ಹೀಗೂ ಆಗುವುದುಂಟು!

Updated on: 

ಭಾಗ-2
ರಾಧೆ ಅದೇ ಬಾಲಂಗೋಸಿ ತಂಗಿಯೊಂದಿಗೆ ಬಾಗಿಲ ಹೊರಗೆ ನಿಂತಿದ್ದಾಳೆ! ಕ್ಷಣಕಾಲ ಶಂಕರ ದಿಗ್ಭ್ರಾಂತನಾದ. ಅವನಿಗೆ ಅರಿವಿಲ್ಲದೆ ಅವನ ಮುಖ ಅರಳಿಬಿಟ್ಟಿತ್ತು. ಸಾವರಿಸಿಕೊಂಡು ಹೇಳಿದ, 'ಯಾರೂ ಮನೇಲಿಲ್ಲ.' 'ಸರಿ, ಸಾರ್, ಬರ್ತೀನಿ' ಎಂದು ಹಿಂತಿರುಗುವುದರಲ್ಲಿದ್ದಳು. 'ಒಳಕ್ಕೆ ಬನ್ನಿ ಪರವಾಗಿಲ್ಲ' ಎಂದ. ಬಂದೇಬಿಟ್ಟಳು. ತಾನೇ ಮುಂಬಾಗಿಲು ಮುಚ್ಚಿ, ತಂಗಿಗೆ ಚಂದಮಾಮ ಓದಲು ಕೊಟ್ಟು, ಹಾಲಲ್ಲಿ ಕೂತಿರಲು ಹೇಳಿ, ಶಂಕರನ ಕೊಠಡಿಗೆ ಹೋಗಿ, ಕುರ್ಚಿಯ ಮೇಲೆ ಕೂತುಬಿಟ್ಟಳು. ಶಂಕರ ಅವಾಕ್ಕಾಗಿ ಅವಳನ್ನು ಹಿಂಬಾಲಿಸಿ, ತನ್ನ ಮಂಚದ ಮೇಲೆ ಕೂತ.
ಅದೆಷ್ಟೋ ಕ್ಷಣಗಳು ಇಬ್ಬರೂ ಮೌನವಾಗಿ ತಲೆ ತಗ್ಗಿಸಿ ಕೂತಿದ್ದರು. ನಿಧಾನವಾಗಿ ರಾಧೆ ತಲೆಯೆತ್ತಿ ನಿಟ್ಟುಸಿರಿಟ್ಟಳು. ಶಂಕರ ತಲೆಯೆತ್ತಿದ. ಅವಳ ಕಂಗಳಿಂದ ಸಳಸಳ ನೀರಿಳಿಯುತ್ತಿತ್ತು. ಥಟ್ಟನೆ ಎದ್ದವನೇ ಅವಳ ಬಳಿ ಹೋಗಿ, 'ಛೇ, ಛೇ! ಹೀಗೇಕೆ ಅಳ್ತಿದ್ದೀರಿ ರಾಧಾ..?' ಎಂದು ತನ್ನ ಕೈಯಿಂದ ಅವಳ ಕೆನ್ನೆಯನ್ನು ಮೃದುವಾಗಿ ಒರೆಸಿದ. ಗಕ್ಕನೆ ಅವಳು ತನ್ನ ಕೈಯಿಂದ ಅವನ ಕೈಯನ್ನು ಬಿಗಿಯಾಗಿ ಹಿಡಿದು, ತನ್ನ ತುಟಿಗೊತ್ತಿಕೊಂಡಳು. ಶಂಕರನ ಮೈತುಂಬ ಮಿಂಚು ಹರಿಯಿತು. ಸಂಕೋಚ, ಬಿಗುಮಾನಗಳ ತೆರೆ ಸರಿದುಹೋಯಿತು. ಎರಡೂ ಕೈಗಳಿಂದ ಅವಳ ತೋಳುಗಳನ್ನು ಹಿಡಿದು ಮೇಲೆತ್ತಿ, ಅವಳನ್ನು ಎದೆಗೊತ್ತಿಕೊಂಡ. ಅನಂತವೆನಿಸಿದ ಅದೆಷ್ಟೋ ಕ್ಷಣಗಳು ಅವರು ಹಾಗೆಯೇ ಮೈಮರೆತು ನಿಂತಿದ್ದರು.
ಮೃದುವಾಗಿ ತೆಕ್ಕೆ ಸಡಿಲಿಸಿಕೊಂಡು, ರಾಧೆ ಕುರ್ಚಿಯಲ್ಲಿ ಮತ್ತೆ ತಲೆ ತಗ್ಗಿಸಿ ಕೂತಳು. ಶಂಕರ ಮಂಚದ ಮೇಲೆ ಕೂತ. ರಾಧೆ ಗದ್ಗದ ದನಿಯಲ್ಲಿ ಹೇಳಿದಳು, 'ನನ್ನನ್ನು ಕ್ಷಮಿಸಿ, ಸಾರ್. ನಾನು ನಿಮ್ಮ ಅಕ್ಕನವರಿಗೆ ಸುಳ್ಳು ಹೇಳಿಬಿಟ್ಟೆ. ನಿಜವಾಗಿ ನಾನೂ ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಏನು ಪ್ರಯೋಜನ? ನನಗೆ ಚೆನ್ನಾಗಿ ಗೊತ್ತು, ನಾವು ಮದುವೆಯಾಗೋದು ಖಂಡಿತಾ ಸಾಧ್ಯವಿಲ್ಲ. ನನ್ನ ಅಪ್ಪ ಅಮ್ಮ ಸಂಪ್ರದಾಯಸ್ಥರು. ಮಾಧ್ವರಲ್ಲದೆ ಬೇರೆಯವರಿಗೆ ನನ್ನನ್ನು ಮದುವೆ ಮಾಡಿಕೊಡಲು ಅವರು ಒಪ್ಪುವುದಿಲ್ಲ. ನಿಮಗೆ ನಿರಾಸೆ, ಅವಮಾನ ಆದೀತು ಅಂತ ನಾನು ನಿಮ್ಮ ಅಕ್ಕನವರಿಗೆ ಸುಳ್ಳು ಹೇಳಬೇಕಾಯಿತು. ನೀವು ಸುಲಭವಾಗಿ ನನ್ನನ್ನು ಮರೆತುಬಿಡ್ತೀರಿ ಅಂದುಕೊಂಡಿದ್ದೆ. ಆದರೆ ಈಚೆಗೆ ನೀವು ತುಂಬಾ ಪೆಚ್ಚಾಗಿರೋದು ನೋಡಿ ನನಗೆ ತುಂಬಾ ನೋವಾಯಿತು. ನನ್ನ ಬಗ್ಗೆ ನನಗೇ ನಾಚಿಕೆ, ಅಸಹ್ಯವಾಯಿತು. ನಿನ್ನೆ ಸಂಜೆ ರಾಘವೇಂದ್ರಮಠದಲ್ಲಿ ನಿಮ್ಮ ಅಕ್ಕ ಸಿಕ್ಕಿದ್ದರು. ನಿಮಗೆ ಆರೋಗ್ಯ ಸರಿಯಿಲ್ಲವೆಂದು ಹೇಳಿದರು. ಆದ್ದರಿಂದ ಇವತ್ತು ಧೈರ್ಯ ಮಾಡಿ ಬಂದುಬಿಟ್ಟೆ. ನಿಮ್ಮ ಅಕ್ಕನವರನ್ನು ಕಂಡು, ಅವರಿಗೆ ನಿಜ ತಿಳಿಸಿಬಿಡಬೇಕೆಂದು ನಿಶ್ಚಯಿಸಿಕೊಂಡು ಬಂದಿದ್ದೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ, ಸಾರ್‌'.
ಶಂಕರ ಆನಂದದ, ಆತ್ಮವಿಶ್ವಾಸದ ಗೌರೀಶಂಕರದ ತುದಿಯಲ್ಲಿದ್ದ. ಹೇಳಿದ, 'ನೀನೇನೂ ಹೆದರಬೇಡ, ರಾಧಾ.. (ಇದ್ದಕ್ಕಿದ್ದಂತೆ ಅವಳಿಗೆ ಏಕವಚನ ಪ್ರಯೋಗಿಸಿದ್ದರ ಬಗ್ಗೆ ಅವನಿಗೆ ಮುಜುಗರವಾಗಲಿಲ್ಲ!) ಇಡೀ ಜಗತ್ತೇ ಎದುರಾದರೂ ನಾ ನಿನ್ನ ಕೈಬಿಡುವುದಿಲ್ಲ. ನೀನು ಧೈರ್ಯ ಮಾಡಿದರೆ ಸಾಕು. ನಾವು ಮದುವೆಯಾಗುವುದನ್ನು ಯಾರೂ ತಡೆಯಲಾರರು.'
'ಕ್ಷಮಿಸಿ, ಸಾರ್, ನನ್ನ ತಂದೆತಾಯಿಯರನ್ನು ವಿರೋಧಿಸಿ, ನಾನು ನಿಮ್ಮನ್ನು ಮದುವೆಯಾಗಲಾರೆ. ಅವರು ನನ್ನನ್ನು ತುಂಬಾ ಪ್ರೀತಿಯಿಂದ ಸಾಕಿದ್ದಾರೆ. ನಾನೂ ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರಿಗೆ ನಿರಾಸೆ, ಅವಮಾನ ಆಗುವಂಥ ಯಾವ ಕೆಲಸವನ್ನೂ ನಾ ಮಾಡಲಾರೆ. ಜೊತೆಗೆ ಇದರಿಂದ ನನ್ನ ತಂಗಿಯರ ಭವಿಷ್ಯ ಹಾಳಾಗಬಹುದು. ಅಷ್ಟೊಂದು ಸ್ವಾರ್ಥಿಯಾಗಲು ನನಗೆ ಸಾಧ್ಯವಿಲ್ಲ. ನಾಳೆ ಇವರನ್ನೆಲ್ಲ ವಿರೋಧಿಸಿ ನಾನು ನಿಮ್ಮನ್ನು ಮದುವೆಯಾದರೆ ನಾನೂ ಸುಖಿಯಾಗಲಾರೆ, ನಿಮಗೂ ಸುಖ ನೀಡಲಾರೆ. ಆದ್ದರಿಂದಲೇ ನಿಮ್ಮನ್ನು ಕೇಳಿಕೊಳ್ತೇನೆ, ದಯವಿಟ್ಟು ನನ್ನನ್ನು ಮರೆತುಬಿಡಿ. ಮುಂದಿನ ಜನ್ಮದಲ್ಲಾದರೂ ನಮ್ಮನ್ನು ಒಂದುಗೂಡಿಸಲು ಆ ದೇವರನ್ನು ದಿನಾ ಪ್ರಾರ್ಥಿಸುತ್ತೇನೆ.'
'ನೋಡು, ರಾಧಾ... ಜನ್ಮಜನ್ಮಾಂತರಗಳಲ್ಲಿ, ದೇವರುದಿಂಡರಲ್ಲಿ ನನಗೆ ನಂಬಿಕೆಯಿಲ್ಲ. ಅಷ್ಟು ಸುಲಭವಾಗಿ ಸೋಲೊಪ್ಪಲು ನಾನು ಸಿದ್ಧನಿಲ್ಲ. ಹೇಗಾದರೂ ಮಾಡಿ ನಿನ್ನ ತಂದೆತಾಯಿರನ್ನು ಒಪ್ಪಿಸುತ್ತೇನೆ. ಆಗಲಾದರೂ ನನ್ನನ್ನು ಮದುವೆಯಾಗಲು ಒಪ್ಪುತ್ತೀಯೋ, ಅಷ್ಟು ಹೇಳು.'
'ಅವರು ಒಪ್ಪೋದಿಲ್ಲ, ಸಾರ್, ನನಗೆ ಗೊತ್ತು. ಆಮೇಲಾದರೂ ನಿಮಗೆ ನಿರಾಸೆ ಆಗೇ ಆಗುತ್ತೆ. ಅದಕ್ಕೇ ಹೇಳ್ತಿದೀನಿ...'
'ನಿನ್ನ ಮರೆತುಬಿಡಬೇಕು.. ಅಷ್ಟೇ ತಾನೇ? ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ದಯವಿಟ್ಟು ಇಷ್ಟಾದರೂ ಮಾಡು, ಗಟ್ಟಿ ಮನಸ್ಸು ಮಾಡಿಕೊಂಡು ಧೈರ್ಯವಾಗಿರು. ಉಳಿದ ವಿಷಯ ನನಗೆ ಬಿಟ್ಟುಬಿಡು. ಅಷ್ಟಾದರೂ ಸಾಧ್ಯವಿಲ್ಲವಾ?'
'ಸರಿ, ಸಾರ್, ಆದರೆ...'
'ಮತ್ತೆ ಅದೇ ರಾಗ ತೆಗೆದೆಯಲ್ಲ ಏಳು, ಹೊತ್ತಾಯಿತು. ಮನೇ ತನಕ ನಿನ್ನ ಬಿಟ್ಟುಬರಲಾ?' 'ಬೇಡ, ಸಾರ್. ನನ್ನ ಫ್ರೆಂಡ್ ಮನೆಗೆ ಹೋಗಿಬರ್ತೀನೀಂತ ಹೇಳಿ ಬಂದಿದ್ದೀನಿ. ತಂಗಿ ಜೊತೇಲಿದಾಳಲ್ಲ. ನಾನು ಹೋಗಿ ಬರ್ತೀನಿ'.
ರಾಧೆ ಎದ್ದಳು. ಶಂಕರ ಅವಳ ತೋಳು ಹಿಡಿದು ತಡೆದ. ನಾಚಿ ನಿಂತಳು. ಅವಳ ಕೆನ್ನೆಗೆ ಮೃದುವಾಗಿ ತುಟಿಯೊತ್ತಿ, ತನ್ನ ಕೆನ್ನೆ ಒಡ್ಡಿದ. ತಲೆಯಾಡಿಸಿದಳು. 'ನನ್ನ ವಿಷಯದಲ್ಲಿ ಮಾತ್ರ ಸ್ವಾರ್ಥಿಯಾಗಬಹುದಾ?' ಪಿಸುಮಾತಿನಲ್ಲಿ ಕೇಳಿದ. ನಸುನಕ್ಕು ಅವನ ಕೆನ್ನೆಗೆ ತನ್ನ ತುಟಿಗಳನ್ನು ಒತ್ತಿ, ಕೆಂಪಾಗಿ, ಅವನ ಕೊಠಡಿಯಿಂದ ಹೊರಬಂದಳು. ಕೊಂಚಕಾಲ ಶಂಕರ ಈ ಭೂಮಿಯ ಮೇಲಿರಲಿಲ್ಲ.

ರಾಧೆ ಅತ್ತ ಹೋದ ಕೂಡಲೇ ಇತ್ತ ಶಂಕರ ಮನೆಬಾಗಿಲಿಗೆ ಬೀಗ ಹಾಕಿ, ಬೀಗದಕೈ ಪಕ್ಕದಮನೆಯಲ್ಲಿ ಕೊಟ್ಟು, ಸಂಗೀತ ವಿದ್ವಾನ್ ಹಯಗ್ರೀವಾಚಾರ್ಯರ ಮನೆಗೆ ಧಾವಿಸಿದ. ಆಚಾರ್ಯರು ಪಾಠಗಳನ್ನೆಲ್ಲ ಮುಗಿಸಿ, ಊಟವನ್ನೂ ಮುಗಿಸಿ, ತಾಂಬೂಲ ಸೇವಿಸುತ್ತಿದ್ದರು.
'ಓಹೋ, ಬನ್ನಿ, ಮೇಸ್ಟ್ರೇ, ಏನು ಎರಡುವಾರದಿಂದ ತಮ್ಮ ದರ್ಶನವೇ ಇಲ್ಲವಲ್ಲ?' ಎಂದು ಸ್ವಾಗತಿಸಿದರು. 'ಆರೋಗ್ಯ ಸರಿಯಿರಲಿಲ್ಲ, ಆಚಾರ್ಯರೇ. ಹಾಸಿಗೆ ಹಿಡಿದುಬಿಟ್ಟಿದ್ದೆ' ಎಂದ. 'ಈಗ ಆರೋಗ್ಯವೋ? ಪಾಠ ಶುರು ಮಾಡೋಣವೋ?' ಎಂದರು.
'ನಿಮ್ಮೊಂದಿಗೆ ಕೊಂಚ ಮಾತಾಡುವುದಿತ್ತು. ಬಿಡುವಾಗಿದ್ದರೆ ಹಾಗೇ ಸ್ವಲ್ಪ ಹೊರಗೆ ಹೋಗಿ ಬರೋಣವೇ?' ಎಂದ. 'ಅಗತ್ಯವಾಗಿ' ಎಂದು ಆಚಾರ್ಯರು ಎದ್ದರು.
ಆಚಾರ್ಯರೂ ಮಾಧ್ವರೇ. ಆದರೆ ಕಂದಾಚಾರಿಗಳಲ್ಲ. ಶಂಕರನಿಗೆ ಅವರಲ್ಲಿ ಗೌರವದ ಜೊತೆ ಸಲಿಗೆಯೂ ಇತ್ತು. ಅವರಿಗೆ ತನ್ನ ಪ್ರೇಮ ಪ್ರಕರಣವನ್ನು ಸಂಕ್ಷಿಪ್ತವಾಗಿ ವಿವರಿಸಿ, ಅವರ ನೆರವು ಬೇಡಿದ. ಅವರು ಮಾರನೆಯ ದಿನವೇ ಹೆಬ್ಬಾರರನ್ನು ಕಂಡು ಮಾತಾಡುವುದಾಗಿ, ಹೇಗಾದರೂ ಅವರನ್ನು ಒಪ್ಪಿಸುವುದಾಗಿ, ಧೈರ್ಯ ಹೇಳಿದರು.
ಮಾರನೆಯ ದಿನ ಸಂಜೆ ಶಂಕರ ಕಾತರ, ಆತಂಕಗಳೊಡನೆ ಆಚಾರ್ಯರ ಮನೆಗೆ ಹೋದ. ಆಚಾರ್ಯರ ಮುಖ ಕಳಾಹೀನವಾಗಿತ್ತು. ಶಂಕರನ ಎದೆಯಲ್ಲಿ ಮದ್ದಲೆ ಬಡಿಯತೊಡಗಿತು. 'ಬನ್ನಿ, ಮೇಸ್ಟ್ರೇ, ಕೂತ್ಕೊಳ್ಳಿ' ಎಂದರು. ಬರಸಿಡಿಲು ಎರಗುವುದನ್ನೇ ಭಯದಿಂದ ಕಾಯುತ್ತ, ಶಂಕರ ಕೂತ.
'ಈ ಗುರುರಾಜ ಇದ್ದಾನಲ್ಲ, ನನ್ನ ಕೊನೇ ಮಗ, ಇವನಿಂದ ನನ್ನ ಮಾನ ಮೂರುಕಾಸಾಗಿ ಹೋಯ್ತು, ಮೇಸ್ಟ್ರೇ. ಇವತ್ತು ಎಸ್ಸೆಲ್ಸಿ ಸಪ್ಲಿಮೆಂಟ್ರಿ ಪರೀಕ್ಷೇಲಿ ಕಾಪಿ ಹೊಡೆಯೋಕ್ಕೆ ಹೋಗಿ ಸಿಕ್ಕಿ ಹಾಕ್ಕೊಂಡಿದಾನೆ. ನನ್ನ ಮಗಾಂತ ಡಿಬಾರ್ ಮಾಡದೆ ಪೇಪರ್ ಕಿತ್ಕೊಂಡು ಕಳಿಸಿದ್ದಾರೆ. ಇಂಥ ಮಕ್ಕಳು ಯಾಕೆ ಹುಟ್ಬೇಕು ಹೇಳಿ?' ಆಚಾರ್ಯರು ಮ್ಲಾನವದನರಾದರು. ಶಂಕರ ಏನು ಹೇಳಲೂ ತೋಚದೆ ಕೂತ.
'ಅಂದ ಹಾಗೆ, ನನ್ನ ತಾಪತ್ರಯ ತೋಡಿಕೊಳ್ಳುವುದರಲ್ಲಿ ನಿಮ್ಮ ವಿಷಯ ತಿಳಿಸೋದು ಮರೆತೆ, ಕ್ಷಮಿಸಿ. ಬೆಳಗ್ಗೇನೇ ಹೆಬ್ಬಾರರ ಹೋಟೆಲಿಗೆ ಹೋಗಿ, ಅವರನ್ನು ನನ್ನ ಮನೆಗೆ ಕರೆತಂದು, ನಿಮ್ಮ ವಿಷಯವನ್ನೆಲ್ಲ ತಿಳಿಸಿದೆ. ಹೇಗಾದೀತು, ಆಚಾರ್ಯರೇ, ಜಾತಿ, ಪಂಗಡ, ಸಂಪ್ರದಾಯ, ಸಮಾಜ ಅಂತೆಲ್ಲಾ ಗೊಣಗಾಡಿದರು. ಕಾಲ ಬದಲಾಗಿದೆ. ಈಗೇನೂ ಭಯವಿಲ್ಲ. ಇಂಥ ಮದುವೆಗಳು ಈಗ ಬೇಕಾದಷ್ಟು ಆಗ್ತಾ ಇವೆ. ಉಡುಪಿಮಠದ ಸ್ವಾಮಿಗಳೇ ಇಂಥ ಒಳ ಪಂಗಡಗಳ ಮದುವೆಗಳಿಗೆ ತಮ್ಮ ಒಪ್ಪಿಗೆ ನೀಡಿದ್ದಾರೆ. ಇಂಥ ಧರ್ಮಗ್ಲಾನಿಯ ಕಾಲದಲ್ಲಿ ಕನಿಷ್ಠಪಕ್ಷ ಬ್ರಾಹ್ಮಣರಲ್ಲಿ ಒಗ್ಗಟ್ಟಾದರೂ ಉಳಿದು, ಬ್ರಾಹ್ಮಣ್ಯದ ರಕ್ಷಣೆಯಾದರೆ ಸಾಕು ಅಂತ ಸ್ವಾಮಿಗಳು ಹೇಳಿಲ್ಲವೇ, ಅಂದೆ. ಜೊತೆಗೆ, ಯಾವ ಖರ್ಚೂ ಇಲ್ಲದೆ ಇಷ್ಟು ಸಲೀಸಾಗಿ ಇಷ್ಟು ಒಳ್ಳೇ ಅಳಿಯ ಸಿಕ್ತಾ ಇರೋ ಸುವರ್ಣಾವಕಾಶ ಕಳಕೋಬೇಡಿ ಅಂತ ಹೇಳಿದೆ. ಒಪ್ಕೊಂಡಿದಾರೆ. ಒಪ್ಪದೆ ಏನು ಮಾಡ್ತಾರೆ, ಮೇಸ್ಟ್ರೇ, ಚಿನ್ನದಂಥಾ ವರ ತನ್ನ ಮಗಳಿಗೆ ತಾನಾಗಿಯೇ ಒಲಿದು ಬಂದಾಗ ಬೇಡ ಅನ್ನೋ ಅಷ್ಟು ಮೂರ್ಖರೇ ಆ ಹೆಬ್ಬಾರರು? ನಾಳೆ ಸಂಜೇನೇ ಗಂಡಹೆಂಡತಿ ನಿಮ್ಮ ಮನೆಗೆ ಬಂದು ನಿಮ್ಮ ಅಮ್ಮ ಮತ್ತು ಅಕ್ಕನವರನ್ನು ಕಾಣ್ತಾರೆ' ಎಂದರು. ಹರ್ಷೋತ್ಕರ್ಷದಲ್ಲಿ ಶಂಕರ ಆಚಾರ್ಯರಿಗೆ ಸಾಷ್ಟಾಂಗ ಅಡ್ಡಬಿದ್ದ.

ಮೊದಲ ರಾತ್ರಿ. ಪರಿಚಿತ ದೃಶ್ಯ. ರಾಧೆ ಹಾಲಿನ ಬಟ್ಟಲೊಂದಿಗೆ ನಾಚುತ್ತ ಶಯ್ಯಾಗೃಹ ಪ್ರವೇಶಿಸಿದಳು. ಶಂಕರ ಬಾಗಿಲಿನ ಅಗುಳಿ ಹಾಕಿ ಬಂದು, ಹುಬ್ಬು ಗಂಟು ಹಾಕಿಕೊಂಡು, ಮಂಚದ ಮೇಲೆ ಕೂತು, ಗೋಡೆ ನೋಡತೊಡಗಿದ.
ಹಾಲಿನ ಬಟ್ಟಲನ್ನು ಟಿಪಾಯಿಯ ಮೇಲಿಟ್ಟು, ರಾಧೆ ಪೆಚ್ಚಾಗಿ ಅವನ ಹತ್ತಿರ ಕೂತಳು. ಅವನು ಮಿಸುಕಲಿಲ್ಲ. ಅವನ ಭುಜದ ಮೇಲೆ ಮೃದುವಾಗಿ ಕೈ ಇಟ್ಟಳು. ಕೊಸರಿಕೊಂಡು, ಧಿಗ್ಗನೆ ಎದ್ದು ನಿಂತ.
'ಕ್ಷಮಿಸು, ರಾಧಾ, ನಾನು ಎಂದೂ ನಿನ್ನನ್ನು ಈ ದೃಷ್ಟಿಯಿಂದ ನೋಡಿರಲಿಲ್ಲ. ನನಗೆ ತಂಗಿಯರಿಲ್ಲ. ನಿನ್ನನ್ನೇ ನನ್ನ ತಂಗಿಯೆಂದು ತಿಳಿದು ಪ್ರೀತಿಸುತ್ತಿದ್ದೆ. ಹೀಗೆ ತಪ್ಪು ತಿಳೀತೀಯಾಂತ ಖಂಡಿತ ಭಾವಿಸಿರಲಿಲ್ಲ' ಎಂದ.
ರಾಧೆ ಕಿಲಕಿಲ ನಕ್ಕು, ಮೇಲೆದ್ದು, ಮತ್ತೊಮ್ಮೆ ಅವನ ಭುಜದ ಮೇಲೆ ಕೈ ಇಟ್ಟಳು. ಮತ್ತೆ ಕೊಸರಿಕೊಳ್ಳುತ್ತ, ಶಂಕರ ಬಡಬಡಿಸಿದ, 'ನಾವು ಒಂದಾಗೋದು ಈ ಜನ್ಮದಲ್ಲಿ ಸಾಧ್ಯವಿಲ್ಲ, ರಾಧಾ. ಮುಂದಿನ ಜನ್ಮದಲ್ಲಾದರೂ ನಾವು ಗಂಡಹೆಂಡಿರಾಗುವಂತೆ ಮಾಡು, ದೇವರೇ ಎಂದು ದಿನಾ ಪ್ರಾರ್ಥಿಸುತ್ತೇನೆ'.
ರಾಧೆ ಮಂಚದ ಮೇಲೆ ಧೊಪ್ಪೆಂದು ಕೂತು, ಹುಸಿಮುನಿಸು ನಟಿಸುತ್ತ, 'ಅದೆಷ್ಟು ಅಣಕಿಸುತ್ತೀರೋ ಅಣಕಿಸಿಬಿಡಿ, ಸಾರ್‌' ಎಂದು, ಸಾರ್ ಅಂದದ್ದಕ್ಕೆ ನಾಲಗೆ ಕಚ್ಚಿಕೊಂಡಳು. ಶಂಕರ ಗಹಗಹಿಸಿ ನಕ್ಕು, ರಾಧೆಯನ್ನು ಬರಸೆಳೆದು ಅಪ್ಪಿಕೊಂಡು, ಮುತ್ತಿನ ಮಳೆಗರೆದ.



-ಬಿ.ಆರ್. ಲಕ್ಷ್ಮಣ್‌ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com