೋರಿಸಿದ ಪ್ರಖರ ಬುದ್ಧಿಮತ್ತೆಯನ್ನೇ ಮತ್ತೆಮತ್ತೆ ಪ್ರದರ್ಶಿಸುತ್ತ, ಜೀವನಪರ್ಯಂತ ದೇಶದೇಶ ಸುತ್ತಿ ಚಪ್ಪಾಳೆ ಗಿಟ್ಟಿಸುತ್ತ ಕಳೆದ ಶಕುಂತಲಾ ದೇವಿ- ಅದಕ್ಕಿಂತ ಹೊರತಾದದ್ದನ್ನು ಸೃಜಿಸಲು, ಗಣಿತಲೋಕದಲ್ಲಿ ಹೊಸತಾರೆಗಳನ್ನು ಮುಟ್ಟಲು ಆಸೆಪಡಲಿಲ್ಲ.
ಶಕುಂತಲಾ ದೇವಿ, ಜಾಣ್ಮೆ ಲೆಕ್ಕ ಎಂದು ಹೇಳಬಹುದಾದ ಗಣಿತದ ಒಂದು ವಿಶಿಷ್ಟ ಉಪವಿಭಾಗದ ಮೇಲೆ ಏಳು ಮೌಲಿಕ ಕಿರುಪುಸ್ತಕ ಪ್ರಕಟಿಸಿದ್ದಾರೆ. ಈ ಫಜಲ್‌ಗಳನ್ನು ಬಿಡಿಸಲು ದೊಡ್ಡ ಸೂತ್ರಗಳಾಗಲೀ ಪ್ರಮೇಯಗಳಾಗಲೀ ಬೇಕಾಗಿಲ್ಲ. ಆದರೆ, ಸ್ವಾಭಾವಿಕವಾದ ಗಣಿತಾಸಕ್ತಿ, ವಿಭಿನ್ನವಾಗಿ ಆಲೋಚಿಸುವ ಪ್ರತಿಭೆ ಇರಬೇಕಾಗುತ್ತದೆ. ಈ ಪುಸ್ತಕಗಳಲ್ಲಿ ಎಷ್ಟೋ ಸಲ ಉತ್ತರಗಳನ್ನು ಕೊಡುವಾಗ, ಉತ್ತರಕ್ಕೆ ಪುಷ್ಟಿ ನೀಡುವ ಯಾವ ವಿವರಣೆಯನ್ನೂ ಕೊಡುತ್ತಿರಲಿಲ್ಲ.
ಜಾಣ್ಮೆ ಲೆಕ್ಕಗಳ ಪ್ರಪಂಚದಲ್ಲಿ ಮಾರ್ಟಿನ್ ಗಾರ್ಡಿನರ್ ಮಾಡಿದಷ್ಟೇ ಸಾಧನೆಯನ್ನು ಈ ಕನ್ನಡತಿ ಕೂಡ ಮಾಡಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ಗಣಿತದ ವಿಸ್ಮಯ ಲೋಕಕ್ಕೆ ಪ್ರವೇಶ ಪಡೆಯಲು ಕಾತರಿಸುವ ಜಾಣಹುಡುಗರಿಗೆ ಈ ಪುಸ್ತಿಕೆಗಳು ಒಳ್ಳೆಯ ಪರಿಚಯ ಸಾಮಗ್ರಿ. ಇದಿಷ್ಟೇ ಅಲ್ಲದೆ, ವಿಚಿತ್ರ ಅನ್ನುವಂತೆ ಶಕುಂತಲಾ, ಸಲಿಂಗಿಗಳ ಬಗ್ಗೆ 1977ರಷ್ಟು ಹಿಂದೆಯೇ ಒಂದು ಪುಸ್ತಕ ಕೂಡ ಬರೆದಿದ್ದಾರೆ. ಇದರ ಹಿನ್ನೆಲೆ ಕುತೂಹಲಕರವಾಗಿದೆ. ಶಕುಂತಲಾ ಮದುವೆಯಾದ ಮೇಲೆ ಅವರಿಗೆ ತನ್ನ ಪತಿ 'ಗೇ' ಎಂದು ತಿಳಿಯಿತಂತೆ. ಇವರು ಯಾರು, ಯಾಕೆ ಈ ರೀತಿ ಆದರು ಎನ್ನುವುದನ್ನು ಅಧ್ಯಯನ ಮಾಡಲು ತೊಡಗಿದರು. ಅದರ ಫಲಶ್ರುತಿಯೇ ಈ ಪುಸ್ತಕ. ಸಲಿಂಗಿಗಳ ಭಿನ್ನತೆಯನ್ನು ಒಪ್ಪಿಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಇತರರಂತೆಯೇ ಬಾಳಗೊಡಬೇಕು ಎಂಬ, ಆ ಕಾಲಕ್ಕೆ ಕ್ರಾಂತಿಕಾರಕವೆನ್ನಿಸುವ ಸಾಲುಗಳು ಈ ಪುಸ್ತಕದಲ್ಲಿ ಇವೆ.
ಶಕುಂತಲಾ ವೈಯಕ್ತಿಕ ಬದುಕು ನಿಗೂಢ. ಅವರಿಗೆ ಕುಟುಂಬದಲ್ಲಿ ನೆಮ್ಮದಿಯಿರಲಿಲ್ಲವಂತೆ, ಒಳಜಗಳ ಇದ್ದವಂತೆ ಎನ್ನುವ ಮಾತು ಕೇಳಿದ್ದೆ. ಒಂದು ಸಲ ಅವರ ಮನೆಯಲ್ಲೇ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನ ಆಯಿತು, ಕದ್ದವರು ಕುಟುಂಬದವರೇ ಅನ್ನುವ ವಾರ್ತೆ ಹರಡಿತ್ತು.
ಜನಸಾಮಾನ್ಯರನ್ನು, ಪತ್ರಕರ್ತರನ್ನು ಹತ್ತಿರ ಬಿಟ್ಟುಕೊಳ್ಳದ ದೇವಿ ಗಣ್ಯಾತಿಗಣ್ಯರಿಗೆ ಜ್ಯೋತಿಷ್ಯ, ಭವಿಷ್ಯ ಹೇಳಿ ಫೀಸ್ ಪಡೆಯುತ್ತಿದ್ದರು. ಹಾಗೆ ಬಂದ ದುಡ್ಡಿನ ದೊಡ್ಡ ಪಾಲನ್ನು, ಚಾಮರಾಜಪೇಟೆಯಲ್ಲಿರುವ ತನ್ನ ಹೆಸರಿನ ಒಂದು ಶಿಕ್ಷಣಸಂಸ್ಥೆಗೆ ದಾನ ಕೊಡುತ್ತಿದ್ದರು. ಬಡವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಒದಗಿಸುತ್ತಿದ್ದರು. ಅನೇಕ ಮಕ್ಕಳಿಗೆ ಸ್ಕಾಲರ್‌ಶಿಪ್ ವ್ಯವಸ್ಥೆ ಮಾಡಿದ್ದರು. ಬಾಲ್ಯದಲ್ಲಿ ತನ್ನ ಕನಸುಗಳನ್ನು ಚಿವುಟಿ ಹಾಕಿದ ಬಡತನದ ಭಯಾನಕ ಛಾಯೆ ಅವರನ್ನು ಜೀವಮಾನವಿಡೀ ಆವರಿಸಿತ್ತು ಅನ್ನಿಸುತ್ತದೆ. ಬಹುಶಃ ನಾವು ಅವರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದೆವೋ ಏನೋ.
ಶಕುಂತಲಾ ದೇವಿ- ನನ್ನಂತೆ, ಗಣಿತದ ಆಸಕ್ತಿ ಇಟ್ಟುಕೊಂಡಿದ್ದ ಅದೆಷ್ಟೋ ಜನರಿಗೆ ಒಂದು ವಿಸ್ಮಯವಾಗಿದ್ದರು, ದಂತಕತೆಯಾಗಿದ್ದರು, ಸ್ಫೂರ್ತಿದೇವತೆಯಾಗಿದ್ದರು. ಅವರ ನಿಧನದೊಂದಿಗೆ, ಅವರೊಳಗಿನ ಅದೆಷ್ಟೋ ಅಪ್ರಕಟಿತ ನೋವಿನ ಕತೆಗಳೂ ಮರಳಿಬಾರದ ಲೋಕಕ್ಕೆ ಹೋಗಿಬಿಟ್ಟವು.

- ರೋಹಿತ್ ಚಕ್ರತೀರ್ಥ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com