ಗೆಳೆಯರಿರಲಿ ಕೊನೆ ತನಕ

ಗೆಳೆಯರಿರಲಿ ಕೊನೆ ತನಕ
Updated on: 

ಗೆಳೆಯರಿರಲಿ ಈ ಬಾಳಿನಲಿ
ಗೆಳೆಯರಿರಲಿ ಕೊನೆ ತನಕ
ಹಗುರ ಹೃದಯ, ತಿಳಿ ಮನಸಿರಲಿ,
ತೊರೆದು ಎಲ್ಲ ತವಕ.
 ಇದು ನನ್ನ ಭಾವಗೀತೆಯೊಂದರ ಪಲ್ಲವಿ. ಗೆಳೆಯರೇನೋ ಕೊನೆ ತನಕ ಇರುತ್ತಾರೆ, ನಿಜ. ಆದರೆ ಅದದೇ ಗೆಳೆಯರು ಇರುತ್ತಾರಾ ಎಂದರೆ ಉತ್ತರಿಸುವುದು ಕಷ್ಟ. ಇದು ನಮ್ಮ ಸ್ನೇಹಿತರು ಹೇಗೋ ಹಾಗೇ ನಮ್ಮ ಸ್ವಭಾವದ ಮೇಲೂ ಅವಲಂಬಿತವಾಗಿರುತ್ತೆ. ನನ್ನ ಕಾವ್ಯಗುರುಗಳಲ್ಲಿ ಒಬ್ಬರಾದ ಲಂಕೇಶ್ ಹೇಳುತ್ತಿದ್ದರು: 'ನನ್ನ ಗೆಳೆಯರ ಬಳಗ ವಿಧಾನ ಪರಿಷತ್ ಇದ್ದ ಹಾಗೆ. ಪ್ರತಿ ಎರಡು ವರ್ಷಕ್ಕೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ'. ಅದು ಲಂಕೇಶ್ ರೀತಿ.
ನಾನು ಸ್ವಭಾವತಃ ಸ್ನೇಹಪ್ರಿಯ. ನನ್ನ ಗೆಳೆಯರ ಬಳಗ ತುಂಬ ದೊಡ್ಡದು. ಅದರಲ್ಲೂ ಏಕವಚನದ ಗೆಳೆಯರೇ ಹೆಚ್ಚು. ನನಗೆ ಈ ಪಾಟಿ ಗೆಳೆಯರು ಏಕೆ ಬೇಕಾದರು ಎಂಬ ಪ್ರಶ್ನೆಗೆ ನಾನು ಕಂಡುಕೊಂಡ ಉತ್ತರ:  
 ಬಾಳ ಬೆಲೂನಿನ ತುಂಬ
 ಶೂನ್ಯದ ಜಲಜನಕ ಬುರಬುರ ತುಂಬಿ
 ನಾ ಗಾಳಿಗೆ ಬಿಟ್ಟಾಗ
 ಅದನ್ನು ಈ ಭೂಗೋಳಕ್ಕೇ
  ಬಿಗಿದು ಕಟ್ಟುವ ದಾರ
  ನನ್ನ ಗೆಳೆಯರು.
        ಹೌದು, ನಾನು ಅಜ್ಞೇಯವಾದಿ. ದೇವರಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ. ವಿಧಿಯಲ್ಲಿ ನಂಬಿಕೆಯಿಲ್ಲ. ಬಾಳಿಗೊಂದು ಪೂರ್ವ ನಿರ್ಧಾರಿತ ಉದ್ದೇಶ, ಗುರಿ ಇದೆಯೆಂಬುದರಲ್ಲಿ ವಿಶ್ವಾಸವಿಲ್ಲ. ಇಂಥ ದಿಕ್ಕುದೆಸೆ ಇಲ್ಲದ ಬಾಳಿಗೆ ನಾನಾಗಿ ಒಂದು ಅರ್ಥ ಕಲ್ಪಿಸಲು ನನಗೆ ಗೆಳೆಯರು ಬೇಕಾದರು.
    ಹೂವಿಲ್ಲದಿರೆ ನಾನು ಭೂಮಿಯಲಿ ಇರಲಾರೆ
    ಹೂವಿಂದ ಬಲು ದುಃಖ ಹಗುರವ ಹುದು
ಎಂದಿದ್ದಾರೆ ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರು. ನಾನು ಇದೇ ಮಾತನ್ನು ಗೆಳೆಯರ ಬಗ್ಗೆ ಹೇಳುತ್ತೇನೆ.
ಇಂಗ್ಲಿಷಿನಲ್ಲಿ ಒಂದು ನಾಣ್ಣುಡಿಯಿದೆ. 'ಗಾಡ್ ಗೇವ್ ಮಿ ಮೈ ರಿಲೇಶನ್ಸ್. ಬಟ್, ಥ್ಯಾಂಕ್ ಗಾಡ್, ಐ ಕೆನ್ ಚೂಸ್ ಮೈ ಫ್ರೆಂಡ್ಸ್‌'. ಹೌದು, ನಮಗೆ ಹುಟ್ಟಿನಿಂದಲೇ ಸಂಬಂಧಿಕರು ದೊರೆತುಬಿಡುತ್ತಾರೆ. ಅಲ್ಲಿ ನಮಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ. ಆ ಸಂಬಂಧಗಳನ್ನು ನಿರಾಕರಿಸುವ ಹಕ್ಕೂ ಇಲ್ಲ. ಆದರೆ ಗೆಳೆತನ ಹಾಗಲ್ಲ. ನಮ್ಮ ವಯಸ್ಸಿಗೆ, ಅಭಿರುಚಿಗೆ, ಸ್ವಭಾವಕ್ಕೆ ಹೊಂದುವಂಥ ಗೆಳೆಯರನ್ನು ನಾವೇ ಆಯ್ದುಕೊಳ್ಳಬಹುದು. ಬೇಡ ಅನ್ನಿಸಿದಾಗ ಠೂ ಬಿಡಲೂ ಬಹುದು.
ನಾನು ನಮ್ಮೂರಾದ ಚಿಂತಾಮಣಿಯ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಕಾಲದಲ್ಲಿ ನನಗೊಬ್ಬ ಆಪ್ತ ಗೆಳೆಯನಿದ್ದ, ಶ್ರೀನಿವಾಸ ಅಂತ. ಬಡವರ ಮನೆ ಹುಡುಗ. ಒಂದು ರೂಮು ಬಾಡಿಗೆಗೆ ಹಿಡಿದು ಅಲ್ಲೇ ಅವನು, ಅವನ ಅಣ್ಣ ವಾಸವಾಗಿದ್ದರು. ತಾವೇ ಅನ್ನ ಬೇಯಿಸಿಕೊಂಡು, ಹೋಟೆಲಿನಿಂದ ಸಾಂಬಾರ್ ತಂದುಕೊಳ್ಳುತ್ತಿದ್ದರು. ತನ್ನ ಬಿಡುವಿನ ವೇಳೆಯಲ್ಲಿ ಶ್ರೀನಿವಾಸ ನಮ್ಮ ಫೋಟೋ ಸ್ಟುಡಿಯೋಗೆ ಬಂದು, ನನ್ನ ತಂದೆಗೆ ನೆರವಾಗುತ್ತಿದ್ದ. ಹಬ್ಬಹರಿದಿನಗಳಲ್ಲಿ ನಮ್ಮ ಮನೆಯಲ್ಲೇ ಅವನಿಗೆ ಊಟ. ನಾನೂ ಅವನೂ ಸದಾ ಒಟ್ಟಿಗೇ. ಎಷ್ಟೋ ಭಾನುವಾರಗಳಂದು ಬೆಳಿಗ್ಗೆ ನಾನು ನಮ್ಮ ಮನೆಯಿಂದ ಅಕ್ಕಿಹಿಟ್ಟನ್ನು ಕದ್ದುಕೊಂಡು ಅವನ ರೂಮಿಗೆ ಹೋಗುತ್ತಿದ್ದೆ. ಅಲ್ಲಿ ಶ್ರೀನಿವಾಸ ರೊಟ್ಟಿ ತಟ್ಟುತ್ತಿದ್ದ. ಬಿಸಿ ಬಿಸಿ ರೊಟ್ಟಿ ಒಟ್ಟಿಗೆ ತಿನ್ನುತ್ತಿದ್ದೆವು. ಎಂಥಾ ರುಚಿಯಿತ್ತು ಆ ಕೊಬ್ಬರಿ, ಚಟ್ನಿ ಏನೂ ಇಲ್ಲದ ಖಾಲಿ ರೊಟ್ಟಿಗೆ!
ಎಸ್ಸೆಸ್ಸೆಲ್ಸಿ ಮುಗಿಸಿದ ಮೇಲೆ ನಾನು ಪಿಯುಸಿಗೆ ದಾವಣಗೆರೆಗೆ ಹೋದೆ. ಶ್ರೀನಿವಾಸ ಓದು ಮುಂದುವರಿಸುವ ಚೈತನ್ಯವಿಲ್ಲದೆ ಬೆಂಗಳೂರಿನಲ್ಲೊಂದು ನೌಕರಿ ಹಿಡಿದ. ಅಲ್ಲಿಗೆ ನಮ್ಮ ಸ್ನೇಹ ಸಂಬಂಧ ಮುಗಿಯಲಿಲ್ಲ. ಮತ್ತೆ ನಾನು ಬಿ.ಎ. ಓದಲು ಬೆಂಗಳೂರಿಗೆ ಬಂದೆ. ಗವಿಪುರ ಬಡಾವಣೆಯ ಒಂದು ಹಾಸ್ಟೆಲಿನಲ್ಲಿದ್ದೆ. ಪ್ರತಿ ಭಾನುವಾರ ಶ್ರೀನಿವಾಸ ನನ್ನ ಹಾಸ್ಟೆಲಿಗೆ ಬೆಳಿಗ್ಗೆಯೇ ಬರುತ್ತಿದ್ದ. ವಿದ್ಯಾರ್ಥಿ ಭವನಕ್ಕೆ ಕರೆದೊಯ್ದು ಮಸಾಲೆದೋಸೆ ಕೊಡಿಸುತ್ತಿದ್ದ. ಆಗ್ಗೆ ಉದ್ಯೋಗಸ್ಥನಾಗಿದ್ದ ಅವನು ಧಣಿ. ನಾನು ಬಡ ವಿದ್ಯಾರ್ಥಿ.
ಮತ್ತೆ ನಮ್ಮ ಈ ಪಾತ್ರಗಳು ಅದಲುಬದಲಾದದ್ದು ನಾನು ಪದವಿ ಮುಗಿಸಿ, ನಮ್ಮೂರಲ್ಲೇ ಮೇಸ್ಟರಾಗಿ ನೌಕರಿಗೆ ಸೇರಿದ ಮೇಲೆ. ಪ್ರತಿ ತಿಂಗಳೂ ಬೆಂಗಳೂರಿಗೆ ಹೋಗುತ್ತಿದ್ದ ನಾನು ತಂಗುತ್ತಿದ್ದದ್ದು ಶ್ರೀನಿವಾಸನ ಪುಟ್ಟ ಇಕ್ಕಟ್ಟು ಬಾಡಿಗೆಮನೆಯಲ್ಲೇ. ವಿದ್ಯಾರ್ಥಿ ಭವನದ ಮಸಾಲೆದೋಸೆ ಮತ್ತು ಒಂದು ಸಿನಿಮಾ ಕಡ್ಡಾಯ. ಈ ಬಾರಿ ಖರ್ಚೆಲ್ಲ ನನ್ನದು.
 ಹೀಗೆ ಸುಮಾರು ಹದಿನೈದಿಪ್ಪತ್ತು ವರ್ಷ ಜೀವಕೊರಳ ಗೆಳೆಯರಾಗಿದ್ದ ನಾವು ಆಜೀವಪರ್ಯಂತ ಹೀಗೇ ಇರುತ್ತೇವೆ ಎಂದು ನಂಬಿಕೊಂಡಿದ್ದೆವು. ಇಬ್ಬರಿಗೂ ಮದುವೆಯಾಯಿತು. ಜವಾಬ್ದಾರಿಗಳು ಹೆಚ್ಚಾದವು. ಆಸಕ್ತಿಯ ಕ್ಷೇತ್ರಗಳು ಬೇರೆಯಾದವು. ನಾನು ಬೆಂಗಳೂರಿಗೆ ಹೋಗುವುದು ಅಪರೂಪವಾಯಿತು. ಹೋದರೂ ಅವನನ್ನು ಭೇಟಿಯಾಗುವುದು ಇನ್ನಷ್ಟು ಅಪರೂಪವಾಯಿತು. ಈಗ ಅವನೆಲ್ಲೋ ನಾನೆಲ್ಲೋ, ಸಂಪರ್ಕವೇ ಇಲ್ಲ.
 ನಾನು ದಾವಣಗೆರೆಯಲ್ಲಿ ಪಿಯುಸಿ ಓದುತ್ತಿದ್ದಾಗ ಪ್ರಕಾಶ ಎಂಬ ಇನ್ನೊಬ್ಬ ನನಗೆ ಅತ್ಯಾಪ್ತಮಿತ್ರನಾದ. ನಮ್ಮದು ಸಾಹಿತ್ಯಸ್ನೇಹ. ನಾನು ಕವಿತೆ ಬರೆಯಲು ಪ್ರೇರೇಪಿಸಿದವನೇ ಅವನು. ಪಿಯುಸಿಯ ನಂತರ ಅವನು ಇಂಜಿನಿಯರಿಂಗ್ ಸೇರಿಕೊಂಡ. ನನಗೆ ಅದೃಷ್ಟವಶಾತ್ ಬಿ.ಇ.ಗೆ ಸೀಟು ಸಿಕ್ಕಲಿಲ್ಲ. ಬೆಂಗಳೂರಿಗೆ ಬಂದು ಬಿ.ಎ. ಸೇರಿಕೊಂಡೆ. ಹೀಗೆ ನಾವು ಭೌತಿಕವಾಗಿ ದೂರವಾದರೂ ಪತ್ರಗಳ ಮೂಲಕ ನಮ್ಮ ಸ್ನೇಹವನ್ನು ಸುಮಾರು ಹತ್ತು ವರ್ಷಗಳ ಕಾಲ ಉಳಿಸಿಕೊಂಡೆವು. ನೂರಿನ್ನೂರು ಪತ್ರಗಳು ನಮ್ಮ ನಡುವೆ ವಿನಿಮಯವಾಗಿವೆ. ನಂತರ ಅವನು ಅನುಭಾವ, ಅಧ್ಯಾತ್ಮದತ್ತ ವಾಲಿದ. ಕವಿಯಾದ ನಾನು ಲೌಕಿಕದಲ್ಲೇ ಉಳಿದೆ. ಹೀಗೆ ಭೌತಿಕದ ಜೊತೆ ಮಾನಸಿಕವಾಗಿಯೂ ನಾವು ದೂರವಾದೆವು.
 'ಎಲ್ಲ ಎಲ್ಲಾ ಮಾಯವಾದವು ಹಳೆಯ ಪಳಕೆಯ ಮುಖಗಳು'  
'ಬದಲಾವಣೆಯೊಂದೇ ಶಾಶ್ವತ' ಎಂಬ ಮಾತು ನಿಜ. ಬಹುಶಃ ಬಾಲ್ಯ, ಯೌವನ, ನಡು ವಯಸ್ಸು ಮತ್ತು ಮುದಿತನ- ಈ ನಾಲ್ಕೂ ಹಂತಗಳಲ್ಲಿ ನಮಗೆ ಬೇರೆ ಬೇರೆ ರೀತಿಯ ಗೆಳೆಯರೇ ಬೇಕಾಗುತ್ತಾರೋ ಏನೋ. ಬಾಲ್ಯದಲ್ಲಿ ಆಟಪಾಠಕ್ಕೆ, ಯೌವನದಲ್ಲಿ ಸೃಜನಶೀಲತೆಗೆ, ನಡು ವಯಸ್ಸಿನಲ್ಲಿ ಚಿಂತನೆಗೆ, ವೃದ್ಧಾಪ್ಯದಲ್ಲಿ ಅಧ್ಯಾತ್ಮ ಮತ್ತು ಅನುಭಾವಕ್ಕೆ- ಹೀಗೆ. 'ಸ್ನೇಹಿತರಲ್ಲಿ ಹಲವು ಥರ, ಸ್ನೇಹಕ್ಕುಂಟು ಹಲವು ಸ್ತರ.'
ನನ್ನ ಬಾಲ್ಯ ಮತ್ತು ಯೌವನದ ಹಂತಗಳಲ್ಲಿನ ಬಹುಪಾಲು ಗೆಳೆಯರು ತಮ್ಮ ಒಡನಾಟ ಮುಗಿಸಿ ದೂರವಾಗಿದ್ದಾರೆ. ನನ್ನ ಬಾಲ್ಯಕಾಲವನ್ನು ಸವಿನೆನಪುಗಳ ಕಣಜವಾಗಿಸಿದ್ದಾರೆ. ಯೌವನದ ಸುಖದುಃಖಗಳನ್ನು ಹಂಚಿಕೊಂಡಿದ್ದಾರೆ. ಕಷ್ಟನಷ್ಟಗಳಲ್ಲಿ ಆತುಕೊಂಡಿದ್ದಾರೆ. ಅಂತರಂಗದ ಕ್ಲೇಷ, ಕ್ಷೋಭೆಗಳನ್ನು ಕಳೆದಿದ್ದಾರೆ.
 ನನ್ನ ನಡು ವಯಸ್ಸೂ ಇದೀಗ ಕಳೆದಿದೆ. ಈ ಹಂತದಲ್ಲಿ ನನಗೆ ಆತ್ಮೀಯ ಮಿತ್ರರಾದವರು ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ. ನಮ್ಮದು ಸುಮಾರು ಮುವ್ವತೈದು ವರ್ಷಗಳ ಸುದೀರ್ಘ ಗೆಳೆತನ. ಸಾಹಿತ್ಯದ ಕಾರಣವಾಗಿ ಶುರುವಾದ ಈ ನಮ್ಮ ಒಡನಾಟ ಯಾವುದೇ ಏರುಪೇರುಗಳಿಲ್ಲದೆ, ಮನಸ್ತಾಪಗಳಿಲ್ಲದೆ, ಈ ವರೆಗೆ ಒಂದೇ ರೀತಿಯಲ್ಲಿ ಸಾಗುತ್ತ ಬಂದಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಗೌರವ. ಹೀಗಾಗಿ ವಸ್ತುನಿಷ್ಠ ವಿಮರ್ಶೆ ನಮ್ಮ ನಡುವೆ ಸಾಧ್ಯವಾಗಿದೆ. ಒಬ್ಬರ ಏಳಿಗೆಯಲ್ಲಿ ಉಳಿದಿಬ್ಬರು, ಈರ್ಷ್ಯೆಯ ಲವಲೇಶವೂ ಇಲ್ಲದೆ, ಸಂತೋಷ ಪಟ್ಟಿದ್ದೇವೆ. ಒಬ್ಬರು ಎದೆಗುಂದಿದಾಗ ಉಳಿದಿಬ್ಬರು ಧೈರ್ಯ ತುಂಬಿ ಹುರಿದುಂಬಿಸಿದ್ದೇವೆ. ದಾರಿ ತಪ್ಪಿದಂತೆ ತೋರಿದಾಗ ಪರಸ್ಪರ ಎಚ್ಚರಿಸಿಕೊಂಡಿದ್ದೇವೆ. ಸಾಹಿತಿಗೆ ಇಂಥ ಅಂತರಂಗದ ನೆಚ್ಚಿನ ಕೆಲವರಾದರೂ ಗೆಳೆಯರ ಅಗತ್ಯ ಎಷ್ಟೆಂಬುದು ಹೇಳತೀರದು!
'ಬರೀ ಗೆಳೆಯರ ಪುರಾಣವೇ ಆಯಿತು. ನಿಮಗೆ ಗೆಳತಿಯರಿರಲಿಲ್ಲವೇ' ಎಂದು ನೀವು ಕೇಳಬಹುದು. ನನ್ನನ್ನು ನೆಚ್ಚಿ, ನನ್ನೊಂದಿಗೆ ಮನಸ್ಸು ಬಿಚ್ಚಿ, ತಮ್ಮ ಖಾಸಗೀ ಸುಖದುಃಖಗಳನ್ನು ಹಂಚಿಕೊಳ್ಳುತ್ತಿದ್ದ ಅನೇಕ ಗೆಳತಿಯರು ನನಗಿದ್ದರು. ಕೆಲವರು ಈಗಲೂ ಉಳಿದುಕೊಂಡಿದ್ದಾರೆ. ಆದರೆ ಗಂಡಸರೊಂದಿಗೆ ಗೆಳೆತನದಷ್ಟು ಸಲೀಸಲ್ಲ ಹೆಂಗಸರೊಂದಿಗೆ ಗೆಳೆತನ. ಸಮಾಜದ ವಕ್ರದೃಷ್ಟಿ ಮತ್ತು ಅಪವಾದ ಮರೆಯಲ್ಲಿ ಸದಾ ಹೊಂಚುತ್ತಲೇ ಇರುತ್ತವೆ. ಜೊತೆಗೆ ಹೆಂಡತಿಯ ಬಿಗಿದ ಹುಬ್ಬು, ಕೆಂಗಣ್ಣು! ಆದ್ದರಿಂದ ಗೆಳತಿಯರ ಸಹವಾಸ ಕಷ್ಟ ಕಷ್ಟ ಮುದಿತನದ ತನಕ!
ಹಾಗಾದರೆ ಕೈಹಿಡಿದ ಹೆಂಡತಿ ಗೆಳತಿಯಲ್ಲವೇ? ಖಂಡಿತ ಹೌದು, ಅವಳು ಬಾಳಗೆಳತಿ. ಆದರೆ ಕೇವಲ ಗೆಳತಿಯಷ್ಟೇ ಅಲ್ಲ. ಅವಳದ್ದು ಬಹುಮುಖ ಪಾತ್ರ. ಮೊದಲಿಗೆ ಅತ್ತೆಮಾವಂದಿರಿಗೆ ಸೊಸೆ, ನಂತರ ಸಂಸಾರದ ನಿರ್ವಹಣಾಧಿಕಾರಿ(ಬಿಗ್‌ಬಾಸ್), ಮತ್ತೆ ಮಕ್ಕಳಿಗೆ ತಾಯಿ, ಕೊನೆಗೆ ಮೊಮ್ಮಕ್ಕಳಿಗೆ ದೊಡ್ಡಮ್ಮ(ಅಜ್ಜಿ ಅಂದರೆ ಅವಳಿಗೆ ಕೋಪ). ಹೀಗಾಗಿ ಕೇವಲ ಗೆಳತಿಯ ಪಟ್ಟಕ್ಕೆ ಹೆಂಡತಿಯನ್ನು ಸೀಮಿತಗೊಳಿಸಿದರೆ ತಪ್ಪಾದೀತು.
ಇದೀಗ ಮನುಷ್ಯ ಜೀವಿತದ ಕೊನೆಯ ಹಂತವಾದ ವೃದ್ಧಾಪ್ಯಕ್ಕೆ ಬರೋಣ. ಜರಾಜೀರ್ಣವಾದ ದೇಹದ ಬಗ್ಗೆ ಜಿಗುಪ್ಸೆ, ನಶ್ವರ ಜೀವನದ ಬಗ್ಗೆ ವೈರಾಗ್ಯ, ಅಧ್ಯಾತ್ಮ ಅನುಭಾವದ ಕಡೆ ಒಲವು, ದೇವರು ದಿಂಡರಿಗೆ ಸಂಪೂರ್ಣ ಶರಣಾಗತಿ- ಇವು ಈ ಹಂತದ ಸಾಮಾನ್ಯ ಲಕ್ಷಣಗಳು. ಆದರೆ ನಾನೋ, ಈ ಮೊದಲೇ ಹೇಳಿದಂತೆ, ಜೀವನ ಲೋಲುಪ್ತ; ಜೀವಾತ್ಮ, ಪರಮಾತ್ಮ, ಪುನರ್ಜನ್ಮ ಇತ್ಯಾದಿಗಳಲ್ಲಿ ವಿಶ್ವಾಸವಿಲ್ಲದವನು.
    ಗೊತ್ತಿಲ್ಲ, ಗೊತ್ತಿಲ್ಲ ಎಂಬುದೊಂದೇ             ಇಂದು
     ಈ ಭವದ ಅನುಭವದ ಮಥಿತ ಮಾತು
ಎಂಬ ಗೋಪಾಲಕೃಷ್ಣ ಅಡಿಗರ ನಿಲುವಿಗೆ ಸಹಮತಿಸಿದವನು.
ಇಷ್ಟಾಗಿ ದೇವರು ಎಂಬುವವನು ಒಬ್ಬನಿರುವುದೇ ನಿಜವಾದರೆ ನಾನು ಅವನನ್ನು 'ಪ್ರಭು' ಎಂದು ಕರೆದು ಕೈ ಮುಗಿಯಲಾರೆ. 'ಒಡೆಯ' ಎಂದು ಅಡ್ಡಬಿದ್ದು ನಮಿಸಲಾರೆ. 'ಗೆಳೆಯ' ಎಂದು ಕರೆದು ಕೈ ಕುಲುಕಿಯೇನು, ಅಪ್ಪಿಕೊಂಡೇನು. ನನ್ನ ಗೆಳೆಯರ ಬಳಗಕ್ಕೆ ಅವನನ್ನೂ ಸೇರಿಸಿಕೊಂಡು, ಮತ್ತದೇ ತಾರಕ ಮಂತ್ರ ಜಪಿಸಿಯೇನು:
    ಗೆಳೆಯರಿರಲಿ ಈ ಬಾಳಿನಲಿ
    ಗೆಳೆಯರಿರಲಿ ಕೊನೆ ತನಕ.           

- ಬಿ.ಆರ್. ಲಕ್ಷ್ಮಣ್‌ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com