ಸೆಕೆಂಡ್ ಇನ್ನಿಂಗ್ಸ್

Updated on: 

ಟಿವಿಯಲ್ಲಿ ಯಾವುದೋ ಚಾನೆಲ್‌ನಲ್ಲಿ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಸಾರ ಆಗ್ತಾ ಇತ್ತು. ಡ್ಯೂಟಿ ಮುಗಿಸಿ ಬಂದು ಒಳಹೊಕ್ಕವಳಿಗೆ ಅದರಲ್ಲೇ ಕಣ್ಣು ಕೀಲಿಸಿ ಕುಳಿತ ಪತಿರಾಯನ ಈ ಭಂಗಿ ಹೊಸತೇನೂ ಅಲ್ಲವಾದರೂ ಅವಳು ಒಳ ಹೊಕ್ಕಿದ್ದನ್ನೂ ಗಮನಿಸದಷ್ಟು ಅವನ ಧ್ಯಾನಸ್ಥ ಸ್ಥಿತಿ ಎಂದಿನಂತೆ ಅವಳನ್ನು ರೊಚ್ಚಿಗೇನೂ ಎಬ್ಬಿಸಲಿಲ್ಲ. ಮಗಳ ಕೋಣೆಗೆ ಹೋದರೆ ಎಂದಿನಂತೆ ಮಂಚದ ಮೇಲೆ ಹಾಕಿ ನೋಡಿ ಬೇಡವೆಂದೆಸೆದ ಕನಿಷ್ಟ ಮೂರ್ನಾಲ್ಕು ಜೋಡಿ ಬಟ್ಟೆಗಳ ರಾಶಿ ನೋಡಿಯೂ ಇಂದು ಆಕೆಗೆ ಮನದಲ್ಲೇ ರೇಗಬೇಕೆಂದೆನಿಸಲಿಲ್ಲ. ಆ ರಾಶಿಯಿಂದಾಯ್ದ ಟೀ ಶರ್ಟೊಂದನ್ನು ಮೈಗೆ ಆನಿಸಿ ಹಿಡಿದು ನಿಲುವುಗನ್ನಡಿಯಲ್ಲಿ ನೋಡಿಕೊಂಡಳಾಕೆ.
ಹೌದೇ? ಅವನು ಹೇಳಿದ್ದು ನಿಜವೇ? ಏನೆಂದಿದ್ದ ಆತ. ಇಷ್ಟು ದಿನಗಳ ಧಾವಂತದ ಬದುಕಿನಲ್ಲಿ ತಾನು ಗಮನಿಸಿಯೇ ಇರಲಿಲ್ಲ. ತಾನಿನ್ನೂ ಚೆಲುವೆಯೇ ಆಗಿ ಉಳಿದಿದ್ದೇನೆಯೇ? ಹಾಗಂತ ಕೊನೆಯ ಬಾರಿ ತನ್ನ ಈ ಪತಿರಾಯನಿಂದ ತಾನು ಕೇಳಿಸಿಕೊಂಡದ್ದು ಯಾವಾಗ? ಹೊಸ ಸೀರೆ ಉಟ್ಟರೂ ತಿಳಿಯದ, ಅತ್ತರೂ, ನಕ್ಕರೂ ಸೂಕ್ಷ್ಮಗಳನ್ನು ಗಮನಿಸದ ಗಂಡನಿಂದ ಅಂಥ ಮಾತುಗಳನ್ನು ನಿರೀಕ್ಷಿಸುವುದನ್ನು ಅವಳೂ ಇತ್ತೀಚೆಗೆ ಬಿಟ್ಟುಬಿಟ್ಟಿದ್ದಳು. ಮಗಳು ಚಿಕ್ಕವಳಿರುವಾಗಲ್ವಾ? ತನ್ನ ಆಫೀಸಿನ ಕ್ಲಬ್ ಡೇಯಲ್ಲಿ ತಾನು ಸ್ಟೇಜ್ ಮೇಲೆ ಹಾಡಿದ್ದೆ. ಅವತ್ತು ರಾತ್ರಿ ಗಂಡ, 'ಈ ಬಿಂದಿ ನಿನ್ನ ಹಣೆಗೆ ಚೆನ್ನಾಗಿ ಒಪ್ಪುತ್ತೆ. ನಿನ್ನ ದುಂಡು ತೋಳಿಗೆ ಇದೇ ರೀತಿ ಬ್ಲೌಸ್ ಹೊಲಿಸ್ಕೋ' ಅಂತೇನೋ ಹೇಳಿದ ನೆನಪು. ಅದನ್ನು ಕೇಳಿ ತಾನೂ ಎಷ್ಟು ಉಬ್ಬಿ ಹೋಗಿದ್ದೆ. ಆ ಮೇಲಿನ ದಿನಗಳಲ್ಲಿ ತನ್ನ ಗಮನವೂ ಬೆಳೆಯುವ ಮಗಳ ಮೇಲೆ, ಅವಳ ಹೋಂವರ್ಕ್, ಪರೀಕ್ಷೆ ಅಂತ ಯಾವಾಗ ವ್ಯಸ್ತವಾಯ್ತೋ. ಬಹುಶಃ ಅದೇ ಹೊತ್ತಿಗೆ ನಗರಕ್ಕೆ ಟಿವಿ ರಿಲೇ ಕೇಂದ್ರ ಬಂತು. ನ್ಯೂಸ್ ಪೇಪರನ್ನು ಗಂಟೆಗಟ್ಟಲೆ ಓದುತ್ತಿದ್ದವ ಈಗ ಟಿವಿಗೆ ಮುಖ ಮಾಡಿದ. ಬೆಳಗ್ಗೆ ನ್ಯೂಸ್‌ಪೇಪರ್, ಸಂಜೆಯಿಂದ ರಾತ್ರಿಯವರೆಗೆ ಟಿವಿ ವೀಕ್ಷಣೆ. ಅದರಲ್ಲೂ ರಾಜಕೀಯ, ಕ್ರಿಕೆಟ್ ಅಂತ ತನಗೆ ಆಸಕ್ತಿಯಿಲ್ಲದ ಕ್ಷೇತ್ರಗಳು, ಚಾನೆಲ್‌ಗಳು. ಅಲ್ಲೂ ಒಟ್ಟಿಗೆ ಕುಳಿತು ನೋಡುವುದು, ಮಾತನಾಡುವುದಕ್ಕೆ ಅವಕಾಶವಿರಲಿಲ್ಲವೋ ಅಥವಾ ತನ್ನ ಶಿಫ್ಟ್ ಡ್ಯೂಟಿ, ನಿದ್ರೆ, ಬೆಳೆಯುವ ಮಗಳ ಬೇಡಿಕೆಗಳ ಪೂರೈಕೆ ಅಂತ ತಾನೇ ಆ ಕಡೆ ಲಕ್ಷ್ಯ ಕೊಡಲಿಲ್ಲವೋ ತಿಳಿಯದು.
ಮೊನ್ನೆ ವಿವಾಹದ ಬೆಳ್ಳಿಹಬ್ಬದ ಆಚರಣೆ ದಿನ ಮಗಳು ಬೇಕೆಂದೇ ರೇಗಿಸ್ತಾ ಇದ್ಲು. 'ಪಪ್ಪಾ ಮಮ್ಮಿ ಇಬ್ರೂ ಇವತ್ತು ಎಲ್ಲಾದ್ರೂ ರೆಸಾರ್ಟ್‌ಗೆ ಹೋಗಿ ಇರಿ. ನಾನು ಫ್ರೆಂಡ್ಸ್ ಜೊತೆ ಇರ್ತೇನೆ' ಅಂತೆಲ್ಲ ಹೇಳ್ತಾ ಇದ್ಲು.
'ಹೋಗೇ, ಮದುವೆಗೆ ಬೆಳೆದ ಮಗಳನ್ನು ಮನೆಯಲ್ಲಿ ಇಟ್ಕೊಂಡು ಅದೆಂಥ ರೆಸಾರ್ಟು, ಸೆಲೆಬ್ರೇಷನ್‌' ಅಂದ್ರೂ ಕೇಳದೇ ಆ ದಿನ ರಾತ್ರಿ ಅವಳು ಫ್ರೆಂಡ್ಸ್ ಜೊತೆ ಹಾಸ್ಟೆಲ್‌ನಲ್ಲಿ ಉಳಿದದ್ದು, ಮರುದಿನ ಬೆಳಗ್ಗೆ 'ಹೇಗಾಯ್ತು ಮಮ್ಮಿ? ಪಪ್ಪ ತುಂಬಾ ಸತಾಯ್ಸಿದ್ರಾ?' ಅಂತ ಕೀಟಲೆ ಮಾಡಿದ್ದು, ರಾತ್ರಿ ಇವರ ಗೊರಕೆ ಸದ್ದು ಕೇಳಲಾರದೇ ತಾನು ಮಗಳ ರೂಮಿನಲ್ಲಿ ಮಲಗಿದ್ದು ನೆನಪಾಗಿ ನಗು ಬಂದಿದ್ದು, ಅದನ್ನವಳು ಬೇರೆಯೇ ಅರ್ಥ ಕಲ್ಪಿಸಿ 'ಹಾಗಾದ್ರೆ ನನಗೊಬ್ಬ ತಮ್ಮ ಬರ್ತಾನಾ?' ಅಂತ ಕಿಚಾಯಿಸಿದ್ದು ಎಲ್ಲಾ ನೆನಪಾಯ್ತು.
  'ಹೋಗೇ ಸುಮ್ನೆ, ನಿನಗೊಬ್ಬ ಒಳ್ಳೇ ಗಂಡು ಸಿಕ್ಕಿ ನಿನ್ನ ಮದುವೆ ಆಗುವವರೆಗೂ ನನ್ನ ಕಷ್ಟ ನಿನಗೇನು ಗೊತ್ತು?' ಅಂತ ತಾನಂದ್ರೆ, 'ನನಗೇನೂ ಅರ್ಜೆಂಟಿಲ್ಲ, ಹಣೆ ಮೇಲಿನ ನಾಲ್ಕು ಬಿಳಿ ಕೂದ್ಲು ಕಪ್ಪು ಮಾಡ್ಕೊಂಡ್ರೆ ನನಗಿಂತ ನಿನ್ನನ್ನೇ ಗಂಡು ಕೇಳಿಕೊಂಡು ಬರುವ ಹಾಗಿದ್ದಿ' ಅಂತ ಅವಳು ರೇಗಿಸಿದ್ರೂ, 'ಹೌದಾ? ನಾನಿನ್ನೂ ಹಾಗಿದ್ದೀನಾ?' ಅಂತ ಎಂದೂ ತನಗೆ ಅನಿಸಿಯೇ ಇರಲಿಲ್ಲ. ಈಗ ನೋಡಿದ್ರೆ ಅವನೂ ಹಾಗೇ ಹೇಳಿದನಲ್ಲ.ಅವನ ಕಣ್ಣೇನಾದ್ರೂ ಐಬಿರಬಹುದೇ?
  ಎಫ್‌ಎಂ ರೇಡಿಯೋದಲ್ಲಿ ಅವಳು ನಡೆಸಿಕೊಡುವ ಚಾಟ್‌ಶೋಗಳಿಂದ ನಗರದ ಮನೆಮಾತಾಗಿದ್ದಳು ಆಕೆ.ಅವಳ ಮಾತಿನ ಸರಣಿ, ನಗು, ಚಾಕಚಕ್ಯತೆ ಎಲ್ಲವನ್ನೂ ಮೆಚ್ಚಿ ನೂರಾರು ಪತ್ರಗಳು ರೇಡಿಯೋ ಕೇಂದ್ರಕ್ಕೆ ಬರುತ್ತಿದ್ದುವು. ಅವುಗಳಲ್ಲಿ ಒಂದು ಪತ್ರ ಮಾತ್ರ ವಿಶಿಷ್ಟವಾಗಿರುತ್ತಿತ್ತು. ಸುಂದರ ಕೈಬರಹ, ತಪ್ಪಿಲ್ಲದ ವಾಕ್ಯ ಜೋಡಣೆ, ನುರಿತ ವಿಮರ್ಶೆ ಜೊತೆಗೆ ಅವಳ ಬಗ್ಗೆ ಸ್ನೇಹಪರ ಆರ್ದ್ರತೆ ಆ ಪತ್ರಗಳಿಂದ ಜಿನುಗುತ್ತಿತ್ತು. ಮೊದಮೊದಲು ಎಲ್ಲ ಪತ್ರಗಳಂತೆ ಆ ಪತ್ರವನ್ನೂ ಓದಿ ಆಚೆ ಇಟ್ಟು ಬಿಡುತ್ತಿದ್ದಳು. ಆದರೆ ಕ್ರಮೇಣ ತನ್ನ ಪ್ರತಿಯೊಂದು ಮಾತು, ಶಬ್ದಪ್ರಯೋಗಗಳನ್ನು ಆಲಿಸಿ ಅದರ ಬಗ್ಗೆ ಮೆಚ್ಚುಗೆ, ಪ್ರತಿಕ್ರಿಯೆ ವ್ಯಕ್ತವಾಗತೊಡಗಿದಾಗ ಮಾತ್ರ ಪತ್ರ ಬರೆದವರ ಬಗ್ಗೆ ಕುತೂಹಲ ಮೂಡತೊಡಗಿತ್ತು. ಆದರೆ ಬರೆಯುವವರು ತಮ್ಮ ಹೆಸರು, ವಿಳಾಸ ಬರೆಯುತ್ತಿರಲಿಲ್ಲವಾದುದರಿಂದ ಯಾರೆಂಬ ಕುತೂಹಲವನ್ನು ಹತ್ತಿಕ್ಕಿಕೊಂಡಳಾದರೂ ಆ ಪತ್ರಗಳಿಂದ ಸ್ರವಿಸುತ್ತಿದ್ದ ಆತ್ಮೀಯವಾದ, ರಸಾರ್ದ್ರ ಭಾವತರಂಗಗಳು ಅವಳನ್ನು ತಟ್ಟದೇ ಬಿಡಲಿಲ್ಲ.
   ಅಂದು ಅವಳು ತುಂಬ ಬ್ಯುಸಿ. ಆ ದಿನವೇ ಬಂದಿರಬೇಕು ಯಾವುದೋ ಪ್ರಾಜೆಕ್ಟ್ ವರ್ಕ್‌ಗೆಂದು ಬಂದ ವಿದ್ಯಾರ್ಥಿಗಳ ಸಮೂಹ. ತಲೆಗೊಂದರಂತೆ ನಾನಾ ಪ್ರಶ್ನೆಗಳನ್ನು ಕೇಳಿ ತಲೆಚಿಟ್ಟು ಹಿಡಿಸುತ್ತಿದ್ದ ಯುವಕ ಯುವತಿಯರು. ಅವರ ಜೊತೆಗೊಬ್ಬ ಅವರ ವಿಭಾಗದ ಮುಖ್ಯಸ್ಥ. ಎಲ್ಲರ ಪ್ರಶ್ನೆಗಳಿಗೂ ಸಾವಧಾನವಾಗಿ ಉತ್ತರಿಸಿ ನಗುನಗುತ್ತಾ ಕಳುಹಿಸಿಕೊಟ್ಟಿದ್ದಳು. 'ಏನಾದ್ರೂ ಸಂದೇಹಗಳಿದ್ದರೆ ವಿಚಾರಿಸಲು ನಿಮ್ಮ ಮೊಬೈಲ್ ನಂಬರ್ ಕೊಡಬಹುದೇ?' ಅಂತ ತುಂಡು ಲಂಗದ ಹುಡುಗಿ ಕೇಳಿದಾಗ 'ಕೊಡಲಡ್ಡಿಯೇನಿಲ್ಲ. ಆದ್ರೆ ಶಿಫ್ಟ್ ಮುಗಿಸಿ ನಿದ್ರೆ ಮಾಡುವಾಗ ಮಾತ್ರ ತೊಂದರೆ ಕೊಡಬಾರದು' ಅಂತ ನಯವಾಗಿಯೇ ಹೇಳಿ ಸೆಲ್ ನಂಬರ್ ಕೊಟ್ಟಿದ್ದಳು.ಬಹುಶಃ ಎರಡೋ ಮೂರೋ ದಿನಗಳ ಬಳಿಕ ಬಂದಿತ್ತು ಆ ಪತ್ರ. ಓಹ್‌ಎಂಥ ಪತ್ರ ಅದು. ಬಹುಶಃ ಅವಳ ಯೌವ್ವನದ ದಿನಗಳಲ್ಲೂ ಅಂಥ ಪತ್ರ ಬಂದಿರಲಾರದು. ಅವಳ ನಗು, ಅವಳ ಮಾತುಗಾರಿಕೆ, ಚುರುಕುತನ,  ನಿಲ್ಲುವ ಭಂಗಿ, ವಿವರಿಸುವ ರೀತಿ ಎಲ್ಲವನ್ನೂ ಬಗೆಬಗೆಯಗಿ ವರ್ಣಿಸಿದ ಅದೇ ಪರಿಚಿತ ಹಸ್ತಾಕ್ಷರದ ಪತ್ರವದು. ಪತ್ರ ಓದ್ತಾ ಓದ್ತಾ ಅವಳಿಗರಿವಿಲ್ಲದೇ ಕೆನ್ನೆ ಕೆಂಪಾಗಿ, ಕಳೆದ ಯೌವ್ವನ ಮತ್ತೆ ಮರುಕಳಿಸಿದ ಭಾವ. ಓಹ್‌ಎಂಥ ಕೊರಡನ್ನೂ ಚಿಗುರಿಸಬಲ್ಲ ಪ್ರೇಮವೇ ನಿನಗೆ ಶರಣು ಎಂದುಕೊಂಡಳಾಕೆ. ಆದರೆ ಹಾಳಾದವರು ಯಾರಿರಬಹುದು? ವಿಳಾಸ, ಹೆಸರು ಒಂದೂ ಬರೆಯದೆ ಸತಾಯಿಸುತ್ತಿದ್ದಾರೆ. ಇರಲಿ, ಎಂದುಕೊಳ್ಳುತ್ತಾ ಮನೆಗೆ ಬಂದು ಫ್ರಿಜ್‌ನಿಂದ ಅನ್ನ, ಸಾಂಬಾರ್ ತೆಗೆದು ಬಿಸಿ ಮಾಡಿಕೊಂಡು ಊಟದ ಶಾಸ್ತ್ರ ಮಾಡಿ ಇನ್ನೇನು ಅಡ್ಡಾಗಬೇಕು ಎಂದಾಗ ರಿಂಗಣಿಸಿದ ಸೆಲ್ಲನ್ನು ಎತ್ತಿಕೊಂಡರೆ ಆ ಕಡೆಯಿಂದ ಮೆತ್ತನೆಯ ಆದರೆ ಗಂಭೀರ ಗಂಡು ಧ್ವನಿ, 'ಇನ್ನೂ ಮಲಗಿಲ್ಲ ತಾನೇ, ಇವತ್ತು ಬೆಳಗ್ಗಿನ ಶಿಫ್ಟ್‌ನಲ್ಲಿದ್ರಿ'
'ಯಾರು ನೀವು?' ಎಂದಳಾಕೆ.
'ಪತ್ರ ತಲುಪಿತೇ?' ಆ ಕಡೆಯಿಂದ ಪ್ರಶ್ನೆ.
'ಓಹ್, ಆ ಪತ್ರ ಬರೆಯುವವರು ನೀವಾ?'
'ನಾನೇ, ಇವತ್ಯಾಕೋ ತಡೆದುಕೊಳ್ಳಲಾಗಲಿಲ್ಲ, ಕ್ಷಮಿಸಿ, ಇವತ್ತಿನ ಕಾರ್ಯಕ್ರಮದಲ್ಲಿ ಮುಂಗಾರು ಮಳೆಯ ಹಾಡನ್ನು ಹಾಕಿದ್ರಿ, ಕಥಾನಾಯಕ ನಾಯಕಿಯನ್ನು ಗುಡ್ಡದ ಮೇಲೆ ಎತ್ತಿಕೊಂಡು ಹೋದ ಹಾಗೆ ನಿಮ್ಮನ್ನೂ ಎತ್ತಿಕೊಂಡು ಹೋಗಲೇ ಅನಿಸ್ತು...'
'ರ್ರೀ...ಯಾರ್ರೀ...ನೀವು? ನನ್ನ ಸೆಲ್ ನಂಬರ್ ನಿಮಗೆ ಕೊಟ್ಟವರು ಯಾರು?'
'ನೀವೇ, ಮಲಗುವ ಮೊದಲೇ ಕರೆ ಮಾಡಿ ಅಂದಿದ್ರಲ್ಲ, ಅದಕ್ಕೆ ಮೊದಲೇ ಮಾಡಿದ್ದೇನೆ, ನಿದ್ರೆಯೇನೂ ಕೆಡಿಸಿಲ್ಲ ತಾನೇ?'
'ಯೂ ಶಟಪ್, ಯಾರು ನೀವು? ಇಲ್ಲಾಂದ್ರೆ...?'
'ಇಲ್ಲಾಂದ್ರೆ ಏನು ಮಾಡ್ತೀರಿ? ಇಷ್ಟು ಕೋಪ ಒಳ್ಳೇದಲ್ಲ. ಆದ್ರೆ ಒಂದು ಮಾತು, ಸಿಟ್ಟು ಬಂದಾಗ ಹೇಗೆ ಕಾಣ್ತೀರಿ ಅಂತ ನೋಡ್ಬೇಕಿತ್ತು, ಈ ವಯಸ್ಸಲ್ಲೂ ಎಷ್ಟು ಚೆನ್ನಾಗಿದ್ದೀರಿ...'
ಬಹುಶಃ ಅವನು ಇನ್ನೂ ಏನೇನು ಹೇಳ್ತಾ ಇದ್ನೋ ಅವಳು ಅವನ ಕರೆಯನ್ನು ಕಟ್ ಮಾಡಿಬಿಟ್ಟಿದ್ದಳು. ಆವೇಗಕ್ಕೆ ಅವಳ ಮೈ ನಡುಗುತ್ತಾ ಇತ್ತು. ಯಾರೀತ? ಸೆಲ್ ನಂಬರ್ ಯಾರಿಗೆ ಕೊಟ್ಟಿದ್ದೆ? ಓಹ್ ಅವತ್ತು ಪ್ರಾಜೆಕ್ಟ್ ವರ್ಕ್ ಅಂತ ಬಂದಿದ್ರಲ್ಲ, ಆ ವಿದ್ಯಾರ್ಥಿಗಳ ಸಮೂಹದಲ್ಲಿದ್ದನಲ್ಲ ಆ ಪೊದೆ ಮೀಸೆಯವ, ಕೈಕಟ್ಟಿಕೊಂಡು ದೂರ ನಿಂತು ನೋಡ್ತಿದ್ದ. ಅವನ ಕಣ್ಣುಗಳು ನೆನಪಾದುವು. ಹೌದಲ್ಲ, ಅವಳನ್ನೇ ನುಂಗುವಂತೆ ನೋಡ್ತಿದ್ದನಲ್ಲ. ಅವನೇ ಇರಬಹುದೇ? ಯಾವ ಕಾಲೇಜಿನ ಹುಡುಗರು ಅವರು ಅಂತ ನೆನಪಿಸಿಕೊಳ್ಳತೊಡಗಿದಳು. ನೆನಪಾಗಲಿಲ್ಲ. ಯಾವುದೋ ಇಂಜಿನಿಯರಿಂಗ್ ಕಾಲೇಜಿನ ಹುಡುಗ್ರು ಅಂತ ಹೇಳಿದ ನೆನಪು.
ಅಂದ ಹಾಗೆ ಆತ ಕರೆ ಮಾಡಿದ ದೂರವಾಣಿ ಸಂಖ್ಯೆ ಯಾವುದು ಅಂತ ಪರೀಕ್ಷಿಸಿದರೆ ಯಾವುದೋ ಪಬ್ಲಿಕ್ ಬೂತ್‌ನದ್ದು. ಹೋಗ್ಲಿ, ಆತ ಯಾರು ಅಂತ ತಿಳ್ಕೊಂಡು ತನಗಾದ್ರೂ ಏನಾಗ್ಬೇಕಾಗಿದೆ ಅಂತ ಮನಸ್ಸನ್ನು ಕೊಡವಿಕೊಂಡಳಾಕೆ.
ಆ ಮೇಲೆ ಅವನ ಪತ್ರವೂ ಇಲ್ಲ, ಫೋನೂ ಇಲ್ಲ, ಹಾಳಾದವ ಪತ್ರವನ್ನಾದರೂ ಮೊದಲಿನಂತೆ ಬರೆಯಬಾರದೇ? ಈಗೀಗ ಅವಳು ಚಾಟ್‌ಶೋಗಳಲ್ಲಿ ಮೊದಲಿಗಿಂತಲೂ ನವಿರಾಗಿ ಮಾತಾಡುತ್ತಾಳೆ, ತನ್ನ ಮಾತುಗಳನ್ನು ಅವನು ಕೇಳಿಸಿಕೊಳ್ಳುತ್ತಿರಬಹುದೇ ಅಂತ ಪುಳಕಗೊಳ್ಳುತ್ತಾಳೆ. ಛೇ ಆ ದಿನ ಅಷ್ಟು ಜೋರಾಗಿ ಸಿಡುಕಬಾರದಿತ್ತು ಅಂದುಕೊಳ್ಳುತ್ತಾಳೆ. ಈಗೀಗ ಅವಳ ಮೈಯ್ಯಲ್ಲೇನೋ ಹೊಸ ಹುರುಪು, ಅವಳ ಕುಣಿತದ ನಡಿಗೆ ನೋಡಿ ಮಗಳು ಹುಬ್ಬೇರಿಸುತ್ತಾಳೆ. ರಾತ್ರಿ ಗಂಡನ ಕೂದಲಲ್ಲಿ ಬೆರಳಾಡಿಸಿದಾಗ ಆತನೂ ಇವಳಿಗೇನಾಯಿತು ಎಂಬಂತೆ ನೋಡಿದಾಗ ಅಪ್ಪಿ ಹೂ ಮುತ್ತನೊತ್ತುತ್ತಾಳೆ.

- ಶಕುಂತಲಾ ಕಿಣಿ
kini.shakunthala@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com