ಜೀವಪರ ಕತೆಗಳು

Updated on: 

'ತಂಗಡಿ ಹುವ್ವ' ಎಂಬ ಕಥಾಸಂಕಲನದ ಮೂಲಕ ಬೆಳಕಿಗೆ ಬಂದ ಸ. ರಘುನಾಥ ಅವರು ಈಗ ತಮ್ಮ ಎರಡನೇ ಕಥಾ ಸಂಕಲನ 'ಬಿರೇಬೆತ್ಲೆ ವೆಂಕಟಸಾಮಿ ಮತ್ತು ಇತರ ಕಥೆಗಳು' ಪ್ರಕಟಿಸಿದ್ದಾರೆ. ಇದರಲ್ಲಿ ಹನ್ನೊಂದು ಕತೆಗಳಿವೆ. ಕತೆಗಳೆಂದರೆ ಎಂದೂ ಮುಗಿಯುವಂಥದ್ದಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅದು ಮುಂದುವರಿಯುತ್ತಲೇ ಇರುತ್ತದೆ. ಹಿಂದೆ ಯಾರೋ ಎಲ್ಲಿಯೋ ಯಾವ ರೂಪದಲ್ಲಿಯೋ ಹೇಳಿದ್ದ ಕತೆಗಳನ್ನು ಇನ್ನೊಬ್ಬರು ಇನ್ನೆಲ್ಲಿಯೋ ಇನ್ಯಾವುದೋ ರೂಪದಲ್ಲಿ ಹೇಳುತ್ತಿರುತ್ತಾರೆ. ಸ. ರಘುನಾಥರ ಕತೆಗಳಲ್ಲಿ ಸಾರ್ವಕಾಲಿಕವಾದಂಥ ಮೌಲ್ಯಗಳು ಪ್ರತಿಪಾದನೆಯಾಗಿವೆ. ಇಲ್ಲಿಯ 'ಬೆಟ್ಟದ ಕಥೆ'ಯಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ; 'ಅಮ್ಮ ದೇವಲೋಕದ ಕಥೆ ಹೇಳೋವಾಗ ಹೇಳಿದ್ಲು, ದೇವಲೋಕದಲ್ಲಿ ಕಲ್ಪವೃಕ್ಷ ಬಿಟ್ರೆ ಬೇರೆ ಮರ ಇಲ್ವಂತೆ! ಗಂಗಾದೇವಿ ಭೂಮಿಗೆ ಬಂದ್ಮೇಲೆ ಅಲ್ಲಿ ನದೀನೇ ಇಲ್ವಂತೆ?', 'ಹೌದು. ಅದಕ್ಕೇ ಬೆಟ್ಟ ಹತ್ತಿದ ಮೇಲೆ, ಅದು ಆಕಾಶದ ವರೆಗೂ ಬೆಳೀದೆ ಇದ್ದಿದ್ದು ಒಳ್ಳೇದೆ ಆಯ್ತು ಅನ್ನಿಸಿತು. ಏಕೆಂದ್ರೆ ಮರಗಳು, ನದಿಗಳು ಇಲ್ಲದಿದ್ರೆ ಅದು ದೇವಲೋಕಾನೆ ಆಗಿದ್ರೂ ಸುಂದ್ರವಾಗಿರೊಲ್ಲ. ಗಿಡಮರಗಳಿದ್ರೇನೆ ಚೆನ್ನಾ. ಇವೆಲ್ಲ ಇರೋದ್ರಿಂದ್ಲೇ ಭೂಮಿ ಸುಂದರವಾಗಿರೋದು. ನಾವೆಲ್ಲ ಸುಖವಾಗಿರಬೇಕಾದ್ರೆ ಇವೆಲ್ಲ ಇರಬೇಕು.'
'ಹಾಗಾದ್ರೆ ನಂಗೂ ದೇವಲೋಕ ಬೇಡ ಮಾಮ'- ಹೀಗೆ ನೆಲದ, ಮನುಷ್ಯರ ಮಹತ್ವವನ್ನು ಹೇಳುವ ಇಲ್ಲಿಯ ಕತೆಗಳು ಜೀವಪರವಾಗಿವೆ.
ಕೃತಿ: ಬಿರೇಬೆತ್ಲೆ ವೆಂಕಟಸಾಮಿ, ಪ್ರಕಾರ: ಕತೆಗಳು
ಏಕೆ ಓದಬೇಕು?: ಕತೆ ಓದುವ ಖುಷಿಗೆ
ಪ್ರ: ಕನ್ನಡನಾಡು ಪ್ರಕಾಶನ, ಗುಲ್ಬರ್ಗ, ಪುಟಗಳು 90 ಬೆಲೆ ರು. 80

ಸತ್ಯಬೋಧ ಕತೆಗಳು
ಕನ್ನಡ ಪತ್ರಿಕೆಗಳಲ್ಲಿ ಸತ್ಯಬೋಧ ಅವರ ಹಲವು ಕತೆಗಳು ಪ್ರಕಟವಾಗಿವೆ. ಇದೀಗ 'ಅವಳ ಕಥೆ' ಹೆಸರಿನಲ್ಲಿ ಸಂಕಲನ ರೂಪದಲ್ಲಿ ಅವರ ಕತೆಗಳು ಬಂದಿವೆ. ಸಮಾಜದ ವಿವಿಧ ವರ್ಗದವರು ಇಲ್ಲಿ ವಸ್ತುವಾಗಿದ್ದಾರೆ. ಇದು ಕತೆಗಾರರ ಅನುಭವ ವಿಸ್ತಾರವನ್ನು ಸೂಚಿಸುತ್ತದೆ. ಭಾವಪರವಶತೆಯನ್ನು ಇಲ್ಲಿಯ ಹಲವು ಕತೆಗಳಲ್ಲಿ ನಾವು ಕಾಣಬಹುದು. ಅನಿರೀಕ್ಷಿತ ತಿರುವುಗಳು ಕೆಲವು ಕತೆಗಳಲ್ಲಿ ಇವೆ. ಕೊನೆ ತನಕ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವ ಪತ್ತೇದಾರಿ ಶೈಲಿಯ ಕೆಲವು ಕತೆಗಳೂ ಇಲ್ಲಿವೆ. ಹೊಸ ರೀತಿಯಲ್ಲಿ ಕತೆಕಟ್ಟಬೇಕೆಂಬ ಹಟ ಸತ್ಯಬೋಧ ಅವರಲ್ಲಿ ಇಲ್ಲ. ಸಾಂಪ್ರದಾಯಿಕ ಕಥನಶೈಲಿಯೇ ಅವರದು. ಮಾನವೀಯ ಗುಣಗಳನ್ನು ಎತ್ತಿಹಿಡಿಯುವುದಕ್ಕೆ ಅವರು ಆದ್ಯತೆ ನೀಡಿದ್ದಾರೆ. ನವೋದಯ, ನವ್ಯ, ಬಂಡಾಯ ಇತ್ಯಾದಿ ಸಾಹಿತ್ಯ ಸಿದ್ಧಾಂತಗಳಿಗೆ ಕಟ್ಟುಬೀಳದೆ ಕೇವಲ ಕತೆ ಹೇಳುವುದನ್ನೇ ಮುಖ್ಯವಾಗಿಟ್ಟುಕೊಳ್ಳುವ ಸತ್ಯಬೋಧರು ಆ ಕಾರಣಕ್ಕಾಗಿಯೇ ಇಲ್ಲಿ ಯಶಸ್ಸು ಸಾಧಿಸಿದ್ದಾರೆ.
ಕೃತಿ: ಅವಳ 'ಕಥೆ', ಪ್ರಕಾರ: ಕತೆಗಳು
ಏಕೆ ಓದಬೇಕು?: ಕತೆ ಓದುವ ಖುಷಿಗೆ
ಪ್ರ: ವ್ಯಾಸ ಭಂಡಾರ, ಬೆಂಗಳೂರು, ಪುಟಗಳು 168 ಬೆಲೆ ರು. 90

ಮಾನಸ ಸರೋವರ
ಕನ್ನಡದಲ್ಲಿ ಪ್ರವಾಸ ಸಾಹಿತ್ಯಕ್ಕೇನೂ ಬರವಿಲ್ಲ. ಸಾಹಿತಿಗಳಾದವರು ಒಂದು ಬಾರಿ ಪಕ್ಕದ ಊರಿಗೆ ಹೋಗಿಬಂದರೂ ಒಂದು ಪ್ರವಾಸ ಕಥನವನ್ನು ಸಿದ್ಧಮಾಡಿಬಿಡುತ್ತಾರೆ. ಆದರೆ ಈ ಪ್ರವಾಸ ಕಥನಕ್ಕೆ ವಿಶೇಷತೆ ಇದೆ. ಇದನ್ನು ಬರೆದವರು ಸಿದ್ಧಪ್ರಸಿದ್ಧ ಸಾಹಿತಿಗಳೇನಲ್ಲ. ಕೃಷಿ ಮತ್ತು ವ್ಯಾಪಾರವನ್ನು ಮಾಡಿಕೊಂಡು ಸುಖದಿಂದ ಇದ್ದ ಸಾಮಾನ್ಯ ವ್ಯಕ್ತಿ ಮಾನಸ ಸರೋವರಕ್ಕೆ ಮೂರು ಬಾರಿ ಯಾತ್ರೆಯನ್ನು ಕೈಗೊಂಡು ತಮಗಾದ ಅನುಭವವನ್ನು ನಿರಾಭರಣ ಸುಂದರವಾದ ಭಾಷೆಯಲ್ಲಿ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಶಿವಮೊಗ್ಗದ ಎಚ್. ಸುಬ್ಬಯ್ಯನವರು ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರಲ್ಲ. ಬದುಕೇ ಅವರಿಗೆ ವಿಶ್ವವಿದ್ಯಾನಿಲಯ. ಅನುಭವವೇ ಅವರ ಪದವಿ. ಪ್ರಸ್ತಾವನೆಯಲ್ಲಿ ತಮ್ಮ ಬದುಕಿನ ವಿವರಗಳನ್ನು ಅವರು ಸಂಕ್ಷಿಪ್ತವಾಗಿ ನೀಡಿದ್ದಾರೆ. ಸುಬ್ಬಯ್ಯನವರಿಗೆ ಅತೀಂದ್ರಿಯ ಅನುಭವಗಳು ಬದುಕಿನಲ್ಲಿ ಆಗಿವೆ. ಹೀಗಾಗಿ ಅವರಿಗೆ ದೇವರಲ್ಲಿ ಭಕ್ತಿ. ಈ ಕಾರಣಕ್ಕಾಗಿಯೇ ಅವರ ಪ್ರವಾಸ ಕಥನ ದೇವರನ್ನು ಹುಡುಕುವ ಒಂದು ಪ್ರಯತ್ನದ ಫಲವಾಗಿದೆ.
ಈ ಕೃತಿಯಲ್ಲಿ ಅಧ್ಯಾಯಗಳನ್ನು ಅವರು 'ಹೆಜ್ಜೆ'ಗಳಲ್ಲಿ ನೀಡಿರುವುದು ಸೊಗಸಾಗಿದೆ. ಹೆಜ್ಜೆ ಇಡುವ ಮೂಲಕವೇ ಪಯಣ ಎನ್ನುವುದನ್ನು ಗಮನಿಸಿದಾಗ ಇದು ಅರ್ಥಪೂರ್ಣವೆನ್ನಿಸುವುದು. ಕೈಲಾಸ ಪರ್ವತ ಯಾತ್ರೆ ಸುಲಭದ್ದಲ್ಲ. ಬೇರೆ ದೇಶ. ಪಾಸ್‌ಪೋರ್ಟ್ ಬೇಕು. ವೀಸಾ ಸಿಗಬೇಕು. ಪ್ರತಿಕೂಲ ಹವಾಮಾನ. ಉತ್ತಮವಾದ ಟ್ರಾವೆಲ್ಸ್ ಸಂಸ್ಥೆಯ ಸಹಯೋಗ ಸಿಕ್ಕವನು ಪುಣ್ಯವಂತ.
ಈ ಯಾತ್ರೆಗೆ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ವಿವರಗಳಿಂದ ಹಿಡಿದು ಅಲ್ಲಿಯ ಜನರು, ಪ್ರಕೃತಿ, ಸರೋವರಗಳು, ಗಿರಿಗಳು, ನದಿಗಳು, ಇವುಗಳಿಗೂ ದೇವರುಗಳಿಗೂ ಇರುವ ಸಂಬಂಧ, ಹಿಂದೂ ಪುರಾಣದ ಕತೆಗಳ ಸಂಬಂಧ ಹೀಗೆ ಎಲ್ಲವನ್ನೂ ಬೆಸೆಯುತ್ತ ಹೋಗುತ್ತಾರೆ. ಮೂರು ಬಾರಿ ಮಾನಸ ಸರೋವರ ಯಾತ್ರೆಯನ್ನು ಮಾಡಿರುವ ಸುಬ್ಬಯ್ಯನವರು ನೀಡಿರುವ ಮಾಹಿತಿ ಅಧಿಕೃತವೂ ಮತ್ತು ಹೊಸದಾಗಿ ಅಲ್ಲಿಗೆ ಹೋಗುವವರಿಗೆ ಮಾರ್ಗದರ್ಶಕವಾಗಿಯೂ ಇದೆ.
ಕೃತಿ: ಕೈಲಾಸದ ಸನ್ನಿಧಿಯಲ್ಲಿ, ಪ್ರಕಾರ: ಪ್ರವಾಸಕಥನ, ಏಕೆ ಓದಬೇಕು?: ಮಾನಸ ಸರೋವರದ ಬಗ್ಗೆ ಅರಿಯಲು, ಪ್ರ: ಜನಪ್ರತಿನಿಧಿ ಪ್ರಕಾಶನ, ಕುಂದಾಪುರ, ಪುಟಗಳು 286,
ಬೆಲೆ ರು. 300

ಮರಳುಗಾಡಿನ ಪ್ರವಾಸ
'ಕೈಲಾಸ ಮಾನಸ', 'ಗಾಂಧಿ ಕೃಷ್ಣರ ನಾಡಿನಲ್ಲಿ' ಮೊದಲಾದ ಪ್ರವಾಸ ಕಥನಗಳನ್ನು ಬರೆದು ಪ್ರಸಿದ್ಧರಾಗಿರುವ ವೆಂಕಟೇಶ ಮಾಚಕನೂರ ಅವರು ಇದೀಗ 'ಮರಳುಗಾಡಿನ ಬೆಡಗು' ಕೃತಿಯ ಮೂಲಕ ರಾಜಸ್ಥಾನದ ಪ್ರವಾಸಿ ತಾಣಗಳ ದರ್ಶನ ಮಾಡಿಸಿದ್ದಾರೆ. ಇದರಲ್ಲಿ ಅವರು ಕೇವಲ ಪ್ರೇಕ್ಷಣೀಯ ಸ್ಥಳಗಳ ಪಟ್ಟಿ ಮಾಡುವುದಕ್ಕೆ ಮಹತ್ವ ನೀಡಿಲ್ಲ. ಇದರಲ್ಲಿ ಚರಿತ್ರೆ ಇದೆ. ಸಂಸ್ಕೃತಿಯ ಕಥನವೂ ಇದೆ. ವಸ್ತುನಿಷ್ಠ ಮಾಹಿತಿಯೂ ಇದೆ. ಓದುಗರನ್ನು ಹಿಡಿದಿಟ್ಟುಕೊಳ್ಳಬಲ್ಲ ಸೊಗಸಾದ ಭಾಷೆ ಇದೆ. ಇತರ ಪ್ರವಾಸಿಗರು ಇದನ್ನು ಓದಿದರೆ ತಾವೂ ಒಮ್ಮೆ ಅಲ್ಲಿಗೆ ಹೋಗಬೇಕೆಂಬ ಬಯಕೆಯನ್ನು ಅವರಲ್ಲಿ ಹುಟ್ಟುಹಾಕದೆ ಇರದು. ಪ್ರವಾಸಿಗರಿಗೆ ಇದೊಂದು ಉಪಯುಕ್ತ ಕೈಪಿಡಿ. ರಾಜಸ್ಥಾನದ ಈಗಿನ ಪ್ರಸಿದ್ಧ ಪ್ರವಾಸಿತಾಣಗಳ ವಿವರಗಳ ಜೊತೆಗೆ ಅವುಗಳ ಇತಿಹಾಸವನ್ನೂ ಸಂಕ್ಷಿಪ್ತವಾಗಿ ಅವರು ವಿವರಿಸಿದ್ದಾರೆ. ಪ್ರವಾಸವನ್ನು ಹೇಗೆ ಮಾಡಿದರೆ ಪ್ರಯಾಸವಾಗಲಾರದು ಎಂಬುದರ ಸೂಕ್ಷ್ಮ ಮಾಹಿತಿಯೂ ಇಲ್ಲಿದೆ. ರಾಜಸ್ಥಾನದಲ್ಲಿ ನೀರನ್ನು ಹೇಗೆ ಮಿತವಾಗಿ ಬಳಸುತ್ತಾರೆ ಎಂಬ ವಿವರವನ್ನು ನೀಡುತ್ತ ನಾವು ಹೇಗೆ ನೀರನ್ನು ದುಂದು ಮಾಡುತ್ತೇವೆ ಎಂಬುದನ್ನು ಹೇಳುತ್ತಾರೆ. ಪ್ರವಾಸಗಳು ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸಬಲ್ಲ ಸಾಧನ ಎಂಬ ಪ್ರತಿಪಾದನೆ ಇಲ್ಲಿದೆ.
ಕೃತಿ: ಮರಳುಗಾಡಿನ ಬೆಡಗು, ಪ್ರಕಾರ: ಪ್ರವಾಸ ಕಥನ, ಏಕೆ ಓದಬೇಕು?: ರಾಜಸ್ಥಾನವನ್ನು ಅರಿಯಲು, ಪ್ರ: ಲೋಹಿಯಾ ಪ್ರಕಾಶನ, ಬಳ್ಳಾರಿ, ಪುಟಗಳು 144 ಬೆಲೆ ರು. 75

ವೀಣಾಲೋಕ
ಕನ್ನಡ ಬರೆಹಗಾರ್ತಿಯರಲ್ಲಿ ವಿಶಿಷ್ಟರಾಗಿರುವ ವೀಣಾ ಬನ್ನಂಜೆಯವರ ಅಂಕಣ ಬರೆಹಗಳ ಸಂಕಲನ 'ಲೋಕಾಂತ'ದ ಬರೆಹಗಳು 'ಕನ್ನಡಪ್ರಭ'ದಲ್ಲಿ ಪ್ರಕಟವಾದವು. ವೀಣಾ ಬನ್ನಂಜೆ ಅಂತರ್ಮುಖಿಯಾಗಿ ಬರೆಯುತ್ತಾರೆ. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವವರಲ್ಲ. ಅಧ್ಯಾತ್ಮದ ಅವರ ಹಂಬಲ ಇಲ್ಲಿಯ ಬರೆಹಗಳ ಸಾಲುಸಾಲುಗಳಲ್ಲಿಯೂ ಅನುಭವಕ್ಕೆ ಬರುವುದು. ವೀಣಾ ಬನ್ನಂಜೆಯವರ ಭಾಷೆಗಿರುವ ಸೌಷ್ಟವ ಯಾರನ್ನಾದರೂ ಓದಿಗೆ ಸೆಳೆಯುವಂಥದ್ದು. 'ಆ ಹಾಡುಗಳಲ್ಲಿ ಪಾಡುಗಾಯಿ ಮಾಡಬಲ್ಲ ಶಕ್ತಿಯಿದೆ!' ಎಂಬ ಮೊದಲ ಲೇಖನದಲ್ಲಿ ದೇವರು ಮತ್ತು ಭಕ್ತರ ನಡುವಿನ ಸಂಬಂಧದ ಸೂಕ್ಷ್ಮವನ್ನು ಒರೆಗೆ ಹಚ್ಚಿದ್ದಾರೆ. ದೇವರೊಬ್ಬನೇ ಪುರುಷ. ಆತನನ್ನು ಒಲಿಸಿಕೊಳ್ಳಬೇಕೆಂದರೆ ಆತನ ಭಕ್ತರೆಲ್ಲ ಸ್ತ್ರೀಯರಾಗಬೇಕು. ಪ್ರೇಮಿ-ಪ್ರೇಯಸಿಯರ ನಡುವಿನ ಉತ್ಕಟವಾದ ಸೆಳೆತವಿದೆಯಲ್ಲ ಅದೇ ಸೆಳೆತ ದೇವರು- ಭಕ್ತರ ನಡುವಿನದು ಎಂಬ ಸತ್ಯವನ್ನು ತುಂಬ ಆಕರ್ಷಕವಾಗಿ ಹೇಳಿದ್ದಾರೆ. ಇಲ್ಲಿಯ 23 ಬರೆಹಗಳೂ ಜೀವನ ಸತ್ಯದ ಶೋಧವನ್ನು ನಡೆಸಿವೆ.
ಕೃತಿ: ಲೋಕಾಂತ
ಪ್ರಕಾರ: ಅಂಕಣ ಬರೆಹ
ಏಕೆ ಓದಬೇಕು?: ವೀಣಾಂತರಂಗ ಅರಿಯಲು
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 144 ಬೆಲೆ ರು. 120

ಅಸೀಮ ಅರವಿಂದ
ಕನ್ನಡದಲ್ಲಿ ದಲಿತ ಚಿಂತನೆಯ ಪ್ರಮುಖರಲ್ಲಿ ಒಬ್ಬರಾದ ಡಾ.ಅರವಿಂದ ಮಾಲಗತ್ತಿಯವರ 'ಸೀಮಾತೀತ ವಿಮರ್ಶೆ' ದಲಿತ ಸಾಹಿತ್ಯ ವಿಮರ್ಶೆಗೆ ಹೊಸ ಮಾನದಂಡಗಳನ್ನು ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿದೆ. ಇದೊಂದು ಸೈದ್ಧಾಂತಿಕ ಪ್ರತಿಪಾದನೆ. ಸೀಮಾತೀತ ವಿಮರ್ಶೆಯ ಕುರಿತು ಮಾಲಗತ್ತಿಯವರ ಚಿಂತನೆಗಳನ್ನು ಆಗಾಗ ಒರೆಗೆ ಹಚ್ಚಿ ಡಾ.ಎನ್.ಎಸ್.ಶಂಕರೇಗೌಡ, ಡಾ.ಬಿ.ಸಿ.ದೊಡ್ಡೇಗೌಡ, ಡಾ.ಎನ್.ಸಿ.ವೆಂಕಟರಾಜು ಮತ್ತು ಡಾ. ಕೆ.ಕೇಶವ ಶರ್ಮ ಅವರ ಬರೆದ ಲೇಖನಗಳನ್ನು ಇದರಲ್ಲಿ ಅನುಬಂಧದ ರೂಪದಲ್ಲಿ ಕೊಟ್ಟಿರುವುದರಿಂದ ಕೃತಿಗೆ ಒಂದು ಸಮಗ್ರತೆ ಒದಗಿದೆ. ಇವರ ಲೇಖನಗಳು ಸೀಮಾತೀತ ವಿಮರ್ಶೆಯ ಪರಿಕಲ್ಪನೆಯ ಭಿನ್ನ ಸಾಧ್ಯತೆಗಳ ಬಗ್ಗೆ ನಿರೂಪಿಸುತ್ತವೆ. ಕನ್ನಡ ವಿಮರ್ಶೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವದಲ್ಲಿರುವಾಗ ಈ ದೇಸೀ ಚಿತನೆಯ, ಯಾವುದೇ ಸ್ಥಾಪಿತ ಚಿಂತನೆಯ ಸೀಮೆಗೆ ಒಳಪಡದ ವಿಮರ್ಶೆಯ ಪರಿಕಲ್ಪನೆ ಹೊಸದೆನಿಸುತ್ತದೆ. ಅವರ ತಕರಾರಾತ್ಮಕ ಅಭಿಪ್ರಾಯಗಳು ಹೊಸ ಪೀಳಿಗೆಯ ವಿಮರ್ಶಕರ ಪ್ರಜ್ಞೆಯನ್ನು ಎಚ್ಚರಿಸುತ್ತವೆ.
ಕೃತಿ: ಸೀಮಾತೀತ ವಿಮರ್ಶೆ
ಪ್ರಕಾರ: ವಿಮರ್ಶೆ
ಏಕೆ ಓದಬೇಕು?: ವಿಮರ್ಶೆಯ ಹೊಸ ವಿಚಾರ ಅರಿಯಲು
ಪ್ರ: ಪೂಜಾ ಮುದ್ರಣ ಮತ್ತು ಪ್ರಕಾಶನ, ಮೈಸೂರು, ಪುಟಗಳು 174 ಬೆಲೆ ರು. 140


-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com