ಅಮು ದಿನದ ಅಂತರಗಂಗೆ

ಅಮು ದಿನದ ಅಂತರಗಂಗೆ
Updated on: 

'ಅಳಬೇಡ, ಖಂಡಿತ ನಿನ್ಗೆ ನ್ಯಾಯ ಸಿಗುತ್ತೆ'.
'ನ್ಯಾಯ... ಹ್ಞೂಂ, ಸಿಗುತ್ತೆ! ಕಳ್ದೋಗಿರೋ ನನ್ ಮಗುನಾ ನಿಮ್ ನ್ಯಾಯ ಕೊಡಿಸುತ್ತಾ? ಅಮಾನುಷವಾಗಿ ಕೊಲೆಯಾದ ನನ್ನ ಗಂಡನನ್ನು ಈ ನ್ಯಾಯ ಬದುಕಿಸುತ್ತಾ? ಅಪ್ಪ ಎಲ್ಲಿ ಅಂತ ಕೇಳುವ ನನ್ ಮಗಳಿಗೆ ಯಾವ ನ್ಯಾಯ ಉತ್ತರಿಸುತ್ತೆ? ಎಲ್ಲವನ್ನೂ ಕಳ್ಕೊಂಡು ನಾನೇಕೆ ಬದುಕಿದೆ?'
'ನೋಡು ಈ ಗಲಭೆಯಲ್ಲಿ ನಿನ್ ಮಗ ಎಲ್ಲೋ ತಪ್ಪಿಸಿಕೊಂಡಿರ್ಬೇಕು. ಬರ್ತಾನೆ, ಸಮಾಧಾನ ಮಾಡ್ಕೋ'.
'ಹ್ಞೂಂ ಬರ್ತಾನೆ! ಉರಿಯುವ ಬೆಂಕಿಯಲ್ಲಿ ಸುಟ್ಟು ಹೋದವನು ಮತ್ತೆ ಬರ್ತಾನೆ!'
'ಹಾಗೆಲ್ಲ ತಿಳಿಯಬೇಡ. ನಿರಾಶ್ರಿತರ ಪರವಾಗಿ ಜನಪ್ರತಿನಿಧಿಗಳು ಕೆಲ್ಸ ಮಾಡ್ತಿದ್ದಾರೆ'.
'ಜನಪ್ರತಿನಿಧಿಗಳು, ಛೀ... ಅವರೇ ಮುಂದೆ ಈ ಮಾರಣಹೋಮ ಮಾಡ್ಸಿದ್ದಾರೆ. ಅವರಿಂದ ನ್ಯಾಯ ಸಿಗುತ್ತಾ?'
ಬದುಕಿನ ನೆಲೆ ಕಳ್ಕೊಂಡ ಸಾಮಾನ್ಯ ಮಹಿಳೆ, ದುಃಖಿತರ ಕುಟುಂಬಗಳ ರಕ್ಷಣೆಯಲ್ಲಿ ತೊಡಗಿರುವ ಸುಶಿಕ್ಷಿತಳ ಮಧ್ಯ ನಡೆಯುವ ಸಂಭಾಷಣೆ ಇದು. ಆಕೆಯ ಕಣ್ಣೆದುರೆ ಗಂಡನನ್ನು ಕೊಂದಿದ್ದಾರೆ. ಗಂಡನ ಪ್ರಾಣ ಉಳಿಸಿಕೊಳ್ಳಲು ಹೋದವಳು ಮಗನನ್ನೂ ಕಳ್ಕೊಂಡಿದ್ದಾಳೆ. ಮನೆ, ಆಸ್ತಿ ಸುಟ್ಟು ಬೂದಿಯಾಗಿದೆ. ಆಕೆ ಈಗ ನಡುಬೀದಿಯಲ್ಲಿ ನಿಂತಿದ್ದಾಳೆ. ಅಂಥ ನೂರಾರು ಕುಟುಂಬಗಳು ತಮ್ಮವರನ್ನು ಕಳ್ಕೊಂಡು ಹೀಗೆ ಅನಾಥರಾಗಿದ್ದಾರೆ. ಇವರೆಲ್ಲ ಹೀಗೆ ಬೀದಿಗೆ ಬೀಳಲು ಒಂದೇ ಕಾರಣ- ಅವರು ಸಿಖ್ಖರು.
ಅದು 1984ರ ದಶಕ. ಪ್ರಧಾನಿ ಇಂದಿರಾಗಾಂಧಿಯವರನ್ನು ಗುಂಡಿಕ್ಕಿ ಕೊಂದ ದಿನಗಳು. ಇಂದಿರಾಳನ್ನು ಸಾಯಿಸಿದ್ದು ಸಿಖ್ಖ್‌ರಾಗಿದ್ದರಿಂದ ಆ ಜನಾಂಗದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯಿತು. ಸಿಖ್ಖರನ್ನು ಹಿಡಿದು ಅಮಾನುಷವಾಗಿ ಕೊಲ್ಲಲಾಯಿತು. ಯಾರೋ ಮಾಡಿದ ತಪ್ಪಿಗೆ ನಡು ಬೀದಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡರು. ಸಾವಿರಾರು ಕುಟುಂಬಗಳು ಮನೆ-ಮಠ ಕಳೆದುಕೊಂಡರು. ಅತ್ಯಾಚಾರ, ದರೋಡೆ ರಾಜಾರೋಷವಾಗಿ ನಡೆಯಿತು.
ಈ ಮಾರಣ ಹೋಮಕ್ಕೆ ಸಾಕ್ಷಿಯಾಗಿದ್ದು ದೆಹಲಿ. ಆ ಗಲಭೆಯಲ್ಲಿ ಕುಟುಂಬವನ್ನು ಕಳೆದುಕೊಂಡ ಪುಟ್ಟ ಹೆಣ್ಣು ಮಗಳನ್ನು ಯಾರದ್ದೋ ಕೈಗೊಪ್ಪಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಚಿತ್ರಕಥನ 'ಅಮು'. ಸೋನಾಲಿ ಬೋಸ್ ನಿರ್ದೇಶನದ ಈ ಚಿತ್ರ, ಒಂದು ಸಮುದಾಯದ ವಿರುದ್ಧ ನಡೆದ ಗಲಭೆಯ ಹಿಂದಿನ ಸತ್ಯವನ್ನು ಬಿಚ್ಚಿಡುತ್ತದೆ. ಕೊಂಕಣಾ ಸೇನ್‌ಶರ್ಮಾ ಚಿತ್ರದ ಪ್ರಮುಖ ಪಾತ್ರಧಾರಿ. ಸಿಖ್ಖರ ಮೇಲಿನ ದಾಳಿಯನ್ನು ಕೇಂದ್ರೀಕರಿಸಿ ಚಿತ್ರ ಮಾಡುವ ಅಗತ್ಯವೇನಿತ್ತು? 'ಗಲಭೆ ನಡೆದಾಗ ನಾನು ದೆಹಲಿಯಲ್ಲಿ ಓದುತ್ತಿದ್ದೆ. ಆಗ ನಾನೇ ಕಂಡ ಘಟನೆಗಳು ಮನಸ್ಸಿಗೆ ನೋವುಂಟು ಮಾಡಿದವು. ಚಿತ್ರದಲ್ಲಿ ತೋರಿಸಿರುವ ಕುಟುಂಬವನ್ನು ನೇರವಾಗಿ ನೋಡಿದ್ದೆ. ಆ ಹೆಣ್ಣಿನ ದುಃಖ ನನ್ನನ್ನು ಕಾಡುತ್ತಲೇ ಇತ್ತು. ಇಂಥ ಗಲಭೆಗಳು ಹೇಗೆ ವ್ಯವಸ್ಥಿತವಾಗಿ ರಾಜಕೀಯದಿಂದ ಕೂಡಿರುತ್ತವೆ ಎಂಬುದನ್ನು ತಿಳಿಸಲು 'ಅಮು' ಚಿತ್ರವನ್ನು ಮಾಡಿದ್ದೇನೆ' ಎನ್ನುವ ಸೋನಾಲಿ, ಇಡೀ ಕಥೆಯನ್ನು ಮಾನವೀಯತೆಯ ನೆಲೆಯಲ್ಲಿ ಕಟ್ಟಿಕೊಡುತ್ತಾರೆ. ಇದು ನಿರ್ದೇಶಕಿಗೆ ಮೊದಲ ಚಿತ್ರ. ಕೊಲಂಬಿಯಾ ವಿವಿಯಲ್ಲಿ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿರುವ ಸೋನಾಲಿ, ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಂಗಭೂಮಿಯ ಹಿನ್ನೆಲೆ. 'ಅಮು' ಚಿತ್ರ ಬರ್ಲಿನ್, ಟೊರೊಂಟೊ, ಐಎಫ್‌ಐ ಮುಂತಾದ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ರಾಷ್ಟ್ರಪ್ರಶಸ್ತಿ, ಫಿಪ್ರೆಸ್ಕಿ ಕ್ರಿಟಿಕ್ಸ್ ಅವಾರ್ಡ್‌ಗೆ ಪಾತ್ರವಾಗಿರುವ ಈ ಚಿತ್ರದ ಕಥೆ ಫ್ಲ್ಯಾಷ್ ಬ್ಯಾಕ್ ತಂತ್ರದಿಂದ ಗಮನ ಸೆಳೆಯುತ್ತದೆ.
ಅಮೆರಿಕದಲ್ಲಿ ಓದಿ ಬೆಳದ ಕಾಜುಳ ಮೂಲ ಭಾರತ. ಓದು ಮುಗಿದ ಮೇಲೆ ಭಾರತಕ್ಕೆ ಬರುವ ಕಾಜು, ದೆಹಲಿ ಬೀದಿಗಳಲ್ಲಿ ತಿರುಗುತ್ತಾಳೆ. ಈ ವೇಳೆ ಭಾರತದ ನೈಜ ಚಿತ್ರಗಳು ಆಕೆಯನ್ನು ಸ್ಪರ್ಶಿಸುತ್ತವೆ. ಭಿಕ್ಷೆ ಬೇಡುತ್ತಿರುವ ಹೆಣ್ಣುಮಗಳು, ಅಮ್ಮನೊಂದಿಗೆ ಮಡಿಕೆ ಮಾರುತ್ತಿರುವ ಬಡ ಹುಡುಗಿ, ರಸ್ತೆ ಬದಿಯಲ್ಲಿ ಎಂಥದೋ ಔಷಧ ಮಾರುತ್ತಿರುವ ವ್ಯಕ್ತಿ... ಹೀಗೆ ಹತ್ತಾರು ಸನ್ನಿವೇಶಗಳನ್ನು ಕಾಜುಳ ಯೋಚನೆಗಳಿಗೆ ಸನಿಹವಾಗುತ್ತವೆ. ಆದರೆ ತಾನು ಓಡಾಡುವಾಗ ಈ ಕೊಳಚೆ ಪ್ರದೇಶಕ್ಕೂ ತನಗೂ ಸಂಬಂಧ ಇದೆ ಎನ್ನುವ ಭಾವನೆ ಆಕೆಯಲ್ಲುಕ್ಕುತ್ತದೆ. ಹಾಗಾದರೆ ತನ್ನ ಪೂರ್ವಪರಗಳೇನು? ಎನ್ನುವ ಪ್ರಶ್ನೆಯೊಂದಿಗೆ ಹೊರಡುವ ಕಾಜುಳಿಗೆ 1984ರ ಗಲಭೆ ಕಣ್ಣಿಗೆ ಕಟ್ಟುತ್ತದೆ. ಆಗ ತನ್ನ ತಾಯಿ, ತಂದೆ, ತಮ್ಮ ಸತ್ತಿದ್ದು, ತನಗೆ ಈಗಿರುವ ಅಮ್ಮ ಸಾಕು ತಾಯಿ ಎಂದು ತಿಳಿಯುವಷ್ಟರಲ್ಲಿ ಗಾಢ ವಿಷಾದದೊಂದಿಗೆ 'ಅಮು' ಮುಗಿಯುತ್ತದೆ.
ಚಿತ್ರದ ಆರಂಭದ ಸಡಿಲತೆ ಕೊಂಚ ಬೋರ್ ಎನ್ನುವಂತಿದೆ. ಆದರೆ ಕಾಜುಳ ಪೂರ್ವಪರ ಬಿಚ್ಚುಕೊಳ್ಳುವಾಗ ನಿರೂಪಣೆಯ ಬಿಗಿ ಹಿಡಿತ ಅದ್ಭುತ. 'ಆಗ ತುಂಬಾ ವ್ಯವಸ್ಥಿತವಾಗಿ ಗಲಭೆ ಮಾಡಿಸಿದರು. ನಿನ್ನ ಕುಟುಂಬದಂತೆ ಇತರೆ ಕುಟುಂಬಗಳು ಕಣ್ಮರೆಯಾಗಿವೆ' ಎನ್ನುವ ಒಂದೇ ಒಂದು ಸಂಭಾಷಣೆ ಚಿತ್ರದ ಅಂತರಂಗಕ್ಕೆ ಕನ್ನಡಿ. ಯಾರೋ ಮಾಡಿದ ತಪ್ಪಿನಿಂದ ಆಗುವ ಅನಾಹುತ, ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವವರ ಹಿತಾಸಕ್ತಿಗಳನ್ನು ಈ ಚಿತ್ರ ಬೆತ್ತಲೆಗೊಳಿಸುತ್ತದೆ. ಸಮಕಾಲೀನವಾಗುತ್ತಲೇ ಗತಕಾಲದ ಕಹಿಸತ್ಯಗಳನ್ನು ಚರ್ಚಿಸುವುದೇ 'ಅಮು' ಚಿತ್ರದ ಹೆಚ್ಚುಗಾರಿಕೆ. ನಿರ್ದೇಶಕಿ ಸೋನಾಲಿ ಬೋಸ್ ತಾನೇ 'ಅಮು' ಹೆಸರಿನಲ್ಲಿ ಬರೆದ ಕಾದಂಬರಿಯನ್ನೇ ಆಧರಿಸಿ ಈ ಚಿತ್ರ ಮಾಡಿದ್ದಾರೆ. ಪ್ರಮುಖ ಪಾತ್ರಧಾರಿ ಕೊಂಕಣಾ ಸೇನ್‌ಶರ್ಮಾ, ನಟಿ ಹಾಗೂ ನಿರ್ಮಾಪಕಿ ಅಪರ್ಣ ಸೇನ್‌ಳ ಪುತ್ರಿ.  ಕೊಂಕಣಾ ಅಭಿನಯದ ಚಿತ್ರಗಳು ಕಮರ್ಷಿಯಲ್ ಸಕ್ಸಸ್ ಕಾಣದಿದ್ದರೂ ಸಿನಿಮಾ ಆಸಕ್ತರ ಗಮನ ಸೆಳೆದಿವೆ.
ಒಂದು ಘಟನೆಯನ್ನು ವಸ್ತುನಿಷ್ಠವಾಗಿ ನೋಡುವಂಥ ಪ್ರಾಮಾಣಿಕ ಪ್ರಯತ್ನ ಮಾಡಿರುವ 'ಅಮು' ಚಿತ್ರ ಅದ್ಭುತ ಎನ್ನಲಾಗದು. ಆದರೆ, ಸುತ್ತಲಿನ ವಿದ್ಯಮಾನಗಳ ಅಂತರಂಗ ತೆರೆದಿಡುವ ಚಿತ್ರಗಳು ಅಪರೂಪವಾಗುತ್ತಿರುವ ಸಂದರ್ಭದಲ್ಲಿ 'ಅಮು'ನಂಥ ಸಿನಿಮಾ ಸಾರ್ವಕಾಲಿಕ.

- ಆರ್. ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com