ಪುಣ್ಯಾತ್ಮರು ನರಕವನ್ನು ಸ್ವರ್ಗವನ್ನಾಗಿಸುತ್ತಾರೆ

ಜನತಾ ಸೇವೆಯೇ ಜನಾರ್ದನ ಸೇವೆ ಎಂಬ ಧ್ಯೇಯವಾಕ್ಯವನ್ನು ಮೈಗೂಡಿಸಿಕೊಂಡು ಹಗಲಿರುಳು ಬಡವರ ಸೇವೆಗೆ ಜೀವವನ್ನು ಮುಡಿಪಾಗಿಟ್ಟ ಸಂತರೊಬ್ಬರು ಅಸುನೀಗಿದರು...
ಪುಣ್ಯಾತ್ಮರು ನರಕವನ್ನು ಸ್ವರ್ಗವನ್ನಾಗಿಸುತ್ತಾರೆ
Updated on: 

ಜನತಾ ಸೇವೆಯೇ ಜನಾರ್ದನ ಸೇವೆ ಎಂಬ ಧ್ಯೇಯವಾಕ್ಯವನ್ನು ಮೈಗೂಡಿಸಿಕೊಂಡು ಹಗಲಿರುಳು ಬಡವರ ಸೇವೆಗೆ ಜೀವವನ್ನು ಮುಡಿಪಾಗಿಟ್ಟ ಸಂತರೊಬ್ಬರು ಅಸುನೀಗಿದರು. ಅವರನ್ನು ಗೌರವಪೂರ್ವಕವಾಗಿ ಕರೆದುಕೊಂಡು ಹೋಗಲು ಸ್ವತಃ ಯಮರಾಜನೇ ಧರೆಗಿಳಿದು ಬಂದ. ಸಂತರನ್ನು ಕರೆದುಕೊಂಡು ಹೋಗಿ ಸ್ವರ್ಗದ ಬಾಗಿಲ ಮುಂದೆ ನಿಲ್ಲಿಸಿ ಹೇಳಿದ, 'ಸ್ವಾಮಿ ಸಂತ ಮಹಾಶಯರೇ, ಇನ್ನು ಮುಂದೆ ನೀವು ಇಲ್ಲೇ ಇದ್ದು ಸ್ವರ್ಗದ ಐಭೋಗವನ್ನು ಪಡೆದು ನೆಮ್ಮದಿಯಾಗಿರಿ'. ಸಂತರು ಸ್ವರ್ಗದೊಳಗೆ ದೃಷ್ಟಿಹಾಯಿಸಿದರು. ಅಲ್ಲಿ ಜನರು ಮದಿರೆ ಹೀರುತ್ತಾ ಅಪ್ಸರೆಯರ ನಾಟ್ಯವನ್ನು ನೋಡುತ್ತಾ ಸುಖದಲ್ಲಿ ತೇಲಾಡುತ್ತಿದ್ದರು. ಅದನ್ನು ನೋಡಿದ ಸಂತರು, 'ಈ ಸುಖವನ್ನು ಅನುಭವಿಸುವುದಕ್ಕಾಗಿಯೇ ಜನರು ಸ್ವರ್ಗಕ್ಕೆ ಬರಲು ಹಾತೊರೆಯುತ್ತಾರೇನೋ?' ಅಂದುಕೊಂಡರು.
ಯಮರಾಜನನ್ನುದ್ದೇಶಿಸಿ 'ಸ್ವಾಮಿ, ನಾನು ಒಮ್ಮೆ ನಿಮ್ಮ ನರಕವನ್ನು ನೋಡಿ ಬರಬೇಕಲ್ಲ!' ಎಂದರು. ಅದಕ್ಕೆ ಯಮರಾಜ 'ಎಲ್ಲಾದರೂ ಉಂಟೇ ಸಂತ ಮಹಾಶಯರೇ. ನರಕವೆನ್ನುವುದು ಪಾಪಿಗಳು, ಲೋಭಿಗಳು, ಕಳ್ಳರು, ವ್ಯಭಿಚಾರಿಗಳು, ಸ್ವಾರ್ಥಿಗಳು, ಅನಾಚಾರ ಮಾಡುವವರು ಇರುವ ಸ್ಥಳ. ಅಲ್ಲಿಗೆ ನಿಮ್ಮಂಥ ಪುಣ್ಯಾತ್ಮರು ಹೋಗುವುದೇ? ಛೇ, ಹಾಗಾಗಬಾರದು. ನೀವಾದರೋ ಪುಣ್ಯಾತ್ಮರು. ಸದಾಕಾಲ ಬಡವರ ಬಗ್ಗೆಯೇ ಚಿಂತಿಸುತ್ತಾ ಅವರಿಗಾಗಿ ಅನಾಥಾಶ್ರಮಗಳನ್ನು ಕಟ್ಟಿಸಿ ಊಟೋಪಚಾರ ಮಾಡಿಸಿದವರು. ನಿರ್ಗತಿಕ ರೋಗಿಗಳಿಗಾಗಿ ಆಸ್ಪತ್ರೆ ಕಟ್ಟಿಸಿ ಉಚಿತ ಚಿಕಿತ್ಸೆ ಕೊಡಿಸಿದವರು. ಊರಿನವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಅವರಿಗೆ ರಸ್ತೆ, ಕುಡಿಯಲು ನೀರಿನ ವ್ಯವಸ್ಥೆ ಮಾಡಿದವರು. ನಿಮ್ಮಂಥವರಿಗಾಗಿಯೇ ಈ ಸ್ವರ್ಗವಿರುವುದು. ಅಂಥಾದ್ದರಲ್ಲಿ ನರಕಕ್ಕೆ ಹೋಗುವ ಬಯಕೆಯನ್ನೇಕೆ ವ್ಯಕ್ತಪಡಿಸುತ್ತೀರಿ? ಸ್ವರ್ಗದ ಸುಖವನ್ನು ಅನುಭವಿಸಿರಿ' ಎಂದನು.
ನರಕ ಹೇಗಾದರೂ ಇರಲಿ. ಒಮ್ಮೆ ಅದನ್ನು ನಾನು ನೋಡಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದರು ಸಂತರು. ಅನ್ಯ ಮಾರ್ಗವಿಲ್ಲದೆ ಯಮರಾಜ ಸಂತರನ್ನು ಕರೆದುಕೊಂಡು ಹೋಗಿ ನರಕದ ಬಾಗಿಲಲ್ಲಿ ನಿಲ್ಲಿಸಿದನು. ಅಲ್ಲಿ ಪಾಪಿಗಳಿಗೆ ಕ್ರೂರ ಶಿಕ್ಷೆ ವಿಧಿಸಲಾಗುತ್ತಿತ್ತು. ಕೆಲವರನ್ನು ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಮುಳುಗಿಸಿ ಎಬ್ಬಿಸುತ್ತಿದ್ದರು. ಕಾದು ಕೆಂಪಾದ ಸಲಾಕೆಗಳಿಂದ ಬರೆಹಾಕುತ್ತಿದ್ದರು. ಗರಗಸದಿಂದ ಅಡ್ಡಡ್ಡ ಸೀಳುತ್ತಿದ್ದರು. ದೇಹಗಳನ್ನು ಪ್ರಾಣಿ, ಪಕ್ಷಿ ರಣಹದ್ದುಗಳು ಕುಕ್ಕಿ ಕುಕ್ಕಿ ತಿನ್ನುತ್ತಿದ್ದವು. ಈ ಕ್ರೂರ ಶಿಕ್ಷೆಯನ್ನು ಸಹಿಸಲಾರದೆ ಜನ ನೋವಿನಿಂದ ಚೀರಾಡುತ್ತಿದ್ದರು. ಅಲ್ಲಿ ಅವರ ಆರ್ತನಾದವನ್ನು ಕೇಳುವವರು ಯಾರೂ ಇರಲಿಲ್ಲ. ಅದೇ ಸಮಯಕ್ಕೆ ಸಂತರು ನರಕದ ಬಾಗಿಲು ದಾಟಿ ಒಳಪ್ರವೇಶ ಮಾಡಿದರು. ಆಗ ಶಿಕ್ಷೆ ಅನುಭವಿಸುತ್ತಿರುವವರೆಲ್ಲ ಸಂತರ ಕಡೆ ಕೈಮಾಡಿ ತೋರಿಸುತ್ತಾ ಏನನ್ನೋ ಹೇಳುತ್ತಿದ್ದರು. ಅದನ್ನು ನೋಡಿದ ಸಂತರು ಕೇಳಿದರು, 'ಯಮರಾಜ, ಅವರೇನು ಹೇಳುತ್ತಿದ್ದಾರೆ?' 'ಸ್ವಾಮಿ, ನೀವು ನರಕದ ಪ್ರವೇಶ ಮಾಡಿದ್ದರಿಂದ ಅವರಾರಿಗೂ ನೋವಿನ ಅನುಭವವಾಗುತ್ತಿಲ್ಲವಂತೆ. ಅದಕ್ಕಾಗಿ ನೀವು ಇಲ್ಲೇ ಇರಿ ಎಂದು ಕೋರ್ನಿಕೊಳ್ಳುತ್ತಿದ್ದಾರೆ' ಎಂದ ಯಮರಾಜ.
ಯಮರಾಜನ ಮಾತು ಕೇಳಿ ಸಂತರ ಮನ ಕರಗಿತು. ಇವರೆಲ್ಲ ಇಲ್ಲಿ ಇಷ್ಟೊಂದು ಹಿಂಸೆ ಅನುಭವಿಸುತ್ತಿರುವಾಗ ನಾನೊಬ್ಬನೇ ಹೇಗೆ ಸ್ವರ್ಗಸುಖ ಅನುಭವಿಸಲಿ? ಇದು ನ್ಯಾಯವಲ್ಲ. ನಾನು ಇಲ್ಲೇ ಇರಲು ಬಯಸುತ್ತೇನೆ. ನನಗೆ ಸ್ವರ್ಗದ ಸುಖ ಬೇಡ. ನನ್ನ ಇರುವಿಕೆಯಿಂದಲೇ ಅವರಿಗೆ ನೋವಿನಲ್ಲೂ ನೆಮ್ಮದಿ ಸಿಗುತ್ತದೆ ಎಂದಾದರೆ ಅದಕ್ಕಿಂತ ಬೇರೆ ಭಾಗ್ಯ ಏನಿದೆ? ನಾನಿಲ್ಲೇ ಇದ್ದು ಅವರ ಒಳಿತನ್ನೇ ಬಯಸಿ ಧ್ಯಾನ ಮಾಡುತ್ತೇನೆ. ನೀವು ಹೊರಡಿ ಎಂದು ಯಮರಾಜನಿಗೆ ಹೇಳಿದರು. ಯಮರಾಜ ನಿರುಪಾಯನಾಗಿ ಹೊರಡಲೇಬೇಕಾಯ್ತು.
ನೀತಿ: ಪುಣ್ಯಾತ್ಮರ ಪಾದಧೂಳಿನಿಂದ ನರಕವೂ ಸ್ವರ್ಗವಾಗುತ್ತದೆ.

- ಎಂ.ಬಿ. ನಾಯಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com