ಸಿನೆಮಾ ಬಂತು!

ಸಿನೆಮಾ ಬಂತು!
Updated on: 

ಭಾರತ ಪ್ರಾಚೀನ ಕಾಲದಿಂದಲೂ ತನ್ನ ಸುತ್ತಲಿನವರ ಕಲಾ ವೈವಿಧ್ಯತೆಯನ್ನು ಸ್ವಾಗತಿಸಿದೆ. ಅದರಲ್ಲೂ ಪರ್ಶಿಯನ್- ಅರೇಬಿಕ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳ ಕಲೆಗಳಿಂದಲೂ ಪ್ರಭಾವಿತವಾಗಿದೆ. ಸಿನಿಮಾದ ಅನ್ವೇಷಣೆಯ ಪ್ರಾರಂಭದಲ್ಲೇ ನಮ್ಮಲ್ಲಿಯ ವಿದ್ಯಾವಂತರೂ, ಕಲಾಪ್ರೇಮಿಗಳು, ಉದ್ಯಮಿಗಳು ಹಾಗೂ ಎಲ್ಲಕ್ಕಿಂತ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರಿಂದ ಇಂದು ಭಾರತ ಪ್ರಪಂಚದ ಬೃಹತ್ ಸಿನಿಮಾ ಉದ್ಯಮಗಳಲ್ಲಿ ಒಂದಾಗಿ, ತನ್ನ ದೇಶದ ಹತ್ತಾರು ಭಾಷೆಗಳಲ್ಲಿ ಬೃಹತ್ ಸಂಖ್ಯೆಯ ಚಿತ್ರಗಳು ತಯಾರಾಗಲು ಕಾರಣವಾಗಿದೆ.
ಆರಂಭದ ಸಿನೆಮಾ ತಯಾರಕರಾದ ಫ್ರಾನ್ಸಿನ ಲುಮೈರ್ ಸಹೋದರರ ತಂಡಗಳು ತಮ್ಮ 'ಸಿನಿಮಾಗ್ರಾಫೆ'ಯನ್ನು ಪರಿಚಯಿಸುತ್ತಾ, ಚಿತ್ರಗಳನ್ನು ಹೋದೆಡೆಯಲ್ಲೆಲ್ಲ ಚಿತ್ರಿಸುತ್ತ, ಎಲ್ಲ ದೇಶಗಳಲ್ಲೂ ತಮ್ಮ ಚಿತ್ರಗಳ ವಿತರಣೆ- ಮಾರಾಟಕ್ಕೆ ಪ್ರತಿನಿಧಿಗಳನ್ನು ನೇಮಿಸುತ್ತಾ, ಅತ್ಯಂತ ಕಡಿಮೆ ಅವಧಿಯಲ್ಲಿ ಚಲನಚಿತ್ರಗಳನ್ನು ಪರಿಚಯಿಸಿದರು.
ಲುಮೈರ್ ಸಹೋದರರು ಮುಂಬಯಿಯ 'ವಾಟ್ಸನ್‌' ಹೋಟೆಲಿನಲ್ಲಿ ಭಾರತೀಯರಿಗೆ ಚಲನಚಿತ್ರವನ್ನು ಪ್ರಸ್ತುತಪಡಿಸಿದ್ದು ಐತಿಹಾಸಿಕ ಘಟನೆಗಳಲ್ಲಿ ಒಂದು. ಲುಮೈರ್ ಸಹೋದರರಿಗೆ ಬಹುಶಃ ಚಲನಚಿತ್ರಕ್ಕೆ ಮುಂಬರುವ ದಶಕಗಳಲ್ಲಿ ಭಾರತ, ಪ್ರಪಂಚದಲ್ಲಿ ಸಿನಿಮಾ ತಯಾರಿಕೆ ತುಂಬಾ ಜನಪ್ರಿಯವಾದ ಮತ್ತು ಹೆಚ್ಚು ಚಿತ್ರಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಬಲ್ಲದೆಂಬ ಮುಂದಾಲೋಚನೆ ಹೇಗೆ ಬಂತೋ ಏನೋ! ತಮ್ಮ ವಿಶ್ವ ಪರ್ಯಟನೆಯ ಪ್ರಥಮ ಪ್ರವಾಸ ಪಟ್ಟಿಯಲ್ಲಿ ಭಾರತದಲ್ಲಿ ಸಿನಿಮಾವನ್ನು ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಂಡರು. ಪ್ಯಾರಿಸ್ಸಿನಲ್ಲಿ ಸಿನಿಮಾ ಪರಿಚಯಿಸಲ್ಪಟ್ಟ ಆರೇ ತಿಂಗಳಲ್ಲಿ ಜುಲೈ 7, 1896ರಲ್ಲಿ ವಾಟ್ಸನ್ ಹೋಟಲಿನಲ್ಲಿ ತಾವು ತಂದಿದ್ದ ಚಿತ್ರಗಳಾದ 10 ನಿಮಿಷ ಅವಧಿಯ ದಿ ಸೀ ಬಾತ್, ಅರೈವಲ್ ಆಫ್ ದಿ ಟ್ರೈನ್, ಎ ಡೆಮಾಲಿಷನ್, ಲೇಡೀಸ್ ಅಂಡ್ ಸೋಲ್ಜರ್ಸ್ ಆನ್ ವೀಲ್ಸ್, ಲಿವಿಂಗ್ ದಿ ಫ್ಯಾಕ್ಟರಿ, ದಿ ಥೇಮ್ಸ್ ಅಟ್ ವಾಟರ್ ಲೂ ಬ್ರಿಡ್ಜ್ ಇತ್ಯಾದಿ ಚಿತ್ರಗಳನ್ನು ಪ್ರಥಮ ಬಾರಿಗೆ ಪ್ರದರ್ಶಿಸಿ 'ಸಿನಿಮಾಟೋಗ್ರಫೆ- ಲುಮೈರ್‌' ಅನ್ನು ಪರಿಚಯಿಸಿದರು.
ಭಾರತದಲ್ಲೇ ಕೆಲವು ಚಿತ್ರಗಳನ್ನು ಚಿತ್ರೀಕರಿಸಿ, ಪ್ರದರ್ಶಿಸಿ ಈ ದೇಶದಲ್ಲಿ ಸಿನಿಮಾ ಚಟುವಟಿಕೆ ಅಂಕುರಕ್ಕೆ ಕಾರಣರಾದರು. ಜುಲೈ 14ರಂದು ವಾಟ್‌ಸನ್ ಹೋಟೆಲಿನಿಂದ ನಾವಲ್ಟಿ ಥಿಯೇಟರಿಗೆ ಚಲನಚಿತ್ರ ಪ್ರದರ್ಶನವನ್ನು ಸ್ಥಳಾಂತರಿಸಿದರು. ಒಟ್ಟು 24 ಚಿತ್ರಗಳ ತುಣುಕುಗಳ ನಿರಂತರ ಪ್ರದರ್ಶನ ಆಗಸ್ಟ್ 15, 1896ರಂದು ಮುಕ್ತಾಯವಾಯಿತು.
 ಲುಮೈರರು ತಂದಿದ್ದ ಒಟ್ಟಾರೆ ಚಿತ್ರಗಳ ಕಂತಿನಲ್ಲಿ, ದೂರದಿಂದ ಬರುತ್ತಿರುವ ರೈಲು ವೇಗವಾಗಿ ಬಂದು ಪ್ರೇಕ್ಷಕರ ಮೇಲೆ ನುಗ್ಗಿದ ಅನುಭವವಾಗಿ ಕೆಲವರು ಭಯಭೀತರಾದರು. ಕೆಲವರು ರೋಮಾಂಚಿತರಾದರು. ಜಗತ್ತಿನ ಎಲ್ಲೆಡೆ ಇದೇ ರೀತಿಯ ಪ್ರತಿಕ್ರಿಯೆ ಪ್ರೇಕ್ಷಕರಿಂದ ಬರುತ್ತಿತ್ತು. ಇಷ್ಟು ಬಿಟ್ಟರೆ ಲುಮೈರರಿಗೆ ತಾವು ನಿರೀಕ್ಷಿಸಿದಂತೆ ಭಾರತದಲ್ಲಿ ಸಿನಿಮಾ ಪ್ರದರ್ಶನ ಅಗಾಧವಾದ ಕಾತರ, ಜನಸಂದಣಿ ವಿಸ್ಮಯವನ್ನೇನೂ ಸೃಷ್ಟಿಸಲಿಲ್ಲ. ವೀಕ್ಷಿಸಿದ ಭಾರತೀಯರು ಹೊಸ ಅನುಭವದಂತೆ ಗುರ್ತಿಸಿದರಾದರೂ, ಈಗಾಗಲೇ ಭಾರತೀಯರು ಈ ತಂತ್ರಜ್ಞಾನದ ಬಗ್ಗೆ ಅರಿತಿದ್ದರೆಂದು ಗೋಚರವಾಗುತ್ತಿತ್ತು. ಇಲ್ಲಿನ ಜನಕ್ಕೆ, ಕಥಾನಕಗಳನ್ನು ಹೇಳುವ ಚಲಿಸುವ ತೊಗಲು ಬೊಂಬೆ, ಸೂತ್ರದ ಬೊಂಬೆ ಆಟಗಳು, ಕೈನಲ್ಲಿ ಚಿತ್ರಿಸಿದ ಸ್ತಬ್ಧ ಚಿತ್ರಗಳಿಗೆ ಹಿನ್ನೆಲೆ ಧ್ವನಿ ಮತ್ತು ಸಂಗೀತದಿಂದ ರಂಜಿಸುತ್ತಿದ್ದ ಪ್ರಯೋಗಗಳು ಗೊತ್ತಿದ್ದವು. ಈ ಯಾಂತ್ರಿಕ ಸ್ವರೂಪದಲ್ಲಿ ತಮ್ಮ ಕಥೆ, ತಮ್ಮ ಜನ, ತಮ್ಮ ಸಂಸ್ಕೃತಿಯ ವೇಷ- ಭೂಷಣಗಳೊಂದಿಗೆ ನೋಡಲು ಬಯಸಿದರು.
 ಮುಂಬಯಿಯಲ್ಲಿ ಮೊದಲ ಪ್ರದರ್ಶನದಲ್ಲಿ ಪ್ರೇಕ್ಷಕನಾಗಿದ್ದ ಮುಂಬಯಿ ಫೋಟೋ ಸ್ಟುಡಿಯೋ ಮಾಲೀಕ ಮತ್ತು ಛಾಯಾಗ್ರಾಹಕ 'ಹರಿಶ್ಚಂದ್ರ ಸಖಾರಾಮ್ ಬಟ್‌ವಾಡೆಕರ್‌' ಅಥವಾ 'ಸವೇದಾದ' ಎಂಬಾತ ಸಿನಿಮಾ ನಿರ್ಮಾಣದಲ್ಲಿ ಆಸಕ್ತನಾದ.

ಈತ ಮುಂಬಯಿಯಲ್ಲಿ ಛಾಯಾಗ್ರಹಣ ಸಲಕರಣೆಗಳ ವಿತರಕ. ಈ ಮಹನೀಯ ಲುಮೈರರ ಪ್ರದರ್ಶನದಿಂದ ಪ್ರೇರಿತನಾಗಿ, ಇಂಗ್ಲೆಂಡಿನ ರೈತ ಬ್ರದರ್ಸ್ ಕಂಪನಿಗೆ ಕ್ಯಾಮರಾ ಮತ್ತು ಪ್ರೊಜೆಕ್ಟರನ್ನು ಖರೀದಿಸಲು ಬೇಡಿಕೆ ಸಲ್ಲಿಸಿದ. 1899ರಲ್ಲಿ ಮುಂಬಯಿಯ ಹ್ಯಾಂಗಿಂಗ್ ಗಾರ್ಡನ್ಸ್‌ನಲ್ಲಿ ಆಗಿನ ಖ್ಯಾತ ಕುಸ್ತಿಪಟುಗಳಾದ ಪುಂಡಲೀಕ ದಾದಾ ಮತ್ತು ಕೃಷ್ಣ ನವಿರವರ 'ದೋ ಪೈಲ್ವಾನೋಂಕಿ ಕುಸ್ತಿ' ಮತ್ತು ತರಬೇತಿ ಪಡೆದ ಸರ್ಕಸ್ ಮಂಗಗಳ ಚೇಷ್ಟೆಯ 'ಬಂದರೋಂಕಾ ನಾಚಾ ಹುವಾ ಮದಾರಿ' 2-3 ನಿಮಿಷಗಳ ಅವಧಿಯ ಚಿತ್ರಗಳನ್ನು ತಯಾರಿಸಿದ. ಬಟವಾಡೇಕಾರನನ್ನು ಇತಿಹಾಸ ಹೆಚ್ಚು ಗಮನಿಸದಿದ್ದರೂ ಇಂಡಿಯಾದಲ್ಲಿ ಪ್ರಥಮ ಸಿನಿಮಾ ತಯಾರಕನಾಗಿ, ತಂತ್ರಜ್ಞನಾಗಿ, ಪ್ರದರ್ಶಕನಾಗಿದ್ದಲ್ಲದೆ ತಾನು ನಿರ್ಮಿಸಿದ ಚಿತ್ರಗಳನ್ನು ಅನೇಕ ಸಂಚಾರಿ ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿಸಿದ ಕೀರ್ತಿ ಈತನದು.
ಮೊದಲ ಪುಟಗಳು
ಭಾರತದ ಚಲನಚಿತ್ರ ಇತಿಹಾಸದ ಮೊದಲ ಪುಟಗಳಲ್ಲಿ ನಾಲ್ವರು ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸಿರುವುದು ಅವರ ಸಾಧನೆಗಳೊಂದಿಗೆ ವಿಶ್ವ ಸಿನಿಮಾ ಚರಿತ್ರೆಯಲ್ಲಿ ನಿಚ್ಚಳವಾಗಿ ದಾಖಲಾಗಿದೆ. ಅವರು ಇಂಗ್ಲೆಂಡಿನ ನ್ಯೂ ಕ್ಯಾಸ್ಟಲ್ ಮೂಲದ ಫ್ರಾನ್ಸಿಸ್ ಬೆಂಜಮಿನ್ ಸ್ಟಿವಾರ್ಟ್, ಹೀರಲಾಲ್ ಸೇನ್, ಸವೇದಾದ, ಮದನ್ ಜಿ.  ಸ್ಟಿವಾರ್ಟ್‌ನು ಇಂಗ್ಲೆಂಡಿನ ಚಾಲ್ಸ್ ಅರ್ಬನನ್‌ನ 'ವಾರ್‌ವಿಕ್ ಟ್ರೇಡಿಂಗ್ ಕಂಪನಿ' ಜೊತೆ ಸಂಪರ್ಕ ಹೊಂದಿ 1900ರಲ್ಲಿ ಸಿನಿಮಾ ಉಪಕರಣಗಳನ್ನು ಆಮದು ಮಾಡಿಕೊಂಡು ಪೂನಾ ಸುತ್ತಲ ಪಶ್ಚಿಮ ಘಟ್ಟಗಳನ್ನು ಬಿಂಬಿಸುವ ಅನೇಕ ಚಿತ್ರಗಳು, ಮುಂಬಯಿ ಬದುಕಿನ ಚಿತ್ರಗಳನ್ನು ತೆಗೆದ. ಅದರಲ್ಲಿ 'ಭಾರತೀಯ ಅಗಸ'(ಮುಂಬಯಿಯ ಧೋಬಿಘಾಟ್‌ನಲ್ಲಿ ಸಾವಿರಾರು ಅಗಸರು ಬಟ್ಟೆ ಒಗೆಯುವ ದೃಶ್ಯ) ಇಂದಿಗೂ ವಿನೂತನವೇ ಆಗಿದೆ. 'ಫೈರ್ ಬ್ರಿಗೇಡ್ ಟರ್ನೌಟ್ ಇನ್ ಬಾಂಬೆ' ಇನ್ನೊಂದು ಪ್ರಮುಖ ಚಿತ್ರ.
ಇದಲ್ಲದೆ, ಆಫ್ರಿಕಾದ ಬೋಯರ್ ಯುದ್ಧದಲ್ಲಿ ಬ್ರಿಟಿಷರಿಂದ ಸೆರೆ ಹಿಡಿಯಲ್ಪಟ್ಟು ಮುಂಬಯಿ ಜೈಲಿನಲ್ಲಿದ್ದ  ಯೋಧರ ಬಗೆಗಿನ ಚಿತ್ರಗಳು ಗಮನ ಸೆಳೆಯುತ್ತವೆ. 1902ರಲ್ಲಿ ಗವರ್ನರ್ ಜನರಲ್ ಜಾರ್ಜ್ ಕರ್ಜನ್‌ನ ಪಟ್ಟಾಭಿಷೇಕ ಮಹೋತ್ಸವವನ್ನು ಚಿತ್ರೀಕರಿಸಿದ ಬ್ರಿಟಿಷ್ ಸರ್ಕಾರದ ಅಧಿಕೃತ ಛಾಯಾಗ್ರಾಹಕರಲ್ಲಿ ಸವೇದಾದಾ ಕೂಡ ಒಬ್ಬ. ಸ್ಟೀವಾರ್ಟ್‌ನು ಪ್ರವಾಸ ಚಿತ್ರಣ ಮತ್ತು ವಾರ್ತಾ ಚಿತ್ರಗಳ ತಯಾರಿಕೆಯಲ್ಲಿ ಹೆಚ್ಚು ಪರಿಣತಿಯನ್ನು ಭಾರತೀಯರಿಗೂ ಹಂಚಿದ. ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ಪ್ರಸಿದ್ಧ ತಂತ್ರಜ್ಞನೆಂದು ಹೆಸರು ಗಳಿಸಿದ್ದ ಆರ್. ನಟರಾಜ ಮೊದಲಿಯಾರ್, ಸ್ಟಿವಾರ್ಟ್‌ನನ್ನು ತನ್ನ ಗುರುವೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಆದರೆ, ಸ್ಟಿವಾರ್ಟ್ ಮಹಾಶಯ ಹೆಚ್ಚು ಪ್ರಚಾರ ಪಡೆಯಲಿಲ್ಲ. 1919ರಲ್ಲಿ ತನ್ನ ಮೆಚ್ಚಿನ ತಾಣ ಪೂನಾದಲ್ಲಿಯೇ ಕೊನೆಯುಸಿರೆಳೆದ. ಲುಮೈರ್ ಸಹೋದರರಂತೆ ಸಿನಿಮಾ ಕಾರಣಕ್ಕೆ ಭಾರತಕ್ಕೆ ಬಂದವರಲ್ಲಿ ಮಾಯಾಜಾಲ ನಿಪುಣ ಕಾರ್ಲ್ ಹರ್ಟಜ್ ಕೂಡ ಒಬ್ಬ. ಈತ 'ಸ್ಟೀವರ್ಟ್ಸ್ ವಿಟಾಗ್ರಾಫ್‌' ಪ್ರೊಜೆಕ್ಟರ್‌ನೊಂದಿಗೆ 1897ರ ಜನವರಿಯಲ್ಲಿ ಸಂಚಾರಿ ಸಿನಿಮಾ ಪ್ರದರ್ಶನಗಳನ್ನು ಪ್ರಾರಂಭಿಸಿದ. ಚಲನಚಿತ್ರಗಳನ್ನು ಪರಿಚಯಿಸಿದ ಮತ್ತೊಂದು ವಿದೇಶೀ ತಂಡ, ಫಿಲಿಪ್ ಆಂಡರ್‌ಸನ್ ಮತ್ತು ಆತನ ಪತ್ನಿ ಮ್ಲೇ ಬ್ಲಾಂಚಿ. ತನ್ನ ಯಂತ್ರವನ್ನು ಆತ 'ಆಂಡರ್‌ಸನೊಸೊ ಕೋಪೊಗ್ರಾಫ್‌' ಎಂದು ಹೆಸರಿಸಿದ್ದ. ಇದರ ಮೂಲಕ ಈತ ಚಿತ್ರಿಸಿದ ಚಿತ್ರಗಳೆಂದರೆ 'ಪೂನಾ ಕುದುರೆ ರೇಸ್‌' ಮತ್ತು 'ಟ್ರೈನ್ ಆರೈವಿಂಗ್ ಇನ್ ಚರ್ಚ್ ಗೇಟ್‌'. ಎರಡೂ 1898ರಲ್ಲಿ ತಯಾರಾದವು. ಆಂಡರ್‌ಸನ್ ವಿಶ್ವಖ್ಯಾತ ಜಾದೂಗಾರರಲ್ಲಿ ಒಬ್ಬ, ಸ್ಕಾಟ್‌ಲ್ಯಾಂಡಿನ ಪ್ರಜೆ. ಜಗತ್ತಿನಾದ್ಯಂತ ಸಿನಿಮಾವನ್ನು ಪರಿಚಯಿಸುವ ನಿಟ್ಟಿನಲ್ಲಿ ಶ್ರಮ ವಹಿಸಿದ ತಂತ್ರಗಾರ.

ಪಿ.ಆರ್.ರಾಮದಾಸ ನಾಯ್ಡು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com