ಮುದ್ದಿನ ಗಿಣಿಯನು
ಮನೆಯಲಿ ಸಾಕಿ
ಮುದ್ದು ಮಾಡ್ತೀವಿ
ಕಾಕಾ ಕಾಗೆ ಹತ್ತಿರ
ಬಂದರೆ ಏಕೆ
ಓಡಿಸ್ತೀವಿ?
ಕೈಗೆ ಸಿಗದ
ಹಾರುವ ಚಿಟ್ಟೆಯ
ಓಡಿ ಹಿಡಿತೀವಿ
ಗೋಡೆಯ ಹಲ್ಲಿ
ಮೈಮೇಲೆ ಬಿದ್ದರೆ
ಏಕೆ ಸ್ನಾನ ಮಾಡ್ತೀವಿ?
ಎಡಗೈ ಬೆರಳಿಗೆ
ಉಂಗುರವಿಟ್ಟು
ಶೋಕಿ ಮಾಡ್ತೀವಿ
ಎಡಗೈಯಿಂದ ದಾನ
ಕೊಟ್ಟರೆ ಏಕೆ
ಒಲ್ಲೇ.. ಅಂತೀವಿ?
ದೇವರ ಮನೆಯಲಿ
ಹಾವಿನ ಮೂರ್ತಿ
ಪೂಜೆ ಮಾಡ್ತೀವಿ
ಹರಿದಾಡುವ ಹಾವು
ಹತ್ತಿರ ಬಂದರೆ
ಏಕೆ ಕೊಲ್ತೀವಿ?
ಬೇವು ಆಲದ
ಮರವನು ಪರಿಸರ
ದಿನದಲಿ ನೆಡತೀವಿ
ಬೆಳೆದ ಮರಕೆ
ಕೊಡಲಿ ಇಟ್ಟು
ಏಕೆ ಕಡಿತೀವಿ?
ಪ್ರಕೃತಿಯಲ್ಲಿ
ಎಲ್ಲರೂ ಒಂದೇ
ಕೂಡಿ ಬಾಳೋಣ
ಪುಟ್ಟಿಯ ಪ್ರಶ್ನೆಗೆ
ಉತ್ತರ ಕೊಟ್ಟು
ಭೇದವ ತೊರೆಯೋಣ..
- ಲಲಿತಾ ಕೆ. ಹೊಸಪ್ಯಾಟಿ