ಸೋತವರ್ಯಾರು ಗೆದ್ದವರ್ಯಾರು?

ಸೋತವರ್ಯಾರು ಗೆದ್ದವರ್ಯಾರು?
Updated on: 

ಭಾರತ ವಿಭಜನೆ ಆಗಿರದಿದ್ದರೆ ಹೇಗಿರುತ್ತಿತ್ತು?
ಭಾರತದ ಗಡಿ ಇರಾನ್, ಅಪ್ಘಾನಿಸ್ತಾನ, ರಷ್ಯವರೆಗೂ ವಿಸ್ತರಿಸಿರುತ್ತಿತ್ತು. ಈಗ ವರದಿಯಾಗುತ್ತಿರುವ ಗಡಿ ಉಲ್ಲಂಘನೆಯಾಗಲೀ, ಕದನ ವಿರಾಮ ಉಲ್ಲಂಘನೆಯಾಗಲೀ, ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆಯಾಗಲೀ ಇರುತ್ತಿರಲಿಲ್ಲ. ಕಾಶ್ಮೀರ ಒಂದು ಸಮಸ್ಯೆಯೇ ಆಗುತ್ತಿರಲಿಲ್ಲ. ಅಸ್ಸಾಂನಲ್ಲಿ ನುಸುಳುವಿಕೆ ಇರುತ್ತಿರಲಿಲ್ಲ. ಬೆಂಗಳೂರಿನಿಂದ ಲಾಹೋರಿಗೆ, ಕೋಲ್ಕೊತ್ತದಿಂದ ಇಸ್ಲಾಮಾಬಾದಿಗೆ ರೈಲು, ವಿಮಾನಗಳು ನಿರಾಳವಾಗಿ ಸಂಚರಿಸುತ್ತಿದ್ದವು. ಬಹುಶಃ ಲಾಹೋರಿನಲ್ಲಿ ಒಂದು ಐಐಎಂ, ಕರಾಚಿಯಲ್ಲಿ ಐಐಟಿ, ಢಾಕಾದಲ್ಲಿ ಐಐಎಸ್ಸಿ ಇರುತ್ತಿದ್ದವೇನೋ! ದೇಶದ ರಕ್ಷಣೆಗೆ ಸುರಿಯುತ್ತಿದ್ದ ಹಣದಲ್ಲಿ ಅರ್ಧಪಾಲು ಅಭಿವೃದ್ಧಿಗೇ ಸಿಗುತ್ತಿತ್ತು. ಚೀನಾ ಭಾರತದ ಮೇಲೆ ಸವಾರಿ ಮಾಡಲು ಸಾಧ್ಯ ಆಗುತ್ತಿರಲಿಲ್ಲ. ಕ್ರಿಕೆಟ್, ಹಾಕಿ ತಂಡ ಇನ್ನೂ ಬಲಾಢ್ಯವಾಗಿರುತ್ತಿತ್ತು. ಕೋಮುಗಲಭೆ ಈ ಮಟ್ಟಿಗೆ ಇರುತ್ತಿರಲಿಲ್ಲ. ಹಿಂದೂ ಮುಸ್ಲಿಮರೀರ್ವರೂ ಭಾರತವನ್ನು ಭಾವಿಸುವ ಪರಿ ಒಂದೇ ಇರುತ್ತಿತ್ತು.
ಆದರೆ ಅಂದು ಮಹಮ್ಮದ್ ಅಲಿ ಜಿನ್ನಾ ಮತ್ತು ಅನೇಕ ಮೇಲ್ವರ್ಗದ ಸುಶಿಕ್ಷಿತ ಮುಸ್ಲಿಂ ಮುಖಂಡರು ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸು ಕಂಡರು. ಬ್ರಿಟಿಷರು ಅದಕ್ಕೆ ಕುಮ್ಮಕ್ಕು ಕೊಟ್ಟರು. ನೆಹರೂ ಜಾಗಟೆ ಬಾರಿಸಿದರು. ವಿಭಜನೆಯ ಭಜನೆ ತೀವ್ರವಾಯಿತು. ಭಾರತ ವಿಭಜನೆ ತೀರ್ಮಾನವಾಗಿಹೋಯಿತು.
ಬ್ರಿಟಿಷರೇನೋ ಅಖಂಡ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ಕೈ ತೊಳೆದುಕೊಂಡು ಹೋಗಲು ಬಯಸಿದ್ದರು. ಕಾಂಗ್ರೆಸ್‌ಗೆ ಸ್ವಾತಂತ್ರ್ಯ ಮುಖ್ಯವಾಗಿತ್ತು. ಆದರೆ ಮುಸ್ಲಿಂ ಲೀಗ್‌ಗೆ ಪ್ರತ್ಯೇಕ ಮುಸ್ಲಿಂ ರಾಷ್ಟ್ರವೇ ಮೊದಲ ಆದ್ಯತೆ ಆಯಿತು. ಜಿನ್ನಾ ಸ್ವಾತಂತ್ರ್ಯಕ್ಕಿಂತ ಮೊದಲು ವಿಭಜನೆ ಎಂದು ಪಟ್ಟು ಹಿಡಿದರು. ಅಲ್ಲದೇ ಪಾಕಿಸ್ತಾನ ರಚನೆಗೆ ಮುಸ್ಲಿಂ ಲೀಗ್ ಕೊಟ್ಟ ಕಾರಣ- ಭಾರತದ ಮುಸ್ಲಿಮರು ಅವರೇ ಒಂದು ರಾಷ್ಟ್ರವಿದ್ದಂತೆ. ಅದಕ್ಕಾಗಿ ಪ್ರತ್ಯೇಕ ರಾಷ್ಟ್ರ ಬೇಕೇಬೇಕು. ಮತ್ತು ಭಾರತದಲ್ಲಿ ಮುಸ್ಲಿಮರನ್ನು ಎರಡನೆ ದರ್ಜೆ ಪ್ರಜೆಗಳಂತೆ ನೋಡಿಕೊಳ್ಳುತ್ತಾರೆ. ಇದೇ ಅದರ ವಾದವಾಗಿತ್ತು. ವಿಭಜನೆಯಾದರೆ ಪಾಕಿಸ್ತಾನದಲ್ಲಿ ಬರುವ ಹಿಂದೂ-ಸಿಖ್ಖರ ಜೀವನ ಹೇಗೆ ಎಂಬ ವಿಚಾರ ಅವರಿಗೆ ಬೇಕಾಗಿರಲಿಲ್ಲ.
ಸರಿ, ದೇಶ ಒಡೆಯುವುದು ಹೇಗೆ? ತಲೆಕೆಡಿಸಿಕೊಂಡರು ಅಂದಿನ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್. ಅನೇಕ ಸ್ಕೀಮುಗಳನ್ನು ಮುಂದಿಟ್ಟರು. ಕಾಂಗ್ರೆಸ್‌ಗೂ, ಮುಸ್ಲಿಂ ಲೀಗ್‌ಗೂ ಸಹಮತಕ್ಕೆ ಬರುವುದು ಕಷ್ಟವಾಯಿತು. ಹೆಚ್ಚು ಕ್ಯಾತೆ ಮುಸ್ಲಿಂ ಲೀಗ್‌ನದೇ. ಇದನ್ನೆಲ್ಲ ಕಂಡು ರೋಸಿಹೋದ ಮೌಂಟ್ ಬ್ಯಾಟನ್ 'ಪ್ಲಾನ್ ಬಲ್ಕನ್‌' ಎಂಬ ತಲೆಕೆಟ್ಟ ಯೋಜನೆ ಮುಂದಿಟ್ಟ. ಇಡೀ ಭಾರತದಲ್ಲಿ ಹೇಗೆ ಚಿಕ್ಕ ಚಿಕ್ಕ ಸಂಸ್ಥಾನಗಳಿದ್ದವೋ ಅಷ್ಟನ್ನೂ, 565 ದೇಶಗಳನ್ನಾಗಿ ಮಾಡಿಬಿಡುವುದು! ಭಾರತದ ಅಸ್ತಿತ್ವ ಅಳಿಸಲು ಇದಕ್ಕಿಂತ ಮನೆಹಾಳ ಐಡಿಯಾ ಇನ್ನೊಂದಿರಲಿಲ್ಲ. ಹೋಲಿಸಿದರೆ ಎರಡು ದೇಶಗಳಾಗಿ ಒಡೆಯುವುದೇ ಕಡಿಮೆ ಅಪಾಯ ಎಂದು ಯೋಚಿಸಿದ ಕಾಂಗ್ರೆಸ್ ಮುಸ್ಲಿಂ ರಾಷ್ಟ್ರದ ಪ್ರತ್ಯೇಕತೆಗೆ ಒಪ್ಪಿಗೆ ನೀಡಿತು.
ಗಡಿ ನಿರ್ಧರಿಸುವುದು ಹೇಗೆ? ವಿಸ್ತಾರವಾದ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳ ವಿಭಜನೆ ಸಮಸ್ಯೆಯಾಗಿ ಕಾಡಿತು. ಬ್ರಿಟಿಷರು ಮೊಟ್ಟ ಮೊದಲು ವಸಾಹತು ಸ್ಥಾಪಿಸಿದ್ದು ಬಂಗಾಳದಲ್ಲಿ. ಕೊಟ್ಟಕೊನೆಯ ವಸಾಹತು ಪಂಜಾಬಿನಲ್ಲಿ. ಎರಡೂ ದೊಡ್ಡವೇ. ಎರಡೂ ಪ್ರಾಂತದಲ್ಲಿ ಮುಸ್ಲಿಮರು ಬಹುಸಂಖ್ಯಾತರು. ಕೆಲ ಪ್ರದೇಶದಲ್ಲಿ ಮುಸ್ಲಿಮರು ಹೆಚ್ಚಿದ್ದರೆ ಮತ್ತೆ ಕೆಲವೆಡೆ ಹಿಂದೂಗಳು ಹೆಚ್ಚಿದ್ದರು. ಪಂಜಾಬಿನಲ್ಲಿ ಸಿಖ್ಖರೂ, ಬಂಗಾಳದಲ್ಲಿ ಬೌದ್ಧರೂ ಗಣನೀಯವಾಗಿದ್ದರು. ಹೀಗಾಗಿ ಈ ಎರಡೂ ಪ್ರಾಂತ್ಯವನ್ನು ಒಡೆಯಲು ಕಾಂಗ್ರೆಸ್ ಒಪ್ಪಲಿಲ್ಲ. ಆದರೆ ಒಡೆಯಲೇಬೇಕು ಎಂದಿತು ಮುಸ್ಲಿಂ ಲೀಗ್.
ಅಂತೂ ಇಂತೂ 1947ರ ಜೂನ್‌ನಲ್ಲಿ ಪಂಜಾಬ ಮತ್ತು ಬಂಗಾಳ ಪ್ರಾಂತ್ಯವನ್ನು ವಿಭಜಿಸಿ ಭಾರತ ವಿಭಜನೆ ಮುಗಿಸಬೇಕೆಂಬ ತರಾತುರಿಗೆ ಇಳಿಯಿತು ಬ್ರಿಟಿಷ್ ಸರಕಾರ. ಒಂದೇ ತಿಂಗಳಲ್ಲಿ ಎರಡು ಗಡಿ ಆಯೋಗಗಳ ರಚನೆ ಆಯಿತು. 40 ಕೋಟಿ ಜನಸಂಖ್ಯೆಯ, ಅತಿ ಪ್ರಾಚೀನ ಸಂಸ್ಕೃತಿಯ ಬೃಹತ್ ರಾಷ್ಟ್ರವನ್ನು, ಅದರ ಮಿಲಿಟರಿ, ರೈಲ್ವೇ, ಟೆಲಿಗ್ರಾಫ್, ಆದಾಯ ತೆರಿಗೆ ಇತ್ಯಾದಿ ಕೇಂದ್ರೀಯ ಇಲಾಖೆಗಳನ್ನೂ, ಆಸ್ತಿ ಮತ್ತು ಸಾಲಗಳನ್ನೂ ಎರಡು ರಾಷ್ಟ್ರಗಳಿಗೆ ಹಂಚಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗಡಿರೇಖೆ ಗುರುತಿಸಬೇಕು. ಇವಿಷ್ಟೂ ಹತ್ತೇ ವಾರಗಳಲ್ಲಿ ಆಗಬೇಕು.
ಗಡಿ ಆಯೋಗದಲ್ಲಿ ಸಮಾನ ಸಂಖ್ಯೆಯ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಸದಸ್ಯರಿದ್ದರು. ಒಬ್ಬರು ಒಪ್ಪಿದ್ದು ಇನ್ನೊಬ್ಬರಿಗೆ ಆಗದು. ಇವರು ಹೇಳಿದರೆ ಕೇಳುವುದಿಲ್ಲ, ಹೇರಬೇಕು ಎಂದು ನಿರ್ಧರಿಸಿದ ಬ್ರಿಟಿಷ್ ಸರಕಾರ ಸರ್ ರ್ಯಾಡ್‌ಕ್ಲಿಫ್ ಎಂಬ ಸರ್ವೆ ತಜ್ಞನನ್ನು ನೇಮಿಸಿತು.
ದುರಂತವೆಂದರೆ ಇದೇ. ಭಾರತದ ನೆಲದ ಮೇಲೆ ಒಮ್ಮೆಯೂ ಕಾಲಿಡದಿದ್ದ, ಭಾರತದ ಬಗ್ಗೆ ಓದಿರದಿದ್ದ, ಭಾರತದ ವೈವಿಧ್ಯತೆಯ ಆಳ ಅಗಲ ಅರಿವಿರದಿದ್ದ ಸರ್ವೆ ಅಧಿಕಾರಿ ರ್ಯಾಡ್‌ಕ್ಲಿಫ್ ಶವದ ಮರಣೋತ್ತರ ಪರೀಕ್ಷೆ ಮಾಡುವ ವೈದ್ಯನಂತೆ ಭಾರತಕ್ಕೆ ಬಂದಿಳಿದ. ಗಡಿರೇಖೆ ನಿಗದಿಪಡಿಸುವ ಐತಿಹಾಸಿಕ ಕೆಲಸವನ್ನು ತಟಸ್ಥವಾಗಿ ಮುಗಿಸಿ ಹೋಗುವುದಷ್ಟೇ ಅವನ ಜವಾಬ್ದಾರಿಯಾಗಿತ್ತು.
ಮುಸ್ಲಿಮರು ಮತ್ತು ಹಿಂದೂಗಳ ಜನಸಂಖ್ಯಾ ಬಾಹುಳ್ಯದ ಮೇಲೆ ಗಡಿಯ, ವಿಶೇಷವಾಗಿ ಪಂಜಾಬ್ ಮತ್ತು ಬಂಗಾಳವನ್ನು ವಿಭಜಿಸಲು ಆತ ತೀರ್ಮಾನಿಸಿದ. ಇತರೆ ಅಂಶಗಳಾದ ನದಿಗಳನ್ನು ಗಡಿ ಗುರುತಿಸಲು ಬಳಸಲು ನಿರ್ಧರಿಸಿದ. ಭಾರತದ ನದಿಗಳು ಆಗಾಗ ಪಾತ್ರ ಬದಲಿಸುತ್ತವೆಯೆಂದು ಯಾರೋ ಅವನ ದಾರಿ ತಪ್ಪಿಸಿದರು. ಹೀಗಾಗಿ ಮತೀಯ ಜನಸಾಂದ್ರತೆ ಒಂದೇ ಗಡಿ ಗುರುತಿಸಲು ಮಾನದಂಡವಾಗಿ ಬಳಸಬೇಕೆಂದು ಅಂತಿಮ ಫೈಸಲು ಮಾಡಿದ ಎಂದು ದಾಖಲಿಸಿದ್ದಾರೆ ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ತಜ್ಞ ಸಲೀಲ್ ಮಿಶ್ರಾ.
ಇಲ್ಲೊಂದು ಸಮಸ್ಯೆ ಇತ್ತು. ಪ್ರಾಂತದ ಯಾವುದೋ ಒಂದು ಕಡೆ ಒಂದು ಕೋಮಿನ ಜನಸಾಂದ್ರತೆ ಅಧಿಕವಾಗಿರಲಿಲ್ಲ. ಅಲ್ಲಲ್ಲಿ, ಕೆಲವೆಡೆ ಹಿಂದುಗಳು ಹೆಚ್ಚಿದ್ದರು, ಕೆಲವೆಡೆ ಮುಸ್ಲಿಮರು ಹೆಚ್ಚಿದ್ದರು. ಉದಾಹರಣೆಗೆ ಬಂಗಾಳದ ಚಿತ್ತಗಾಂಗ್ ಜಿಲ್ಲೆಯಲ್ಲಿ ಒಟ್ಟಾರೆ ಮುಸ್ಲಿಮರು ಬಹುಸಂಖ್ಯಾತರು. ಅದೇ ಜಿಲ್ಲೆಯ ಪರ್ವತ ಪ್ರದೇಶಗಳನ್ನಷ್ಟೇ ತೆಗೆದುಕೊಂಡರೆ ಹಿಂದೂ -ಬೌದ್ಧರ ಸಂಖ್ಯೆ 97 ಶೇ. ಚಿತ್ತಗಾಂಗ್ ಅನ್ನು ಸಾರಾಸಗಟಾಗಿ ಪಾಕಿಸ್ತಾನಕ್ಕೆ ಕೊಡಲು ನೆಹರೂ-ಪಟೇಲರು ವಿರೋಧಿಸಿದರು. ಆದರೆ ರ್ಯಾಡಿಕ್ಲಿಫ್ ಪ್ರಾಂತವನ್ನು ಒಡೆಯಲು ಒಪ್ಪಲಿಲ್ಲ. ಚಿತ್ತಗಾಂಗ್ ಪೂರ್ವ ಪಾಕಿಸ್ತಾನದ ಪಾಲಾಯಿತು.
ಮುಸ್ಲಿಂ ಲೀಗ್ ಮೊದಲಿನಿಂದಲೂ ತನಗೆ ಅನ್ಯಾಯವಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಲೇ ಇತ್ತು. ಪಾಕಿಸ್ತಾನದ ಮೊದಲ ಪ್ರಸ್ತಾಪಿತ ಪ್ರಧಾನಿ ಲಿಯಾಖತ್ ಅಲಿ ಖಾನ್ ಕಾಶ್ಮೀರ ವಿಷಯದಲ್ಲಿ ಗಡಿ ಆಯೋಗ ತಾರತಮ್ಯ ಮಾಡುತ್ತಿದೆ ಎಂದು ದೂರಿದ. ಕಾಶ್ಮೀರ ಸಂಪರ್ಕಕ್ಕೆ ಇರುವುದು ಎರಡೇ ಮಾರ್ಗ. ಒಂದು ರಾವಲ್ಪಿಂಡಿ, ಇನ್ನೊಂದು ಸಿಯಾಲ್‌ಕೋಟ್‌ನಿಂದ. ಮೂರನೆಯ ಕಚ್ಚಾ ರಸ್ತೆ ಸಂಪರ್ಕ ಗುರುದಾಸ್‌ಪುರದಿಂದ ಇತ್ತು. ಗುರುದಾಸಪುರ ಜಿಲ್ಲೆಯಲ್ಲೂ ಕೆಲವೆಡೆ ಮುಸ್ಲಿಮ್ ಬಾಹುಳ್ಯವಿತ್ತು. ಅದೇಕೋ ರ್ಯಾಡ್‌ಕ್ಲಿಫ್ ಜಿಲ್ಲೆಯನ್ನು ಒಡೆದು ಹಿಂದೂ-ಸಿಖ್ ಬಾಹುಳ್ಯದ ಗುರುದಾಸ್‌ಪುರವನ್ನು ಭಾರತಕ್ಕೆ ಬಿಟ್ಟು ಪುಣ್ಯ ಕಟ್ಟಿಕೊಂಡ. ಕಚ್ಚಾರಸ್ತೆ ಈ ಭಾಗದಲ್ಲಿತ್ತು. ಹೀಗಾಗಿ ಕಾಶ್ಮೀರದ ಮೇಲೆ ಭಾರತದ ಹಿಡಿತ ಸಾಧ್ಯವಾಯಿತು. ಸಲೀಲ್ ಮಿಶ್ರಾ ಇನ್ನೂ ಎದೆ ನಡುಗುವ ವಿಷಯಗಳನ್ನು ದಾಖಲಿಸಿದ್ದಾರೆ.
1947 ಆಗಸ್ಟ್ 13ರಂದು ಗಡಿ ಆಯೋಗದ ವರದಿ ಸಿದ್ಧವಾಯಿತು. ಮೊದಲು ಪಾಕಿಸ್ತಾನ ರಚನೆ ಆದ ಮೇಲೆ ಆಗಸ್ಟ್ 16ರಂದು ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಬ್ರಿಟಿಷ್ ಸರಕಾರ ತೀರ್ಮಾನಿಸಿತು. ಆಗಲೇ ಗಡಿ ಭಾಗದ ಊರುಗಳಲ್ಲಿ ಗಡಿಬಿಡಿ ಉಂಟಾಯಿತು. ತಮ್ಮ ಪ್ರಾಂತ ಪಾಕಿಸ್ತಾನಕ್ಕೆ ಸೇರುವುದೋ ಭಾರತಕ್ಕೆ ಸೇರುವುದೋ ಎಂದು ಆತಂಕಪಟ್ಟರು ಜನ. ಜನಸಂಖ್ಯೆ ಆಧಾರದ ಮೇಲೆ ವಿಭಜನೆ ನಡೆಯುತ್ತಿದ್ದುದರಿಂದ ಅನ್ಯಮತೀಯರನ್ನು ಕೊಂದು ತಂತಮ್ಮ ಜನಸಂಖ್ಯೆ ಹೆಚ್ಚು ಎಂದು ತೋರಿಸಿಕೊಳ್ಳುವ ಹುಚ್ಚು ಹೆಚ್ಚಾಯಿತು. ಹಿಂಸೆಯ ಸುದ್ದಿ ಹರಡುತ್ತಿದ್ದಂತೆ ಹಿಂಸೆಯೂ ಹರಡಿತು. ಪಶ್ಚಿಮ ಪಂಜಾಬ್‌ನಲ್ಲಿ ಮುಸ್ಲಿಮರು ಸಿಖ್ಖರು-ಹಿಂದುಗಳನ್ನು ಕೊಲ್ಲತೊಡಗಿದರು. ಪೂರ್ವ ಪಂಜಾಬಿನಲ್ಲಿ ಮುಸ್ಲಿಮರ ಹನನ ನಡೆಯತೊಡಗಿತು. ಭಯ, ಅಸುರಕ್ಷತೆ, ದ್ವೇಷ ಗಡಿ ಊರುಗಳಲ್ಲಿ ಹಬ್ಬಿತು. ಪಕ್ಕದ ಮನೆಯವರು ಶತ್ರುಗಳಾದರು.
ಅಂತಿಮವಾಗಿ ಗಡಿರೇಖೆ ಪ್ರಕಟಿಸಿದರು ರ್ಯಾಡ್ ಕ್ಲಿಫ್. ನಿನ್ನೆ ಪಕ್ಕದ ಊರುಗಳಲ್ಲಿದ್ದವರು ಇಂದು ಪಕ್ಕದ ದೇಶದವರಾದರು. ಪಂಜಾಬಿನ ಆತ್ಮವೇ ಆಗಿದ್ದ, ಖ್ಯಾತ ಶೈಕ್ಷಣಿಕ ಕೇಂದ್ರ ಲಾಹೋರ್ ಇರದ ಪಂಜಾಬ್ ಶೂನ್ಯವೆನ್ನಿಸಿತು ಪಂಜಾಬಿಗಳಿಗೆ. ಕೋಲ್ಕೊತ್ತ ಇಲ್ಲದ ಬಂಗಾಳ ಪೂರ್ವಪಾಕಿಸ್ತಾನದ ಬಂಗಾಳಿಗಳಿಗೆ ಅಪೂರ್ಣವೆನ್ನಿಸಿತು. ಸಿಖ್ಖರು ಗುರುನಾನಕರ ಜನ್ಮಸ್ಥಾನ ನಾನಕ್‌ಸಾಹಿಬ್ ಗುರುದ್ವಾರವನ್ನೇ ಕಳೆದುಕೊಂಡರು. ಪಂಚ ನದಿಗಳ ಬೀಡು ಪಂಜಾಬಿನ ಎರಡು ನದಿಗಳು ಪಾಕ್ ಪಾಲಾದವು. ಬಂಗಾಳದ ಸೆಣಬು ಉದ್ಯಮ ತತ್ತರಿಸಿತು, ಯಾಕೆಂದರೆ ಸೆಣಬು ಬೆಳೆಯುವ ವಿಸ್ತಾರ ಪ್ರದೇಶ ಪೂರ್ವಪಾಕಿಸ್ತಾನದ ಪಾಲಾದರೆ, ಸೆಣಬು ಕೈಗಾರಿಕೆ ಘಟಕಗಳೆಲ್ಲ ಭಾರತದ ಪಾಲಾಗಿತ್ತು.
ಭಾವನಾತ್ಮಕ ಮತ್ತು ಮಾನಸಿಕ ಆಘಾತದಿಂದ ಜರ್ಝರಿತವಾದ ಪ್ರಜೆಗಳಿಗೆ ಹಿಂಸೆ ಆಕ್ರೋಶವನ್ನು ಹೊರ ಹಾಕುವ ಮಾರ್ಗವಾಯಿತು. ಏನಿಲ್ಲ ಎಂದರೂ 30 ಲಕ್ಷ ಜನರ ಮಾರಣ ಹೋಮವಾಯಿತು. 70 ಸಾವಿರ ಮಹಿಳೆಯರ ಮೇಲೆ ಅತ್ಯಾಚಾರವಾಯಿತು. ಅನೇಕರು ಅಪಹರಿಸಲ್ಪಟ್ಟರು. ಪಾಕಿಸ್ತಾನ ಪ್ರದೇಶದಿಂದ ಹಿಂದೂಗಳ, ಭಾರತ ಪ್ರದೇಶದಿಂದ ಮುಸ್ಲಿಮರ ಅಂದಾಜು 1.2 ಕೋಟಿ ಜನರ ಮಹಾ ವಲಸೆ ನಡೆಯಿತು. ಇಂದಿಗೂ ಎರಡೂ ಕಡೆ ಇರುವ ಪಂಜಾಬಿಗಳು ವಿಭಜನೆಯ ಕರಾಳ ಛಾಯೆಯಿಂದ ಹೊರ ಬಂದಿಲ್ಲ.  
ಧರ್ಮವೇ ಮುಖ್ಯವೆಂದ ಮುಸ್ಲಿಂ ಲೀಗ್ ನಾಯಕರ ಪಟ್ಟಿನಿಂದ, ಗಾಂಧೀಜಿಯನ್ನು ದೂರವಿಟ್ಟು ನೆಹರೂ ಮಾಡಿದ ತಪ್ಪು ಒಪ್ಪಿಗೆಗಳಿಂದ, ರ್ಯಾಡಿಕ್ಲಿಫ್‌ನಂಥವರು ಮಾಡಿದ ಯಡವಟ್ಟುಗಳಿಂದ ಇಂದು ಭಾರತವೂ ನರಳುತ್ತಿದೆ, ಪಾಕಿಸ್ತಾನವೂ ನರಳುತ್ತಿದೆ. ಆಮೇಲೆ ಸೃಷ್ಟಿಯಾದ ಬಾಂಗ್ಲಾದೇಶವೂ ಸುಖವಾಗಿಲ್ಲ. ಭಾರತ ಅಖಂಡವಾಗಿದ್ದರೆ ಇನ್ನೂ ನಳನಳಿಸಬಹುದಿತ್ತು. ದೇಶ ವಿಭಜನೆಯೆಂಬ ಮಾನವ ನಿರ್ಮಿತ ದುರಂತದಲ್ಲಿ ಗೆದ್ದವರು ಯಾರೂ ಇಲ್ಲ, ಸೋತವರೇ ಎಲ್ಲ! 

- ವಿನಾಯಕ ಭಟ್ ತದ್ದಲಸೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com