ಮಿಣುಕು ದೀಪದ ಹುಳುಗಳಂತಿರುವ ದೂರದ
ನಕ್ಷತ್ರಗಳ ಗೊಡವೆ ಸಾಕು.
ಮಂಕು ದೀಪಗಳ ಬೆಳಕು ಹಾದಿಗೆ ಬೆಳಕಲ್ಲ
ಮುಂದಿನ ಹತ್ತು ಹೆಜ್ಜೆಯೂ
ಕಾಣುವುದಿಲ್ಲ. ಉಸಿರು ಬಿಡುವುದಕ್ಕೂ ಭಯ.
ಅಂದ ಮಾತ್ರಕ್ಕೆ, ತಡೆಹಿಡಿಯಲಾದೀತೇ
ಅದನ್ನು ಹಾಗೆಯೇ ಒಳಗೆ. ಮುಖ ಕೆನ್ನೀಲಿಗೆ
ತಿರುಗಿ, ಉಸಿರುಕಟ್ಟಿ ಒದ್ದಾಡಬೇಕಾದೀತು.
ನಂಬಿಕೆಯ ಮಾತುಗಳೇ ಹೀಗೆ, ಜೀವ ಕಟ್ಟಿಹಾಕಿ
ಕತ್ತುಹಿಸುಕುತ್ತವೆ. ಇದ್ದೇನೆ ನಿನ್ನೊಂದಿಗೆ
ಎಂದು ನೂರು ಬಾರಿ ಹೇಳುವ ಬದಲು,
ತೋರಿಸಿಕೊಳ್ಳಬಾರದೇ ತನ್ನಿರುವಿಕೆಯನ್ನು.
ನಂಬುವುದು ಎಷ್ಟು ದಿನ, ಒಳಗೊಳಗೇ
ತಿನ್ನುವ ಗೆದ್ದಲು ಹುಳುಗಳನ್ನು
2.
ಕಣ್ಣ ಮುಂದಿನ ಬದುಕು
ಕಾಣುವುದಿಲ್ಲ ನೆಟ್ಟರೆ ದೃಷ್ಟಿ ದಿಗಂತದಲ್ಲಿ.
ನಿಜ ಒಪ್ಪುತ್ತೇನೆ ವಿಶ್ವಾಸವಿದೆ
ಇರುವಿಕೆಯಲ್ಲಿ, ಉಸಿರು ಬಿಡುತ್ತೇನೆ ನಿರಾಳವಾಗಿ,
ಹುಡುಕುತ್ತೇನೆ ಸುತ್ತ ಮುತ್ತ
ಮತ್ತೆ ವಿಶ್ವಾಸವಿಟ್ಟು, ನನ್ನೊಳಗೆ ಬರುವೆಯೆಂದು.
ನನ್ನದೇ ಜೀವ ನೀನು,
ನಂಬಿಕೆಯ ಮಾತಲ್ಲವಿದು, ಮಗುವಿನ ಮುಗ್ಧತೆಯಲ್ಲಿ
ಅರಳಿದ ಹೃದಯದ ಹೂವು
ಮತ್ತೆ ಅನಂತ ಆಗಸ, ಬೆಳಕು, ನಕ್ಷತ್ರಗಳ
ರುಚಿಗೆ ಓಡೋಡಿ ಬಂದಂತೆ.
ಭಯವಿಲ್ಲ, ಇರುವುದೆಲ್ಲ ಇಲ್ಲಿ ಬರೀ ಪ್ರೀತಿ.
ಕೈಯೊಳಗಿನ ಬೆಳಕು ಬರುತ್ತದೆ
ಜೊತೆಗೆ ಹೋದಲ್ಲೆಲ್ಲ ಹೌದು ಇಲ್ಲಗಳ ದಾಟಿ.
-ಎಂ.ಎಸ್. ರುದ್ರೇಶ್ವರಸ್ವಾಮಿ
swamy_dop@yahoo.com