ಲಾಮ ಸಂಭ್ರಮ

ಲಾಮ ಸಂಭ್ರಮ
Updated on: 

ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಮುಖದಲ್ಲಿ ಮತ್ತೆ ಮಂದಹಾಸದ ಮಿನುಗು. ಇಂತಹ ಸಡಗರ ತುಂಬಿದ ಭಾವನೆಗಳ ಮಹಾಪೂರದ ನಗು ಇಲ್ಲಿನ ಟಿಬೆಟಿಯನ್ನರಲ್ಲಿ ವರ್ಷಕ್ಕೊಮ್ಮೆ ಕಾಣಿಸುತ್ತದೆ. ಅವರ ಧಾರ್ಮಿಕ ಮುಖಂಡ, ನಡೆದಾಡುವ ದೇವರೆಂದೇ ಖ್ಯಾತವಾಗಿರುವ ದಲೈ ಲಾಮ ವರ್ಷಕ್ಕೊಮ್ಮೆ ಬರುವುದೇ ಅತ್ಯಂತ ದೊಡ್ಡ ಉತ್ಸಾಹಕ್ಕೆ ಕಾರಣ.
ಈ ವರ್ಷ ದಲೈ ಲಾಮ ಎಂದಿನಂತೆ ಬೈಲುಕುಪ್ಪೆಗೆ ಬಂದದ್ದು ಮಾತ್ರವಲ್ಲ, ಮೊದಲ ಬಾರಿ ಇಲ್ಲಿ ತಮ್ಮ ಜನ್ಮದಿನವನ್ನೂ ಆಚರಿಸಿಕೊಂಡರು. ಇದು ಟಿಬೆಟಿಯನ್ನರ ಸಂಭ್ರಮವನ್ನು ನೂರ್ಮಡಿಗೊಳಿಸಿತ್ತು. ಲಾಮ ಇಲ್ಲಿದ್ದ 9 ದಿನಗಳೂ ಟಿಬೆಟಿಯನ್ನರು ಬೇರೆಲ್ಲಾ ಕೆಲಸ ಬದಿಗೊತ್ತಿ ಮೊನಾಸ್ಟ್ರಿ ಬಳಿ ಸೇರುತ್ತಿದ್ದರು. ಹುಟ್ಟುಹಬ್ಬಕ್ಕೆ ಸೇರಿದ್ದ ಟಿಬೆಟಿಯನ್ನರ ಸಂಖ್ಯೆ 40 ಸಾವಿರ ಮೀರಿತ್ತು. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶಾಂತಿದೂತನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡರು. ಕರ್ನಾಟಕದ ವಿವಿಧೆಡೆ ನೆಲಸಿರುವ 40 ಸಾವಿರ ನಿರಾಶ್ರಿತ ಟಿಬೆಟಿಯನ್ನರ ಪರವಾಗಿ ಲಾಮ ನೀಡಿದ 'ಥ್ಯಾಂಕ್ಯು ಕರ್ನಾಟಕ' ಎಂಬ ಸ್ಮರಣಿಕೆಯನ್ನು ಸಿಎಂ ಪಡೆದರು.
ದಲೈ ಲಾಮ ಭಾವಚಿತ್ರ ಇಲ್ಲಿನ ಪ್ರತಿ ಮನೆಯಲ್ಲಿಯೂ ಕಂಗೊಳಿಸುತ್ತದೆ. ಅವರು ಇಲ್ಲಿದ್ದಷ್ಟೂ ದಿನ ಬೆಳಗ್ಗೆ 6 ಗಂಟೆಯಿಂದಲೇ ಬಿಕ್ಕುಗಳಿಗೆ ಪ್ರವಚನ ಆರಂಭಿಸುತ್ತಿದ್ದರು. ಪ್ರವಚನವನ್ನು 6 ಖಂಡಗಳ 67ಕ್ಕೂ ಹೆಚ್ಚಿನ ದೇಶಗಳ ರೇಡಿಯೋ ಕೇಂದ್ರಗಳು ಪ್ರಸಾರ ಮಾಡುತ್ತವೆ. ಲಾಮ ಪ್ರವಚನ ಕೇಳಲು ಜಗತ್ತಿನ ನೂರಾರು ದೇಶಗಳಿಂದ ಬೌದ್ಧರು ಇಲ್ಲಿಗೆ ಬರುತ್ತಾರೆ. 6 ಕಿ.ಮೀ. ದೂರದ ಕುಶಾಲನಗರದ ಎಲ್ಲಾ ವಸತಿಗೃಹಗಳೂ ಭರ್ತಿಯಾಗಿರುತ್ತವೆ.
ದಲೈ ಲಾಮ ಶಿಬಿರದಿಂದ ಹೊರಟಾಗ ಹಿರಿಯರ ಮುಖದಲ್ಲಿ ನೋವು ಮಡುಗಟ್ಟುತ್ತದೆ. ಮುಂದಿನ ವರ್ಷ ಲಾಮ ಮತ್ತೆ ಕ್ಯಾಂಪಿಗೆ ಬಂದಾಗ ಅವರನ್ನು ನೋಡಲು ತಾವಿರುತ್ತೇವೆಯೋ ಇಲ್ಲವೋ ಎಂಬ ಚಿಂತೆಯ ಗೆರೆ. ಲಾಮ ಕೂಡ ತೆರಳುವ ಹಿಂದಿನ ದಿನ ಹಿರಿಯರ ಬಳಿ ತೆರಳಿ ಯೋಗಕ್ಷೇವು ವಿಚಾರಿಸುತ್ತಾರೆ. ಲಾಮ ನೇತೃತ್ವದಲ್ಲಿ ಇಂದಲ್ಲ ನಾಳೆ ತಮ್ಮ ಮಾತೃ ದೇಶ ಮರಳಿ ಸಿಕ್ಕಿಯೇ ಸಿಕ್ಕುತ್ತದೆ ಎಂಬ ಕನಸು ಇವರದು. ಟಿಬೆಟ್‌ಗಾಗಿ ಶಾಂತಿಯುತ ಹೋರಾಟಕ್ಕೆ 50 ವರ್ಷವಾದರೂ ಇವರ ಕನಸು ಮಾತ್ರ ಕರಗಿಲ್ಲ. ಹಿಮಾಲಯದೆತ್ತರದ ಭರವಸೆಯ ದಲೈ ಲಾಮ ಜೀವಂತವಾಗಿಯೇ ಇರಿಸಿದ್ದಾರೆ.

- ಅನಿಲ್ ಎಚ್.ಟಿ
anilmadikeri@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com