ಬಸುರಿ ಒಡಲ ಹಿಗ್ಗಂತೆ
ರೆಪ್ಪೆ ತೆರೆವ ಹುಸಿಮೊಗ್ಗು
ಹಸಿರು ಉಸಿರು ಹರೆಯ ಹದಪಾಕ
ಜಗದ ಸೊಬಗ ಸೂರೆಗೊಂಡ ಹೂವು
ಕಂಪು ಕಂಪಿನ ಕೇಸರಕಾಂತಿ
ಕುಸುಮವೇ
ಯಾರು ಕಲಿಸಿಕೊಟ್ಟರು
ಮುಳ್ಳುತನವ ಮೀರಿ
ನಗುವ ಈ ಪರಿ
ಅರಳಿ ಪರಿಮಳಿಸುವಾಗ
ಗೆಳತಿಯ ಮುಡಿಗಿಟ್ಟೆ
ಮಧುಮಕ್ಕಳ ಹಾಸಿಗೆಗೆ
ಎಸಳುಗಳ ಹಾಸಿಟ್ಟೆ
ಸೊಬಗ ಸೀಮೆಯ
ಸೊಬಗ ರಾಶಿಗೆ
ಸವಾಲೆಸೆದ ಸುಮ ಸೇರಿದೆ
ಸುಭಗರೆದೆಯ ಕೋಟು ಜೇಬಿಗೆ
ಕುಂಡ ಕಾಂಡದಲ್ಲಿ
ನಳನಳಿಸುವ ಹೂವು ದೇವರಿಗೆ
ಮುಳ್ಳು ಮನಸುಗಳ ಹೊಗೆ
ಸೊಬಗೇ ಸಾವಾಗುವ ಈ ಬಗೆ.
-ಮಾರ್ಷಲ್ ಶರಾಂ