ಮಂಜುನಾಥ ಸಾಗರ, ಶಿವಮೊಗ್ಗ ಜಿಲ್ಲೆ
ಖಾಲಿ ನಿವೇಶನದ ಬಗ್ಗೆ ಕೋರ್ಟಿನಲ್ಲಿ ಎರಡು ವರ್ಷದಿಂದ ಕೇಸು ನಡೆಯುತ್ತಿದ್ದು, ನಮ್ಮ ಕಡೆ ತೀರ್ಪು ಬರುವ ಲಕ್ಷಣಗಳು ಕಂಡುಬಂದಾಗ, ಎದುರು ಪಾರ್ಟಿಯವರು ನನ್ನನ್ನು ಕೇಸು ವಾಪಸ್ ಪಡೆಯಲು ಮಾಡಿದ ಪ್ರಯತ್ನ ಫಲಿಸದಿದ್ದಾಗ ನನ್ನನ್ನು ಬೆದರಿಸಿ ರಾತ್ರಿ 12 ಗಂಟೆಗೆ ಖಾಲಿ ಕಾಗದಕ್ಕೆ ಸಹಿ ಮಾಡಿಸಿಕೊಂಡರು. ಈ ಬಗ್ಗೆ ಜಿಲ್ಲಾ ಎಸ್.ಪಿ.ಯವರಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಸ್ಥಳೀಯ ಪೊಲೀಸರು ರಾಜಿ ಮಾಡಿಸಿದ್ದೇವೆಂದು ನನಗೆ ರಸೀತಿ ಕೊಟ್ಟಿರುತ್ತಾರೆ. ಕ್ರಮ ಜರುಗಿಸಲು ಮುಂದೇನು ಮಾಡಬೇಕು?
-ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಪೊಲೀಸರ ವರ್ತನೆಯ ಬಗ್ಗೆಯೂ ದೂರು ನೀಡಿ ಪ್ರಕರಣವನ್ನು ದಾಖಲಿಸಿ. ತನಿಖೆ ನಡೆಸಲು ಎಸ್.ಪಿ.ಯವರಿಗೆ ಆದೇಶಿಸಬೇಕೆಂದು ಪ್ರಾರ್ಥಿಸಿ. ಪರಿಹಾರ ಸಿಗಬಹುದು.
ತಾಲೂಕು ಕಚೇರಿಗೆ ಅರ್ಜಿ ಕೊಡಿ
ರಾಮಚಂದ್ರ, ಊರ ಹೆಸರಿಲ್ಲ
1976-77ರಲ್ಲಿ ನಮಗೆ ಸರ್ಕಾರದಿಂದ ಜಮೀನು ಮಂಜೂರಾಗಿದ್ದು ಅದನ್ನು ಸಾಗುವಳಿ ಮಾಡುತ್ತಿದ್ದೇವೆ. ಹಕ್ಕುಪತ್ರ ಆಗಲೇ ನೀಡಿದ್ದು ನನಗೆ ಇಂಗ್ಲಿಷ್ ಬರದ ಕಾರಣ ಅದೇನೆಂದು ತಿಳಿಯಲಿಲ್ಲ. 1992ರಲ್ಲೂ ಮುಖ್ಯಮಂತ್ರಿಗೆ ಅರ್ಜಿ ಕೊಟ್ಟು ಕುಳಿತಿದ್ದೇವೆ. ಹಕ್ಕುಪತ್ರ ಪಡೆಯಲು ಏನು ಮಾಡಬೇಕು?
-ನಿಮ್ಮಲ್ಲಿರುವ ಇಂಗ್ಲಿಷ್ ಆದೇಶದ ಪ್ರತಿಯನ್ನು ತಿಳಿದವರಿಗೆ ತೋರಿಸಿ ಅದರಲ್ಲೇನಿದೆಯೆಂದು ತಿಳಿದುಕೊಳ್ಳಿ. ಅಗತ್ಯಬಿದ್ದರೆ ತಾಲೂಕು ಕಚೇರಿಗೆ ಅರ್ಜಿ ನೀಡಿ ವಿವರ ಪಡೆದು ಹಕ್ಕುಪತ್ರದ ಅಗತ್ಯವಿದ್ದರೆ ಕೇಳಿ ಪಡೆದುಕೊಳ್ಳಿ.
ಬ್ಯಾಂಕಿನಲ್ಲಿ ವಿಚಾರಿಸಿ
ಬಸವೇಗೌಡ, ಮೈಸೂರು
ನಾನು ನಿವೃತ್ತ ಸರ್ಕಾರಿ ನೌಕರ. ನಿವೃತ್ತಿವೇತನದ ಹಣವನ್ನು ಹೆಂಡತಿ ಮಕ್ಕಳ ಹೆಸರಿನಲ್ಲಿ ಎಷ್ಟೆಷ್ಟು ಇಡಬಹುದು?
-ಹಣ ಎಷ್ಟೆಷ್ಟು ಇಡಬಹುದೆಂದು ಯಾವ ನೀಯಮವೂ ಇಲ್ಲ. ಆ ಹಣ ಅವರಿಗೆಯೇ ಅಥವಾ ಬೇಕಾದಾಗ ನೀವು ಹಿಂಪಡೆಯಬಹುದೇ ಎಂಬುದನ್ನು ನೀವು ನಿರ್ಧರಿಸಬೇಕು. ಬ್ಯಾಂಕಿನಲ್ಲಿ ವಿಚಾರಿಸಿದರೆ ಸೂಕ್ತ ಸಲಹೆ ನೀಡುತ್ತಾರೆ.
ಸರ್ಕಾರದ ಸಹಾಯ ಸಿಗಲಾರದು
ವೆಂಕಟರಮಣ ಭಟ್, ಊರಿಲ್ಲ
ತಂದೆಗೆ ಇಬ್ಬರು ಗಂಡು ಹಾಗೂ ಒಬ್ಬ ಹೆಣ್ಣುಮಗಳು. ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅಣ್ಣ, ಅಕ್ಕ ಇಬ್ಬರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಮನೋವಿಕಲತೆಯ ಪೆನ್ಷನ್ ಸಿಗುತ್ತದೆಯೇ? ತಂದೆ ಕೆಇಬಿಯಲ್ಲಿ ಕೆಲಸದಲ್ಲಿದ್ದು, ನಿವೃತ್ತಿ ನಂತರ ತೀರಿಹೋಗಿರುತ್ತಾರೆ. ಕೆಇಬಿಯಲ್ಲಿ ಅನುಕಂಪದ ಆಧಾರದ ಮೇಲೆ ಕೆಲಸ ಸಿಗುತ್ತದೆಯೇ?
-ವಿಕಲಾಂಗರಿಗೆ ಸಮಾನ ಹಕ್ಕು ಇತ್ಯಾದಿ ಕಾನೂನು, 1995ರ ಪ್ರಕಾರ ನಿಮ್ಮ ಅಕ್ಕ, ಅಣ್ಣ ವಿಕಲಾಂಗರ ವರ್ಗಕ್ಕೆ ಸೇರುವುದಿಲ್ಲ. ಆದ್ದರಿಂದ ನಿಮಗೆ ಸರ್ಕಾರದ ಸಹಾಯ ಸಿಗಲಾರದು. ಇನ್ನು ಕೆಲಸದ ವಿಚಾರ- ಒಂದು- ಅವರು ಮಾನಸಿಕವಾಗಿ ಅಸ್ವಸ್ಥರು. ಆದ್ದರಿಂದ ಕೆಲಸಕ್ಕೆ ಅರ್ಹತೆಯಿಲ್ಲ. ಎರಡು-ನಿವೃತ್ತಿಯ ನಂತರ ಸತ್ತ ನೌಕರರ ಮಕ್ಕಳಿಗೆ ಅನುಕಂಪದ ಆಧಾರದ ನೌಕರಿ ಕೊಡಲು ಬರುವುದಿಲ್ಲ.
ಚಕ್ಕುಬಂದಿಗೆ ಅರ್ಜಿ ನೀಡಿ
ಸಾದಿಕ್ ಪಾಷ, ಊರು ಬೇಡ
ತಂದೆಯವರಿಗೆ ಗ್ರಾಮಾಂತರ ಪ್ರದೇಶದಲ್ಲಿ ಒಂದು ಉಚಿತ ನಿವೇಶನವನ್ನು 30 ವರ್ಷಗಳ ಹಿಂದೆ ಬಿಡಿಎ ಕಚೇರಿಯಿಂದ ಮಂಜೂರು ಮಾಡಿದ್ದರು. ತಂದೆ ತೀರಿಕೊಂಡ ನಂತರ ಹಕ್ಕುಪತ್ರ ನಮ್ಮ ಕೈಗೆ ಬಂದಿದೆ. ಅದನ್ನು ಪಡೆಯಲು ಎಲ್ಲಿ ಅರ್ಜಿ ಕೊಡಬೇಕು?
-ತಾಲೂಕು ಪಂಚಾಯಿತಿ ಅಥವಾ ತಾಲೂಕು ಕಚೇರಿಯಲ್ಲಿ ಈ ಬಗ್ಗೆ ಉಲ್ಲೇಖ ಇರುತ್ತದೆ. ನೀವು ಹೊಸದಾಗಿ ನಿವೇಶನ ಪಡೆಯಬೇಕಾಗಿಲ್ಲ. ಇರುವ ನಿವೇಶನವನ್ನು ಗುರುತಿಸಿ ಚಕ್ಕುಬಂದಿ ಮಾಡಿಕೊಡಬೇಕೆಂದು ಅರ್ಜಿ ನೀಡಿ. ಸ್ಥಳೀಯ ಶಾಸಕರೂ ಸಹಾಯ ಮಾಡಬಲ್ಲರು.
-ಎಚ್.ಆರ್. ಕಸ್ತೂರಿರಂಗನ್