ಹೃದಯವಂತ ಘರಾಣೆಯ ವಿರಹ ಗಾನ

Updated on: 

ತಡಪತ ಹೂಂ ಜೈಸೆ ಜಲ ಬಿನ ಮೀನ.. ಶಾಸ್ತ್ರೀಯ ಸಂಗೀತ ಕೇಳುಗರಿಗೆ ಈ ಸಾಲುಗಳು ಚಿರಪರಿಚಿತ. ಅದರಲ್ಲೂ ಉಸ್ತಾದ್ ಫಯಾಜ್ ಖಾನ್‌ರ ಹಳೆಯ, ಮೂರು ನಿಮಿಷದ 78 ಆರ್‌ಪಿಎಂನ ಈ ರೆಕಾರ್ಡಿಂಗ್ ಕೇಳದ ಸಂಗೀತ ರಸಿಕರು ಸಿಗುವುದು ಕಠಿಣವೇ.
ಮುಂಜಾನೆ ಮೂರುವರೆ ನಾಲ್ಕು ಗಂಟೆ ಸುಮಾರಿಗೆ, ಕತ್ತಲ ಹೃದಯದಲ್ಲಿ ಬೆಳಕಿನ ಚಡಪಡಿಕೆ ಶುರುವಾಗುವ ಹೊತ್ತಲ್ಲಿ ಹಾಡುವ ವಿರಹ ರಸಪೂರ್ಣ, ಲಾಲಿತ್ಯಮಯ ರಾಗ 'ಲಲಿತ್‌'ನಲ್ಲಿ ಉಸ್ತಾದ್ ಫಯಾಜ್‌ಖಾನರು ಈ ಚೀಜನ್ನು ಹಾಡುವಾಗ, ಅದರಲ್ಲೂ 'ತಡಪತ' ಎನ್ನುವಾಗ, 'ಜಲ ಬಿನ ಮೀನ' ಎನ್ನುವಾಗ ಸಂಗೀತ ಕೇಳುವ ಸವಿ ಗೊತ್ತಿದ್ದವರಿಗೆ ಎದೆಯೊಳಗೆಲ್ಲ ಕಲಕಿದಂತಾಗುವ ಆ ಅನುಭವದ ಸವಿ ಬಲ್ಲವರೇ ಬಲ್ಲರು. ಮನದಲ್ಲಿ ಕಂಡೂ ಕಾಣದ ಹಾಗೆ ಕಳೆದು ಹೋದ ಯಾವುದೋ ಮಧುರ ಚಡಪಡಿಕೆ ಮರುಕಳಿಸಿದಂತಾಗುತ್ತದೆ. ಅದನ್ನು ಒಮ್ಮೆ ಕೇಳಿ ಚಡಪಡಿಸಿದವರು, ಮತ್ತೆಮತ್ತೆ ಕೇಳಬೇಕೆಂದು ಚಡಪಡಿಸುತ್ತಾರೆ.
ಮೃದುವಾದ ಹೂವೊಂದನ್ನು ಮುದ್ದಿಸುವಂತೆ ಸ್ವರವನ್ನು ಮುದ್ದಿಸುತ್ತಾ ಫಯಾಜ್ ಖಾನರು ಓಲೈಸುತ್ತಾರೆ, ಮೋಹಗೊಳಿಸುತ್ತಾರೆ! ಅಛ್ಚಾ ಮಾಡುತ್ತಾರೆ ಅಂತಾರಲ್ಲವೆ ಹಾಗೆ.  ಅದಕ್ಕೇ ಅವರ ಕಾವ್ಯ ನಾಮವೇ 'ಪ್ರೇಮ ಪಿಯಾ'! ರಸ, ರಸ ಮತ್ತು ರಸ! ಅದೇ ಉಸ್ತಾದ್ ಫಯಾಜ್ ಖಾನ್! ಅಷ್ಟೇ ಅಲ್ಲ, ಅದೇ ಆಗ್ರಾ ಘರಾಣೆಯ ಖಾಸೀಯತ್ ಕೂಡ...
ದರಸ ಪಿಯಾ, ಸರಸ ಪಿಯಾ, ವಿನೋದ ಪಿಯಾ, ಪ್ರೇಮ ಪಿಯಾ, ರತನ ಪಿಯಾ, ಪ್ರಾಣ ಪಿಯಾ, ಸಜನ ಪಿಯಾ, ರಸ ಪಿಯಾ, ಸಗುಣ ಪಿಯಾ, ರಸಿಕ ಪಿಯಾ, ಪ್ರೇಮ ರಂಗ್, ದಿನ ರಂಗ್, ದಿಲ್ ರಂಗ್, ಸಬ ರಂಗ್, ಪ್ರೇಮ ದಾಸ್ - ಇದೇನಿದು ಎನ್ನಬೇಡಿ ....ಇವೆಲ್ಲವೂ ಆಗ್ರಾ ಘರಾಣೆಯ ಮಹಾನ್‌ಮಹಾನ್ ಗಾಯಕರು, ದಿಗ್ಗಜರ ಕಾವ್ಯನಾಮಗಳು. ಅವರ ಸಂಗೀತವೂ ಹೀಗೇ... ಸ್ವರದೊಡನೆ ಸರಸ, ಪ್ರೀತಿ, ಪ್ರೇಮ, ವಿನೋದ, ವಿರಹ... ಒಬ್ಬೊಬ್ಬರೂ ಆ ಸ್ವರವನ್ನು ಕ್ಷಣಕ್ಷಣವೂ ಆರಾಧಿಸುವ ಪ್ರೇಮಿಗಳು...
ಆಗ್ರಾದಲ್ಲಿ ಪ್ರೇಮ ಸ್ಮಾರಕ ವಿಶ್ವ ವಿಖ್ಯಾತ ತಾಜ್‌ಮಹಲ್ ಹುಟ್ಟುವ ಸುಮಾರು ಇನ್ನೂರು ವರುಷಗಳ ಮೊದಲೇ ಭಾವವನ್ನು ಮೀಂಟುವ ತಮ್ಮ ಸಂಗೀತದಿಂದ ರಸಿಕರ ಹೃದಯಗಳಲ್ಲೆಲ್ಲ 'ಪ್ರೇಮ ಸ್ಮಾರಕ' ಕಟ್ಟಿದ ಗಾಯಕರು ಆಗ್ರಾ ಘರಾಣೆಯ ಕಲಾವಿದರು. ಆಗ್ರಾ ಘರಾಣೆಗೆ 'ರಂಗೀಲೆ ಘರಾಣೆ' ಎನ್ನುತ್ತಾರೆ. ಬಹುಶಃ ಇದಕ್ಕೇ ಇರಬೇಕು, ಬುದ್ಧಿ, ವಿಚಾರಕ್ಕೆ ಎಷ್ಟು ಮಹತ್ವವೋ ಅಷ್ಟೇ ಹೃದಯಕ್ಕೂ ಮಹತ್ವ ಕೊಟ್ಟ ಗಾಯಕರಿವರು. 'ಆಗ್ರಾ'ದ ಆ ಮಣ್ಣಲ್ಲೇ ಆ ವಿರಹದ ಸವಿ ತುಂಬಿದೆಯೇನೋ...
ಹಿಂದುಸ್ತಾನಿ ಸಂಗೀತದ ಮುಖ್ಯವಾದ, ವಿಶಾಲವಾದ ಹಾಗೂ ಅನೇಕ ಸಂಗೀತ ದಿಗ್ಗಜರನ್ನು ಸಂಗೀತ ಜಗತ್ತಿಗೆ ಕೊಟ್ಟ ಹೃದಯವಂತ ಘರಾಣೆ ಈ 'ಆಗ್ರಾ ಘರಾಣೆ'. ಒಂದು ಸುವಾಸಿತ ಗುಲಾಬಿ ಹೂವಿನ ಹಾಗೆ ಈ ಗಾಯನ. ಎಸಳುಗಳೆಲ್ಲ ಸುಂದರವೇ. ಎಲ್ಲವೂ ಮೊದಲೇ ಒಂದರೊಳಗೊಂದು, ತುದಿ ಮೊದಲು ತಿಳಿಯದಂತೆ. ಆಗ್ರಾ ಘರಾಣೆ ಎಂದರೆ ಅದೊಂದು ಕಾವ್ಯ, ಹೃದಯದ ಗಾಯನ.
(ಮುಂದುವರಿಯುತ್ತದೆ)

= ಶ್ರುತಿ ಭಟ್

shrutikbhat@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com