ಶ್ರೀರಂಗಸ್ವಾಮಿ, ತುಮಕೂರು
ಸರ್ಕಾರಿ ನೌಕರರೊಬ್ಬರು ಸರ್ಕಾರದಿಂದ ಸಾಲ ಪಡೆದು ಜಂಟಿ ನಿವೇಶನ ಪಡೆದು ಅದನ್ನು ಸರ್ಕಾರಕ್ಕೆ ಅಡವಿಟ್ಟು ನಂತರ ತನ್ನ ಹೆಂಡತಿಗೆ ಅದನ್ನು ದಾನ ಮಾಡಿದ್ದಾನೆ. ನಂತರ ಅದನ್ನು ಮೂಲ ದಾಖಲೆಗಳಿಲ್ಲದೇ ಖಾತಾ ನಕಲಿನ ಆಧಾರದ ಮೇಲೆ ಬೇರೊಬ್ಬರಿಗೆ ಮಾರಾಟ ಮಾಡಿದ್ದಾನೆ. ಮಾರಾಟಕ್ಕೆ ಹೆಂಡತಿ ಹಾಗೂ ಮಗಳು ಒಪ್ಪಿಗೆ ನೀಡಿದ್ದು ಮೈನರ್ ಮಗ ಒಪ್ಪಿಗೆ ಸೂಚಿಸಿಲ್ಲ. ಇದು ನ್ಯಾಯಬದ್ಧವೇ?
- ದಾಖಲೆಗಳಿಲ್ಲದೆ ನೋಂದಣಿಯಾಗುವುದಿಲ್ಲ. ಅಲ್ಲದೆ ಸರ್ಕಾರದ ಅನುಮತಿಯಿಲ್ಲದೆ ಮಾರಾಟ ಮಾಡುವಂತಿಲ್ಲ. ಆದರೆ ಮಾರಾಟವನ್ನು ರದ್ದು ಮಾಡಲು ಅವಕಾಶವಿಲ್ಲ. ಹೆಚ್ಚೆಂದರೆ ದುರ್ನಡತೆಗಾಗಿ ಆತನ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬಹುದು. ಇದು ಆತನ ಸ್ವಯಾರ್ಜಿತ ಹಣದಿಂದ ಖರೀದಿಸಿದ್ದರೆ ಅದರಲ್ಲಿ ಯಾರಿಗೂ ಹಕ್ಕಿಲ್ಲ. ಯಾರಿಗೂ ದಾವಾ ಹಾಕುವ ಅಧಿಕಾರವಿಲ್ಲ.
ತಕ್ಷಣ ಆ ವ್ಯಕ್ತಿ ವಿರುದ್ಧ ಇಂಜೆಂಕ್ಷನ್ ಪಡೆಯಿರಿ
ಬಿ.ಎನ್. ಖಾರ್ವಿ, ಕುಂದಾಪುರ
ಸುಮಾರು 10 ಕುಟುಂಬಗಳು 100 ವರ್ಷಗಳಿಂದ ಒಬ್ಬ ರಾಜಕೀಯ ವ್ಯಕ್ತಿಯ ಜಮೀನಿನಲ್ಲಿ ವಾಸವಾಗಿದ್ದು ಭೂಸುಧಾರಣೆ ಕಾಯಿದೆಯನ್ವಯ ಡಿಕ್ಲರೇಷನ್ ಕೊಟ್ಟಿಲ್ಲ, ಈಗ ಆ ವ್ಯಕ್ತಿ ಬಲವಂತವಾಗಿ ಅವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾನೆ. ಪರಿಹಾರವೇನು?
- ಕೂಡಲೇ ನೀವು ನ್ಯಾಯಾಲಯದಲ್ಲಿ ದಾವಾ ಹೂಡಿ ಆ ವ್ಯಕ್ತಿಯ ವಿರುದ್ಧ ನಿರ್ಬಂಧಕಾಜ್ಞೆ (ಇಂಜೆಂಕ್ಷನ್) ಪಡೆಯಬೇಕು. ಜತೆಗೆ ನೀವು ಅಲ್ಲಿ 12 ವರ್ಷಕ್ಕೂ ಹೆಚ್ಚು ಕಾಲ ಒಕ್ಕಲಿರುವುದರಿಂದ ಲಿಮಿಟೇಷನ್ ಕಾಯಿದೆಯ ಆರ್ಟಿಕಲ್ 65ರಂತೆ ಕಾಲಾವಧಿ ಮುಗಿದಿದೆ ಎಂದು ಹೇಳಬಹುದು. ಅಲ್ಲದೇ ಸರ್ಕಾರಕ್ಕೆ ಡಿಸಿ/ಎಸಿ ಮುಖಾಂತರ ಅರ್ಜಿ ಸಲ್ಲಿಸಿ ಆ ಜಮೀನನ್ನು ಸ್ವಾಧೀನಪಡಿಸಿಕೊಂಡು ನಿಮಗೆ ಹಂಚಬೇಕೆಂದು ಮನವಿ ಮಾಡಿಕೊಳ್ಳಿ.
ನ್ಯಾಯಾಲಯದಲ್ಲಿ ದಾವಾ ಹಾಕಿ
ಊರು, ಹೆಸರು ಬೇಡ
ನಾಲ್ಕು ಜನ ಅಣ್ಣತಮ್ಮಂದಿರಿದ್ದು, ಪಿತ್ರಾರ್ಜಿತ ಆಸ್ತಿ ಭೋಗ್ಯಕ್ಕೆ ಹಾಕಿ ಊರು ಬಿಟ್ಟಿದ್ದಾರೆ. ಆಸ್ತಿ ವಿಭಜನೆಗೆ ನೋಟೀಸ್ ಕಳಿಸಿದರೂ ಹಾಜರಾಗಿಲ್ಲ. 20 ವರ್ಷಗಳ ನಂತರ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ. ಒಬ್ಬ ಸಹೋದರ ಭೋಗ್ಯದ ಹಣ ತೀರಿಸಿ ಆಸ್ತಿ ತನ್ನ ವಶಕ್ಕೆ ಪಡೆಯಬಹುದೇ?
- ನ್ಯಾಯಾಲಯದಲ್ಲಿ ಎಲ್ಲ ಸಹೋದರರು ಹಾಗೂ ಭೋಗದಾರರನ್ನು ಕಕ್ಷಿಗಾರರಾಗಿ ಮಾಡಿ ದಾವಾ ಹಾಕಿ. ಮೇಲ್ಕಂಡ ಅಹವಾಲನ್ನೂ ಮಂಡಿಸಿ. ಸಮಸ್ಯೆ ಬಗೆಹರಿಯುತ್ತದೆ.
ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ
ಸುನಂದಮ್ಮ, ಊರು ಬೇಡ
ನನ್ನ ಭಾವ, ಭಾವಮೈದುನರು ಆಸ್ತಿ ವಿಭಾಗದ ಕಾಲಕ್ಕೆ ನನ್ನ ತವರಿನವರು ನನಗೆ ಕೊಟ್ಟ ಜಮೀನನ್ನು ಭಾಗ ಮಾಡಬೇಕೆಂದು ಒತ್ತಾಯಿಸಿ ನೂರು ರು. ಛಾಪಾ ಕಾಗದದ ಮೇಲೆ ಬಲವಂತವಾಗಿ ಬರೆಸಿಕೊಂಡು, ಈಗ ನೋಂದಣಿ ಮಾಡಿಕೊಡಬೇಕೆಂದೂ ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ದಾವಾ ಹಾಕುತ್ತೇವೆಂದು ಹೇಳುತ್ತಿದ್ದಾರೆ. ಪರಿಹಾರವೇನು?
- ರಿಜಿಸ್ಟ್ರೇಷನ್ ಕಾಯಿದೆಯ ಕಲಂ 17ರಂತೆ ಅಂತಹ ಪತ್ರಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ಅದು ಸಾಕ್ಷಿಯೆಂದು ಪರಿಗಣಿತವಾಗುವುದಿಲ್ಲ(ಕಲಂ 49 ನೋಂದಣಿ ಕಾಯಿದೆ). ಆದ್ದರಿಂದ ನೀವು ನ್ಯಾಯಾಲಯಕ್ಕೆ ಅರ್ಜಿ ಕೊಟ್ಟು ಆ ಒಪ್ಪಂದವನ್ನು ರದ್ದುಗೊಳಿಸಲು ಕೋರಬಹುದು. ಇಲ್ಲವೇ ಕ್ರಿಮಿನಲ್ ನ್ಯಾಯಾಲಯಕ್ಕೆ ಅವರುಗಳ ವಿರುದ್ಧ ಕೇಸ್ ದಾಖಲಿಸಬಹುದು.
ಗ್ರಾಹಕರ ವೇದಿಕೆಗೆ ದೂರು ನೀಡಿ
ಎನ್.ಎಂ. ಶಾಸ್ತ್ರಿ, ತುಮಕೂರು
ಪಕ್ಕದ ಮನೆಯವರು ಕನ್ಸರ್ವೆನ್ಸಿಯಲ್ಲಿ ಲೆಟ್ರಿನ್ ಗುಂಡಿ ತೋಡಿಸಿ ಹೆಗ್ಗಣಗಳ ಕಾಟ ಜಾಸ್ತಿಯಾಗಿದೆ. ಮಳೆಗಾಲದಲ್ಲಿ ಮನೆಮುಂದೆ ಗಲೀಜು ನೀರು ನಿಲ್ಲುತ್ತದೆ. ವರ್ಷದಿಂದ ಮುನ್ಸಿಪಾಲಿಟಿಯವರು ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪರಿಹಾರವೇನು?
- ನ್ಯಾಯಾಲಯದಲ್ಲಿ ದಾವಾ ಹಾಕಿ ಮುನ್ಸಿಪಾಲಿಟಿ ಹಾಗೂ ಹಿಂದಿನ ಮನೆಯವರನ್ನು ಪ್ರತಿವಾದಿಗಳಾಗಿ ಮಾಡಬಹುದು. ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಬಹುದು. ಲೋಕಾಯುಕ್ತರಿಗೆ ದೂರು ನೀಡಬಹುದು.
- ಎಚ್.ಆರ್. ಕಸ್ತೂರಿರಂಗನ್