ಅವನಿಲ್ಲದ ಹೊತ್ತು

ಅವನಿಲ್ಲದ ಹೊತ್ತು
Updated on: 

ಅವನ ಅ ನಿಲುವು ಮೊದಲ ನೋಟದಲ್ಲೇ ನನ್ನ ಸೆಳೆದಿಟ್ಟುಕೊಂಡಿತ್ತು. ಅವನು ನನ್ನ ಸಾಮೀಪ್ಯದಲ್ಲೇ ಸದಾ ಇರಬೇಕೆಂದುಕೊಂಡದ್ದೇ ಆ ಕ್ಷಣದಲ್ಲಿ. ಬೆಳ್ಳಕ್ಕಿಗಳ ಸಾಲುಗಳನ್ನು ನೋಡಿರಬೇಕಲ್ಲ? ಅದೂ ಗದ್ದೆಯ ಹಾಳಿಯ ಮೇಲೆ ನಿಂತು ಕೆಳಗಿನ ಕೆಸರಲ್ಲಿ ಹುದುಗಿರಬಹುದಾದ ಮರಿ ಮೀನುಗಳು, ಏಡಿಗಳಿಗೆ ಹೊಂಚುಹಾಕುತ್ತ ಬೆಳಗಿನ ಮಿರಿಮಿರಿ ಮಿಂಚುವ ಬಿಸಿಲಿಗೆ ಮಿಲಿಟರಿ ಶಿಸ್ತಿನಿಂದ ಮೈಯೊಡ್ಡಿ ನಿಂತಿರುತ್ತವಲ್ಲ, ಆ ಸನ್ನಿವೇಶವನ್ನೇ ನೆನಪಿಸುವ ಪ್ರಶಾಂತತೆ ಅವನ ಮೊಗದಲ್ಲಿ. ಅದೇ ಅಬೋಧ ನಗು. ಎಲ್ಲೋ ಇಂಟರ್‌ನೆಟ್ಟಿನಲ್ಲಿ ನೋಡಿದ ಯಾವುದೋ ದೇಶದ ಬೆಣ್ಣೆಮುದ್ದೆಯಂಥ ಮೊಗದ ಮಗುವಿನಂತೆ ಕಾಣುವ ಅವನ ಮೂತಿಯನ್ನೊಮ್ಮೆ ಕಚ್ಚಿಬಿಡಬಾರದೇಕೆ ಎಂದು ಎಷ್ಟೋ ಸಲ ಅನ್ನಿಸಿದ್ದರೂ ಯಾರು ಏನೆಂದುಕೊಂಡಾರು ಅಂತ ನನ್ನ ದುರಾಸೆಯನ್ನು ಹತ್ತಿಕ್ಕಿಕೊಂಡಿದ್ದೇನೆ. ಇವತ್ತಿಗೂ ಅವನೊಬ್ಬ ಎದುರಿಗೆ ಬಂದನೆಂದರೆ ಅದೆಂಥದೋ ಅವ್ಯಕ್ತ ಪುಳಕ. ಒಲಿದವನು ಕಳುಹಿಸಿದ ಎಸ್ಸೆಮ್ಮೆಸ್ ಅನ್ನು ಇನ್‌ಬಾಕ್ಸ್ ತೆರೆದು ಮತ್ತೆ ಮತ್ತೆ ನೋಡುವಂತೆ ಅವನೊಂದಿಗಿನ ಕ್ಷಣಗಳನ್ನು ಮತ್ತೆ ಮತ್ತೆ ನೆನೆದು ತಣ್ಣಗಾಗುತ್ತೇನೆ. ಅವನ ಮಿತಿಯಿಲ್ಲದ ಕುಣಿತ, ಅವನ ಗಾಂಭೀರ್ಯ, ಚಂಗನೆ ಜಿಗಿದು ಓಡುವ ಅವನ ಪರಿ, ಹೊಳೆಯುವ ಉಂಡೆಗಳಂತಿರುವ ಅವನ ಕಣ್ಣುಗಳು, ತೀಕ್ಷ್ಣತೆಯನ್ನೂ ಮೀರಿದ ಅವನ ಕಣ್ಣೋಟದ ಸೆಳೆತ, ನನ್ನ ಕಂಡೊಡನೆ ಓಡೋಡಿ ಬಂದು ಮುದ್ದಿಗಾಗಿಯೇ ಕಾತರಿಸುವ ಅವನ ಚಾಂಚಲ್ಯ, ನನ್ನ ತೊಡೆಯ ಮೇಲೆ ತಲೆ ಇಟ್ಟು ನೇವರಿಸಿಕೊಳ್ಳುತ್ತಾ ಕಣ್ಮುಚ್ಚಿ ವಾತ್ಸಲ್ಯವನ್ನು ಅನುಭವಿಸುವ ಅವನ ರೀತಿ... ಸಿಕ್ಕ ಕೆಲವೇ ದಿನಗಳಲ್ಲಿ ಯಾವ ಜನ್ಮದ ಬಂಧುವೋ ಅನ್ನಿಸಿಬಿಟ್ಟಿದೆ.
ಹೇಳಿದೆನಲ್ಲಾ ಅವನು ನನ್ನ ಜೀವ ಬಂಧು. ಇಷ್ಟು ಪ್ರೀತಿ ಮಾಡುತ್ತಿದ್ದರೂ, ಇಷ್ಟು ಸಲುಗೆಯಿದ್ದರೂ ಯಾವತ್ತಿಗೂ ಅವನು ನನ್ನ ಬಳಿ ಅನುಚಿತವಾಗಿ ವರ್ತಿಸಿಲ್ಲ. ಮಾತಿಗೊಮ್ಮೆ ಮೈ ಕೈ ಮುಟ್ಟೋದಿಲ್ಲ. ಮುನಿಸಿಕೊಂಡು ಓಡಿ ಹೋಗೋದಿಲ್ಲ. ಟೂ ಬಿಡುವುದಂತೂ ಇಲ್ಲವೇ ಇಲ್ಲ. ಒಮ್ಮೆಯೂ ನನ್ನ ಮೇಲೆ ರೇಗಿಲ್ಲ. ನಾನೂ ಹೀಗೆಯೇ ಇರಬೇಕು, ಹೀಗೆಯೇ ವರ್ತಿಸಬೇಕು, ನನ್ನನ್ನು ಮಾತ್ರವೇ ಪ್ರೀತಿಸಬೇಕು, ಬೇರಾರನ್ನೂ ಸಲುಗೆಯಿಂದ ಮಾತನಾಡಿಸಲೇಬಾರದು, ಫ್ರೆಂಡ್ಸ್, ಕ್ಲಾಸ್ಮೇಟ್ಸ್ ಅಂಥ ಸುತ್ತಬಾರದು ಇತ್ಯಾದಿ ಇತ್ಯಾದಿ ಒಂದು ದಿನವೂ ಗಂಡು ಹುಡುಗರಂತೆ ರಿಸ್ಟ್ರಿಕ್ಟ್ ಮಾಡಿದ್ದೇ ಇಲ್ಲ. ನಾನೇನು ಮಾಡಿದರೂ ಅವನಿಗೆ ಚೆಂದವೇ. ನಾನಿದ್ದರೆ ನನ್ನ ಹಿಂದು ಮುಂದೆಯೇ ಸುತ್ತುತ್ತ ಇದ್ದುಬಿಡುತ್ತಾನೆ. ಆದರೆ ಯಾವತ್ತಿಗೂ ಇರಿಟೇಟೆಬಲ್ ಅಂತ ಅನ್ನಿಸುವಂತೆ ಮಾಡಿಲ್ಲ. ನಾನು ಅವನನ್ನು ಗಮನಿಸುತ್ತಿದ್ದರೆ, ಮುದ್ದು ಮಾಡುತ್ತಿದ್ದರೆ ಖುಷಿಪಡುತ್ತಾನೆ. ಅದಿಲ್ಲದಿದ್ದರೂ ಸುಮ್ಮನೇ ಸುಳಿದಾಡುತ್ತಿರುತ್ತಾನೆಯೇ ವಿನಾ ಅದಕ್ಕಾಗಿಯೇ ಕ್ಯಾತೆ ತೆಗೆದು ರಾದ್ಧಾಂತ ಮಾಡೋ ಪ್ರಶ್ನೆ ಇಲ್ಲ ಬಿಡಿ. ಸದಾ ನನ್ನನ್ನು ಹಿಂಬಾಲಿಸಲು ಉತ್ಸುಕನೇ. ಹಾಗೆಂದು ಅದು ಅವನ ಗೂಢಚರ್ಯೆ ಬುದ್ಧಿ ಅಲ್ಲ. ನನ್ನ ಕಾಯುವ, ನನ್ನನ್ನು ಅನುಮಾನಿಸುವ ರೀತಿಯಲ್ಲಿ ಎಂದಿಗೂ ವರ್ತಿಸಿಲ್ಲ ಬಿಡಿ. ನನಗೆ ಗೊತ್ತು, ನಾನವನನ್ನು ಇಷ್ಟಪಡುವುದಕ್ಕಿಂತ ಹೆಚ್ಚು, ಪ್ರಾಣ ಹೋಗೋವಷ್ಟು ಅವನು ನನ್ನನ್ನು ಇಷ್ಟಪಡುತ್ತಾನೆ. ನಾನಿದ್ದರೆ ಅವನು ಚಿಗರೆ ಮರಿಯಾಗಿರುತ್ತಾನೆ. ಇಲ್ಲದಿದ್ದರೆ ಬೇಸರ ಅಂತೂ ಆಗೇ ಆಗುತ್ತದೆ. ನಾನು ಕಾಣದ ಕ್ಷಣದ ವಿರಹ ಅವನ್ನು ಕಾಡೇ ಕಾಡುತ್ತದೆ. ಹಾಗೆಂದು ತಾಳ್ಮೆ ಕಳೆದುಕೊಂಡು ಎಲ್ಲರ ಮೇಲೆ ರೇಗುತ್ತಾ ಹುಚ್ಚನಂತೆ ವರ್ತಿಸದ ಸಮಚಿತ್ತ ಅವನದ್ದು. ನನ್ನ ಅವನ ಸಂಬಂಧಕ್ಕೊಂದು ಹೆಸರನ್ನು ಬಹಳಷ್ಟು ಬಾರಿ ಹುಡುಕಿದ್ದೇನೆ. ಅದೆಲ್ಲಿದ್ದನೋ ಅದೆಲ್ಲಿಂದ ಬಂದನೋ ಅಂತೂ ಅವನನ್ನು ಭೇಟಿಯಾದ ಮರುಕ್ಷಣದಿಂದಲೇ ನಮ್ಮ ನಡುವೆ ಹೇಳಲಾಗದ ತಾದಾತ್ಮ್ಯ. ನಂಗೇನೇ ಆದರೂ ಸಹಾಯಕ್ಕೆ ಬಂದು ನಿಲ್ಲುತ್ತಾನೆ. ಕೋತಿ, ಕತ್ತೆ ಅಂತೆಲ್ಲ ಬಯ್ಯಸಿಕೊಂಡೂ ಒಂಚೂರೂ ಕೋಪ ಮಾಡಿಕೊಳ್ಳದೇ ಕಣ್ಣಲ್ಲೇ ನಗುತ್ತಾನೆ. ತೀರಾ ಬೇಸರದಲ್ಲಿದ್ದರೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವನೂ ಮೂಲೆ ಸೇರಿ ಮಲಗಿಬಿಡುತ್ತಾನೆ. ನಾನು ಕೋಪಿಸಿಕೊಂಡು ರೇಗಿದಾಗಲೆಲ್ಲ ಕಣ್ಣಲ್ಲಿ ನೀರು ತುಂಬಿಕೊಂಡು ಮೂಲೆಗೆ ಕುಳಿತೇ ದಿಟ್ಟಿಸುತ್ತಾನೆ. ನನ್ನ ಕೋಪ ತಣಿದು ಮತ್ತೆ ಬಳಿ ಕರೆಯುವವರೆಗೆ ಅವನ ಭಂಗಿ ಬದಲಾಗೋಲ್ಲ. ನನಗವನು ಬಂಧುವಲ್ಲ, ಅಣ್ಣ-ತಮ್ಮನಲ್ಲ, ಪ್ರೇಮಿಯಲ್ಲ ಒಂದು ರೀತಿಯಲ್ಲಿ ಬೆಸ್ಟ್ ಫ್ರೆಂಡ್ ಅಂತೀವಲ್ಲ ಪಕ್ಕಾ ಹಾಗೆಯೇ, ನನ್ನ ಜೀವಕ್ಕಿಂತ ಇಷ್ಟ.
ಇಂಥ ನಮ್ಮಿಬ್ಬರ ಪ್ರೀತಿಗೆ, ಮಧುರ ಬಾಂಧವ್ಯಕ್ಕೆ ಅದ್ಯಾವ ದೆವ್ವದ ಕಣ್ಣು ಬಿದ್ದುಬಿಟ್ಟಿತೋ, ಏನೋ ಮೊನ್ನೆ ನಾನು ಸ್ಕೂಲ್‌ನಿಂದ ಬಂದು ಮಾತಾಡಿಸಿ ಮನೆ ಸೇರಿಕೊಂಡದ್ದೇ ಕೊನೆ. ಮರುದಿನ ಬೆಳಗ್ಗೇಳುವಾಗ ಅವನು ಅವನಾಗಿಯೇ ಇರಲಿಲ್ಲ. ಏನೊಂದನ್ನೂ, ತನ್ನ ಯಾವ ನೋವನ್ನೂ ಒಂದು ದಿನವೂ ಬಾಯಿಬಿಟ್ಟು ಹೇಳಿಕೊಳ್ಳದ ಅವನು ಎಂದಿಗಿಂತಲೂ ಡಲ್ ಆಗಿ ಕಾಣಿಸಿದ್ದ. ಅನ್ನ ನೀರು ಮುಟ್ಟಿಯೇ ಎಷ್ಟೋ ದಿನಗಳಾಯಿತೆಂಬಂತೆ ಬಳಲಿ ಹೋಗಿದ್ದ. ಚಾಕೋಲೇಟ್, ಬಿಸ್ಕೆಟ್ ಅನ್ನು ನನ್ನ ಕೈಯಲ್ಲಿ ಕಂಡರೆ ಕೊಡುವ ಮುನ್ನವೇ ಕಿತ್ತುಕೊಳ್ಳುತ್ತಿದ್ದ ತುಂಟ, ಇವತ್ತು ನಾನಾಗೇ ಕೈಚಾಚಿದರೂ ತಿನ್ನುವ ಮೂಡ್‌ನಲ್ಲಿರಲಿಲ್ಲ. ಮೈಮುಟ್ಟಿ ನೋಡಿದೆ. ಜ್ವರ ಸಿಕ್ಕಾಪಟ್ಟೆ ಇತ್ತು. ಸಣ್ಣಗೆ ನರಳುತ್ತಿದ್ದ, ಕಾಲ್‌ಫಾಲ್ ಕೊಟ್ಟು ಹೊರಗೆಲ್ಲೂ ಸುತ್ತಲು ಹೋಗಬೇಡವೆಂದು ಗದರಿ ಸ್ಕೂಲ್ಗೆ ಹೋಗಿದ್ದೆ. ಸಂಜೆ ಬರುವಾಗ ಮತ್ತೂ ಪರಿಸ್ಥಿತಿ ಹದಗೆಟ್ಟಿತ್ತು. ಬಾಯಿಂದ ಜೊಲ್ಲು ಸುರಿಯುತ್ತಿತ್ತು. ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ವರ್ತಿಸುತ್ತಿದ್ದ. ಕಣ್ಣುಗಳು ಕೆಂಡದುಂಡೆಯಾಗಿದ್ದವು. ಮಧ್ಯಾಹ್ನ ಹಾಲು ಕೊಡಲು ಹೋಗಿದ್ದ ಅಮ್ಮನಿಗೇ ಗದರಿಸಿದ್ದನಂತೆ. ಛೇ, ತಾಳ್ಮೆಯ ಸಾಕಾರಮೂರ್ತಿಯಂತಿದ್ದ ಅವನ ಇಂಥ ವರ್ತನೆಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಬೆಳಗ್ಗೆವರೆಗೆ ನೋಡಿ ಡಾಕ್ಟರ್ ಕರೆಸೋಣ ಎಂದು ಸಮಾಧಾನಿಸಿದರು ಪಪ್ಪ. ರಾತ್ರಿ ಹೊರಳಾಟದಲ್ಲೇ ಕಳೆಯಿತು. ಅದೆಷ್ಟೊತ್ತಿಗೆ ನಿದ್ದೆ ಹತ್ತಿತ್ತೋ, ಎಚ್ಚರಾಗುವಾಗ ಎಂಟಾಗಿ ಹೋಗಿತ್ತು. ಹೊರಗೇನೋ ಗದ್ದಲ ಕೇಳಿ ದಡಬಡಿಸಿ ಓಡಿ ಹೋದರೆ ಪ್ರಾಣಿದಯಾ ಸಂಘದ ವ್ಯಾನ್‌ಗೆ ಅವನ್ನು ಹಿಡಿದು ತುಂಬುತ್ತಿದ್ದರು. ನನ್ನ ಮುದ್ದಿನ ನಾಯಿಮರಿಗೆ ರೇಬೀಸ್ ಅನ್ನೋದು ಕೇಳಿಯೇ ಹೃದಯ ಬಾಯಿಗೆ ಬಂದಂತಾಯಿತು. ಒಂಚೂರೂ ಕರುಣೆ ಇಲ್ಲದವರಂತೆ ಅವನ್ನು ಹೇರಿಕೊಂಡ ವ್ಯಾನ್ ಹೊರಟುಬಿಟ್ಟಿತು. 'ಅವನಿಗೆ ಹುಷಾರಾದರೆ ಕರಕೊಂಡು ಬಂದುಬಿಡಿ. ಆಗದಿದ್ದರೆ ಏನನ್ನೂ ಹೇಳಲೇಬೇಡಿ, ಪ್ಲೀಸ್... ಮಗಳನ್ನು ಸಮಾಧಾನಿಸೋದಕ್ಕೇ ಆಗಲ್ಲ' ಅಂತ ಪಪ್ಪ ಪಿಸುಗುಟ್ಟಿದ್ದು ಕೇಳಿಸದಿರಲಿಲ್ಲ. ಮತ್ತೆ ಅವನನ್ನು ನೋಡುವ ಆಸೆ ಅಲ್ಲಿಯೇ ಕಮರಿ ಹೋಗಿತ್ತು. ಇಷ್ಟು ಬೇಗ ನನ್ನ ಅವನ ಬಾಂಧ್ಯವ್ಯ ಕೊನೆಯಾಗುತ್ತದೆ ಎಂದು ಎಣಿಸದ ಮನಸ್ಸು ಬಗ್ಗಡವೆದ್ದು ಹೋಗಿದೆ. ಯಾರಲ್ಲಿ ಹೇಳಿಕೊಳ್ಳಲಿ?

-  ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com