ಹೂ ಸುರಿದ ಹಾದಿ

ಹೂ ಸುರಿದ ಹಾದಿ
Updated on: 

ಅವರ ಮುಂದಿನ ಜೀವನ ಹೂವಿನ ಹಾಸಿಗೆಯಾಗಿತ್ತು ಅಂತ ಹಳೆಯ ಕಾದಂಬರಿಗಳ ಅಂತ್ಯದಲ್ಲಿ ನಾವೆಲ್ಲ ಓದುತ್ತಿದ್ದವಲ್ಲ. ಈಗ ಅಂಥ ಕಥಾಂತ್ಯಗಳೇ ಸಿಗುವುದಿಲ್ಲ ನೋಡಿ. ಅವರ ಜೀವನ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ ಅಂತ ಬರೆಯುವವರೇ ಎಲ್ಲರೂ. ಯಾಕೆಂದರೆ ಯಾರ ಬದುಕೂ ಹೂವಿನ ಹಾಸಿಗೆಯಲ್ಲ ಅಂತ ನಾವು ಅಂದುಕೊಂಡುಬಿಟ್ಟಿದ್ದೇವೆ.
ಆದರೆ, ಬೇಸಿಗೆಯ ವೇಳೆ, ನಿಸ್ವಾರ್ಥದಿಂದ ತಾವು ಬಿಟ್ಟ ಹೂಗಳನ್ನು ಕೆಳಕ್ಕೆ ದಾರಿಗೆ ಕೆಡವಿ, ಅವುಗಳ ಮೃದುಲ ಮೈಗಳ ಮೇಲೆ ನಮ್ಮನ್ನು ನಡೆಯುವಂತೆ ಮಾಡುವ ಆ ಮರಗಳ ಕತೆಯೇನು? ಅವುಗಳ ಕತೆ ಯಾರಾದರೂ ಹೇಳಿದರೇ? ಆ ಹೂಗಳ ಮೇಲೆ ಕಾಲಿಡುವಾಗ ಯಾಕೆ ನಮ್ಮ ಜೀವ ಹಿಂಡಿ ಹಿಪ್ಪೆಯಾಗುತ್ತದೆ? ಲೋಕಕ್ಕೆ ಸುಗಂಧವನ್ನೂ ತಂಪನ್ನೂ ಅಂದವನ್ನೂ ನೀಡುವ ಯಾವ ಜೀವವೂ ನಮ್ಮ ಕಾಲಡಿಗೆ ಸಿಗಬಾರದು ಅಲ್ಲವೆ?
ಮೈಸೂರಿನ ಮಾನಸಗಂಗೋತ್ರಿಯ ಕ್ಯಾಂಪಸ್‌ನಲ್ಲಿ ನಡೆಯುವುದೆಂದರೆ ಅದೇನೋ ದಿವ್ಯ ಅನುಭೂತಿ. ಅಲ್ಲಿ ಮಹಾಮಹಾ ಮನಸ್ಸುಗಳು ನಡೆದಾಡಿದ್ದವು ಎಂಬುದಕ್ಕಷ್ಟೇ ಅಲ್ಲ. ಹಾದಿಗೆ ಹೂ ಸುರಿವ ಮರಗಳು ಅಲ್ಲಿವೆ ಎಂಬ ಕಾರಣಕ್ಕೆ. ಬೆಂಗಳೂರಿನ ಬೀದಿಗಳಲ್ಲೂ ಅವುಗಳನ್ನು ನಾವು ಕಾಣಬಹುದು. ಗುಲ್‌ಮೊಹರ್, ಬೋಗನ್‌ವಿಲ್ಲಾ, ಟ್ಯುಬೀಬಿಯ... ಇಂಥವು. ಬೆಳ್ಳಂಬೆಳಗ್ಗೆ ಅವುಗಳನ್ನು ಗುಡಿಸಿ ಗುಡ್ಡೆಹಾಕುವ ಆ ಹೆಂಗಳೆಯರು, ಅವುಗಳನ್ನು ಯಾರೂ ಅಪ್ಪಚ್ಚಿ ಮಾಡದಿರಲಿ ಎಂದೇ ಎಚ್ಚರಿಕೆ ವಹಿಸುತ್ತಾರೋ ಏನೋ!

ಹೂಗಳು ಸುರಿದ ದಾರಿಯಲ್ಲಿ ನಡೆಯುವುದು ಅಂದರೆ ಅದೇನು ಸುಲಭ ಅಂತ ತಿಳಿಯಬೇಡಿ. ಮೃದು ಮನಸ್ಸು ಇರುವ ಯಾರೇ ಆದರೂ ಹೂವುಗಳ ಮೇಲೆ ಕಾಲಿಡುವ ಮುನ್ನ ಕೊಂಚ ತಡವರಿಸಲೇ ಬೇಕು. ಹಾಗೆ ಹೂಗಳ ಮೇಲೆ ಯಾವುದೇ ಭಾವನೆಯಿಲ್ಲದೆ ತಳಮಳವಿಲ್ಲದೆ ಹಾದುಹೋಗುವವುಗಳೆಂದರೆ ವಾಹನಗಳು ಮಾತ್ರವೇ. ಅದಕ್ಕೇ ಅವುಗಳಿಗೆ ಇಂಜಿನ್ ಇದೆ; ಹೃದಯವಿಲ್ಲ.
-ಹರಿಶೇಖರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com