

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ 'ಮೈ ಜರ್ನಿ' ಈ ವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಅದನ್ನು 'ನನ್ನ ಪಯಣ' ಎಂದು ಜಿ.ಕೆ. ಮಧ್ಯಸ್ಥ ಕನ್ನಡಕ್ಕೆ ತಂದಿದ್ದಾರೆ. ಬೆಂಗಳೂರಿನ ವಸಂತ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿಯಿಂದ ಆಯ್ದ ಭಾಗವಿದು.
ನನ್ನ ಬಾಲ್ಯ ಜೀವನ ಕಳೆದ ರಾಮೇಶ್ವರವು ಒಂದು ಸಣ್ಣ ದ್ವೀಪ. ಅಲ್ಲಿನ ಅತಿ ಎತ್ತರದ ಭೂಭಾಗವೆಂದರೆ ಗಂಧಮಾದನ ಪರ್ವತ. ಎಲ್ಲೆಡೆ ತಲೆದೂಗುತ್ತಿರುವ ಹಸಿರು-ಹಸಿರಾದ ತೆಂಗಿನ ತೋಟಗಳು. ದೂರದಲ್ಲಿ ಸಮುದ್ರ, ಇವುಗಳ ನಡುವೆ ಆಕಾಶವನ್ನು ಆಳುತ್ತಿರುವೆನೋ ಎಂಬಂತೆ ತಲೆ ಎತ್ತಿ ನಿಂತಿರುವ ರಾಮನಾಥ ಸ್ವಾಮಿ ದೇವಸ್ಥಾನದ ಗೋಪುರ. ಆಗ ರಾಮೇಶ್ವರ ಒಂದು ಶಾಂತವಾದ ಪುಟ್ಟ ಪಟ್ಟಣವಾಗಿತ್ತು. ದೇವಸ್ಥಾನ ಹಾಗೂ ಅಕ್ಕಪಕ್ಕದ ಬೀದಿಗಳು ಸದಾ ಯಾತ್ರಾರ್ಥಿಗಳಿಂದ ತುಂಬಿರುತ್ತಿದ್ದವು.
ರಾಮೇಶ್ವರದ ನಾಗರಿಕರಲ್ಲಿ ಹೆಚ್ಚಿನವರು ಹಿಂದುಗಳು. ಕೆಲವು ಮಂದಿ ನಮ್ಮಂತಹ ಮುಸ್ಲಿಮರು. ಅಂತೆಯೇ ಕೆಲವು ಜನ ಕ್ರೈಸ್ತರೂ ಇದ್ದಾರೆ. ಪ್ರತಿ ಸಮುದಾಯವೂ ಇತರ ಸಮುದಾಯಗಳ ಜತೆ ಸ್ನೇಹದಿಂದಲೂ ನೆಮ್ಮದಿಯಿಂದಲೂ ಜೀವನ ಮಾಡುತ್ತಿದ್ದವು. ಹೊರ ಜಗತ್ತಿನ ಒಡಕುಗಳು ರಾಮೇಶ್ವರದ ಒಳಕ್ಕೆ ಬಂದದ್ದೇ ಇಲ್ಲ. ಸದ್ದುಗದ್ದಲವಿಲ್ಲದ ಈ ಸೌಹಾರ್ದ ಅನೇಕ ತಲೆಮಾರುಗಳಿಂದ ನಡೆದು ಬಂದಿದೆ.
ನಮ್ಮ ಮುತ್ತಾತ ರಾಮನಾಥ ಸ್ವಾಮಿ ದೇವಾಲಯದ ವಿಗ್ರಹ ಕಾಪಾಡಿದ ಘಟನೆಯನ್ನು ನಮ್ಮ ತಂದೆ ನಮ್ಮನ್ನೆಲ್ಲ ಕೂರಿಸಿಕೊಂಡು ಹೇಳುತ್ತಿದ್ದರು. ಉತ್ಸವಗಳ ಸಂದರ್ಭ ದೇವಸ್ಥಾನದ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿ ದೇವಾಲಯದ ಸುತ್ತ ಪ್ರದಕ್ಷಿಣೆಯಲ್ಲಿ ಒಯ್ಯುತ್ತಾರೆ. ಈ ಸಂದರ್ಭ ದೇವಸ್ಥಾನದ ಸುತ್ತಲ ಕೆರೆ ಕಟ್ಟೆಗಳಲ್ಲಿ ವಿಗ್ರಹವನ್ನಿರಿಸಿ ಪೂಜೆ ಸಲ್ಲಿಸಲಾಗುತ್ತದೆ. ರಾಮೇಶ್ವರದ ಎಲ್ಲರೂ ಜಾತಿ-ಧರ್ಮ ಭೇದವಿಲ್ಲದೆ ಇದರಲ್ಲಿ ಭಾಗವಹಿಸುತ್ತಾರೆ. ಅಂಥ ಒಂದು ಮೆರವಣಿಗೆ ಸಂದರ್ಭ ಉತ್ಸವ ಮೂರ್ತಿ ಆಕಸ್ಮಿಕವಾಗಿ ಕೆರೆಗೆ ಬಿತ್ತು. ಅಲ್ಲಿದ್ದವರೆಲ್ಲ ದಿಗ್ಭ್ರಾಂತರಾದರು. ಅದೊಂದು ಅಪಶಕುನ, ಏನು ಗಂಡಾಂತರ ಕಾದಿದೆಯೋ ಎಂದು ಅರ್ಚಕರೂ ಜನರೂ ಭಯಪಟ್ಟರು. ನನ್ನ ಮುತ್ತಾತ ಧೈರ್ಯ ಕಳೆದುಕೊಳ್ಳಲಿಲ್ಲ. ತಕ್ಷಣ ಕೆರೆಗೆ ಜಿಗಿದು ಜಾಲಾಡಿ ವಿಗ್ರಹ ಎತ್ತಿಕೊಂಡು ಮೇಲೆ ಬಂದರು. ಸಾಮಾನ್ಯ ಸಂದರ್ಭವಾಗಿದ್ದಿದ್ದರೆ ಅದೊಂದು ಭಯಂಕರ ವಿಚಾರವೇ ಸರಿ. ಮುಸ್ಲಿಮನೊಬ್ಬ ಹಿಂದೂ ವಿಗ್ರಹವನ್ನು ಮುಟ್ಟುವುದೆ? ಆದರೆ ಅಲ್ಲಿ ಅಂದು ಅಂತಹ ಮಾತನ್ನು ಯಾರೂ ಆಡಲಿಲ್ಲ. ಅರ್ಚಕರು ತುಂಬಾ ಸಂತೋಷಗೊಂಡು ಭಾವುಕರಾಗಿ ನನ್ನ ಮುತ್ತಾತನಿಗೆ ಕೃತಜ್ಞತೆ ಹೇಳಿದರು. ಉತ್ಸವ ಸಾಂಗವಾಗಿ ನಡೆಯಿತು. ನನ್ನ ಮುತ್ತಾತ ರಾಮೇಶ್ವರದ ಜನರಿಗೆ ಹೀರೋ ಆದರು. ಆ ಉತ್ಸವದಲ್ಲಿ ಪ್ರತಿವರ್ಷದ ಮೊದಲ ಮರ್ಯಾದೆ ನನ್ನ ಮುತ್ತಾತನಿಗೆ ಸಲ್ಲತಕ್ಕದ್ದು ಎಂದು ದೇವಸ್ಥಾನದ ಆಡಳಿತದವರು ಘೋಷಿಸಿದರು. ನಂತರ, ಇದು ನಮ್ಮ ಕುಟುಂಬದ ಮುಂದಿನ ಪೀಳಿಗೆಗೂ ಮುಂದುವರೆಯಿತು.
=
ನನ್ನ ತಂದೆ ಧನುಷ್ಕೋಟಿಗೆ ಪ್ರಯಾಣಿಕರನ್ನು ಒಯ್ಯುವ ದೋಣಿ ಸಾರಿಗೆ ವ್ಯವಹಾರ ನಡೆಸುತ್ತಿದ್ದರು. ಯಾತ್ರಾರ್ಥಿಗಳು ಮಾತ್ರವಲ್ಲದೆ ದೇವಸ್ಥಾನದವರೂ ಅದನ್ನು ಬಳಸುತ್ತಿದ್ದರು. ನನ್ನ ತಂದೆ ರಾಮೇಶ್ವರ ಮಸೀದಿಯ ಇಮಾಮರೂ ಆಗಿದ್ದರು. ತುಂಬಾ ಧರ್ಮನಿಷ್ಠ ವ್ಯಕ್ತಿಯಾಗಿದ್ದು ಕುರಾನಿನಲ್ಲಿ ಅಚಲ ವಿಶ್ವಾಸವನ್ನು ಹೊಂದಿದ್ದರು. ತಂದೆಯ ಆಪ್ತಮಿತ್ರರೊಬ್ಬರು ರಾಮನಾಥಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದರು. ಅವರೇ ಪಕ್ಷಿ ಲಕ್ಷ್ಮಣ ಶಾಸ್ತ್ರಿಗಳು. ಅವರು ದೊಡ್ಡ ವಿದ್ವಾಂಸರೂ ಆಗಿದ್ದರು. ಅವರ ಮುಖ ಈಗಲೂ ನನಗೆ ನಿಚ್ಚಳವಾಗಿ ನೆನಪಿದೆ. ಸದಾ ದೇವಾಲಯದ ಅರ್ಚಕನ ದಿರಸನ್ನು ಅಂದರೆ ಒಂದು ಧೋತಿ ಉಟ್ಟು ಅಂಗವಸ್ತ್ರ ಹೊದ್ದಿರುತ್ತಿದ್ದರು. ತಲೆಯಲ್ಲಿ ಬ್ರಾಹ್ಮಣರ ಗುರುತಾದ ಜುಟ್ಟು ಶೋಭಿಸುತ್ತಿತ್ತು. ನನಗೆ ತಿಳಿದ ಮನುಷ್ಯರಲ್ಲೆಲ್ಲ ಅವರು ಅತ್ಯಂತ ಕರುಣಾಳುವೂ ವಿನಮ್ರರೂ ಆಗಿದ್ದರು. ನಮ್ಮ ಪುಟ್ಟ ಸಮುದಾಯದ ಧಾರ್ಮಿಕ ಬದುಕಿನಲ್ಲಿ ಮೂರನೆಯ ಒಬ್ಬರು ಮಹತ್ವದ ವ್ಯಕ್ತಿ ಇದ್ದರು. ಅವರೇ ಫಾದರ್ ಬೋದಲ್. ಅವರು ರಾಮೇಶ್ವರದ ಏಕೈಕ ಇಗರ್ಜಿಯ ಧರ್ಮಗುರು. ರಾಮೇಶ್ವರದ ಯೋಗಕ್ಷೇವುದ ಬಗ್ಗೆ ನನ್ನ ತಂದೆಯೂ ಶಾಸ್ತ್ರಿಗಳೂ ಆಸಕ್ತರಾಗಿದ್ದಂತೆ ಫಾದರ್ ಅವರೂ ಆಸಕ್ತರಾಗಿದ್ದರು. ರಾಮೇಶ್ವರದ ಸಮುದಾಯದ ಸೌಹಾರ್ದ ಕಾಪಾಡುವುದರಲ್ಲಿ ಅವರ ಪಾತ್ರವೂ ಇತ್ತು. ಮೂವರೂ ಪ್ರತಿ ಶುಕ್ರವಾರ ಸಂಜೆ ನಾಲ್ಕೂವರೆ ಗಂಟೆಗೆ ಸೇರುತ್ತಿದ್ದರು. ಧಾರ್ಮಿಕ ವಿಷಯಗಳು, ರಾಮೇಶ್ವರ ಪಟ್ಟಣದ ಆಗುಹೋಗುಗಳು ಚರ್ಚೆಗೆ ಬರುತ್ತಿದ್ದವು. ಆ ಸಮಯದಲ್ಲಿ ತಂತಮ್ಮ ಸಮಸ್ಯೆಗಳಿಗೆ ಪರಿಹಾರ ಬಯಸಿ ಊರಿನ ಜನರೂ ಅಲ್ಲಿಗೆ ಬರುತ್ತಿದ್ದುದುಂಟು.
=
ಆಗ ನನ್ನ ವಯಸ್ಸು ಎಂಟು ವರ್ಷ.
ಮೂರನೇ ತರಗತಿಯಲ್ಲಿದ್ದೆ. ನನಗೆ ಮೂವರು ಆಪ್ತಮಿತ್ರರಿದ್ದರು. ಅವರೇ ರಾಮನಾಥ ಶಾಸ್ತ್ರಿ, ಅರವಿಂದನ್ ಹಾಗೂ ಶಿವಪ್ರಕಾಶನ್. ಮೂವರೂ ಬ್ರಾಹ್ಮಣ ಬಾಲಕರಾಗಿದ್ದರು. ರಾಮನಾಥ ಶಾಸ್ತ್ರಿ, ಪಕ್ಷಿ ಲಕ್ಷ್ಮಣ ಶಾಸ್ತ್ರಿಗಳ ಮಗ. ಎಲ್ಲಾ ಒಳ್ಳೆಯ ಮಿತ್ರರಂತೆ ನಾವೂ ತರಗತಿಯ ಒಳಗೂ ಹೊರಗೂ ಒಟ್ಟಿಗೇ ಇರುತ್ತಿದ್ದೆವು. ಆ ವಯಸ್ಸಿನ ಎಲ್ಲ ಬಾಲಕರಂತೆ ನಮ್ಮ ಜೀವನದಲ್ಲಿ ಆಗುತ್ತಿದ್ದ ಬೆಳವಣಿಗೆಗಳನ್ನೆಲ್ಲ ಪರಸ್ಪರ ಹೇಳಿಕೊಂಡು ಖುಷಿಪಡುತ್ತಿದ್ದ ಕಾಲವದು. ತರಗತಿಯಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುತ್ತಿದ್ದೆವು.
ಅಂದು ಯಾವುದೇ ಶಾಲೆಗಳಲ್ಲಿ ಸಮವಸ್ತ್ರ ಪದ್ಧತಿ ಇರಲಿಲ್ಲ. ನಮ್ಮ ಸಂಪ್ರದಾಯದಂತೆ ನಮ್ಮ ಇಷ್ಟದ ಬಟ್ಟೆ ತೊಟ್ಟು ಶಾಲೆಗೆ ಹೋಗಬಹುದಾಗಿತ್ತು. ಗೆಳೆಯ ರಾಮನಾಥ ತನ್ನ ತಂದೆಯಂತೆಯೇ ತಲೆಯಲ್ಲಿ ಜುಟ್ಟು ಹೊಂದಿದ್ದ (ಮುಂದೆ ಅವನೂ ತನ್ನ ತಂದೆಯಂತೆ ದೇವಸ್ಥಾನದ ಅರ್ಚಕನಾದ). ನಾನು ಇತರೆಲ್ಲ ಮುಸ್ಲಿಂ ಬಾಲಕರಂತೆ ಕಸೂತಿ ಟೋಪಿ ಧರಿಸುತ್ತಿದ್ದೆ. ಇದನ್ನು ಕುರಿತು ಯಾರಾದರೂ ಗೇಲಿ ಮಾಡಿದ್ದು ಅಲ್ಲಿ ಹಿಂದೆಂದೂ ನಡೆದಿರಲಿಲ್ಲ.
ನಮಗೊಬ್ಬರು ಹೊಸ ಉಪಾಧ್ಯಾಯರು ಬಂದರು. ಹೊಸ ಮೇಸ್ಟ್ರು ಹೇಗಿದ್ದಾರೆ ಎಂದು ನೋಡುವ ಕುತೂಹಲ ನಮಗೆ ಬಹಳ. ಅವರು ಮೊದಲ ಬಾರಿಗೆ ನಮ್ಮ ತರಗತಿಗೆ ಬಂದಾಗ ನಮ್ಮ ಕಣ್ಣು- ಕಿವಿಗಳೆಲ್ಲ ಚುರುಕಾಗಿ ಕೆಲಸ ಮಾಡುತ್ತಿದ್ದವು. ಆ ಉಪಾಧ್ಯಾಯರು ಬ್ರಾಹ್ಮಣರಾಗಿದ್ದರು. ತರಗತಿಯೊಳಗೆ ಬಂದವರೇ ಎಲ್ಲಾ ಮಕ್ಕಳ ಮೇಲೆ ಒಮ್ಮೆ ಕಣ್ಣಾಡಿಸಿದರು. ನಮ್ಮೆಲ್ಲರ ಉಡುಪು, ವೇಷಗಳನ್ನು ಅವರು ಅಳೆಯುತ್ತಿರುವಂತೆ ಅನಿಸಿತು. ಅಲ್ಲಿನ ಮಕ್ಕಳ ಹೊಳೆಯುವ ಕಣ್ಣುಗಳು ಹಾಗೂ ತವಕಿಸುವ ಮಂದಹಾಸ ಅವರ ಗಮನಕ್ಕೆ ಬಾರದೇ ಹೋದುದು ನನಗೆ ಇಂದು ವಿಶೇಷವೆಂದು ಕಾಣಿಸುತ್ತದೆ - ಯಾಕೆಂದರೆ ನಾನು ಇಂತಹ ಮಕ್ಕಳು ತುಂಬಿದ ತರಗತಿಗೆ ಹೋದಾಗ ನನ್ನ ಕಣ್ಣಿಗೆ ಮೊದಲು ಬೀಳುವುದು ಆ ಮಕ್ಕಳ ಹೊಳೆಯುವ ಕಣ್ಣುಗಳು ಹಾಗೂ ತವಕಿಸುವ ಮುಗುಳ್ನಗು. ನಮ್ಮ ಹೊಸ ಉಪಾಧ್ಯಾಯರು ತಮ್ಮ ಕೆಲಸ ಪ್ರಾರಂಭಿಸಿದರು. ಮೊದಲು ಅವರ ದೃಷ್ಟಿ ಮುಂದಿನ ಬೆಂಚಿನಲ್ಲಿ ಕುಳಿತಿದ್ದ ನಮ್ಮ ಮೇಲೆ ಬಿತ್ತು. ನಮ್ಮ ಗೆಳೆಯರ ಗುಂಪು ಕಲಿಕೆಯಲ್ಲಿ ಮುಂದು. ಹೊಸ ಉಪಾಧ್ಯಾಯರ ಕಣ್ಣು ನನ್ನ ಟೋಪಿಯ ಮೇಲೂ ರಾಮನಾಥನ ಜುಟ್ಟಿನ ಮೇಲೂ ನೆಲೆಸಿತು. ಅವರ ಮುಖದಲ್ಲಿ ಕೋಪವೂ ಆಶ್ಚರ್ಯವೂ ಕಾಣಿಸಿಕೊಂಡಿತು. ಅವರು ಕೂಡಲೇ 'ನಿನ್ನ ಹೆಸರೇನು?' ಎಂದು ನನ್ನೊಡನೆ ಕೇಳಿದರು. ಹೇಳಿದೆ. ಕೂಡಲೇ ನಾನು ನನ್ನ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಕೊನೇ ಬೆಂಚಿಗೆ ಹೋಗುವಂತೆ ಆಜ್ಞೆ ಮಾಡಿದರು. ಅದಕ್ಕೆ ಕಾರಣವೇನು ಎಂದೂ ಅವರು ಹೇಳಲಿಲ್ಲ.
ನನಗೆ ಬೇಸರವಾಯಿತು, ಅಪಮಾನವೂ ಆಯಿತು. ರಾಮನಾಥನ ಕಣ್ಣುಗಳಲ್ಲಿ ನೀರು ತುಂಬಿತು. ಈ ವಿಷಯವನ್ನು ಅಲ್ಲಿಗೇ ಬಿಡಲು ನನ್ನ ಹಾಗೂ ರಾಮನಾಥನ ಮನಸ್ಸು ಕೇಳಲಿಲ್ಲ. ತಂದೆಯವರೊಡನೆ ಹೇಳಿದೆ. ರಾಮನಾಥ ಅವನ ತಂದೆಯಲ್ಲಿ ಹೇಳಿದ. ಅವರಿಬ್ಬರಿಗೂ ಆಘಾತವೂ ದುಃಖವೂ ಆಯಿತು. ಈ ಪ್ರಸಂಗ ಅವರಿಬ್ಬರ ತತ್ವ, ನಂಬಿಕೆ ಹಾಗೂ ಜೀವನ ವಿಧಾನಕ್ಕೆ ತದ್ವಿರುದ್ಧವಾದುದಾಗಿತ್ತು. ಜ್ಞಾನವನ್ನು ನೀಡಿ ನಮ್ಮ ಮನಸ್ಸುಗಳನ್ನು ತೆರೆಯಬೇಕಾದಂತಹ ಉಪಾಧ್ಯಾಯರು ಅದಕ್ಕೆ ವಿರುದ್ಧವಾದುದನ್ನು ಮಾಡಿದ್ದರು.
ಮುಂದಿನ ಶುಕ್ರವಾರ ಸಾಯಂಕಾಲ ಅವರಿಬ್ಬರೂ ಭೇಟಿಯಾದರು. ಫಾದರ್ ಬೋದಲ್ ಅವರೂ ಹಾಜರಿದ್ದರು. ಆ ಉಪಾಧ್ಯಾಯರನ್ನೂ ಬರಹೇಳಿದ್ದರು. ಭಾರತದ ಬೇರೆ ಸ್ಥಳಗಳಲ್ಲಿ ಹಾವಳಿ ಎಬ್ಬಿಸುತ್ತಿರುವ ಕೋಮು ಭಾವನೆಯೆಂಬ ವಿಷವನ್ನು ರಾಮೇಶ್ವರದಲ್ಲಿ ಹರಡಲು ಬಿಡುವುದಿಲ್ಲ ಎಂದು ಆ ಮೂವರೂ ಆ ಉಪಾಧ್ಯಾಯರಿಗೆ ಹೇಳಿದರು. ತಾರತಮ್ಯ ಮಾಡಿ, ಮಕ್ಕಳನ್ನು ಬೇರೆ ಬೇರೆಯಾಗಿ ಕೂರಿಸುವುದಕ್ಕೆ ತಮ್ಮ ಒಪ್ಪಿಗೆಯಿಲ್ಲವೆಂದೂ ಮತಧರ್ಮದ ಹೆಸರಿನಲ್ಲಿ ಸಮುದಾಯವನ್ನು ಒಡೆಯುವ ಕಾರ್ಯವನ್ನು ತಾವು ಸಹಿಸುವುದಿಲ್ಲವೆಂದೂ ಹೇಳಿದರು. ನಿಮ್ಮನ್ನು ಒಬ್ಬ ಪಂಡಿತನೆಂದೂ ಜ್ಞಾನಿಯೆಂದೂ ನಾವು ತಿಳಿಯಬಹುದೇ, ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಮಕ್ಕಳನ್ನು ನಿಮ್ಮ ಕೈಗೆ ಕೊಡಲು ಸಾಧ್ಯವೇ ಎಂಬ ಪ್ರಶ್ನೆಗಳನ್ನು ಅವರಿಗೆ ಕೇಳಲಾಯಿತು. ಇದನ್ನೆಲ್ಲ ಸೌಜನ್ಯಪೂರಿತವಾಗಿಯೇ ಹೇಳಲಾಯಿತು.
ನಮ್ಮ ಉಪಾಧ್ಯಾಯರು ಆಲೋಚನೆ ಮಾಡುತ್ತ ಮೌನವಾಗಿ ನಿಂತಿದ್ದರು. ನಂತರ ಅವರು, ತಾವು ಆ ಇಬ್ಬರು ಮಕ್ಕಳನ್ನು ಬೇರೆ ಮಾಡಿರುವುದು ನಿಜ ಎಂದು ಒಪ್ಪಿಕೊಂಡರು. ಆದರೆ, ಆ ಕೃತ್ಯದ ಪರಿಣಾಮ ಏನಾದೀತು ಎಂದು ಆಲೋಚನೆ ಮಾಡಲಿಲ್ಲ. ಸಮಾಜದಲ್ಲಿ ಅಂತಹ ಪದ್ಧತಿ ಇದೆ, ಆದ್ದರಿಂದ ತಾನು ಕಣ್ಣುಮುಚ್ಚಿ ಅದನ್ನು ಅನುಸರಿಸಿದೆ. ಹೀಗೆ ತಾರತಮ್ಯ ಮಾಡುವುದರ ನಿರರ್ಥಕತೆಯೂ ತನಗೆ ತಿಳಿದಿರಲಿಲ್ಲ ಎಂದು ಹೇಳಿದರು. ಮಾಡಿರುವ ತಪ್ಪನ್ನು ಮರುದಿನವೇ ಸರಿಪಡಿಸುವುದಾಗಿ ಭರವಸೆ ಕೊಟ್ಟರು. ನಂತರ ಹಾಗೆ ಮಾಡಿದರು ಕೂಡಾ.
ಮೂವರು ಧಾರ್ಮಿಕ ನಾಯಕರು ಸೇರಿ ಒಂದು ವಿಷಯವನ್ನು ದೃಢವಾಗಿ ಹಾಗೂ ಮುಕ್ತ ವಾತಾವರಣದಲ್ಲಿ ಬಗೆಹರಿಸಿದ ರೀತಿ ಇದಾಗಿತ್ತು. ಇದೇ ಯಾವುದೇ ಉತ್ತಮ ಆಡಳಿತೆಯಲ್ಲಿ ಅನುಸರಿಸಬೇಕಾದ ವಿಧಾನವೆಂದು ಮುಂದೆ ನಾನು ಕಲಿತುಕೊಂಡೆ.
- ಮೂಲ: ಡಾ.ಎ.ಪಿ.ಜೆ. ಅಬ್ದುಲ್ ಕಲಾಂ
ಅನು: ಜಿ.ಕೆ. ಮಧ್ಯಸ್ಥ
gkmadhyastha@gmail.com