ಅಪರೂಪಕ್ಕೆ ಮಗಳು ಮನೆಗೆ ಬಂದಿದ್ದರಿಂದ ಸೀತಮ್ಮನಿಗೆ ಹಿಡಿಸಲಾರದ ಹಿಗ್ಗಾಗಿತ್ತು. ಹಾಲು ಚೆಲ್ಲಿದಂತಿದ್ದ ಬೆಳದಿಂಗಳನ್ನ ಕಣ್ಣಲ್ಲಿ ತುಂಬಿಕೊಂಡವಳಂತೆ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮಲಗಿದ್ದ ಸೀತಮ್ಮನ ಬಳಿ ಮೊಮ್ಮಗಳು ಅಳ್ತ ಬಂದಿದ್ದರಿಂದ ಎದ್ದು ಕುಂತು 'ಯಾವಳೆ, ನನ್ನ ಗಿಣಿಮರಿನ ಹೊಡೆದಿದ್ದು. ಅಮ್ಮೋ.. ನಿಮ್ ಪುಂಡಾಟ ನನ್ನ ಹತ್ರ ನಡೆಯಲ್ಲ. ಆಮೇಲೆ ಮಗ್ಲು ಯಮೆಕೆ ಮುರಿದೇನು' ಮೊಮ್ಮಗಳ್ನ ಸಂತೈಸುವ ನೆಪದಲ್ಲಿ ಮಗಳು ಶ್ರೀಲಕ್ಷ್ಮಿ ಮೇಲೆ ರೇಗಿ ಶ್ರಾವಣಿನ ಆಪ್ಯಾಯಮಾನವಾಗಿ ಅಪ್ಪಿಕೊಂಡಿದ್ದಳು.
ಅಜ್ಜಿಯ ಸಂತಯಿಕೆಯಿಂದ ಉಕ್ಕೋ ಹಾಲಿಗೆ ನೀರು ಚುಮುಕಿಸಿದಂತೆ ಸಮಾಧಾನವಾದರೂ ಕಿದಕುತ್ತಲೆ ಬಾಯಲ್ಲಿದ್ದ ಮೈಸೂರುಪಾಕ್ನ ತಿಂದು ಮುಗಿಸಿದ್ಲು. 'ನೀನು ಜಾಣಮರಿ ಅಲ್ವ ಅಳಬಾರ್ದು' ಎಂದು ರಮಿಸಿದ ಸೀತಮ್ಮ ಮೊಮ್ಮಗಳ ದುಃಖಾನ ಮರೆಸೋಕೆ ಪಕ್ಕದಲ್ಲಿ ಮಲಗಿಸಿಕೊಂಡು 'ಅಮ್ಮೋ.. ನೀನು ಏಳುಮಲ್ಲಿಗೆ ತೂಕದ ರಾಜಕುಮಾರಿಯಂತೆ. ನನ್ನ ಕಾಲಮೇಲೆ ಜಂಬೊ ಆಡಬೇಕಂತೆ' ಅಂತೇಳಿ ಶ್ರಾವಣಿನ ತನ್ನ ಪಾದದ ಮೇಲೆ ಕೂರಿಸಿಕೊಂಡು ಎರಡು ಸಲ ಜಂಬೊ ಆಡಸಿದಳು ಸೀತಮ್ಮ. 'ಅಬ್ಬಬ್ಬಾ ಏನ್ ತೂಕ ಇದಿಯೆ ಉಳ್ಳಿಮೂಟೆ ತರ ಸೀಸ್ಕಟ್ಟಾಗಿದಿಯಮ್ಮೊ' ಎಂದಾಗ ನಮ್ಮಜ್ಜಿ ಕೈಯಲ್ಲಿ ಎತ್ತೋಕಾಗಲ್ಲ ಎಂದುಕೊಂಡ ಶ್ರಾವಣಿಗೆ ತನ್ನ ತೂಕದ ಬಗ್ಗೆ ತನಗೆ ಹೆಮ್ಮಯೆನಿಸಿ ಪಕ್ಕಾಡಿಕೊಂಡು ನಕ್ಕಳು- ಬೆಳದಿಂಗಳೂ ಬೆರಗಾಗುವಂತೆ.
'ಹಾಗಾದ್ರೆ ಒಂದು ಕತೆ ಹೇಳಜ್ಜಿ' ಸೀತಮ್ಮನ ಮೇಲೆ ಕಾಲಾಕ್ತ, ರೆಟ್ಟೆ ಮೇಲೆ ತಲೆ ಇಡ್ತ, ಎದೆಮೇಲೆ ಕೈ ಹಾಕಿದ ಶ್ರಾವಣಿ ಅಜ್ಜಿನ ಮುದ್ದು ಮಾಡಿ ಕೇಳಿದ್ದಳು. 'ನನಗೆ ಕತೆಗಿತೆ ಬರಲ್ಲಮ್ಮ' ಅಂತೇಳಿದರೂ ಕೇಳದೆ ಮೊಮ್ಮಗಳು ಹಟ ಮಾಡಿದಾಗ 'ಆಯ್ತು ಹೇಳ್ತಿನಿ. ಆದ್ರೆ ನೀನು ಸರಿಯಾಗಿ ಊಗುಟ್ಲಿಲ್ಲಾಂದ್ರೆ ನಾನು ಕತೆ ಹೇಳೋದು ಅಲ್ಲಿಗೆ ನಿಲ್ಲಿಸ್ತಿನಿ ನೋಡು' ಅಂತೇಳಿ ಷರತ್ತು ಹಾಕಿದಾಗ. ಕಥೆ ಕೇಳುವ ಕುತೂಹಲದಿಂದ ಅಜ್ಜಿನ ಇನ್ನಷ್ಟು ಬಿಗಿಯಾಗಿ ತಬ್ಬಿಕೊಂಡ ಶ್ರಾವಣಿ. 'ಒಂದೂರಾಗೆ ರಾಜರಾಣಿ ಇದ್ರು. ಅವರಿಗೆ ಏಳುಜನ ಮಕ್ಕಳು' ಅಂತೇಳಿ ಅಮ್ಮ ಹೇಳಿದ್ದೇ 'ಹೇಳಬ್ಯಾಡ' ಎಂದು ಮೊಮ್ಮಗಳೂ ಒಂದು ಕಂಡೀಷನ್ ಹಾಕಿ ಅಜ್ಜಿ ಹೇಳುವ ಹೊಸಕತೆ ಕೇಳೊ ಕಾತರದಲ್ಲಿ ಮೈಯಲ್ಲಾ ಕಿವಿಯಾಗಿಸಿಕೊಂಡಳು. ನಾನು ಸುಮ್ನಿದ್ರು ಇವುಳು ಬಡಪರ್ತಿಗೆ ಬಿಡಂಗೆ ಕಾಣಲ್ಲ ಎಂದುಕೊಂಡ ಸೀತಮ್ಮ ಸೊಲುಪೊತ್ತು ಯೋಚಿಸಿ ಕಥೆ ಹೇಳತೊಡಗಿದಳು.
'ಒಂದೂರಾಗೆ ಗಂಡ ಹೆಣ್ತಿ ಇದ್ರಂತೆ. ಅವರಿಗೆ ನಾಕು ಜನ ಹೆಣ್ಣುಮಕ್ಕಳು. ಗಂಡುಮಕ್ಕಳು ಆಗ್ಲಿಲ್ಲಾಂತ ಗಂಡನಿಗೆ ಸಿಂತೆ. ಹೆಣ್ಣುಮಕ್ಕಳ್ನ ಸಾಕೋದು ಯಂಗೆ ಅನ್ನೋದು ಹೆಣ್ತಿಗೆ ಸಿಂತೆ. ಯಾಕಂದ್ರೆ ಅವುರು ಅಡಿವ್ಯಾಗೆ ಹೊಲ ಇಲ್ಲ, ಊರಾಗೆ ಸರಿಯಾದ ಮನೆ ಇಲ್ಲ ಅನ್ನೋರ ತರ ಇದ್ರು. ಆಯಮ್ಮನ ಗಂಡ ಉಂಡಾಡಿ ಗುಂಡಣ್ಣ. ತಿಳುದಾಗ ಕೆಲಸಕ್ಕೆ ಹೋಗೋದು, ಆ ಕೂಲಿ ದುಡ್ನಲ್ಲಿ ಗಂಟ್ಲಮಟ್ಟ ಕುಡಿದು ಬಂದು ಜಗಳ ಮಾಡೋದು, ಹೆಣ್ತಿನ ಹೊಡೆಯೋದು ಮಾಡ್ತಿದ್ದ. ಆಯಮ್ಮ ಕೆಲಸ ಸಿಕ್ಕಾಗ ಕೂಲಿನಾಲಿ ಮಾಡೋದು. ಸಿಗದಿದ್ದಾಗ, ಇದ್ದಂತವರ ಮನೆಯ ಮುಸುರೆ ತಿಕ್ಕೋದು. ಬಟ್ಟೆ ತೊಳೆಯೊ ಕೆಲ್ಸ ಮಾಡ್ತ ಬಂದ ಆದಾಯದಲ್ಲೆ ಮಕ್ಕಳ್ನ ಸಾಕ್ತಾ ಇಸ್ಕೂಲಿಗೆ ಕಳಿಸ್ತಿದ್ಲು. ಒಂದೊಂದ್ಸಲ ಗಂಡ ಕುಡಿಯೋದ್ನ ಮನೆಗೇ ತಂದು ಹೆಣ್ತಿಗೂ ಕುಡಿಯಂತ ಬಲವಂತ ಮಾಡ್ತಿದ್ನಂತೆ. ಕುಡಿಲಿಲ್ಲಾಂದ್ರೆ ಇವನತ್ರ ಯಾರು ಒದೆ ತಿಂತಾರೆ ಅಂತೇಳಿ ಲೋಟಾದಲ್ಲಿ ಸುರಿದಿದ್ದ ಸಾರಾಯ್ನ ಸೆಲ್ಲಿ, ಅದರಲ್ಲಿ ನೀರು ಹಾಕ್ಕೊಂಡು ಕುಡಿದ ಮೇಲೆ, ನಿಶೆ ಏರಿದವಳ ತರ ನಾಟಕ ಮಾಡಬೇಕಲ್ಲ, ಅದ್ಕೆ ವಾಲಾಡ್ತ ಗಂಡನ್ನ ಬಾಯಿಗೆ ಬಂದಂಗೆ ಬಯ್ಯೋದು. ಒಂದೊಂದು ಸಲ ಸೊಂದಿನಲ್ಲಿ ಸಮಾರಾಜ್ಯ ಅಂತೇಳಿ ಗಂಡನ ಬೆನ್ನಿಗೆ ಡಕಿಡಕಿ ಗುದ್ದಿ ಒಳಗೊಳಗೆ ಕುಸಿ ಪಡ್ತಿದ್ಲಂತೆ. ಅಂತಾ ಟೈಮಲ್ಲಿ ಗಂಡ ನಗ್ತಿದ್ನಂತೆ. ಹಿಂಗೇ ಜೀವ್ನ ಮಾಡ್ತಿರಬೇಕಾದ್ರೆ ಗಂಡನಿಗೆ ಗಂಡುಮಕ್ಕಳ ಮೇಲಿನ ಮೋಹ ಜಾಸ್ತಿಯಾಗಿ, ಕೊನೆಗೊಂದು ದಿನ ಆಕೆ ಗಂಡ ಇನ್ನೊಬ್ಬಳ್ನ ಮದುವೆಯಾಗಿ ಬ್ಯಾರೆ ಊರಿಗೆ ಹೋಗಿಬಿಟ್ನಂತೆ...'
'ಇನ್ನೊಂದು ಮದುವೆ ಯಾಕೆ ಮಾಡ್ಕಂಡ?' ಅಜ್ಜಿ ಕಥೆ ಹೇಳುವುದನ್ನ ಅರ್ಧಕ್ಕೆ ತುಂಡರಿಸಿದ ಶ್ರಾವಣಿ ತನ್ನ ಕುತೂಹಲ ವ್ಯಕ್ತ ಪಡಿಸಿದಳು.
'ಆಯಮ್ಮನಿಗೆ ಗಂಡು ಮಕ್ಕಳು ಆಗಿರ್ಲಿಲ್ವಲ್ಲ, ಅದ್ಕೆ'
'ಸರಿ ಮುಂದಕ್ಕೆ ಹೇಳು'
'ಮುಂದಕ್ಕೆ ಇನ್ನೇನು. ಅವುನ್ಗಂತೂ ಹೆಣ್ತಿ ಮಕ್ಕಳು ಬೇಕಿರ್ಲಿಲ್ಲ. ನಾನೂ ನನ್ನ ಸುಖಾನೇ ನೋಡಿಕೊಂಡ್ರೆ ಈ ಹೆಣ್ಮಕ್ಕಳ ಗತಿ ಏನು ಎಂದುಕೂಂಡ ಆಕೆ ಕೂಲಿನಾಲಿ ಮಾಡ್ತ ಬಡವಿ ನೀನು ಮಡಗಿದಂಗಿರು ಅಂತೇಳಿ ಮಕ್ಕಳ್ನ ಸಾಕ್ಕೊಂಡಿದ್ಲು. ಆಕೆ ಕಷ್ಟ ನೋಡಿ ಕನಿಕರ ಪಟ್ಟ ಆ ಊರಿನ ಪುಣ್ಯಾತ್ಮರೊಬ್ಬರು ಸಿಸುವಾರದ ಆಯಾ ಕೆಲಸಕ್ಕೆ ಸೇರಿಕೊಳ್ಳೊಕೆ ಹೇಳಿದ್ರು. ಆಕೆ ಅವರಿವರ ಕೈಕಾಲು ಹಿಡಕಂಡಾಗ, ಮಕ್ಕಳೊಳು ಬದಿಕ್ಕೆಮ್ಲಿ ಅಂತೇಳಿ ಆಯಾ ಕೆಲಸ ಸಿಗಂಗೆ ಮಾಡಿದ್ರು. ಅವತ್ನಿಂದ ಸಿವ ಮೆಚ್ಚಂಗೆ ದುಡಿತಾ ನಾಕು ಜನ ಹೆಣ್ಣು ಮಕ್ಕಳ್ನ ಸಾಕ್ತ ನಾನು ಪಟ್ಟ ಕಷ್ಟ ನನ್ನ ಮಕ್ಕಳು ಪಡಬಾರದಂತ ಚೆನ್ನಾಗಿ ಓದುಸ್ತಿದ್ಲು. ಆದ್ರೆ ಅದರಲ್ಲಿ ದೊಡ್ಡ ಮಗಳಿಗೆ ಓದು ತಲೆಗೆ ಹತ್ಲಿಲ್ಲಾಂತ ಮೈ ನೆರೆತ ಮೂರು ವರ್ಸಕ್ಕೆ ಮದುವೆ ಮಾಡಿಕೊಟ್ಲು. ದೇವರಂತ ಅಳಿಯ ಸಿಕ್ಕಿದ್ರಿಂದ ದೊಡ್ಡ ಮಗಳ ಬಾಳು ಬಂಗಾರ ಆಯ್ತು. ಉಳಿದವರಲ್ಲಿ ಒಬ್ಬಳು ನರ್ಸಾಗ್ತಿನಂತ ಇನ್ನೂಬ್ಬಳು ಮೇಡಮ್ಮ ಆಗ್ತಿನಂತ ಹಿಂಗೇ ಏನೇನೊ ಓದಿ ಕೆಲಸಕ್ಕೆ ಸೇರ್ಕಂಡು ಕೈತುಂಬ ಸಂಬಳ ತರಂಗಾದ್ರಂತೆ. ಅವರ್ನ ನೋಡಿ ಮುಶಿಣಿ ತಿರುಮೊರೆಲ್ಲ ಮೂಗಿನ ಮೇಲೆ ಬೆರಳಿಟ್ಕಣಂಗೆ ದೊಡ್ಡಮನೆ ಕಟ್ಟಸಿಕೊಂಡು ಅವುರು ಅಲ್ಲಿ ಸುಕವಾಗಿದಾರೆ. ನಾವಿಲ್ಲಿ ಅಂಗಳದಾಗೆ ಚಾಪೆ ಹಾಸ್ಕಂಡು ಮಲಗಿದಿವಿ' ಎಂದಾಗ. ಶ್ರಾವಣಿಗೆ ಕಥೆ ಮುಗಿದಿದ್ದೇ ಗೊತ್ತಾಗಲಿಲ್ಲ. ಇನ್ನೊಂದು ಕಥೆ ಹೇಳೆಂದು ಪುಸಲಾಯಿಸಬೇಕಂತ ಅಜ್ಜಿ ಕೆನ್ನೆಗೆ ಮುತ್ತು ಕೊಡುವಾಗ, ಅಜ್ಜಿ ಕಣ್ಣಲ್ಲಿ ಇನ್ನೊಂದು ಕಥೆ. 'ಯಾಕಜ್ಜಿ ಅಳ್ತಿಯ?' ಶ್ರಾವಣಿಯ ಪ್ರಶ್ನೆಗೆ ಉತ್ತರ ಅನ್ನೋದು ಬೆಳದಿಂಗಳಿನಂತೆ ನಿಚ್ಚಳವಾಗಿರಲಿಲ್ಲ.
-ಮೋದೂರು ತೇಜ
moduruteja@gmail.com