

ಒಂದಾನೊಂದು ಕಾಲದಲ್ಲಿ ಕೊರಿಯಾ ದೇಶದಲ್ಲಿ ಒಬ್ಬಳು ಸುಂದರವಾದ ಹುಡುಗಿ ತನ್ನ ತಂದೆತಾಯಿಯ ಜತೆ ವಾಸಿಸುತ್ತಿದ್ದಳು. ಅವಳು ಎಷ್ಟು ಸುಂದರಿಯೆಂದರೆ, ಆ ಹಳ್ಳಿಯ ಯುವಕರೆಲ್ಲರೂ ಅವಳನ್ನು ಮದುವೆಯಾಗುವ ಕನಸು ಕಾಣುತ್ತ ತಿರುಗಾಡುತ್ತಿದ್ದರು. ಆದರೆ, ಅವಳ ಹೆತ್ತವರಿಗೆ ಮಾತ್ರ ಈ ಹುಡುಗಿಯನ್ನು ಪರಿಚಯದವರಿಗೆ ಮದುವೆ ಮಾಡಿಕೊಟ್ಟು ಫಜೀತಿ ಪಡುವುದು ಬೇಕಿರಲಿಲ್ಲ. ಅದಕ್ಕೆ ಕಾರಣವಾಗಿದ್ದದ್ದು - ಸುಂದರ ಹುಡುಗಿ ಆಗಾಗ, ತನ್ನ ಉಬ್ಬರಿಸಿದ ಹೊಟ್ಟೆಯ ಭಾರವನ್ನೆಲ್ಲ ಹೊರಗೋಡಿಸಿ ಬಿಡಲು ಹೂಡುತ್ತಿದ್ದ ಹುಸಿಶರಗಳು, ಅರ್ಥಾತ್ ಹೂಸುಗಳು!
ಹುಡುಗಿಯ ಅಪಾನವಾಯು ಸಮಸ್ಯೆ ಮನೆಯವರಿಗೆಲ್ಲ ದೊಡ್ಡ ತಲೆನೋವೇ ಆಗಿಬಿಟ್ಟಿತ್ತು. ಒಮ್ಮೊಮ್ಮೆ ಆಕೆ ಕಾರ್ಯಪ್ರವೃತ್ತಳಾದರೆ, ಆಕಾಶದಲ್ಲಿ ಯಾರೋ ದೊಡ್ಡದೊಡ್ಡ ಹೆಜ್ಜೆ ಇಟ್ಟು ನಡೆದಾಡಿದಂತೆ, ಗುಡುಗು ಸಿಡಿಲುಗಳಂತೆ, ದೀಪಾವಳಿಯ ಪಟಾಕಿಯಂತೆ, ಸಣ್ಣದೊಂದು ಭೂಕಂಪದಂತೆ - ಮನೆಯೆಲ್ಲ ಅದುರುತ್ತಿತ್ತು. ಇಂತಹ ಹುಡುಗಿಯನ್ನು ಅದೇ ಊರಿನ ಹುಡುಗನಿಗೆ ಮದುವೆ ಮಾಡಿ ಕೊಟ್ಟರೆ ತಮ್ಮ ಮಾನವೆಲ್ಲ ಬೀದಿಪಾಲಾಗುತ್ತದೆ ಎಂದು ಹೆತ್ತವರು ಹೆದರಿದ್ದರು.
ಕೊನೆಗೂ ಅವರ ಬಯಕೆಯಂತೆ, ದೂರದ ಊರಿನ ಒಬ್ಬ ಹುಡುಗ ಈ ಸುಂದರಿಯ ಕೈ ಹಿಡಿಯಲು ಮುಂದೆ ಬಂದ. ಅದ್ದೂರಿಯಿಂದ ಮದುವೆಯಾಗಿ ಗಂಡನ ಮನೆಗೆ ಹೊರಟ ಹುಡುಗಿಯ ಬಳಿ ಅವಳ ತಾಯಿ ಅಳುತ್ತ ಬಂದು ಎಂದೆಂದೂ ಗಂಡನ ಮನೆಯಲ್ಲಿ ಬಾಂಬು ಸಿಡಿಸುವ ಸಾಹಸ ಮಾಡಬೇಡೆಂದು ಹೇಳಿದಳು. ಹುಡುಗಿ ಒಪ್ಪಿ ತಲೆಯಾಡಿಸಿದಳು.
ಗಂಡನ ಮನೆ ಸೇರಿದ ಮೇಲೆ ಸುಂದರಿ ತುಂಬ ಚೆನ್ನಾಗಿ ಮನೆಯವರ ಜತೆ ಹೊಂದಿಕೊಂಡಳು. ವಿಧೇಯಳಾಗಿ ವಿನೀತಳಾಗಿ ವರ್ತಿಸುತ್ತ ಅವರಿಗೆಲ್ಲ ನೆಚ್ಚಿನ ಸೊಸೆಯಾದಳು. ದಿನಗಳು ಉರುಳಿದವು. ಹಲವಾರು ವರ್ಷಗಳು ಕಳೆದುಹೋದವು. ಅವಳನ್ನು ಮಗಳಂತೆಯೇ ಮುದ್ದಿನಿಂದ ನೋಡಿಕೊಳ್ಳುತ್ತಿದ್ದ ಅವಳ ಅತ್ತೆಗೆ ತನ್ನ ಸೊಸೆ ಯಾಕೋ ಇತ್ತೀಚೆಗೆ ತುಸು ಬದಲಾಗಿದ್ದಾಳೆ ಅನ್ನಿಸಿತು. ಸುಂದರಿ ಮೊದಲಿನಂತೆ ಚಟುವಟಿಕೆಯಿಂದಿರುತ್ತಿರಲಿಲ್ಲ. ಯಾವಾಗಲೂ ಚಿಂತೆಯ ಮುಖ ಹೊತ್ತು ಕೂತಿರುತ್ತಿದ್ದಳು. ದಿನೇದಿನೆ ಖಿನ್ನಳಾಗಿ ಇಳಿದುಹೋಗುತ್ತಿದ್ದಳು.
'ಸುಂದರೀ, ಇತ್ತೀಚೆಗೆ ನೀನು ತುಂಬ ಇಳಿದುಹೋಗಿದ್ದೀ. ಮೊದಲಿನ ನಗುಮುಖವಾಗಲೀ ಲವಲವಿಕೆಯಾಗಲೀ ಕಾಣುತ್ತಿಲ್ಲ. ಏನಾಯಿತು ಯಾಕೆ ಹೀಗೆ ಕಳೆಗುಂದಿದ್ದೀ' ಎಂದು ಅವಳ ಅತ್ತೆ ಪರಿಪರಿಯಾಗಿ ಕೇಳಿ ನೋಡಿದಳು. ಏನೇನೋ ಸಬೂಬು ಹೇಳಿ ತಪ್ಪಿಸಿಕೊಂಡರೂ ಬಿಡದೆ ಕಾಡುತ್ತಿದ್ದ ಪ್ರೀತಿಯ ಅತ್ತೆಯ ಒತ್ತಾಯಕ್ಕೆ ಮಣಿದು ಕೊನೆಗೆ ನಿಜಸಂಗತಿ ಹೇಳದೆ ಬೇರೆ ದಾರಿಯೇ ಉಳಿಯಲಿಲ್ಲ ಸುಂದರಿಗೆ. ಆಕೆ, ತನ್ನ ಉದರಸಮಸ್ಯೆಯ ಬಗ್ಗೆ ಅತ್ತೆಯಲ್ಲಿ ಹೇಳಿಕೊಂಡಳು. ಮದುವೆಯಾದ ಮೇಲೆ ಇಷ್ಟು ವರ್ಷಗಳ ಕಾಲವೂ ಒಮ್ಮೆಯೂ ಅಪಾನವಾಯುವನ್ನು ಹೊರಬಿಡದೆ ಕಟ್ಟಿಕೊಂಡದ್ದೇ ಈ ಖಿನ್ನತೆಗೆ ಕಾರಣ ಎಂದು ಹೇಳಿದಳು.
ಇದನ್ನು ಕೇಳಿದ ಅತ್ತೆ ನಕ್ಕುಬಿಟ್ಟಳು. ದೇವರು ಕೊಟ್ಟ ಈ ಪೀಪಿಯನ್ನು ಊದದ ಮನುಷ್ಯ ಈ ಜಗತ್ತಿನಲ್ಲಿ ಯಾರಿದ್ದಾನೆ? ಅದಕ್ಯಾಕೆ ಇಷ್ಟೊಂದು ಗಂಭೀರವಾಗಿ ಚಿಂತೆ ಮಾಡಬೇಕೆಂದು ಅವಳಿಗೆ ಗೊತ್ತಾಗಲಿಲ್ಲ! 'ಹೂಸು ಬಂದರೆ ಯಾವ ಚಿಂತೆಯಿಲ್ಲದೆ ಅದನ್ನು ಹೊರಬಿಡಬೇಕು. ಕಟ್ಟಿಕೊಂಡು ಚಿಂತೆ ಮಾಡಬಾರದು' ಎಂದು ಅವಳು ನಗುತ್ತ ಹೇಳಿದಳು. 'ಈಗಿಂದೀಗಲೇ ಆ ಭಾರವನ್ನು ಕಳೆದುಕೋ' ಎಂದು ಸುಂದರಿಗೆ ಇನ್ನಿಲ್ಲದ ಒತ್ತಾಯ ಮಾಡಿದಳು.
ಸುಂದರಿ, 'ಸರಿ ಹಾಗಾದರೆ! ಆದರೆ, ಇದು ಅಂತಿಂಥ ಮಾತಲ್ಲ ಹಲವಾರು ವರ್ಷಗಳ ಬಾಬ್ತು. ನೀವೆಲ್ಲ ಎಚ್ಚರಿಕೆಯಿಂದಿರಬೇಕು' ಎಂದು ಮನೆಯವರಿಗೆ ಹೇಳಿದಾಗ ಅವರೆಲ್ಲ ನಕ್ಕುಬಿಟ್ಟರು. 'ಬೆಕ್ಕು ಪರಚಿದರೆ ಬೆಟ್ಟ ಅದುರೀತೇ! ಹೂಸು ಬಿಟ್ಟರೆ ಮನೆ ಬಿರುಕುಬಿಟ್ಟೀತೇ' ಎಂದು ಅವಳ ಗಂಡನಂತೂ ಜೋಕು ಮಾಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ. ಎಲ್ಲರೂ ಸುಂದರಿಯ ವಾಯುಪ್ರದರ್ಶನಕ್ಕೆ ಸಿದ್ಧರಾಗಿ ಕೂತರು.
ಕೊನೆಗೂ ಸುಂದರಿ ಇಷ್ಟುವರ್ಷಗಳ ಕಾಲ ಹಿಡಿದಿಟ್ಟ ಗಾಳಿದೆವ್ವವನ್ನು ಹೊರಬಿಟ್ಟೇಬಿಟ್ಟಳು. ಒಂದು ಕ್ಷಣ ಏನಾಯಿತು ಎನ್ನುವುದೇ ಯಾರಿಗೂ ತಿಳಿಯಲಿಲ್ಲ. ದೊಡ್ಡದೊಂದು ಬಂಡೆ ಬೆಟ್ಟದ ಮೇಲಿಂದ ಉರುಳುರುಳಿ ಬಂದು ಮನೆಯ ಮೇಲೆ ಬಿದ್ದ ಹಾಗೆ 'ಢುಂ' ಎಂಬ ಶಬ್ದವಷ್ಟೇ ಕೇಳಿಸಿದ್ದು. ಮನೆಯ ಸೂರು ಗಾಳಿಗೆ ಎದ್ದ ತರಗೆಲೆಯಂತೆ ಹಾರಿ ಮಾರುದೂರ ಹೋಗಿ ಬಿದ್ದು ಪುಡಿಯಾಯಿತು. ಸುಂದರಿಯ ಗಂಡ ಹಾರಿಹೋಗಿ ಪಕ್ಕದ ಆಲದ ಮರದ ಕೊಂಬೆಯ ಮೇಲೆ ಅರೆಜೀವವಾಗಿ ಸಿಕ್ಕಿಕೊಂಡು ಬಿದ್ದ. ಅವಳ ಅತ್ತೆಮಾವಂದಿರು ರಾಕೆಟ್ಟಿನಲ್ಲಿ ಕೂತು ಮೇಲೆ ಹಾರಿದಂತೆ ಚಿಮ್ಮಿಹೋಗಿ ಹಳೇ ಚರಂಡಿಯೊಂದರ ದ್ವಾರದಲ್ಲಿ ಸಿಲುಕಿಕೊಂಡರು. ಮನೆಯಂತೂ ಎಲ್ಲಗೋಡೆಗಳಲ್ಲಿ ಬಿರುಕುಬಿಟ್ಟು ಯುದ್ಧದಲ್ಲಿ ದಾಳಿಗೊಳಗಾದ ಕೋಟೆಯಂತೆ ಅನಾಥವಾಗಿ ನಿಂತಿತು.
ಸುಂದರಿ ಮಾತ್ರ, ವರ್ಷಗಟ್ಟಲೆ ದೊಡ್ಡಿಯಲ್ಲಿ ಕಟ್ಟಿದ ಹಸುವನ್ನು ಬಯಲಲ್ಲಿ ಬಿಟ್ಟಂತೆ, ಒಂದು ಕ್ಷಣ ಎಲ್ಲವನ್ನೂ ಮರೆತುನಿಂತು ನಿರುಮ್ಮಳವಾಗಿ ನಿಟ್ಟುಸಿರುಬಿಟ್ಟಳು.
-ರೋಹಿತ್ ಚಕ್ರತೀರ್ಥ