ಬಹಳ ಹಿಂದೆ ಸೋನಾಪುರದಲ್ಲಿ ಅಗರ್ಭ ಶ್ರೀಮಂತ ಸೇಠಜಿಯೊಬ್ಬನಿದ್ದ. ಅವನು ಪ್ರತಿ ವರ್ಷ ತನ್ನ ಹುಟ್ಟು ಹಬ್ಬದಂದು ಬಂಗಾರದಿಂದ ತುಲಾಭಾರ ಮಾಡಿಸಿಕೊಂಡು ನಂತರ ಆ ಬಂಗಾರವನ್ನೆಲ್ಲಾ ಊರಿನ ಬಡಬಗ್ಗರಿಗೆ ಹಂಚಿಬಿಡುತ್ತಿದ್ದ. ಅವನಿಗೆ ತಾನು ಭಾರೀ ಶ್ರೀಮಂತನೆಂಬ ಅಹಂ ತುಂಬಾ ಇತ್ತು. ಎಂದಿನಂತೆ ಆ ವರ್ಷವೂ ತುಲಾಭಾರದ ಬಂಗಾರವನ್ನೆಲ್ಲಾ ಊರಿನವರಿಗೆ ಹಂಚಿದ. ಇನ್ನಷ್ಟು ಬಂಗಾರ ಉಳಿಯಿತು. ಆಗ ಅವನ ಮನದಲ್ಲಿ ಒಂದು ಆಲೋಚನೆ ಮೂಡಿತು. ಅದೇ ಊರಿನಲ್ಲಿ ಊರ ಹೊರಗೆ ಓರ್ವ ಸನ್ಯಾಸಿ ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದ. ಆ ಪ್ರತಿನಿತ್ಯ ಅಲ್ಲಿಗೆ ಬಂದು ಕಷ್ಟಕಾರ್ಪಣ್ಯಗಳನ್ನು ನಿವೇದಿಸಿಕೊಂಡು ಪರಿಹಾರ ಯಾಚಿಸುತ್ತಿದ್ದ. ಊರ ಜನರಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತಿದ್ದ. ಅಷ್ಟೇ ಅಲ್ಲ ಪ್ರತಿದಿನ ಸಾಯಂಕಾಲ ಊರ ಜನರಿಗೆ ಪ್ರವಚನ ನೀಡುತ್ತಿದ್ದ.
ಈ ಶ್ರೀಮಂತ ಸೇಠಜಿ ಉಳಿದ ಬಂಗಾರವನ್ನು ಆ ಸನ್ಯಾಸಿಗೆ ಕೊಡಬೇಕೆಂದು ನಿರ್ಧರಿಸಿ ಆಶ್ರಮಕ್ಕೆ ಬಂಗಾರವನ್ನು ತೆಗೆದುಕೊಂಡು ಹೋದ. ಸನ್ಯಾಸಿಗಳ ಎದುರಿಗೆ ಬಂಗಾರವನ್ನಿಟ್ಟು 'ಸ್ವಾಮಿಗಳೇ ನಿಮಗೆ ಈ ಮುರುಕಲು ಆಶ್ರಮವನ್ನು ಬಿಟ್ಟರೆ ಬೇರೇನೂ ಇಲ್ಲ. ಊಟ ಮಾಡಬೇಕೆಂದರೆ ಭಿಕ್ಷೆ ಕೇಳಬೇಕು. ಹೀಗಾಗಿ ಈ ಬಂಗಾರವನ್ನು ಸ್ವೀಕರಿಸಿ ನಿಮ್ಮ ಬಡತವನ್ನು ನೀಗಿಸಿಕೊಳ್ಳಿ' ಎಂದನು. ಅದಕ್ಕೆ ಸನ್ಯಾಸಿ 'ನನಗೆ ನಿನ್ನ ಬಂಗಾರದ ಅವಶ್ಯಕತೆ ಇಲ್ಲ. ತೆಗೆದುಕೊಂಡು ಹೋಗು ಅದನ್ನು' ಎಂದನು. ಆಗ ಆ ಶ್ರೀಮಂತ ಸೇಠಜಿ ಈ ಸನ್ಯಾಸಿಗೆ ದುರಂಹಕಾರ ಜಾಸ್ತಿ ಇರಬೇಕು. ಅದಕ್ಕಾಗಿ ನಾನು ಬಂಗಾರವನ್ನು ಕೊಟ್ಟರೂ ತೆಗೆದುಕೊಳ್ಳಲಿಲ್ಲ. ಇವರಿಗೆ ಬಂಗಾರದ ಬೆಲೆಯೇ ತಿಳಿದಿಲ್ಲವೆಂದು ಕಾಣುತ್ತದೆ ಎಂದು ದರ್ಪದಿಂದ ಮಾತನಾಡುತ್ತಾ ಹೊರಡಲನುವಾದನು. ಆಗ ಸನ್ಯಾಸಿ ಅಲ್ಲೇ ಹತ್ತಿರದಲ್ಲಿದ್ದ ತುಳಸಿಗಿಡದಿಂದ ಒಂದು ಎಲೆಯನ್ನು ಕಿತ್ತು ಅದನ್ನು ಸೇಠಜಿಗೆ ಕೊಟ್ಟು 'ಸೇಠಜಿ, ನಾನು ನಿಮ್ಮಿಂದ ಬಂಗಾರವನ್ನು ಸ್ವೀಕರಿಸಲಿಲ್ಲವೆಂದು ನಿಮಗೆ ಕೋಪ ಬಂದಿರಬಹುದು. ನಾನು ನಿಮ್ಮ ಮನಸ್ಸನ್ನು ನೋಯಿಸಲಾರೆ. ಈ ತುಳಸಿ ಎಲೆಯ ತೂಕದಷ್ಟು ಬಂಗಾರವನ್ನು ನನಗೆ ಕೊಡಿ. ನನಗೆ ಅಷ್ಟೇ ಸಾಕು' ಎಂದನು. ಸನ್ಯಾಸಿಯ ಮಾತಿನಿಂದ ಸೇಠಜಿಗೆ ಅವಮಾನವಾದಂತಾಯಿತು. ಇರಲಿ, ಈ ಸನ್ಯಾಸಿಗೆ ಬುದ್ಧಿ ಕಲಿಸುತ್ತೇನೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ತನ್ನ ಆಳುಗಳನ್ನು ಮನೆಗೆ ಕಳಿಸಿ ಮನೆಯಿಂದ ತಕ್ಕಡಿಯನ್ನು ತರಿಸಿ ತಕ್ಕಡಿಯ ಒಂದು ಪರಡಿಯಲ್ಲಿ ತುಳಸಿ ಎಲೆಯನ್ನಿಟ್ಟು ಅದರ ಇನ್ನೊಂದು ಪರಡಿಗೆ ತನ್ನಲ್ಲಿದ್ದ ಬಂಗಾರವನ್ನು ಹಾಕಿದನು.
ಏನಾಶ್ಚರ್ಯ? ಪರಡಿ ಮೆಲೇಲಲೇ ಇಲ್ಲ. ಇಷ್ಟಾದರೂ ಸೋಲೊಪ್ಪಿಕೊಳ್ಳದ ಸೇಠಜಿ ತನ್ನ ಸಮಸ್ತ ಆಸ್ತಿಯನ್ನೆಲ್ಲಾ ಪರಡಿಗೆ ತಂದು ಸುರಿದನು. ಆದರೆ ಪರಡಿ ಮಾತ್ರ ಜಪ್ಪೆನ್ನಲಿಲ್ಲ. ಈಗ ಸೇಠಜಿಯ ಕೈಯಲ್ಲಿ ಏನೂ ಇರಲಿಲ್ಲ. ಅವನು ಈಗ ಬರಿಮೈ ದಾಸನಾಗಿದ್ದ. ಸೇಠಜಿಗೆ ಈ ಸನ್ಯಾಸಿಯ ಮಹಿಮೆ ಏನೆಂಬುದರ ಅರಿವಾಗಿತ್ತು. ಇವರು ಸಾಮಾನ್ಯ ಸನ್ಯಾಸಿಯಲ್ಲ. ಯಾರೋ ಮಹಾತ್ಮರೇ ಇರಬೇಕು. ನಾನು ನಾನೇ ದೊಡ್ಡ ಶ್ರೀಮಂತ ಎಂಬ ಅಹಂಕಾರದಲ್ಲಿ ಅವರಿಗೆ ನಾನಾ ರೀತಿಯಲ್ಲಿ ಚುಚ್ಚು ಮಾತುಗಳನ್ನಾಡಿದೆ. ಅಪಮಾನ ಮಾಡಿದೆ. ಇಷ್ಟಾದರೂ ಏನೊಂದು ಮಾತನಾಡದ ಅವರು ಮೌನವಾಗಿಯೇ ಎಲ್ಲವನ್ನು ಸಹಿಸಿಕೊಂಡು ನನ್ನ ಅಹಂಕಾರವನ್ನು ದಮನ ಮಾಡಿದರು. ಈಗ ನನ್ನ ಕಣ್ಣು ತೆರೆಯಿತು. ನಾನು ಈಗ ಅವರ ಪಾದಕ್ಕೆರಗಿ ಅವರಲ್ಲಿ ಕ್ಷಮೆ ಯಾಚಿಸಬೇಕು ಅಂದುಕೊಂಡು ಗದ್ಗದಿತನಾದ ಸೇಠಜಿ ಅವರ ಪಾದಕ್ಕೆ ದೀರ್ಘದಂಡ ನಮಸ್ಕಾರ ಮಾಡಿ 'ನನ್ನ ತಪ್ಪನ್ನು ಮನ್ನಿಸಿ ಸ್ವಾಮಿ, ನಿಮಗೆ, ಸಂಪತ್ತು ಎನ್ನುವುದು ಏನೂ ಅಲ್ಲ. ನಾನು ಮೂರ್ಖ. ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳೇ ಎಲ್ಲಕ್ಕಿಂತ ಮುಖ್ಯ ಎಂದು ಭಾವಿಸಿಬಿಟ್ಟೆ. ಆದರೆ ಅವುಗಳೆಲ್ಲ ತಮಗೆ ತೃಣಕ್ಕೆ ಸಮಾನ ಎಂಬುದರ ಅರಿವಾಯಿತು. ನನ್ನನ್ನೂ ಸಹ ನಿಮ್ಮ ದಾಸನನ್ನಾಗಿ ಮಾಡಿಕೊಳ್ಳಿ. ನನ್ನ ಸಂಪತ್ತೆಲ್ಲವನ್ನೂ ಬಡವರಿಗೆ ಹಂಚಿಬಿಡುತ್ತೇನೆ' ಎಂದು ಅಂಗಲಾಚಿ ಬೇಡಿಕೊಂಡನು. ಆಗ ಸನ್ಯಾಸಿ ಅವನನ್ನು ಹಿಡಿದೆತ್ತಿ ಅವನನ್ನ ಕ್ಷಮಿಸಿ, ಸೇಠಜಿ, ಕೇವಲ ಧನಕನಕಗಳು ನೆಮ್ಮದಿ, ಶ್ರೀಮಂತಿಕೆಯನ್ನು ತಂದುಕೊಡುವುದಿಲ್ಲ. ಕರುಣೆ, ಅನುಕಂಪ, ದಯೆ, ತ್ಯಾಗ ಮಾನವನ ಮೂಲಗುಣಳಾಗಬೇಕು. ಅಹಂಕಾರ ಅಳಿಯಬೇಕು. ಇಂದು ನೀವು ಪೂರ್ಣ ಮನುಷ್ಯರಾಗಿದ್ದೀರಿ. ಇನ್ನು ಮೇಲಾದರೂ ಅಹಂಕಾರವನ್ನ ತ್ಯಜಿಸಿ ದಾನ-ಧರ್ಮ ಮಾಡುತ್ತಾ ನೆಮ್ಮದಿಯಿಂದ ಜೀವನ ನಡೆಸಿರಿ' ಎಂದು ಹರಸಿ ಬೀಳ್ಕೊಟ್ಟನು.
= ಎಂ.ಬಿ. ನಾಯಕ, ಹಾಸನ