ಪರೋಪಕಾರ

Updated on: 

ಅಂದು ಶನಿವಾರ. ಮಧ್ಯಾಹ್ನ  ಹನ್ನೆರಡು ಗಂಟೆಗೆಲ್ಲ ತರಗತಿಗಳು ಮುಗಿದಿದ್ದವು. ರಾಮು ಮತ್ತು ಸೋಮು ಶಾಲೆಯಿಂದ ಮನೆಯತ್ತ ಅವಸರವಾಗಿ ದೌಡಾಯಿಸುತ್ತಿದ್ದರು. ತಮ್ಮ ತಮ್ಮ ಮನೆಗಳಿಗೆ ಹೋಗಿ ಊಟ ಮಾಡಿ ಸಿನಿಮಾಗೆ ಹೊರಡುವವರಿದ್ದರು. ಮಧ್ಯಾಹ್ನ ಎರಡರ ಪ್ರದರ್ಶನಕ್ಕೆ ಹಿಂದಿನ ದಿನವೇ ಟಿಕೆಟ್ ಕೊಂಡಿದ್ದರು. ರಾಮು ಸೋಮುವಿನ ಮನೆಗೆ ಓಡೋಡಿ ಬಂದವನೆ 'ಏನು...ಇನ್ನೂ ರೆಡಿಯಾಗಿಲ್ವೆ? ಇನ್ನರ್ಧ ಗಂಟೆಯಲ್ಲಿ ನಾವಲ್ಲಿರಬೇಕು. ಬಾ ತಡವಾಗುತ್ತೆ' ಅಂತ ಸೋಮುವನ್ನು ಅವಸರಿಸಿದ. ಸೋಮುವಿನ ತಾಯಿ ಸ್ವಲ್ಪ ಕೋಡುಬಳೆ ತಿನ್ನು ಎಂದರೂ ಒಲ್ಲೆನೆಂದ. ಗುಟುಕು ಟೀ ಮಾತ್ರ ಕುಡಿದ. ಸರಿ, ಇಬ್ಬರೂ ಟಾಕೀಸಿಗೆ ಧಾವಿಸಿದರು. ಇವೊತ್ತು ಶನಿವಾರ. ತುಂಬಾನೇ ಟ್ರಾಫಿಕ್‌ಜಾಮ್. ಬಸ್ಸು, ಆಟೋಗಿಂತ ಓಡುವುದೇ ವಾಸಿ ಎಂದು ಅವರು ತೀರ್ಮಾನಿಸಿದ್ದರು.

ಅವರ ಹಾದಿಯಲ್ಲಿ ಒಂದೆಡೆ ಆಯಕಟ್ಟಿನಲ್ಲಿ  ಜನ ಗುಂಪುಗೂಡಿದ್ದರು. ರಾಮು, ಸೋಮುವಿಗೆ ಸಹಜವಾಗಿ ಕುತೂಹಲ. ಏನಾಯ್ತು... ಎನಾಯ್ತು ಅಂತ ಜಮಾಯಿಸುತ್ತಿದ್ದವರ ಪ್ರಶ್ನೆ. ಅಲ್ಲಿ ನಿಜವಾಗಿ ಆಗಿದ್ದೇನೆಂದರೆ, ಸುಮಾರು ನಲವತ್ತರ ವಯಸ್ಸಿನ ಮಹಿಳೆ ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ಹಣೆ, ಮೊಣಕೈಗೆ ಗಾಯವಾಗಿತ್ತು. ರಾಮು ಮತ್ತು ಸೋಮುವಿಗೆ ಗುಂಪನ್ನು ಭೇದಿಸಿ ನೋಡಲು ಸಾಧ್ಯವಾಗಲಿಲ್ಲ.

'ರಾಮು, ನಾವೇಕೆ ಹೀಗೆ ಮಾಡಬಾರದು? ಪಾಪ, ಆಕೆ ಎಷ್ಟು ಸಂಕಟಪಡುತ್ತಿದ್ದಾಳೋ ಎನೋ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ಅದೇ ಮಾನವೀಯತೆ ಅಂತ ನಮ್ಮ ಟೀಚರ್ ಆವಾಗಾವಾಗ ಹೇಳುತ್ತಲೇ ಇರುತ್ತಾರೆ. ಓದು, ಬರಹ ನಮಗಷ್ಟೇ ಪ್ರಯೋಜನಕ್ಕೆ ಬಂದರೆ ಸಾಲದು. ಅದರಿಂದ ಪರೋಪಕಾರವೂ ಆಗಬೇಕು. ಬಾ, ಹೇಗೂ ನಮ್ಮಿಬ್ಬರಲ್ಲೂ ಅಲ್ಪಸ್ವಲ್ಪ ಪಾಕೆಟ್‌ಮನಿ ಇದೆ. ಒಂದು ಆಟೋ ಮಾಡೋಣ. ಆ ಮಹಿಳೆಯನ್ನು ಕೂರಿಸಿಕೋಡು ಆಸ್ಪತ್ರೆಗೆ ಸೇರಿಸೋಣ. ಆಕೆಯ ಮನೆಯವರಿಗೆ ವಿಷಯ ತಿಳಿಸೋಣ. ಎನಂತೀಯಾ?' ಎಂದ.

'ಸೋಮು, ನಿನ್ನನ್ನು ಅತಿಬುದ್ಧಿವಂತ ಅನ್ನಬೇಕು. ಸಿನಿಮಾಗೆ ಇನ್ನು ಬರೀ ಹತ್ತು ನಿಮಿಷ ಇದೆ. ಆ ಹೆಂಗಸು ಯಾರೋ ಏನೋ ನಾವು ನೋಡಿಲ್ಲ. ಮೇಲಾಗಿ ಇಲ್ಲಿ ಜನ ಕೂಡ ಜಾಗ ಬಿಡ್ತಿಲ್ಲ. ನೀನು ಬೇಕಾದ್ರೆ ತೋಚಿದಂತೆ ಮಾಡು. ನಾನಂತೂ ಸಿನಿಮಾಗೆ ಹೋಗ್ತೀನಿ' ಎಂದ ರಾಮು ಕಡ್ಡಿ ತುಂಡು ಮಾಡಿದಂತೆ. ಸೋಮುವಿಗೆ ವಿಪರೀತ ಬೇಸರ, ಸಿಟ್ಟಾಯಿತು ರಾಮುವಿನ ಮೇಲೆ. ಶಾಲೆಯಲ್ಲಿ ನಾವು ಓದುವುದೇ ಒಂದು. ನಮ್ಮ ನಡವಳಿಕೆಯೇ ಇನ್ನೊಂದು ಅಂತ ಅವನಿಗೆ ಜುಗುಪ್ಸೆಯಾಯಿತು. 'ಸರಿ ನಡಿ. ನಿಂಗ್ಯಾಕೆ ಬೇಜಾರು ಮಾಡಲಿ' ಎಂದು ಸೋಮು ಒಲ್ಲದ ಮನಸ್ಸಿನಿಂದ ಸಿನಿಮಾಗೆ ಹೋಗಲು ರಾಮುವನ್ನು ಹಿಂಬಾಲಿಸಿದ. ಆ ದಿನ ಸಿನಿಮಾ ವೀಕ್ಷಿಸಿ ಅವರು ಮನೆ ತಲುಪುವಷ್ಟರಲ್ಲಿ ಸಂಜೆ ಐದು ದಾಟಿತ್ತು. ರಾಮುವಿಗೆ ಆಚ್ಚರಿ ಕಾದಿತ್ತು. ತನ್ನ ಮನೆಯ ಬಾಗಿಲಿಗೆ ಬೀಗ ಹಾಕಿತ್ತು. ಆಗ ಪಕ್ಕದ ಮನೆಯವರು 'ರಾಮು, ಏನೂ ಗಾಬರಿಯಿಲ್ಲ. ನಿಮ್ಮ ತಾಯಿಗೆ ಸಣ್ಣ ಅಪಘಾತವಾಗಿದೆ. ಇಲ್ಲೇ ಪಾರ್ಕ್ ಹತ್ತಿರದ ಜೈ ಹಿಂದ್ ನರ್ಸಿಂಗ್‌ಹೋಮ್‌ಗೆ ಸೇರಿಸಲಾಗಿದೆ. ನಿನ್ನ ಅಪ್ಪ, ಅಕ್ಕ ಎಲ್ಲ ಅಲ್ಲೇ ಇದ್ದಾರೆ. ಈಗ್ತಾನೇ ಫೋನ್ ಮಾಡಿದ್ರು...ಹುಷಾರಾಗಿದಾರೆ.  ಸಾಧ್ಯವಾದ್ರೆ ನಾಳೇನೇ  ಮನೆಗೆ ಕಳಿಸ್ತಾರಂತೆ..' ಎಂದು ನಡೆದ ಘಟನೆಯನ್ನು ವಿವರಿಸಿದರು.

ಆತಂಕದಿಂದ ರಾಮು ನರ್ಸಿಂಗ್ ಹೋಮ್‌ಗೆ ಹೋದ. ಅವನ ಅನುಮಾನ ನಿಜವೇ ಆಗಿತ್ತು. ಹೌದು. ಸೋಮು ಬಾ ಸಹಾಯ ಮಾಡೋಣ ಅಂತ ಒತ್ತಾಯಿಸಿದನಲ್ಲ ...ಅದೇ  ಬೈಕ್ ಬಡಿದು ಪೆಟ್ಟಾಗಿದ್ದ ಮಹಿಳೆ...ಅವನ ಅಮ್ಮನಾಗಿದ್ದಳು. ರಾಮು ಅಪ್ಪ, ಅಕ್ಕನನ್ನು ತಬ್ಬಿ ಕಣ್ಣೀರು ಸುರಿಸಿದ. ಅಪ್ಪ, ಅಕ್ಕ ಅವನನ್ನು, 'ಸದ್ಯ ಏನೂ ಆಗಿಲ್ಲ. ಅಲ್ಲಿ ಸೇರಿದ್ದವರು ಸಕಾಲದಲ್ಲಿ ಈ ನರ್ಸಿಂಗ್ ಹೋಮ್‌ಗೆ ಸೇರಿಸಿ ಫೋನ್ ಮಾಡಿದರು. ದೇವರು ದೊಡ್ಡವನು' ಎಂದು ಸಂತೈಸಿದರು. ಆ ವೇಳೆಗೆ ಸೋಮು ತನ್ನ ಅಪ್ಪ, ಅಮ್ಮನೊಡನೆ ಅಲ್ಲಿಗೆ ಬಂದ. ಸೋಮುವಿನಂಥ ಮಿತ್ರ ತನಗಿದ್ದಾನೆ ಅಂತ ರಾಮು ಮನಸಿನಲ್ಲೇ ಬೀಗಿದ. ನಿಂಗೆ ಒಂದು ಟಿಫಿನ್ ಬಾಕ್ಸ್ ತರಲು ಅಂಗಡಿಗೆ ಹೋಗಿದ್ದೆ ಕಣೋ ಎಂದು ಅಮ್ಮ ನಗುತ್ತಲೇ ಹೇಳಿದಾಗ ರಾಮು ಮೂಕವಿಸ್ಮಿತನಾಗಿದ್ದ. ತನಗರಿವಿಲ್ಲದಂತೆಯೆ ಅವನು ಅಮ್ಮನ ಕೈಗಳಲ್ಲಿ ಸೆರೆಯಾಗಿದ್ದ.
-ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com