ಕಾಗೋಡು ಅಂದ್ರೆ ಹೋರಾಡು!

ಕಾಗೋಡು ಅಂದ್ರೆ ಹೋರಾಡು!
Updated on: 

ವಿಧಾನಸಭೆಯಲ್ಲಿ ಸಭಾಧ್ಯಕ್ಷ ಸ್ಪೀಕರ್ ಸ್ಥಾನಕ್ಕೆ ಅತ್ಯಂತ ಗೌರವ - ಪ್ರತಿಷ್ಠೆಗಳ ಪ್ರಭಾವಳಿಯ ನಂಟಿದೆ. ಆದರೆ ಅಲ್ಲಿ ಪ್ರತ್ಯಕ್ಷವಾದ ರಾಜಕೀಯ ಅಧಿಕಾರವಿಲ್ಲ. "ತಾಂತ್ರಿಕವಾಗಿ" ರಾಜಕೀಯದಿಂದ ದೂರವಾಗಿರಲೇ ಬೇಕಾಗುತ್ತದೆ.

ಆದ್ದರಿಂದಲೇ ಸ್ಪೀಕರ್ ಸ್ಥಾನ, ಬಹುತೇಕ ರಾಜಕಾರಣಿಗಳ ಮೊದಲ ಆಯ್ಕೆಯಲ್ಲ. ಹೋರಾಟಗಳಿಂದಲೇ ಸ್ವಂತ ಶಕ್ತಿಯಿಂದ ಮೇಲೇರಿದವರಂತೂ ಸ್ಪೀಕರ್ ಸ್ಥಾನವನ್ನು ಒಂದು ಪಂಜರ ಎಂದೇ ಭಾವಿಸುತ್ತಾರೆ. ಆದರೆ ಬಾರಿ, ದೀರ್ಘಕಾಲದ ರಾಜಕಾರಣದ ಅನುಭವ, ವಯಸ್ಸಿನ ಹಿರಿತನದಿಂದಾಗಿ ಕಾಗೋಡು ತಿಮ್ಮಪ್ಪ ಅವರನ್ನೇ ವಿಧಾನ ಸಭೆಯ ಸ್ಪೀಕರ್ ಆಗಿ ಆರಿಸಿರುವುದಕ್ಕೆ ಕಾಂಗ್ರೆಸ್ಸಿನ ಆಂತರಿಕ ಪರಿಸ್ಥಿತಿಯೇ ಕಾರಣ. ಅದನ್ನೇನೂ ಅವರು ಇಷ್ಟಪಟ್ಟು ಪಡೆದಿಲ್ಲ.

ಈಗ ಆ ಸ್ಥಾನದಲ್ಲಿ ಕಾಗೋಡು ತಿಮ್ಮಪ್ಪ ತಮ್ಮ ಮೊದಲ ಅಧಿವೇಶನವನ್ನು ಎಲ್ಲರೂ ಮೆಚ್ಚುವಂತೆ ನಿರ್ವಹಿಸಿದ್ದಾರೆ. ಅವರ ಅನುಭವ, ವಿಧಾನಸಭೆಯ ನಿಯಮಗಳ ನಿಕಟ ಪರಿಚಯ, ಎಲ್ಲ ಪಕ್ಷಗಳ ನಾಯಕರ ಜತೆ ವೈಯಕ್ತಿಕ ಜೀವನದಲ್ಲಿನ ಸೌಹಾರ್ದ ಸಂಬಂಧ ಅವರ ನೆರವಿಗೆ ಬಂದಿದೆ.

ಈಗಿನ ವಿಧಾನಸಭೆಯ ಸ್ವರೂಪ ಹಾಗೂ ರಾಜ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸ್ಪೀಕರ್ ಕೆಲಸವನ್ನು ನಿಷ್ಪಕ್ಷಪಾತವಾಗಿ, ರಾಗ-ದ್ವೇಷಗಳಿಂದ ಮುಕ್ತರಾಗಿ ಕಾಗೋಡು ತಿಮ್ಮಪ್ಪ ನಿರ್ವಹಿಸಬಲ್ಲರು. ಇಷ್ಟಕ್ಕೂ ಅವರು ಈಗ ವಿಧಾನ ಸಭೆಯ ಅತಿ ಹಿರಿಯ ಸದಸ್ಯರಲ್ಲಿ ಒಬ್ಬರಲ್ಲವೇ.

ತಿಮ್ಮಪ್ಪ ಅವರು ಬೀರನಾಯಕ - ಭೈರಮ್ಮ ಪುತ್ರರಾಗಿ ಕಾಗೋಡು ಗ್ರಾಮದಲ್ಲಿ ಜನ್ಮ ತಾಳಿದಾಗ, ಸಾಗರದ ಹತ್ತಿರದ ಆ ಹಳ್ಳಿ ಪ್ರಸಿದ್ಧವಾಗೇನೂ ಇರಲಿಲ್ಲ. ಆದರೆ ಅಲ್ಲಿ ಸಮಾಜವಾದಿ ಪಕ್ಷ ನಡೆಸಿದ ಗೇಣಿದಾರರ ಪರವಾದ ಹೋರಾಟದಲ್ಲಿ (ವಾಸ್ತವದಲ್ಲಿ ಅದೇನೂ ಕ್ರಾಂತಿಕಾರಿ ಹೋರಾಟವಲ್ಲ, ಗೇಣಿಯ ಪ್ರಮಾಣಕ್ಕೇ ಸೀಮಿತವಾದದ್ದು. ಡಾ॥ ರಾಮಮನೋಹರ ಲೋಹಿಯ ಅವರು ಜೈಲಿಗೆ ಹೋಗಿದ್ದರಿಂದ ಅದಕ್ಕೆ ರಾಷ್ಟ್ರೀಯ ಖ್ಯಾತಿ ಬಂದಿತ್ತು ಅದು ತಿಮ್ಮಪ್ಪ ಅವರ ಹೆಸರಿಗೂ ಅಂಟಿಕೊಂಡಿದೆ.) ಈಗ ಕಾಗೋಡು ಎಂದರೆ ತಿಮ್ಮಪ್ಪ ನೆನಪಿಗೆ ಬರುತ್ತಾರೆ. ಗೇಣಿ ಹೋರಾಟವಲ್ಲ.
ತಿಮ್ಮಪ್ಪ ಬೆಂಗಳೂರು ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಸಾಗರದಲ್ಲಿ ವಕೀಲಿ ಆರಂಭಿಸಿ, ಸಮಾಜವಾದಿ ಪಕ್ಷದ ಪರವಾಗಿ ಸಾಗರ- ಸೊರಬ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಬಂಗಾರಪ್ಪ ಅವರು ಸೈಕಲ್ ತುಳಿಯತ್ತಲೇ ಅವರ ಪರವಾಗಿ ಪ್ರಚಾರ ಮಾಡಿದ್ದರು. ಆಗ ಬಂಗಾರಪ್ಪ ಇನ್ನೂ ವಿದ್ಯಾರ್ಥಿ.

ಮುಂದೆ ಅವರಿಬ್ಬರ ಸಂಬಂಧ ತುಂಬಾ ಚೆನ್ನಾಗಿಯೇ ಇತ್ತು. ಇಬ್ಬರೂ ಹಿಂದುಳಿದ ದೀವರ ಜಾತಿಯವರು. ಗ್ರಾಮೀಣ ಪ್ರದೇಶದಲ್ಲಿನ ಯಾತನಾಮಯ ಜೀವನದ ಪ್ರತ್ಯಕ್ಷ ಅನುಭವವಿರುವವರು. ಸಮಾಜವಾದಿ ಸಿದ್ಧಾಂತದಿಂದ ಸ್ಫೂರ್ತಿ ಪಡೆದವರು. ಆರಂಭದಿಂದಲೇ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದವರು.
ಒಂದು ಕಾಲದಲ್ಲಿ ವಿಧಾನ ಸಭೆಯಲ್ಲಿ ಮೂವರೇ ಸದಸ್ಯರ ಸಮಾಜವಾದಿ ಪಕ್ಷಕ್ಕೆ - ಕಾಗೋಡು ತಿಮ್ಮಪ್ಪ ಅವರೇ ನಾಯಕರು. ಆ ಕಾಲದಲ್ಲಿ ಜನಪರವಾದ ಯಾವುದೇ ವಿಚಾರ ಸದನದ ಮುಂದೆ ಬಂದರೂ ಅದನ್ನು ಪ್ರಬಲವಾಗಿ ಪ್ರತಿಪಾದಿಸಿದ್ದು ಸಮಾಜವಾದಿಗಳೇ. ಕಾಗೋಡು ತಿಮ್ಮಪ್ಪ ವಿಧಾನ ಸಭೆಯನ್ನು ಪ್ರವೇಶಿಸಿದಾಗ ದೇವೇಗೌಡರು ವಿರೋಧ ಪಕ್ಷದ ನಾಯಕರು. ಈಗ ತಿಮ್ಮಪ್ಪ ಸ್ಪೀಕರ್ ಆಗಿರುವಾಗ ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರು.

ವಿಧಾನ ಸಭೆಯಲ್ಲಿ ತಿಮ್ಮಪ್ಪ ವಿರೋಧ ಪಕ್ಷದಲ್ಲಿ ಹಲವಾರು ಹೋರಾಟಗಳನ್ನು ನಡೆಸಿದ್ದಾರೆ. ಅವರ ಶ್ರಮದಿಂದ ಸೊಂಡೂರು ಇನಾಮ್ ರದ್ದಿನ ಕಾಯಿದೆ ಜಾರಿಗೆ ಬಂದಿತ್ತು. ಭೂ ಸುಧಾರಣೆಯ ನೀತಿಯನ್ನು ರೂಪಿಸುವುದರಲ್ಲಿ, ಅದನ್ನು ಜಾರಿಗೆ ತರುವುದರಲ್ಲಿ ವಿರೋಧ ಪಕ್ಷದ ಶಾಸಕರಾಗಿದ್ದುಕೊಂಡೇ ಮುಖ್ಯಮಂತ್ರಿ ದೇವರಾಜ ಅರಸರಿಗೆ ಸಹಾಯ ಮಾಡಿದವರು. ಸಾಗರ - ಸೊರಬ - ತೀರ್ಥಹಳ್ಳಿ, ಹೊಸನಗರ ಸೀಮೆಯ ಸಾವಿರಾರು ಗೇಣಿದಾರರು ಭೂಮಾಲಿಕರಾಗಿದ್ದೇ ತಿಮ್ಮಪ್ಪ - ಬಂಗಾರಪ್ಪ ಹೋರಾಟದ ಶ್ರೇಯಸ್ಸು. ಅನಂತರ ತಿಮ್ಮಪ್ಪ - ಬಂಗಾರಪ್ಪ ಜಗಳವಾಡಿದರು. ಅದು ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ, ಗುಂಡೂರಾಯರ ಕಾಲದಲ್ಲಿ ಮಂತ್ರಿಯಾಗಿದ್ದ ಕಾಗೋಡು ತಿಮ್ಮಪ್ಪ, ತಮ್ಮ ಸಾಗರ ಕ್ಷೇತ್ರವನ್ನು ಬಿಟ್ಟು ಪಕ್ಕದ ಸೊರಬದಲ್ಲಿ ಬಂಗಾರಪ್ಪ ವಿರುದ್ಧ ಖಡಾಖಡಿ ಹೋರಾಡಿ ಸೋತರು.

ಮುಂದೆ ಬಂಗಾರಪ್ಪ ಸೊರಬದಲ್ಲಿ ಸ್ಪರ್ಧಿಸುವುದರ ಜತೆಯಲ್ಲೇ ಸಾಗರದಲ್ಲೂ ಸ್ಪರ್ಧಿಸಿ, ತಿಮ್ಮಪ್ಪ ಅವರನ್ನು ಸೋಲಿಸಲು ನಡೆಸಿದ ಪ್ರಯತ್ನವೂ ವಿಫಲವಾಯಿತು. ತಿಮ್ಮಪ್ಪ - ಬಂಗಾರಪ್ಪ ಅವರ ಮೈತ್ರಿ ಹಾಗೂ ದ್ವೇಷ ಒಂದು ಪುಸ್ತಕಕ್ಕೇ ಗ್ರಾಸವಾಗಿದೆ.
ಸಾಗರ ಕ್ಷೇತ್ರದಲ್ಲಿ ತಿಮ್ಮಪ್ಪ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಕಾಲದಿಂದಲೇ ಅಭಿವೃದ್ಧಿ ಕೆಲಸಗಳು ಚೆನ್ನಾಗಿಯೇ ನಡೆದಿವೆ. ಇಡೀ ದೇಶದಲ್ಲಿ ರಾಷ್ಟ್ರೀಯ ವಿಸ್ತರಣೆ ಯೋಜನೆ ಹಾಗೂ ಸಮುದಾಯ ಅಭಿವೃದ್ಧಿಯ ಪ್ರಯೋಗ ನಡೆದಾಗ, ಕರ್ನಾಟಕದಲ್ಲಿ ಸಾಗರ ಕ್ಷೇತ್ರವನ್ನೇ ಆರಿಸಿಕೊಳ್ಳಲಾಗಿತ್ತು. ಆ ಕಾಲದಲ್ಲಿ ನಿರ್ಮಾಣವಾದ ಕೆಲವು ಕಾಮಗಾರಿಗಳು ಇಂದಿಗೂ ಉಪಯುಕ್ತವಾಗಿವೆ. ಮುಂದೆ ಗೋವಾದ ರಾಜ್ಯಪಾಲರಾಗಿ ನಿವೃತ್ತಿ ಹೊಂದಿದ ಟಿ.ಆರ್. ಸತೀಶ ಚಂದ್ರನ್, ಆ ಕಾಲಕ್ಕೆ ಸಾಗರದಲ್ಲಿ ಅಸಿಸ್ಟೆಂಟ್ ಕಮಿಷನರ್.
ತಿಮ್ಮಪ್ಪ ಅವರು ಗುಂಡೂರಾವ್, ವೀರೇಂದ್ರ ಪಾಟೀಲ್ ಅವರ ಮಂತ್ರಿ ಮಂಡಲದಲ್ಲಿ ಮಂತ್ರಿಗಳಾಗಿ, ಅವರಿಗೆ ಕೊಟ್ಟ ಖಾತೆಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ತಿಮ್ಮಪ್ಪ ಅವರಿಗಿಂತ ಮೊದಲೇ ಕಾಂಗ್ರೆಸ್ಸಿಗೆ ಬಂದಿದ್ದ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ತಿಮ್ಮಪ್ಪ ಗೃಹಮಂಡಳಿಯ ಅಧ್ಯಕ್ಷ.

ವಯಸ್ಸಾದಂತೆ, ಅವರ ಪೋಷಾಕು ಬದಲಾಗಿರಬಹುದು. ಆದರೆ ಚಿಂತನೆ- ವಿಚಾರಧಾರೆ ಬದಲಾಗಿಲ್ಲ. ಇಂದಿನ ಮುಕ್ತ ಆರ್ಥಿಕ ನೀತಿಯ ಜಾರಿಯ ಕಾಲದಲ್ಲೂ, ಜನತಂತ್ರ, ಸಮಾಜವಾದದ ಅವಳಿ ಸಿದ್ಧಾಂತಕ್ಕೆ ಬದ್ಧತೆಯನ್ನು ಉಳಿಸಿಕೊಂಡಿದ್ದಾರೆ.
ವಿಧಾನ ಸಭೆಯ ಅನೇಕ ಸದಸ್ಯರಿಗೆ ತಿಮ್ಮಪ್ಪ ಅವರ ವೈಯಕ್ತಿಕ ಪರಿಚಯವಿದೆ. ಸಚಿವ ಕೃಷ್ಣಭೈರೇಗೌಡರ ತಂದೆ, ಮಾಜಿ ಮಂತ್ರಿ (ಮೊದಲ ಕೃಷಿ ನೀತಿಯ ಖ್ಯಾತಿಯ) ಸಿ. ಬೈರೇಗೌಡರು ತಿಮ್ಮಪ್ಪ ಅವರ ಅತ್ಯಂತ ಆತ್ಮೀಯ ಸಂಗಾತಿ. ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ, ಇಬ್ಬರು ವ್ಯಕ್ತಿಗಳು ಎಷ್ಟರ ಮಟ್ಟಿಗೆ ಅನ್ಯೋನ್ಯವಾಗಿರಬಹುದು ಎನ್ನುವುದಕ್ಕೆ ತಿಮ್ಮಪ್ಪ - ಬೈರೇಗೌಡರ ಜೋಡಿ ಒಂದು ಉದಾಹರಣೆ.
ವೈಯಕ್ತಿಕ ಜೀವನದಲ್ಲಿ ತಿಮ್ಮಪ್ಪ ಊರುಮನೆಯಲ್ಲಿ, ಬೆಂಗಳೂರು ನಗರದಲ್ಲಿ ತಮ್ಮ ಹೆಸರನ್ನು ಕೆಡಿಸಿಕೊಂಡಿಲ್ಲ, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದ ಒಬ್ಬ ವ್ಯಕ್ತಿ ಎಷ್ಟರ ಮಟ್ಟಿಗೆ ಶುದ್ಧವಾಗಿರಬಹುದೋ, ಅಷ್ಟನ್ನೂ ಅವರು ಪ್ರದರ್ಶಿಸಿದ್ದಾರೆ.

ಹೋರಾಟಗಾರ ಶಾಸಕ, ಪ್ರತಿಪಕ್ಷದಲ್ಲಿ ಆವೇಶದ ಪ್ರದರ್ಶನದಲ್ಲಿ ಸರಿಸಾಟಿ ಇಲ್ಲದ ವ್ಯಕ್ತಿಯಾಗಿದ್ದ ಗೋಪಾಲಗೌಡರ ಅಚ್ಚುಮೆಚ್ಚಿನ ಬೆಂಬಲಿಗ, ಮಂತ್ರಿಯಾಗಿ ತುಂಬಾ ಗಾಂಭೀರ್ಯದಿಂದಲೇ ನಡೆದುಕೊಂಡ ಬೇರು ಮಟ್ಟದ ರಾಜಕಾರಣಿ, ಕಾಗೋಡು ತಿಮ್ಮಪ್ಪ ಈಗ ಕರ್ನಾಟಕ ವಿಧಾನ ಸಭೆಯ ಗೌರವಾನ್ವಿತ ಸ್ಪೀಕರ್. ಒಬ್ಬ ರಾಜಕಾರಣಿಗೆ ಸಲ್ಲಬಹುದಾದ ಅತಿ ದೊಡ್ಡ ಗೌರವ ಅದು. ಆ ಸ್ಥಾನದ ಪ್ರತಿಷ್ಠೆ ತಿಮ್ಮಪ್ಪ ಅವರಲ್ಲಿ ಭದ್ರವಾಗಿದೆ ಎನ್ನುವುದರಲ್ಲಿ ಯಾರಿಗೂ ಅನುಮಾನ ಬೇಡ.

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com