ಮೂಡಿದ ಭರವಸೆ ರಘುರಾಮ ರಾಜನ್

ಮೂಡಿದ ಭರವಸೆ ರಘುರಾಮ ರಾಜನ್
Updated on: 

ಜನ ಸಾಮಾನ್ಯ ವರ್ಗಗಳಿಗೆ ಸೇರಿದ ವ್ಯಕ್ತಿಗಳಲ್ಲಿ ಬಹುತೇಕರ ಪಾಲಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ವ್ಯವಹಾರವೇ ಗೊತ್ತಿಲ್ಲ. ಇನ್ನು ಅಲ್ಲಿನ ಮುಖ್ಯಸ್ಥರು ಯಾರಾದರೇನಂತೆ?
ಈ ಪರಿಸ್ಥಿತಿ ಹಿಂದೆ ಇತ್ತು. ಈಗ ಕಾಲ ಬದಲಾಗಿದೆ. ರಿಸರ್ವ್ ಬ್ಯಾಂಕಿನ ಗವರ್ನರ್ ದೇಶದಲ್ಲಿನ ಹಣದ ಚಲಾವಣೆಯ ಪ್ರಮಾಣ, ಬ್ಯಾಂಕ್‌ಗಳ ಬಡ್ಡಿದರಗಳಂತಹ, ಜನಜೀವನವನ್ನು ನೇರವಾಗಿ ಮುಟ್ಟುವ ವಿಚಾರದಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಾರೆನ್ನುವುದು ಈಗೀಗ ಗೊತ್ತಾಗುತ್ತಿರುವ ಅಂಶ. ಅದು ಚರ್ಚೆಗೂ ಗ್ರಾಸ.
ಭಾರತದ ಆರ್ಥಿಕ ಪರಿಸ್ಥಿತಿ ಈಗ ನಿಜವಾಗಲೂ ಹದಗೆಟ್ಟಿದೆ. ವಿಶ್ವವಿಖ್ಯಾತ ಅರ್ಥಶಾಸ್ತ್ರ ಪಂಡಿತ ಮನಮೋಹನ ಸಿಂಗ್ ಅವರೇ ಪ್ರಧಾನಿಯಾಗಿದ್ದರೂ ಇಂತಹ ಪರಿಸ್ಥಿತಿ ಕಾಡಿರುವುದು ಆಶ್ಚರ್ಯವೇ. ಈಗಿನ ಬಿಕ್ಕಟ್ಟಿಗೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಮುಖ್ಯವಾದ ಒಂದು ಕಾರಣ ಎಂದರೆ ಗವರ್ನರ್ ದುವ್ವೂರಿ ಸುಬ್ಬರಾವ್, ಪ್ರಾಮಾಣಿಕವಾಗಿ ತಮಗೆ ಸರಿ ಎಂದು ಕಂಡುಬಂದ ನಿರ್ಧಾರಗಳನ್ನು ಪ್ರಕಟಿಸಿದ್ದೂ ಇರಬಹುದು.
ಕಳೆದ ಎರಡು ವರ್ಷಗಳಿಂದಲೂ ರಿಸರ್ವ್ ಬ್ಯಾಂಕ್ ಹಾಗೂ ವಿತ್ತ ಮಂತ್ರಾಲಯಗಳ ನಡುವೆ ಸಾಪ್ತಾಹಿಕ ಅಘೋಷಿತ ಸಂಘರ್ಷ ನಡೆದಿತ್ತು. ಈಗ ಸುಬ್ಬರಾಯರು ಸೆಪ್ಟೆಂಬರ್ ನಾಲ್ಕಕ್ಕೆ ನಿವೃತ್ತರಾಗಲಿದ್ದಾರೆ. ಮುಂದಿನ ಗವರ್ನರ್ ಯಾರು?
ಆ ಪ್ರಶ್ನೆಗೆ ಪ್ರಧಾನಿಯ ವಿಶೇಷ ಆರ್ಥಿಕ ಸಲಹೆಗಾರ ರಘುರಾಮ ರಾಜನ್ (ಹತ್ತಿರದವರಿಗೆ ರಘು) ಅವರೇ ಎನ್ನುವ ಉತ್ತರವನ್ನು ಅನೇಕರು ನಿರೀಕ್ಷಿಸಿದ್ದರು. ವಾಣಿಜ್ಯೋದ್ಯಮ ವಲಯದ ಬಯಕೆಯೂ ಅದೇ ಆಗಿತ್ತು. ಆದರೂ ನೇಮಕದ ಪ್ರಕಟಣೆ ಅಧಿಕೃತವಾಗಿ ಹೊರಬೀಳುವವರೆಗೆ ಆತಂಕ ಕಾಡಿತ್ತು.
ಅವರ ನೇಮಕವನ್ನು ತಡಮಾಡದೇ ಕೇಂದ್ರ ಸರ್ಕಾರ 'ನಾಲ್ಕು ವಾರಗಳ ಮುಂಚೆಯೇ' ಪ್ರಕಟಿಸಿ, ವಿತ್ತೀಯ ಪ್ರಪಂಚದಲ್ಲಿ ಒಂದು ರೀತಿಯಲ್ಲಿ 'ಹಿಪ್ - ಹಿಪ್ ಹುರ್ರೇ' ವಾತಾವರಣವನ್ನು ನಿರ್ಮಿಸಿದೆ. ವಾಣಿಜ್ಯೋದ್ಯಮ ಹಾಗೂ ಸರ್ಕಾರದ ಇತರೆ ಉನ್ನತ ವಲಯಗಳಲ್ಲಿ ಇಷ್ಟೊಂದು ಉತ್ಸಾಹವನ್ನು ಚಿಮ್ಮಿಸಿರುವ ಐವತ್ತು ವರ್ಷದ ಈ ಪಂಡಿತರ ವಿಶೇಷವೇನು?
ಆರ್ಥಿಕ ವಿಚಾರಗಳ ಅಕೆಡೆಮಿಕ್ ವಲಯದಲ್ಲಿ ರಘುರಾಮ ರಾಜನ್ ಚಿರಪರಿಚಿತ ಹೆಸರು. ದೆಹಲಿಯ ಐಐಟಿಯ ಎಂಜಿನಿಯರಿಂಗ್ ಶಿಕ್ಷಣ, ಅಹಮದಾಬಾದ್‌ನ ಐಐಎಂನ ವಿಶೇಷ ಆಡಳಿತ ವ್ಯವಸ್ಥೆಯ ಪದವಿಗಳನ್ನು ಪಡೆದಿದ್ದರೂ, ಅವರ ಆಸಕ್ತಿ ಇದ್ದಿದ್ದು ಆರ್ಥಿಕ ಚಿಂತನೆಯ ಹಾದಿಯಲ್ಲಿ. ಅಮೆರಿಕದ ಪ್ರಖ್ಯಾತ ಎಂಐಟಿಯಲ್ಲೂ ಅಧ್ಯಯನ. ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಉದ್ಯೋಗ. ಗಂಭೀರ, ಫ್ರೌಡ ಸಮಸ್ಯೆಗಳನ್ನು ಕುರಿತ ಆಳವಾದ ಅಧ್ಯಯನ ಆಧರಿತ ಗ್ರಂಥ ರಚನೆಯ ಪರಿಣಾಮವಾಗಿ ಜನ್ಮ ಜನ್ಮಾಂತರಕ್ಕೂ ಸಾಕಾಗುವಷ್ಟು ಕೀರ್ತಿ ಪಡೆದಿದ್ದರು. ಅದು ಈಗಲೂ ಇದೆ.
ಹುಟ್ಟಿದ್ದು 1963ರ ಫೆಬ್ರವರಿಯ ಮೂರನೇ ತಾರೀಖಿನಂದು, ಭೋಪಾಲದಲ್ಲಿ. ಅವರ ತಂದೆ ಐಪಿಎಸ್ ಅಧಿಕಾರಿ. ಆದರೆ ಮನೆತನದ ಮೂಲ ಬೇರುಗಳು ಇರುವುದು ತಮಿಳುನಾಡಿನಲ್ಲಿ. ಅವರು ಕೆಲಸ ಮಾಡಿರುವ (ಎಲ್ಲ ಕಡೆ ಉನ್ನತ ಹುದ್ದೆಗಳೇ) ಸಂಸ್ಥೆಗಳೂ ಪ್ರತಿಷ್ಠಿತ ಸಂಸ್ಥೆಗಳೇ. ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ವಿತ್ತ ನಿಧಿ, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ, ಹೀಗೆ ದೊಡ್ಡ ಪಟ್ಟಿಯೇ ಇದೆ. ಅವರಿಗೆ ಸಿಕ್ಕಿರುವ ಪ್ರಶಸ್ತಿಗಳಿಗಂತೂ ಲೆಕ್ಕವೇ ಇಲ್ಲ.
2005 ರಿಂದ 2008ರ ಮಧ್ಯಭಾಗದವರೆಗಿನ ಅವಧಿ ಅವರ ವೃತ್ತಿ ಜೀವನದ ನಿರ್ಣಾಯಕ ಹಾಗೂ ಪ್ರಮುಖ ಅವಧಿ. 2005ರಲ್ಲಿ ಅಮೆರಿಕದ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ರಘುರಾಮ ರಾಜನ್ ಬರೆದ ಪುಸ್ತಕದಲ್ಲಿ 2008ರ ಜಾಗತಿಕ ವಿತ್ತೀಯ ಬಿಕ್ಕಟ್ಟು ಅನಿವಾರ್ಯ ಎನ್ನುವ ಭವಿಷ್ಯ ನುಡಿದಿದ್ದರು. ಆ ವಿಚಾರದಲ್ಲಿ ಬೇಕಾದಷ್ಟು ಜಗಳವಾಗಿತ್ತು. ಆದರೆ ಬಿಕ್ಕಟ್ಟು ಅಪ್ಪಳಿಸಿದಾಗ (ಇನ್ನೂ ಅಮೆರಿಕ ಅದರಿಂದ ಚೇತರಿಸಿಕೊಂಡಿಲ್ಲ) ಜಗತ್ತಿನ ಗಮನವನ್ನು ಸೆಳೆದವರು ರಘುರಾಮ ರಾಜನ್.
ಅವರು ಪ್ರತಿಪಾದಿಸುವ ಆರ್ಥಿಕ ಸಿದ್ಧಾಂತ ಬಹುಸರಳವಾದದ್ದು- 'ಸಾಲ ಮಾಡಿದ ಹಣದಿಂದ ಪೇಟೆಯಲ್ಲಿ ವಸ್ತುಗಳನ್ನು ಕೊಳ್ಳಲು ಪ್ರಚೋದಿಸಿದರೆ, ಬೇಡಿಕೆ ನಿರ್ಮಾಣವಾಗಬಹುದು, ಆದರೆ ಆರ್ಥಿಕ ಬಿಕ್ಕಟ್ಟು ಅನಿವಾರ್ಯ'. ಈ ವಾದವನ್ನು ನೊಬೆಲ್ ಪ್ರಶಸ್ತಿ ವಿಜೇತ, ವಿಖ್ಯಾತ ಅಂಕಣಕಾರ ಪಾಲ್ ಕ್ರೂಗಮನ್ ಒಪ್ಪಲಿಲ್ಲ. ಅವರಿಬ್ಬರ ನಡುವೆ ನಡೆದ ಪತ್ರ ವ್ಯವಹಾರ, ಲೇಖನಗಳ ಸಮರ ಹಾಗೂ ಬಹಿರಂಗ ಚರ್ಚೆಗೆ ಐತಿಹಾಸಿಕ ಮಹತ್ವ ಬಂದಿತ್ತು. ಆ ವಿವಾದದ ತಿರುಳು ಮಿತವ್ಯಯದ ವಿರುದ್ಧ ಖರ್ಚಿಗೆ ಪ್ರಚೋದನೆ ನೀಡುವುದರಿಂದ ಅಭ್ಯುದಯ ಸಾಧ್ಯವಾದೀತೇ? ಎನ್ನುವ ಪ್ರಶ್ನೆ. ಇನ್ನೂ ಅಂತಿಮವಾದ ತೀರ್ಪು ಹೊರಬಿದ್ದಿಲ್ಲ.
ಈ ಸಮಯದಲ್ಲೇ ಭಾರತದ ಆರ್ಥಿಕ ಬಿಕ್ಕಟ್ಟೂ ಬಿಗಡಾಯಿಸಿತ್ತು, 1991ರ ಕರಾಳ ದಿನಗಳ ನೆನಪು ಮರುಕಳಿಸಿತ್ತು. ಇಂತಹ ಸನ್ನಿವೇಶದಲ್ಲಿ, ವೈಯಕ್ತಿಕವಾಗಿ, ಪ್ರಧಾನಿ ಮನಮೋಹನ ಸಿಂಗ್ ಅವರು ರಘುರಾಮ ರಾಜನ್ ಅವರನ್ನು ತಮ್ಮ ವಿಶೇಷ ಸಲಹೆಗಾರರನ್ನಾಗಿ ನೇಮಿಸಿಕೊಂಡರು. ಅನೇಕರ ದೃಷ್ಟಿಯಲ್ಲಿ 'ರಘು' ವಿತ್ತೀಯ ಸುಧಾರಣೆಯ ಹರಿಕಾರರಾಗಿ, ಆರ್ಥಿಕ ಬಿಕ್ಕಟ್ಟಿನ ಸುರಂಗದಿಂದ ಹೊರಗೆ ಬರುತ್ತಿರುವ ಜಗತ್ತಿಗೆ ಅತ್ಯಂತ ಪ್ರಮುಖ ಅರ್ಥಶಾಸ್ತ್ರ ತಜ್ಞರಾಗಿ ಕಾಣಿಸಿಕೊಂಡಿದ್ದಾರೆ.
ಅವರಿಗೆ ಬಗೆ ಬಗೆಯ ಸನ್ನಿವೇಶಗಳಲ್ಲಿ ಕೆಲಸ ಮಾಡಿದ ವಿಶಿಷ್ಟ ಅನುಭವವಿದೆ. ಸ್ವಂತ ಚಿಂತನೆಯ ಶಕ್ತಿಯ ಅರಿವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರಿಗೆ ಸರಿ ಎಂದು ಕಂಡು ಬಂದಿದ್ದನ್ನು ಧೈರ್ಯವಾಗಿ, ಗಟ್ಟಿಯಾಗಿ, ಮುಚ್ಚುಮರೆ ಇಲ್ಲದೇ ಪ್ರತಿಪಾದಿಸುವ ಆತ್ಮವಿಶ್ವಾಸವಿದೆ. ಬೌದ್ಧಿಕ ವಿವಾದಗಳಿಗೆ ಅವರು ಎಂದೂ ಹೆದರಿಲ್ಲ.
ಪ್ರಧಾನಿಯ ಸಲಹೆಗಾರರಾಗಿದ್ದ ಸಮಯದಲ್ಲೇ ಅವರು ವಿತ್ತಮಂತ್ರಿ ಚಿದಂಬರಮ್ ಅವರ ಸಲಹೆಗಾರರೂ ಆಗಿದ್ದರು. ಹೀಗಾಗಿ ಭಾರತದ ಬಹುತೇಕ ಅರ್ಥಶಾಸ್ತ್ರ ಪಂಡಿತರಿಗೆ ಅವರು ಚೆನ್ನಾಗಿಯೇ ಗೊತ್ತಿರುವ ವ್ಯಕ್ತಿಯಾಗಿದ್ದರು.
ದಿಢೀರನೆ ಕಳೆದ ವಾರದಲ್ಲಿ ಒಂದು ದಿನ, ಕೇಂದ್ರ ಸರ್ಕಾರ ರಘುರಾಮ ರಾಜನ್ ರಿಸರ್ವ್ ಬ್ಯಾಂಕಿನ ಮುಂದಿನ ಗವರ್ನರ್ ಎಂದು ಪ್ರಕಟಿಸಿದ ಮರುಕ್ಷಣದಲ್ಲೇ ಇಂಟರ್‌ನೆಟ್ ಜಾಲಗಳಲ್ಲಿ ತಜ್ಞರ ಲೇಖನಗಳು ಪುಂಖಾನುಪುಂಖವಾಗಿ ಹೊರಬಿದ್ದವು. ಎಲ್ಲರೂ ನೇಮಕವನ್ನು ಸ್ವಾಗತಿಸಿದ್ದರು.
ಒಬ್ಬಿಬ್ಬರು ಮಾತ್ರ ಭಾರತೀಯ ರಿಸರ್ವ್ ಬ್ಯಾಂಕ್ ಸಂಪೂರ್ಣವಾಗಿ ಸ್ವತಂತ್ರ ಸಂಸ್ಥೆಯಲ್ಲ. ವಿತ್ತಮಂತ್ರಾಲಯದ ಚೌಕಟ್ಟಿನಲ್ಲೇ ಗವರ್ನರ್ ಕೆಲಸ ಮಾಡಬೇಕು ಎನ್ನುವ ಎಚ್ಚರಿಕೆಯನ್ನೂ ನೀಡಿದರು.
ಭಾರತೀಯ ಆರ್ಥಿಕ ವ್ಯವಸ್ಥೆಯನ್ನು ಕುರಿತು ರಘುರಾಮ ರಾಜನ್ ಅವರು ಪ್ರಕಟಿಸಿರುವ ಕೆಲವು ವಾಕ್ಯಗಳನ್ನು ಗಮನಿಸಿ:
ವಸ್ತುಗಳನ್ನು (ಆಹಾರ ಧಾನ್ಯಗಳೂ ಸೇರಿದಂತೆ) ಪೂರೈಸುವುದಕ್ಕೆ ಹೆಚ್ಚು ಗಮನ ಕೊಡಬೇಕು. ದೇಶದಲ್ಲಿ ಈಗ ಅನಗತ್ಯವಾಗಿ ಬಳಕೆಯಾಗುತ್ತಿರುವ (ಅಂದರೆ ಖರ್ಚಾಗುತ್ತಿರುವ) ಸಂಪತ್ತು ಬಂಡವಾಳ - ಹೂಡಿಕೆಯ ರೂಪಕ್ಕೆ ಪರಿವರ್ತನೆಯಾಗಬೇಕು. ರಾಜಕೀಯ ಪ್ರೇರಿತ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ಪಾರದರ್ಶಕ ಸಂಸ್ಥೆಗಳು ತಲೆ ಎತ್ತಬೇಕು.
ದೊಡ್ಡ ಸಂಖ್ಯೆಯಲ್ಲಿ ಜನರು, ಪ್ರಭುತ್ವದ ಜತೆ ಸಂಪರ್ಕಗಳಿಸಿ, ವಿಪರೀತ ಶ್ರೀಮಂತಿಕೆಯನ್ನು ಗಳಿಸುತ್ತಿರುವುದು ಒಳ್ಳೆಯದಲ್ಲ.
ಭಾರತ ಸದ್ಯದಲ್ಲಿ ಜಗತ್ತಿನ ಮೊದಲ ಸಾಲಿನ ರಾಷ್ಟ್ರವಾಗಲಿಕ್ಕಿಲ್ಲ. ಆದರೆ ಮಧ್ಯಮ ಸ್ಥಾನದಿಂದ ಕೆಳಗೆ ಇಳಿಯಬಾರದು.
ಇಂತಹ ಮಾತುಗಳನ್ನು ಗಮನಿಸಿದ ಅನೇಕ ತಜ್ಞರ ಪ್ರತಿಕ್ರಿಯೆ:
ಅರ್ಥಶಾಸ್ತ್ರದ ಪಾಂಡಿತ್ಯದ ಆಧಾರದ ಮೇಲೆ ಪರಿಸ್ಥಿತಿಯನ್ನು ವಿಶ್ಲೇಷಿಸುವುದು ಬೇರೆ, ಅಧಿಕಾರದ ಪೀಠದಲ್ಲಿ ಕೂತು ನೀತಿ ನಿರೂಪಕರ ಕೆಲಸ ಮಾಡುವುದು ಬೇರೆ. ರಘುರಾಮ ರಾಜನ್‌ಗೆ ಶುಭವಾಗಲಿ.
ರಘುರಾಮ ರಾಜನ್, ರಿಸರ್ವ್ ಬ್ಯಾಂಕ್‌ನ ಕೆಲವೇ ಮಧ್ಯವಯಸ್ಕರಲ್ಲಿ ಒಬ್ಬರು. ಒಂದು ಕಾಲದಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ಹುದ್ದೆಗೆ ಬರುತ್ತಿದ್ದವರು ಐಸಿಎಸ್ ಅಧಿಕಾರಿಗಳೇ. ಬೆನಗಲ್ ರಾಮರಾವ್, ಚಿಂತಾಮಣಿ ದೇಶಮುಖ್ ಅವರಂತಹ ಪ್ರಸಿದ್ಧ ಪುರುಷರು ಕೂತ ಕುರ್ಚಿ ಅದು. ಅನಂತರ ಅರ್ಥಶಾಸ್ತ್ರ ಪಂಡಿತರ ಸರದಿ ಬಂದಿತ್ತು. ಮತ್ತೆ ಐಎಎಸ್ ಅಧಿಕಾರಿಗಳೂ ಬಂದರು. ಯಾಗ್ಯ ವೇಣುಗೋಪಾಲ ರೆಡ್ಡಿ, ದುವ್ವೂರಿ ಸುಬ್ಬರಾವ್ ಅದಕ್ಕೆ ಇತ್ತೀಚಿನ ನಿದರ್ಶನ.

ರಿಸರ್ವ್ ಬ್ಯಾಂಕಿನ ಕೆಲಸ: ನಿಯಂತ್ರಣ ಹಾಗೂ ಉದಾರಿಕರಣ. ಎರಡೂ ವಿಪರೀತವಾಗಿರಬಾರದು ಎಂದು ನಂಬಿರುವವರಲ್ಲಿ ರಘುರಾಮ ರಾಜನ್ ಪ್ರಮುಖರ ಸಾಲಿನಲ್ಲೇ ನಿಂತಿದ್ದಾರೆ.
ಅವರ ಪತ್ನಿ ಚಿಕಾಗೋ ವಿಶ್ವ ವಿದ್ಯಾಲಯದಲ್ಲಿ ಕಾನೂನು ಅಧ್ಯಾಪಕಿ. ಇಬ್ಬರು ಮಕ್ಕಳು. ಪುತ್ರ - ಪುತ್ರಿ ಇಬ್ಬರೂ ಅಮೆರಿಕದಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ.
ರಘು ಅವರು ತಮ್ಮ ಹೆಸರಿನಿಂದಲೇ ಭರವಸೆ ಮೂಡಿಸಿದ್ದಾರೆ. ದೇಶಕ್ಕೆ ಒಳ್ಳೆಯದಾದರೆ ಅವರಿಗೂ ಅದು ಒಳ್ಳೆಯದೇ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com