ಡಿಂಪಲ್ ಎಂಬ ಹಿಜಡಾ ಪಾತ್ರ ಸೃಷ್ಟಿಸಿ, ಅವಳ ಕೈಗೆ ಅಫೀಮಿನ ಪೈಪುಗಳನ್ನು ಮಾರಲು ಕೊಟ್ಟು, ನಾರ್ಕೊಪೋಲಿಸ್ ಸಿಟಿಯಲ್ಲಿ ಹಗಲು ಗಂಡಾಗಿ- ರಾತ್ರಿ ಹೆಣ್ಣಾಗಿ, ದುಂಡನೆ ಅಲೆಯುವಷ್ಟು ಸ್ವಾತಂತ್ರ್ಯ ಕೊಟ್ಟು ಲೇಖಕ ಜೀತ್ ಥಾಯಿಲ್ ಒಂದಿಷ್ಟು ಮಜಾ ತೆಗೆದುಕೊಂಡ. ತನ್ನ ಕೈಯಲ್ಲಿ ಮಾಡಲಾಗದ್ದನ್ನೆಲ್ಲ ಡಿಂಪಲ್ ಕೈಯಲ್ಲಿ ಮಾಡಿಸಿ, ಆಕೆಯ ಪಾತ್ರವನ್ನು ಮಾದಕದ್ರವ್ಯಗಳ ಮಾಯಾಸಾಗರದಲ್ಲಿ ಈಜಲುಬಿಟ್ಟ.
ಋಣಾತ್ಮಕವಾಗಿ ಯಾವುದನ್ನು ಈ ದೇಶದಲ್ಲಿ ಹೇಳಬಾರದೋ ಅಥವಾ ಬರೆಯಬಾರದೋ, ಅವೆಲ್ಲವೂ ಥಾಯಿಲ್ನ 'ನಾರ್ಕೊಪೋಲಿಸ್' ಹೇಳುತ್ತದೆ. ಥಾಯಿಲ್, ಈ ಕೃತಿಯನ್ನು ಕೆತ್ತಲೆಂದೇ ಐದು ವರ್ಷ ಅಲೆದಿದ್ದಾನೆ. ಕಳೆದ ವರ್ಷ ಬೂಕರ್ನ ಶಾರ್ಟ್ಲಿಸ್ಟನ್ನೂ ಇದು ಸೇರಿತ್ತು. ಥಾಯಿಲ್ ಈ ಮೊದಲ ಕಾದಂಬರಿಯಲ್ಲೇ ಜಗತ್ತಿನ ಖ್ಯಾತಿಗೆ ಜಿಗಿದುಬಿಟ್ಟ. ಆದರೆ, ಈಗಲೂ ಈತ ಟೀಕೆಗಳ ಕೋಟೆಯೊಳಗೇ ಬಂಧಿ. ಸಿಗರೇಟು, ಬಾಟಲಿಗಳನ್ನೇ ಮೂಗುಮುಚ್ಚಿಕೊಂಡು ಓದುವ ನಮ್ಮವರು, ಇನ್ನು ಅಫೀಮು- ಗಾಂಜಾವೆಂದರೆ ಕ್ಷಮೆ ಸ್ಯಾಂಕ್ಷನ್ ಮಾಡುವುದು ತುಸು ಕಷ್ಟವೇ.
ಓದುಗರೊಂದಿಗೆ, ಸಂಪ್ರದಾಯವಾದಿ ಲೇಖಕರೂ ಸೇರಿಕೊಂಡಾಗ ಮತ್ತಷ್ಟು ಕಹಿವಿಮರ್ಶೆಗಳನ್ನು ಥಾಯಿಲ್ ಕೇಳಬೇಕಾಯಿತು. ಇದಕ್ಕೆ ಥಾಯಿಲ್ ಕೊಡುವ ಪ್ರತಿಕ್ರಿಯೆ ಚೆನ್ನಾಗಿದೆ, 'ವ್ಯಸನವೂ ಕಲಾಸೃಷ್ಟಿಯೇ. ಮಿಗಿಲಾಗಿ ಮನುಷ್ಯಸಹಜ. ನಮ್ಮನ್ನು ಕೊಲ್ಲದಿರುವ ಚಟವನ್ನು ಆಯ್ದುಕೊಳ್ಳುವುದು ಮಹಾಬುದ್ಧಿವಂತಿಕೆ. ಈ ಅರ್ಥದಲ್ಲಿ ಸಾಂಪ್ರದಾಯಿಕ ಲೇಖಕರೆಲ್ಲ ಬುದ್ಧಿವಂತರೇ. ಏಕೆಂದರೆ, ಅವರಿಗೆಲ್ಲ ಇರುವುದು ಕಾಲೆಳೆಯುವ ಚಟ'.
ಸಲ್ಮಾನ್ ರಶ್ದಿ ಬಗ್ಗೆ ಅರವಿಂದ ಅಡಿಗರು ಕಾಮೆಂಟು ಮಾಡಿದರೆ; ಟ್ಯಾಗೋರರ ನಾಟಕಗಳನ್ನು ಕಾರ್ನಾಡರು, 'ಎರಡನೇ ದರ್ಜೆಯವು' ಎಂದರೆ; ಕುಂವೀ ಕಾದಂಬರಿಯನ್ನು ಎಸ್. ದಿವಾಕರ್ ವಾಪಸು ಕೈಗಿಟ್ಟು, 'ಥಾಮಸ್ ಹಾರ್ಡಿ ಒಳ್ಳೆಯ ಕಾದಂಬರಿ ಬಗ್ಗೆ ಏನು ಹೇಳಿದ್ದಾನೆ ಗೊತ್ತೋ?' ಎಂದರೆ; ಭೈರಪ್ಪ ಅವರ ಸೃಷ್ಟಿಗಳನ್ನು 'ಕಾದಂಬರಿಯೇ ಅಲ್ಲ' ಅಂತ ಅನಂತಮೂರ್ತಿ ಪ್ರಮಾಣ ಮಾಡಿದರೆ... ಸ್ವತಃ ಲೇಖಕನ ಪೆನ್ನಿನಿಂದ ಕೊಂಚವಾದರೂ ಕಣ್ಣೀರ ಇಂಕು ಸೋರಿಹೋಗುವುದು ಸಹಜವೇ.
ಆದರೆ, ಇವೆಲ್ಲ ವಿಮರ್ಶೆ- ಟೀಕೆಗಳು ಆರೋಗ್ಯಕರವೇ. ಹೀಗೆ ತೊಡೆ ತಟ್ಟಿಯೇ ಸಾಹಿತ್ಯ ಗಟ್ಟಿಯಾಗಬೇಕು. 1970ರ ದಶಕದಲ್ಲಿ ಕನ್ನಡದಲ್ಲೂ ಈ ಪ್ರಕ್ರಿಯೆ ಸಾಮಾನ್ಯವೇ ಆಗಿತ್ತು. ಕುವೆಂಪು, ಕಾರಂತ, ಬೇಂದ್ರೆ, ಪುತಿನ, ಮಾಸ್ತಿಗಳೆಂಬ ಮಹಾನಕ್ಷತ್ರಗಳು ಪಕ್ಕಕ್ಕೆ ಮರೆಯಾಗುತ್ತಿದ್ದರೆ, ಅಡಿಗರ ಸಾರಥ್ಯದಲ್ಲಿ ಹೊಸ ಹುಡುಗರು, ಹೊಸನಾಡೊಂದನ್ನು ಕಟ್ಟುತ್ತಿದ್ದರು.
ಲಂಕೇಶ್, ನಿಸಾರ್ ಅಹಮದ್, ಸುಮತೀಂದ್ರ ನಾಡಿಗ್ ಈ ಮೂವರೂ ಅಡಿಗರ ಹುಡುಗರೇ. ನಿಸಾರರ 'ನಿತ್ಯೋತ್ಸವ' ಶಿಖರಕ್ಕೇರಿದ್ದೂ ಇದೇ ಕಾಲದಲ್ಲೇ. ಆಕಾಶವಾಣಿಯಂತೂ ನಿಸಾರರನ್ನು ಕರೆದು, ಪದೇ ಪದೇ ಅವರ ಗೀತೆಗಳನ್ನು ಹಾಡಿಸಿತು. ಶಿಷ್ಯನ ಈ ಸಾಧನೆ ಕಂಡು ಅಡಿಗರಿಗೆ ಹೆಮ್ಮೆ. ಆದರೆ, ನಿಸಾರರ ಮೇಲೆ ಅಡಿಗರು ಬೆಳೆಸಿಕೊಂಡಿದ್ದ ಪ್ರೀತಿಯನ್ನು, ಹೆಮ್ಮೆಯನ್ನು ಲಂಕೇಶ್ ಮತ್ತು ನಾಡಿಗರಿಗೆ ಸಹಿಸಲಾಗಲಿಲ್ಲ. ಸಂಜೆಯ ಗುಂಡು ಮೇಜಿನ ಸಭೆಯಲ್ಲಿ ಇವೆಲ್ಲ ಬಹಿರಂಗವಾಗುತ್ತಿದ್ದವು.
ಲಂಕೇಶ್ ಅಂತೂ 'ಥೂ ಥೂ ಥೂ ವೆರಿಬ್ಯಾಡ್, ಆ ನಿಸಾರು ಪೊಯೆಟ್ಟೇ ಅಲ್ಲ' ಎಂದರೆ, ಇತ್ತ ನಾಡಿಗರು, "ನಿಸಾರ್ ಕವನಗಳಿಗೆ ಆಕಾಶವಾಣಿ ಸ್ಕೋಪ್ ಕೊಡ್ತಿರೋದು ಜಾಸ್ತಿಯಾಯ್ತು. ಇದಕ್ಕೆ ಏನ್ ಕಾರಣ ಗೊತ್ತಾ? 'ಆ ಹೆಂಗ್ಸು' ಹ್ಞಾಂ" ಎನ್ನುತ್ತಿದ್ದರು. ಆದರೆ, ನಾಡಿಗರಂದುಕೊಂಡ ಹಾಗೆ ಆ ಹೆಂಗಸಿನೊಂದಿಗೆ ನಿಸಾರರಿಗೇನೂ 'ಅಂಥ' ಸಂಬಂಧವಿರಲಿಲ್ಲ. ಕವಿಪ್ರೀತಿಯ ಹೊರತಾಗಿ.
ಜೇಬಿನಲ್ಲೊಂದು ಪೊಯಮ್ಮು ಇಟ್ಟುಕೊಂಡು ನಾಡಿಗರು ದಿಢೀರನೆ ಆಕಾಶವಾಣಿಗೆ ಹೋದರು. ಅದೂ ನೇರವಾಗಿ ಆ ಹೆಂಗಸಿನ ಬಳಿಗೆ! ಅಷ್ಟರಲ್ಲಾಗಲೇ ಅಲ್ಲಿ ನಿಸಾರರು ಹಾಜರಿದ್ದರು, ಎಂದಿನ ಲಹರಿಯಲ್ಲಿ ನಗುವೊಂದನ್ನು ಹೊಮ್ಮಿಸಿ. ಆ ಹೆಂಗಸು ಕೂಡ ಖುಷಿಯಲ್ಲೇ ಹರಟುತ್ತಿದ್ದರು. ನಾಡಿಗರ ಅನುಮಾನಕ್ಕೆ ರೆಕ್ಕೆಪುಕ್ಕ ಬಂದಂಗಾಯಿತು.
ನಾಡಿಗರು ತುಸು ಕೋಪಿಸಿಕೊಂಡು, 'ನಾನೊಂದು ಕವನ ಬರೆದಿದ್ದೀನಿ. ಓದ್ಬೇಕು. ಅವಕಾಶ ಕೊಡಿ' ಎಂದು ಗಟ್ಟಿ ದನಿಯಲ್ಲಿ ಕೇಳಿದರು. ಆ ಹೆಂಗಸು, 'ಸಾರ್, ಅದು ನನ್ನ ಮೇಲಧಿಕಾರಿಗಳಿಗೆ ಸಂಬಂಧಿಸಿದ್ದು... ಅಲ್ಲಿಂದ...' ಎಂದು ರಾಗ ತೆಗೆದರು. 'ಓಕೆ, ಅವಕಾಶ ಕೊಡದಿದ್ರೂ ಪರ್ವಾಗಿಲ್ಲ, ಈಗ ಕವನ ಓದ್ತೀನಿ ಕೇಳಿ...' ಅಂತ ಆ ಹೆಂಗಸು ಮತ್ತು ನಿಸಾರರ ಮೇಲೆ ಬರೆದ ಕವಿತೆಯನ್ನು ನಾಡಿಗರು ಓದತೊಡಗಿದರು.
ಪಾಪ, ಆ ಹೆಂಗಸಿಗೆ ಮುಖ ಮುಚ್ಚಿಕೊಳ್ಳದೆ ದಾರಿಯಿಲ್ಲ. ನಿಸಾರರೂ ಅವಮಾನಿತರಾಗಿ ಅಲ್ಲಿಂದ ಹೊರಗೆ ಹೋದರು.
ಏನೋ ಸಿಟ್ಟು ಬಂದರೆ ಅಥವಾ ಪದ್ಯ ಬರೆಯುವ ಮೂಡು ಬಂದರೆ ನಿಸಾರರು ನೇರ ಹೋಗುವುದು ಗಾಂಧಿಬಜಾರಿನ ಕೆನರಾ ಬ್ಯಾಂಕಿನ ಪಕ್ಕದಲ್ಲಿದ್ದ ಮನೆಯ ಮಹಡಿಗೆ. ಅದು ಮಿತ್ರನದ್ದೇ ಮನೆಯಾದರೂ, ನಿಸಾರರಿಗದು ಪದ್ಯೋದಯ ಪ್ರದೇಶ. ಅಲ್ಲಿ ಮೇಲಿಂದ ಮೇಲೆ ಬೀಡಿ ಎಳೆದು, ಈ ನಾಡಿಗರ ಮೇಲಿದ್ದ ಕೋಪವನ್ನು ಹೊಗೆಯಲ್ಲಿ ತೇಲಿಬಿಡುತ್ತಿದ್ದರು.
ಅಷ್ಟರಲ್ಲೇ ಅಲ್ಲಿಗೆ, ಈ ಮೂವರಿಗೂ ಪರಿಚಿತರಿದ್ದ ಟಿ.ಎಸ್. ರಂಗಾ ಬಂದರು. ಆಗ ನಿಸಾರರು ಹೇಳಿದರಂತೆ, 'ಏನಯ್ಯಾ ಇದು, ಅವನು ನೋಡಿದ್ರೆ ಕವಿನೇ ಅಲ್ಲ ಅಂತಾನೆ. ಇವ್ನು ನೋಡಿದ್ರೆ ನನ್ನ ಮೇಲೆ ಕೆಟ್ಟ ಕವಿತೆ ಬರೆದು, ನನ್ನ ಮುಂದೆಯೇ ಓದ್ತಾನೆ. ಅಂವ ರಾವಣ, ಇಂವ ಬ್ರಾಹ್ಮಣ, ನಡುವಲ್ಲಿ ನಾನೊಬ್ಬ ಕುರುಬಾನಿ ಕವಿ' ಎಂದು ತಲೆ ಕೆರೆದುಕೊಂಡರಂತೆ! ಎಷ್ಟೋ ದಿನಗಳಾದ ಮೇಲೆ ರಂಗಾ, ಈ ಪ್ರಕರಣವನ್ನು ಲಂಕೇಶ್ ಜತೆ ಕೆಲಸ ಮಾಡುತ್ತಿದ್ದ ಬಸವರಾಜು ಅವರಿಗೆ ಹೇಳಿದರು.
ಹ್ಞಾಂ, ಕಾಲೆಳೆಯುವ ಸಾಹಿತಿಗಳಲ್ಲಿ ಎರಡು ವರ್ಗ. ಒಂದು, ಕೈಯಲ್ಲಿ (ಬರವಣಿಗೆ) ಕಾಲೆಳೆಯುವವರು; ಮತ್ತೊಂದು, ಬಾಯಿಯಿಂದಲೇ ಕಾಲೆಳೆಯುವವರು!
= ಕೀರ್ತಿ
kolgarkeerthi@gmail.com