

19ನೇ ಶತಮಾನದ ಫ್ರಾನ್ಸ್‌ನ ಪ್ರಖ್ಯಾತ ಲೇಖಕರಲ್ಲಿ ಜೆರಾರ್ಡ್ ದ ನೆರ್ವಾಲ್ ಒಬ್ಬ. ಬದುಕಿದ್ದು ಕೇವಲ 46 ವರ್ಷ. ತನ್ನ ಜೀವಿತಾವಧಿಯ ಅಲ್ಪಾವಧಿಯಲ್ಲಿ ಆತ ಬಹುದೊಡ್ಡ ಸಾಧನೆ ಮಾಡಿದ.
ನೆರ್ವಾಲ್‌ಗೆ ವಿಶ್ವಪ್ರಸಿದ್ಧಿ ತಂದು ಕೊಟ್ಟ ಕೃತಿಯೇ 'ವೋಯೆಜ್ ಎನ್ ಓರಿಯಂಟ್'. ಇದನ್ನು ಇಂಗ್ಲಿಷ್‌ಗೆ ನಾರ್ಮನ್ ಗ್ಲಾಸ್ ಎಂಬಾತ ತರ್ಜುಮೆ ಮಾಡಿದ. ಅದರ ಹೆಸರು 'ಜರ್ನಿ ಟು ದಿ ಓರಿಯೆಂಟ್' ಅದರ ಅನುವಾದವೇ 'ಪೂರ್ವ ಯಾನ'. ಇಂಥ ಅಪರೂಪದ ಕೃತಿಯನ್ನು ಕನ್ನಡಕ್ಕೆ ಭಟ್ಟಿ ಇಳಿಸುವಲ್ಲಿ ಲೇಖಕ ಕೆ.ವಿ. ತಿರುಮಲೇಶ್ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದರೆ ಇದನ್ನು ಓದಲು ಕೂತಾಗ ಇದೊಂದು ಅನುವಾದವಲ್ಲ, ಮೂಲ ಕನ್ನಡದ್ದೇ ಕೃತಿ ಎನ್ನುವಷ್ಟು. ಅಷ್ಟರ ಮಟ್ಟಿಗೆ ಕೃತಿ ಮನ ತಟ್ಟುತ್ತದೆ. ಇದೊಂದು ಪ್ರವಾಸ ಕಥನವಾದರೂ ಕಾದಂಬರಿಯಂತಿದೆ.
ನೆರ್ವಾಲ್ ಮಧ್ಯಪ್ರಾಚ್ಯ ದೇಶಗಳಿಗೆ ಕ್ರಿ.ಶ. 1842- 44ರ ಅವಧಿಯಲ್ಲಿ ಪ್ರವಾಸ ಕೈಗೊಂಡಾಗ ಅಲ್ಲಿನ ಘಟನೆಗಳು, ಸ್ಥಳಗಳು, ಜತೆಗೊಂದಿಷ್ಟು ಮನಸ್ಸಿಗೆ ಮುದ ನೀಡುವ ಕತೆಗಳ ಹೂರಣವೇ 'ಪೂರ್ವಯಾನ' ಕೃತಿಯ ಕಥಾಹಂದರ. ಕೃತಿಯಲ್ಲಿ 3 ಭಾಗಗಳಿವೆ. ಮೊದಲ ಭಾಗದಲ್ಲಿ 'ಗುಲಾಮ ವ್ಯಾಪಾರಿಗಳು' ಅಧ್ಯಾಯ ಗಮನ ಸೆಳೆಯುತ್ತದೆ. ಅದರಲ್ಲಿ ಮಹಿಳೆಯರ ವ್ಯಾಪಾರ ಜಾಲದ ಬಗ್ಗೆ ವಿವರಣೆ ಇದೆ. ಝಟ್ನೈಬಿಯಾ ಒಬ್ಬ ಗುಲಾಮಿ. ಅಂದರೆ ಮಾರಾಟದ ಹೆಂಗಸು. ಆಕೆ ಅನುಭವಿಸುವ ತವಕ, ತಲ್ಲಣ, ಭಾಷೆಯ ತೊಡಕು, ನೀಗ್ರೋ ಮಹಿಳೆಯರ ಸ್ಥಿತಿಗತಿ ಹೀಗೆ ನೂರೆಂಟು ಸಮಸ್ಯೆಗಳ ವಾಸ್ತವಾಂಶ ತೆರೆದಿಡುತ್ತದೆ. ಮಾರಾಟಕ್ಕಿಟ್ಟ ಮಹಿಳೆಯರ ವರ್ಣನೆ ಗಮನ ಸೆಳೆಯುತ್ತದೆ. ಅವರ ಮುಗ್ಧ ನಗು, ಹೆಣೆದುಕೊಂಡ ವಿಚಿತ್ರ ಕೇಶರಾಶಿ, ನೋಡಲು ಹುಚ್ಚುಕೋಡಿಯಂತೆ ಕಾಣುವ ಮೈಮೇಲೆ ಹಾಕಿಸಿಕೊಂಡ ಹಚ್ಚೆಗಳು, ಚಪ್ಪಟೆ ಹಣೆ, ದಪ್ಪನೆ ತುಟಿ ಹೀಗೆ ನೋಡಲು ಅಕರಾಳ ವಿಕರಾಳ ಕಾಣುತ್ತಾರೆ. ಪ್ರಾಯಶಃ ಬಡತನವೇ ಅವರನ್ನು ಇಂಥದ್ದೊಂದು ಹೀನ ಸ್ಥಿತಿಗೆ ತಳ್ಳಿರಬಹುದೇನೋ ಎಂದು ಅನಿಸುತ್ತದೆ. ಮಾರಾಟಕ್ಕಿಟ್ಟ ಮಹಿಳೆಯರನ್ನು ವ್ಯಾಪಾರಿಗಳು ಬಟ್ಟೆ ಕಳಚಿ ತೋರಿಸಲು ಹಿಂದೆ- ಮುಂದೆ ನೋಡುತ್ತಿರಲಿಲ್ಲ ಎಂಬ ಅಂಶ ಆಗಿನ ವ್ಯಾಪಾರಿಗಳ ಮನೋಭಾವನ್ನು ಬೆತ್ತಲುಗೊಳಿಸುತ್ತದೆ. ಜತೆಗೆ 19ನೇ ಶತಮಾನದಲ್ಲಿ ಮಧ್ಯಕಾಲೀನ ದೇಶದಲ್ಲಿನ ಮಹಿಳೆಯರ ಮಾರಾಟ ಹಿಂದಿನ ಹಕೀಕತ್ತು, ವ್ಯಾಪಾರಿಗಳ, ದಲ್ಲಾಳಿಗಳ ದರ್ಬಾರ್ ಮನಸ್ಸಿನ ಅಂತರಾಳಕ್ಕೆ ತಾಗಿ ಚಿಂತನೆಯ ಅಲೆ ಎಬ್ಬಿಸುತ್ತವೆ. ಮಹಿಳೆಯರ ಮಾರಾಟ ಈಗಿನ ಸಮಸ್ಯೆಯಲ್ಲ, ಆ ಕಾಲದಲ್ಲೂ ಅದೊಂದು ಸಾಮಾಜಿಕ ಸಮಸ್ಯೆಯಾಗಿತ್ತು ಎಂಬುದು ಮನದಟ್ಟಾಗುತ್ತದೆ.
ಎರಡನೇ ಭಾಗದಲ್ಲಿ ದಂತಕಥೆ ಇದೆ. ಅದುವೇ ಖಲೀಫ ಹಕೀಮನ ಕತೆ. ಓದಲು ಕುಳಿತಾಗ ಮುಂದೇನಾಗುತ್ತೆ ಎಂಬ ತವಕ ಹುಟ್ಟಿಸುವಂಥದ್ದು. ಸಾಕಷ್ಟು ರೋಚಕ ಸನ್ನಿವೇಶಗಳು ಹಾದುಹೋಗುತ್ತವೆ. ಈ ಭಾಗದ ಕಥಾನಾಯಕ ಹಕೀಮ ತನ್ನ ಸೋದರಿ ಸಿತಲ್ಮುಲ್ಕ್‌ಳ ಮೇಲೆ ಮೋಹಗೊಳ್ಳುತ್ತಾನೆ. ಸೋದರನ ಬಯಕೆಗೆ ನಿರಾಕರಿಸುವ ಸೋದರಿಯ ಪಾತ್ರ ಗಮನ ಸೆಳೆಯುತ್ತದೆ. 'ಹಾಶಿಶ' ಎಂಬ ಅಧ್ಯಾಯದಲ್ಲಿ ಮಾದಕ ವಸ್ತು ಬಗೆಗಿನ ವಿಷಯ ಮನಸ್ಸನ್ನು ಕಾಡುತ್ತದೆ. ಅದೇ ರೀತಿ ಸಿತಲ್ಮುಲ್ಕ್‌ಳ ವರ್ಣನೆ ಮಾಡುವಾಗ ಕ್ಷಣಕಾಲ ನಮ್ಮ ರತ್ನತ್ರಯರು ಕಣ್ಮುಂದೆ ಬಂದು ಹೋಗುತ್ತಾರೆ.
ಇನ್ನು ಮೂರನೇ ಅಧ್ಯಾಯದಲ್ಲಿ ರಾಣಿ ಮತ್ತು ಜೀನಿಗಳ ರಾಜ ಸೋಲೋಮನ್‌ಳ ಕತೆಯಿದೆ. ಇದು ಎರಡನೇ ಭಾಗಕ್ಕಿಂತ ವಿಭಿನ್ನ, ರೋಚಕವಾಗಿದೆ. ಸೋಲೋಮನ್ ರಾಜನಾದರೆ, ಬಿಲ್ಕಿಸ್ ಎಂಬಾಕೆ ಆತನಿಗೆ ಮಹಾರಾಣಿ. ಇಬ್ಬರು ಉದ್ಧಾಮ ಪಂಡಿತರೇ. ಇಬ್ಬರ ನಡುವಿನ ಸಂಭಾಷಣೆ ಇದನ್ನು ತೋರ್ಪಡಿಸುತ್ತದೆ. 'ಅದೋನಿರಾಮನ್' ಅಧ್ಯಾಯದಲ್ಲಿ ಅವನ ಶಿಷ್ಯ ಬೆನೋನಿ ಜತೆಗಿನ ಸಂಭಾಷಣೆ ಅವನ ವ್ಯಕ್ತಿತ್ವವನ್ನು ತೋರಿಸುತ್ತದೆ. ಅದೋನಿರಾಮನ್ ಆ ಕಾಲದ ಪ್ರಖ್ಯಾತ ಶಿಲ್ಪಿ. ಅವನ ಕೈಕೆಳಗೆ ಸಾವಿರಾರು ಮಂದಿ ಕೆಲಸ ಮಾಡುತ್ತಿರುತ್ತಾರೆ. ಅವನೊಮ್ಮೆ ಮಹಾತ್ವಾಂಕ್ಷೆಯ ಯೋಜನೆ ಕೈಗೊಳ್ಳುತ್ತಾನೆ. ಅದುವೆ ಕಂಚಿನ ಕಡಲು ನಿರ್ಮಿಸುವುದು. ಆದರೆ, ಅದರಲ್ಲಿ ಸಫಲನಾಗಲ್ಲ. ಕತೆ ಈ ಮೂವರ ಸುತ್ತ ಗಿರಕಿ ಹೊಡೆಯುತ್ತದೆ. ಆದರೆ, ಬೇಸರ ತರಿಸಲ್ಲ. ತುಸು ಅತಿಶಯೋಕ್ತಿ ಇದೆ. ದಂತಕತೆಯೆಂದ ಮೇಲೆ ಅದನ್ನು ಸಹಿಸಿಕೊಳ್ಳಬೇಕು, ಅಲ್ಲವೇ?
ಒಟ್ಟಾರೆ ಕೃತಿಯಲ್ಲಿ ಮಧ್ಯಪ್ರಾಚ್ಯ ದೇಶಗಳ ಪ್ರವಾಸಿ ಸ್ಥಳ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ ಬಗ್ಗೆ ಇನ್ನಷ್ಟು ಮಾಹಿತಿ ಇರಬೇಕಿತ್ತೇನೋ? ಇದರಿಂದ ಮೊದಲ ಭಾಗ ಚೂರು ನೀರಸ ಅಂಥ ಎಲ್ಲೋ ಒಂದು ಕಡೆ ಅನಿಸುತ್ತದೆ. ಇದನ್ನು ಹೊರತುಪಡಿಸಿ ರೋಚಕ ಕತೆಗಳು ಮಾತ್ರ ಮನತಣಿಯುವಲ್ಲಿ ಯಶಸ್ವಿಯಾಗಿವೆ.
ಅನುವಾದಕ ಕೆ.ವಿ. ತಿರುಮಲೇಶ್ ಅವರ ಬಗ್ಗೆ ತುಸು ಹೇಳಲೇಬೇಕು. ಅವರು ಬರೀ ಭಾಷಾಂತರ ಮಾಡಿಲ್ಲ. ಹಾಗೆ ಮಾಡಿದ್ದರೆ ಅದೊಂದು ಸಾಮಾನ್ಯ ಕೆಲಸವಾಗುತ್ತಿತ್ತು. ಆದರೆ, ಭಾವನೆಗಳನ್ನು ಮನ ತಟ್ಟುವಂತೆ ವಿವರಿಸುವಲ್ಲಿ ಲೇಖಕರು ಯಶ ಕಂಡಿದ್ದಾರೆ. ಅವರು ಇಂಗ್ಲಿಷ್ ಮೇಲೆ ಹೊಂದಿರುವ ಪ್ರಭುತ್ವ ಇದಕ್ಕೆ ಕಾರಣವಿರಬಹುದು. ಜತೆಗೆ ಆಪ್ತವಾಗುವ ಭಾಷಾಶೈಲಿ, ನವೀರಾದ ನಿರೂಪಣೆ, ಎಲ್ಲೆಲ್ಲೋ ಹುಡುಕಿ ತಂದಂತಿರುವ ಪದಪುಂಜಗಳ ಪೋಣಿಸುವಿಕೆ ಇವೆಲ್ಲ ಕೃತಿಯ ಸಿರಿವಂತಿಕೆಯನ್ನು ಹೆಚ್ಚಿಸಿವೆ.
ಕೃತಿ: ಪೂರ್ವ ಯಾನ
ಮೂಲ: ಜೆರಾರ್ಡ್ ದ ನೆರ್ವಾಲ್
ಕನ್ನಡಕ್ಕೆ: ಕೆ.ವಿ. ತಿರುಮಲೇಶ್
ಪ್ರಕಾಶನ: ಅಭಿನವ, ಬೆಂಗಳೂರು
ಪುಟ: 312, ಬೆಲೆ: 250
-ಮಹೇಶ್ ಅರಳಿ