ಕುಡೀತಾರೆ

Updated on: 

ಕೆಲ ಸಾಹಿತಿಗಳೇಕೆ ಸಿಕ್ಕಾಪಟ್ಟೆ ಕುಡಿಯುತ್ತಾರೆ? 'ಏನನ್ನು?' ಎಂದು ಕೇಳಿದರೆ ನಿಮಗೆ ಸಾಹಿತಿಗಳ ಪರಿಚಯವಿಲ್ಲವೆಂದೇ ಅರ್ಥ. ಈ ಪ್ರಶ್ನೆಗೆ ನಮ್ಮಲ್ಲಿ ಸರಿಯಾದ ಉತ್ತರ ಕೊಡುವವರೂ ಇದ್ದರು- ಕಿ.ರಂ.ನಾಗರಾಜ, ಲಂಕೇಶ್ ಥರದವರು. ಈಗಲೂ ಸಾಹಿತಿ ಎಂಬ ಬ್ಯಾಜ್ ಧರಿಸಿದ ಕುಡುಕರು ಇದ್ದಾರೆ, ಅವರಲ್ಲಿ ಓದುವಂತೆ ಬರೆಯುವವರು ಕಡಿಮೆ.
ಇರಲಿ, ವಿಷಯ ಬೇರೆ. ಇತ್ತೀಚೆಗೆ ಒಲಿವಿಯಾ ಲೇಂಗ್ ಎಂಬವಳು 'ದಿ ಟ್ರಿಪ್ ಟು ಎಕೋ ಸ್ಪ್ರಿಂಗ್‌' ಎಂಬ ಕೃತಿ ಬರೆದಿದ್ದಾಳೆ. ಆರು ಮಂದಿ ಮಹಾಕುಡುಕ ಲೇಖಕರ ಬಗೆಗೆ ಅಧ್ಯಯನ ಮಾಡಿ ಬರೆದ ಕೃತಿ ಇದು- ಅರ್ನೆಸ್ಟ್ ಹೆಮಿಂಗ್ವೇ, ಸ್ಕಾಟ್ ಫಿಡ್ಜೆರಾಲ್ಡ್, ಟೆನ್ನಿಸ್ಸೀ ವಿಲಿಯಮ್ಸ್, ಜಾನ್ ಬೆರ್ರಿಮ್ಯಾನ್ ಮತ್ತು ಜಾನ್ ಶೀವರ್. ಇವರೇಕೆ ಕುಡಿಯುತ್ತಿದ್ದರು, ಹೇಗೆ ಕುಡಿಯುತ್ತಿದ್ದರು, ಕುಡಿತ ಅವರ ಸೃಜನಶೀಲತೆಗೆ ಹೇಗೆ ನೆರವಾಯಿತು,  ಕುಡಿತದಿಂದ ಹೇಗೆ ನಾಶವಾದರು ಎಂಬಿತ್ಯಾದಿ ಸಂಗತಿಗಳನ್ನು ಇಲ್ಲಿ ಅರಿಯಬಹುದು.
ತೀರ ಗಂಭೀರ ಸಂಗತಿಗಳಿಗೆ ಹೋಗುವ ಬದಲು ನಾವಿಲ್ಲಿ ಪರಮಾತ್ಮನ ಬಗ್ಗೆ ಭಕ್ತ ಸಾಹಿತಿಗಳು ನೀಡಿದ ಅಣಿಮುತ್ತುಗಳನ್ನು ಪೆಗ್ಗು ಪೆಗ್ಗಾಗಿ ಸವಿಯಬಹುದು.
ಅಲ್ಕೋಹಾಲ್ ಮನುಷ್ಯನ ಶತ್ರು. ಆದರೆ ಶತ್ರುಗಳನ್ನು ಪ್ರೀತಿಸಿ ಎಂದಿದ್ದಾನೆ ಜೀಸಸ್.(ಫ್ರಾಂಕ್ ಸಿನಾತ್ರಾ)
 ಕುಡಿಯುತ್ತಿರು ಏನನ್ನಾದರೂ- ವೈನ್, ಕಾವ್ಯ, ಋಜುತ್ವ.(ಚಾರ್ಲ್ಸ್ ಬೋದಿಲೇರ್)
ಅಲ್ಕೋಹಾಲ್ ಮನುಷ್ಯನಿಗೆ ಅರಿವಳಿಕೆ. ಅದರ ಮೂಲಕ ಬದುಕಿನ ಆಪರೇಶನ್ ನಡೆಯುತ್ತದೆ. (ಜಾರ್ಜ್ ಬರ್ನಾರ್ಡ್ ಶಾ)
ಮೂರ್ಖತನದ ಕುರಿತು ಅನಂತ ತಾಳ್ಮೆಯನ್ನು ಅಲ್ಕೋಹಾಲ್ ನೀಡುತ್ತದೆ.(ಸ್ಯಾಮಿ ಡೇವಿಸ್)
ಯುರೋಪ್ ಕಂಡುಹಿಡಿದ ಎರಡು ದೊಡ್ಡ ಅಮಲುಗಳೆಂದರೆ ಅಲ್ಕೋಹಾಲ್ ಮತ್ತು ಕ್ರಿಶ್ಚಿಯಾನಿಟಿ.(ಫ್ರೆಡರಿಕ್ ನೀಷೆ)

ಕೃತಿಚೌರ್ಯ
ಒಳ್ಳೆಯ ಪುಸ್ತಕಗಳು ಎಲ್ಲರಿಗೂ ಬೇಕು. ಬೆಲೆ ಕೈಗೆ ಎಟುಕದಿದ್ದರೆ? ಕದ್ದರಾಯಿತು! ಆದರೆ ಪುಸ್ತಕದಂಗಡಿಗಳಿಂದ ಕದಿಯುವುದೇನೂ ಸುಲಭವಲ್ಲ. ಕೆಕ್ಕರಿಸುವ ಸಿಬ್ಬಂದಿ ಮತ್ತು ಸಿಸಿ ಕ್ಯಾಮೆರಾ ಇರುತ್ತವೆ. ಸುಲಭವಾಗಿ ಕದಿಯಬಹುದಾದ ತಾಣವೆಂದರೆ ಲೈಬ್ರರಿ. ಸರಕಾರಿ ಗ್ರಂಥಾಲಯವಾದರಂತೂ ಭೇಷ್. ಯಾರೇ ಪುಸ್ತಕಪ್ರೇಮಿಯ ಮನೆಗೆ ಹೋಗಿ ನೋಡಿ, ಮುಂದಿನ ಮತ್ತು ಹಿಂದಿನ ಪುಟಗಳು ಹರಿದಿರುವ ಗ್ರಂಥ ಅಲ್ಲಿ ಕಂಡುಬಂದರೆ ಅದು ಒಂದೋ ಸೆಕೆಂಡ್‌ಹ್ಯಾಂಡ್, ಇಲ್ಲಾ ಎಗರಿಸಿದ್ದು! ಅದೂ ಒಂದ್ನಮೂನಿ ಕೃತಿಚೌರ್ಯವೇ.
ಅಮೆರಿಕದಲ್ಲಿ ಕೆಲ 'ಬಿಬ್ಲಿಯೋ ಡಿಟೆಕ್ಟಿವ್‌'ಗಳಿದ್ದಾರೆ. ಟ್ರೇವಿಸ್ ಮೆಕ್‌ಡೇಡ್ ಅಂಥವರಲ್ಲೊಬ್ಬ. ಆತ ಇದುವರೆಗೆ 2 ಪುಸ್ತಕ ಬರೆದಿದ್ದಾನೆ. ದಿ ಬುಕ್ ಥೀಫ್ ಮತ್ತು ಥೀವ್ಸ್ ಆಫ್ ಬುಕ್ ರೋ. ಎರಡನೇ ಕೃತಿ, ಮ್ಯಾನ್‌ಹಾಟನ್‌ನ ಸೆಕೆಂಡ್‌ಹ್ಯಾಂಡ್ ಪುಸ್ತಕದಂಗಡಿ ಸಾಲುಗಳಿಂದ ಕೃತಿಗಳನ್ನು ಎಗರಿಸಿ, ಬೇರೆಡೆ ಮಾರಿ ಕಾಸು ಮಾಡುವ ಬಲುದೊಡ್ಡ ಮಾಫಿಯಾದ ಕುರಿತು. ಇಂಥ ಮಾಫಿಯಾ ಕೂಡ ಇದೆ ಎಂದರೆ ನಮಗೆ ನಂಬಲಾಗುವುದಿಲ್ಲ ಅಲ್ಲವೆ? ಈತನ ಪತ್ತೆ ಕಾರ್ಯಗಳಿಂದಾಗಿ, ದೊಡ್ಡದೊಂದು ಜಾಲವೇ ಬಯಲಾಗಿದೆ.
ಇವನ ಪುಸ್ತಕ ಓದಬೇಕು, ಆದರೆ ಬೆಲೆ ಕೈಗೆಟುಕದು. ಏನು ಮಾಡೋಣ!?

ಹಾಯಿಕು
ರಸ್ತೆಯ ಮೇಲೆ ಎಲೆ
ನಿನ್ನ ಪಾದಕ್ಕೆ
ಮೆತ್ತೆಯಾಗಲೆಂದೇ

ನನ್ನ ಕೆನ್ನೆಗೆ ನಾನೆ
ಬಾರಿಸಲು ಕಲಿಸಿದ್ದು
ಸೊಳ್ಳೆ

- ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com