ಪಂಪಾ ತೀರ

ಪಂಪಾ ತೀರ
Updated on: 

'ರಂಗಬೆಡಗು' ಕೆವೈಎನ್‌ರ ಐದು ನಾಟಕಗಳ ಉತ್ಸವವನ್ನು 'ಭಾಗವತರು' ಸಂಘಟನೆ ಆಶ್ರಯದಲ್ಲಿ ನಡೆಸಿತು. ಇತ್ತೀಚಿನ ರಂಗ ಪ್ರಯೋಗಗಳಿಗೆ ಹೊಸ ಭಾಷ್ಯ ಬರೆದವರಲ್ಲಿ ಕೆ.ವೈ. ನಾರಾಯಣಸ್ವಾಮಿ ಒಬ್ಬರು. ಯಾವುದೇ ವಿಷಯವನ್ನು ಈಗಿನ ಕಾಲಘಟ್ಟಕ್ಕೆ ಹೋಲಿಸಿ, ಹೊಂದಿಸಿ ಕಳಕಳಿಯನ್ನು ಕಟ್ಟಿಕೊಟ್ಟಿದ್ದಾರಿವರು. ಈ ಉತ್ಸವದ ಐದು ನಾಟಕಗಳಲ್ಲಿ ಒಂದಾದ 'ಪಂಪಭಾರತ'ವನ್ನು ಸಮುದಾಯ ತಂಡ, ಪ್ರಮೋದ್ ಶಿಗ್ಗಾಂವ್ ನಿರ್ದೇಶನದಲ್ಲಿ ರಂಗಕ್ಕೆ ತಂದಿತ್ತು.
ನಾಟಕದ ಶೀರ್ಷಿಕೆ ಪೌರಾಣಿಕ ಹಿನ್ನೆಲೆಯದ್ದು. ಕಥಾಸುರುಳಿ ಎಲ್ಲಾ ಕಾಲಮಾನವನ್ನೂ ಅಳೆದು, ಸುರಿದು ವಿಶ್ಲೇಷಿಸುತ್ತಾ, ವಿವೇಚನೆಗೆ ಗುರಿ ಮಾಡುತ್ತಾ, ಗೋಜಲುಗಳನ್ನು ಬಿಡಿಸುತ್ತಾ, ಒಮ್ಮೊಮ್ಮೆ ಪ್ರೇಕ್ಷಕರನ್ನು ಗೊಂದಲದಲ್ಲಿ ನೂಕುತ್ತಾ ಪಂಪನ ಇರುವಿಕೆಯನ್ನೂ ಅವನ ಕಾಲದ ಸಾಮಾಜಿಕ ಪರಿಸ್ಥಿತಿಯನ್ನೂ ಮತ್ತು ಬರಹವನ್ನು ಇಡಿಯಾಗಿ ಅಲ್ಲದಿದ್ದರೂ ಹಿಡಿಯಲ್ಲಿ ವಿಸ್ತರಿಸಲಾಗಿದೆ. 'ಭಾರತ'ವನ್ನು ತೆರೆದಿಡುತ್ತಾ ಪೌರಾಣಿಕ ದೃಶ್ಯಗಳನ್ನು ನೇರವಾಗಿ ತಂದು ಅಲ್ಲೇ, ಆ ಲೇಖಕನನ್ನು ನಿಲ್ಲಿಸಿ, ಪಾತ್ರಗಳೊಂದಿಗೆ ಮುಖಾಮುಖಿ ಚರ್ಚಿಸಲು ವೇದಿಕೆ ಸೃಷ್ಟಿಸಿ ಭಿನ್ನವಾಗಿಸಿದೆ. 'ಭಾರತ'ದ ಪಾತ್ರವಾದ ಕರ್ಣನು ಆ ಪಾತ್ರಕ್ಕೆ ದೊರೆತ ನ್ಯಾಯ ಅನ್ಯಾಯದ ಬಗ್ಗೆ ನೇರ ಪ್ರಶ್ನೆಗಳನ್ನು ಪಂಪಮಹಾಕವಿಗೇ ಕೇಳಿ ಸಮಾಧಾನ ಪಡೆಯುವ ಪ್ರಯೋಗ 'ಭಾರತ' ಓದಿದವನ ಪ್ರಶ್ನೆಗಳಿಗೂ ಸಮಾಧಾನ ನೀಡುವಂತಿದೆ. ಮತಾಂತರಗೊಳ್ಳುವ ಪ್ರಸ್ತುತ ಸಮಾಜಕ್ಕೂ ಪಂಪನ ಕಾಲದಲ್ಲಿದ್ದ ಮತಾಂತರಕ್ಕೂ ಹೋಲಿಕೆಯನ್ನು ಮೂಲವಾಗಿಟ್ಟು ಐತಿಹಾಸಿಕದ ಮತಾಂತರದ ಸ್ಥಿತಿ ವರ್ತಮಾನದಲ್ಲೂ ಇರುವ ಸತ್ಯವನ್ನು ಪ್ರಚುರಪಡಿಸಿದ್ದಾರೆ. ನಾಟಕದಲ್ಲಿ 'ಭಾರತ'ದ ದೃಶ್ಯಗಳು ಪಂಪಭಾರತವಷ್ಟೇ ಅಲ್ಲದೆ ಇತರ 'ಭಾರತ'ದಲ್ಲೂ ಇರುವುದರಿಂದ ಈ ನಾಟಕದ ಶೀರ್ಷಿಕೆಯನ್ನು 'ಪಂಪ ಮತ್ತು ಭಾರತ' ಎಂದಿದ್ದರೆ ಸೂಕ್ತವೆನಿಸುತ್ತಿತ್ತೇನೋ?
ಪಂಪನ ಕಾಲದ ಶಾಸನ ಓದಲು ಬರುವ ವಿದ್ಯಾರ್ಥಿಗಳಿಂದ ಪ್ರಾರಂಭವಾಗುವ ನಾಟಕ ಮತ್ತೆ ಮುಕ್ತಾಯವೂ ಅದೇ ಥರದ ದೃಶ್ಯಗಳೊಂದಿಗೆ ಆಗುತ್ತದೆ. ಈ ಶಾಸನದ ಹಿಂದಿನ ಕಥೆಯನ್ನು ಪ್ರೇಕ್ಷಕ ಊಹಿಸದೆಯೇ ವೈವಿಧ್ಯವಾಗಿ ತೆರೆದುಕೊಂಡು 'ಹೀಗೂ ಉಂಟೇ' ಎನಿಸುತ್ತದೆ. ಎಂಥ ಅಮೂಲ್ಯ ವಸ್ತುವಾದರೇನು, ಅದರ ಗಂಧ ಗೊತ್ತಿಲ್ಲದವರಿಗೆ ಅದು ಯಃಕಶ್ಚಿತ್ ಎನಿಸುವಂತೆ ಶಾಸನದ ಪಕ್ಕ ಮೂತ್ರ ವಿಸರ್ಜಿಸುವ ಪ್ರಕ್ರಿಯೆ ನಿರ್ದೇಶಕರ ಜಾಣ್ಮೆಯಾಗಿದೆ.
ದೃಶ್ಯದಿಂದ ದೃಶ್ಯಕ್ಕೆ ಪಾತ್ರಗಳು ತಮ್ಮ ಪರಿಚಯವನ್ನು ತಾವೇ ಮಾಡಿಕೊಳ್ಳುತ್ತ ರಂಗದ ನಡೆಯನ್ನು ಕೈ ಹಿಡಿದು ನಡೆಸುತ್ತಾ, ಎಲ್ಲಾ ಕತೆಯನ್ನೂ ನೋಡುಗನಿಗೆ ತಿಳಿಸಿ, ತಾವು ಬಂದ ದಾರಿಯಲ್ಲೇ ಮರೆಯಾಗುವ ನಿರೂಪಣಾ ಶೈಲಿ ಅತ್ಯುತ್ತಮ. ಕರ್ಣ ಮತ್ತು ದ್ರೌಪದಿಯರ ಸಂಭಾಷಣೆಗಳು ಅರ್ಥಗರ್ಭಿತ. ಅವರ ಹುಟ್ಟು ಬೆಳವಣಿಗೆಗಳನ್ನು ಹಿಡಿದಿಡುವ ಪ್ರಯತ್ನ ಇಲ್ಲಿದೆ.
ಪಂಪ ಮತ್ತು ಕರ್ಣ ದೋಣಿಯಲ್ಲಿ ಹೋಗುವ ದೃಶ್ಯ- ಸಂಭಾಷಣೆ ಮನಕ್ಕೆ ನಾಟುವಂತಿದೆ. ಪಂಪ ಪಾತ್ರಧಾರಿ ನೀರಿನಲ್ಲಿನ ದೋಣಿಯ ಕದಲುವಿಕೆಗನುಗುಣವಾಗಿ ಸ್ಪಂದಿಸುವ ಪರಿಪಾತ್ರದ ಜೀವಂತಿಕೆ.
ದುರ್ಯೋಧನನ ಹೆಂಡತಿಯೊಂದಿಗೆ ಪಗಡೆಯಾಡಿ ಗೆದ್ದ ಕರ್ಣನು ಮಣಿಸರವನ್ನು ಕಿತ್ತ ದೃಶ್ಯದಲ್ಲಿ ಅಚಾನಕ್ಕಾಗಿ ಬಂದ ದುರ್ಯೋಧನ ಅಲ್ಲಿನ ಪರಿಸ್ಥಿತಿಯನ್ನು ಅರಿಯದೇ ನೇರ ಮಣಿಗಳನ್ನು ಆರಿಸಿಕೊಡುವ ಕ್ರಿಯೆ ಸ್ವಲ್ಪ ಅಭಾಸ. ನಂತರ ಅವರೊಂದಿಗೆ ಕೂಡಿ ಪಗಡೆಯಾಡುವ ಸನ್ನಿವೇಶ ಅವರ ಮಿತ್ರತ್ವವನ್ನು ಪ್ರತಿನಿಧಿಸುತ್ತದೆ. ಮಹಾಭಾರತದ ಯುದ್ಧ ದೃಶ್ಯಗಳಲ್ಲಿ ಪೌರಾಣಿಕ ಪೋಷಾಕನ್ನೇ ಪೋಷಿಸದೆ ವಿಭಿನ್ನ ವೇಷಭೂಷಣಗಳನ್ನು ಬಳಸಿ ಭಿನ್ನತೆಗೆ ಎಡೆಮಾಡಿದ್ದಾರೆ. ಕಾವಲುಗಾರನ ಪ್ರಶ್ನೆಗೆ ಕರ್ಣ ಉತ್ತರಿಸುತ್ತಾ ಜಯದ ವಿಜಯಲಕ್ಷ್ಮಿ ಬಂದಿದ್ದಳು. ಇದೀಗ ತಾನೇ ಪಾಂಡವರ ಪಾಳೆಯಕ್ಕೆ ಹೋದಳು ಎಂಬ ಸಂಭಾಷಣೆಗಳು ಕೆವೈಎನ್‌ರನ್ನು ಗುರುತಿಸುವಂತೆ ಮಾಡುತ್ತದೆ.
ಹಳೇಗನ್ನಡದ ಕೆಲವು ಹಾಡುಗಳು ಹಿಡಿಸುತ್ತವೆ. ಗೀತೆಗಳೆಲ್ಲ ಲಯಬದ್ಧವಾಗಿದ್ದು ಪಂಪನ ಕನ್ನಡದ ಮಣ್ಣಿನ ವ್ಯಾಮೋಹವನ್ನು ಪರಿಚಯಿಸುವ ದೃಶ್ಯ ಕನ್ನಡಿಗರನ್ನು ಪುಳಕಿತರನ್ನಾಗಿಸುತ್ತದೆ. ಪಂಪನಾದಿಯಾಗಿ ಎಲ್ಲಾ ಪಾತ್ರಗಳೂ ತಮ್ಮ ಪರಧಿಯಲ್ಲಿ ತಾವು ಜೀವಿಸಿ ನಟಿಸಿದ್ದಾರೆ. ಅಲ್ಲಲ್ಲಿ ಪದ ಸ್ಪಷ್ಟತೆ, ಏರಿಳಿತಗಳ ಕೊರತೆಯನ್ನು ಹೊರತುಪಡಿಸಿದರೆ ಇದು ಯಶಸ್ವಿ ಪ್ರಯೋಗವೇ ಸರಿ. ಕಲ್ಪನಾಲೋಕದಿಂದ, ಸ್ವಪ್ನದಿಂದಲೋ ಧುತ್ತೆಂದು ಜಾರಿಬಿದ್ದಂತಾಗುತ್ತದೆ. ಒಂದು ಪೌರಾಣಿಕ ನಾಟಕವಾಗಿ ನಿಲ್ಲಬಹುದಿದ್ದ ಕಥೆಯನ್ನು ಹದಗೊಳಿಸಿ ಕಥಾ ಲೇಖಕನನ್ನು ಪಾತ್ರವಾಗಿಸಿ ಕತೆಯೊಳಗಿನ ಪಾತ್ರಗಳನ್ನು ರಂಗಕ್ಕೆ ತಂದು ಐತಿಹಾಸಿಕ ಪಾತ್ರಗಳನ್ನು, ಕಾಲಘಟ್ಟವನ್ನು ಮೀರಿಸಿ ಪಾತ್ರಗಳನ್ನಾಗಿಸಿ ಮುಖಾಮುಖಿ ಮಾಡಿಸುವ ಪ್ರಕ್ರಿಯೆಯೇ ಈ ನಾಟಕದ ವಿಶೇಷ.

ಸಂಕೇತ್ ಗುರುದತ್ತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com