ಸಂಗೀತ ಪುಣ್ಯಕ್ಷೇತ್ರ ಗ್ವಾಲಿಯರ್

ಹಸ್ಸೂ ಖಾನರ ಈ ದುರಂತ ಮರಣದಿಂದ ನೊಂದ ಹದ್ದೂ ಖಾನ್ ಗ್ವಾಲಿಯರನ್ನೇ ತೊರೆದು ಲಖನೌಗೆ ಬಂದು ಬಿಟ್ಟರು. ಹಲವಾರು ತಿಂಗಳ ಕಾಲ ಅವರ ಜೀವನ...
ಸಂಗೀತ ಪುಣ್ಯಕ್ಷೇತ್ರ ಗ್ವಾಲಿಯರ್
Updated on: 

ಹಸ್ಸೂ ಖಾನರ ಈ ದುರಂತ ಮರಣದಿಂದ ನೊಂದ ಹದ್ದೂ ಖಾನ್ ಗ್ವಾಲಿಯರನ್ನೇ ತೊರೆದು ಲಖನೌಗೆ ಬಂದು ಬಿಟ್ಟರು. ಹಲವಾರು ತಿಂಗಳ ಕಾಲ ಅವರ ಜೀವನ, ಗಾಯನ ಎಲ್ಲ ಸ್ಥಗಿತಗೊಂಡುಬಿಟ್ಟಿದ್ದವು. ಈ ಅಘಾತದಿಂದ ಮತ್ತೆ ಅವರನ್ನು ಹೊರಗೆಳೆದಿದ್ದೂ ಸಂಗೀತವೇ. ನಂತರ ಹಲವು ದಶಕಗಳ ಕಾಲ ಹದ್ದೂ ಖಾನ್ ತಮ್ಮ ಅಜ್ಜನ, ತಂದೆಯ, ಸಹೋದರನ ಪ್ರತಿನಿಧಿಯಾಗಿ ಸಂಗೀತ ಕ್ಷೇತ್ರದ ನಕ್ಷತ್ರವಾಗಿ ಬೆಳಗಿ ಇಡೀ ಹಿಂದುಸ್ತಾನದ ತುಂಬ ತಮ್ಮ ಸಂಗೀತದ ಪರಿಮಳವನ್ನು ಹರಡಿದರು. ಅವರ ನಿರಂತರ ಸಂಗೀತದ ರಿಯಾಝ್, ಅವರ ಪರಿಶ್ರಮ ಅವರನ್ನು ಆ ಕಾಲದ ಒಬ್ಬ ಮಹಾನ್ ಕಲಾವಿದನನ್ನಾಗಿಸಿತು.
ಇವರ ಮಗನೇ ಬಡೇ ರಹಿಮತ್ ಖಾನ್ (ಮಿರ್ಚಿ ಹಿಡಿದು ಹಾಡಿದ ಗಾಯಕ). ಅಲ್ಲದೇ ಇವರ ಇನ್ನೊಬ್ಬ ಸಹೋದರ ನತ್ತೂ ಖಾನ್ ಕೂಡ ಗಾಯಕರಾಗಿದ್ದು ಅವರ ಗುರು ಶಿಷ್ಯ ಪರಂಪರೆಯೂ ವಿಶಾಲವಾಗಿ ಹರಡಿದೆ. ನತ್ತೂ ಖಾನರ ದತ್ತಪುತ್ರ ನಿಸ್ಸಾರ್ ಹುಸೇನ್ ಖಾನ್‌ರ ಶಿಷ್ಯ ಪರಂಪರೆಯಲ್ಲಿ ಶಂಕರ ರಾವ್ ಪಂಡಿತ್, ಶ್ರೀ ರಾಮಕೃಷ್ಣ ಬುವಾ ವಝೆ ಮೊದಲಾದವರೆಲ್ಲ ಬರುತ್ತಾರೆ. ಶಂಕರ ರಾವ್ ಪಂಡಿತರಂತೂ ಹದಿಮೂರು ವರ್ಷ ನಿಸ್ಸಾರ್ ಹುಸೇನರ ಬಳಿ ಇದ್ದು ಅವರ ಎಲ್ಲ ಬೇಕು ಬೇಡಗಳನ್ನರಿತು ಸೇವೆ ಮಾಡುತ್ತ ಕಠೋರವಾಗಿ ಸಂಗೀತಾಭ್ಯಾಸ ಮಾಡಿದವರು. ಅದಕ್ಕೇ ಸ್ವರ- ತಾಲಗಳೆರಡೂ ಅವರ ಅಧೀನವಾಗಿದ್ದವು. ಅವರು ಸಂಗೀತ ಕ್ಷೇತ್ರದ ಅನರ್ಘ್ಯ ರತ್ನ ಎನ್ನಿಸಿಕೊಂಡರು. ರಾಮಕೃಷ್ಣ ಬುವಾ ವಝೆ ಅವರೂ ಅತ್ಯಂತ ಕಷ್ಟದಿಂದ ಕಲಿತವರೇ. ಕಿತ್ತು ತಿನ್ನುವ ಬಡತನವಿದ್ದೂ ಹನ್ನೆರಡು - ಹದಿನೈದು ವರ್ಷಗಳಷ್ಟು ದೀರ್ಘ ಕಾಲ ಗುರುಗಳ ಬಳಿ ಇದ್ದು ಅವರ ಕಠೋರತನಗಳನ್ನೆಲ್ಲ ಸಹಿಸಿಕೊಂಡು ವಿದ್ಯೆ ಸಂಪಾದಿಸಿದವರು.
ಆಗಿನ ಕಾಲವೇ ಅಂಥದಿತ್ತು. ಒಂದು ರಾಗದ ಒಂದು ಚೀಝ್‌ನ ಒಂದು ಸಾಲನ್ನು ಸಂಪಾದಿಸಲು ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಏಕೆಂದರೆ ಆಗಿನ ಮಹಾನ್ ಕಲಾವಿದರಲ್ಲೆಲ್ಲ ಅದೆಂಥದೋ ನಂಬಿಕೆ - 'ತಮ್ಮ ವಿದ್ಯೆಯನ್ನು ಸುಲಭವಾಗಿ ಯಾರಿಗೂ ಹಂಚಬಾರದು' ಸಂಗೀತ ತಿಳಿಯದವರ ಮುಂದೆಲ್ಲ ಅವರು ಹಾಡುತ್ತಲೇ ಇರಲಿಲ್ಲ. ರೆಕಾರ್ಡಿಂಗ್ ಮಾಡಲೂ ಒಪ್ಪುತ್ತಿರಲಿಲ್ಲ. ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹಠ ಬಿಡದೇ ರಿಯಾಝ್ ಮಾಡಿಸಿ ವಿದ್ಯೆಯನ್ನು ಧಾರೆ ಎರೆಯುತ್ತಿದ್ದರು. ಹೊರಗಿನವರಾರಾದರೂ ಕಲಿಯಲು ಬಂದರೆ ಅವರನ್ನು ಹತ್ತಿರ ಸೇರಿಸಲೂ ಹಿಂಜರಿಯುತ್ತಿದ್ದರು. ಅದೂ ಒಂದು ಕಾಲ.
ಹೀಗೆ ಗ್ವಾಲಿಯರ್‌ನಲ್ಲಿ ಹುಟ್ಟಿ ಬೆಳೆದ ಈ ಸಂಗೀತ ಪರಂಪರೆಯಲ್ಲಿ ಮುಂದೆ ಪಂ.ಓಂಕಾರ್‌ನಾಥ್ ಠಾಕೂರ್ , ಪಂ. ಕೃಷ್ಣಷ್ಣರಾವ್ ಶಂಕರ ಪಂಡಿತ್, ಪಂ.ವಿಷ್ಣು ದಿಗಂಬರ್ ಪಲೂಸ್ಕರ್, ಪಂ.ಡಿ.ವಿ.ಪಲೂಸ್ಕರ್, ಈಚಲ್ಕರಂಜಿಕರ್ ಬುವಾ, ಬಖಲೆ ಬುವಾ, ಪಂ.ಗುರುರಾವ್ ದೇಶಪಾಂಡೆ ಮೊದಲಾದ ಅನೇಕ ಅನರ್ಘ್ಯ ರತ್ನಗಳಾಗಿ ಈ ಘರಾಣೆಯನ್ನು ಶ್ರೀಮಂತಗೊಳಿಸಿದರು. ಹೀಗೆ ಬೆಳೆದು ಬಂದು ಈಗಿನ ಪಂ.ಎಲ್.ಕೆ.ಪಂಡಿತ್, ಪಂ.ವಿನಾಯಕ ತೊರವಿ, ಪಂ.ಉಲ್ಹಾಸ್ ಕಶಾಲ್ಕರ್ ಮೊದಲಾದ ಸುಪ್ರಸಿದ್ಧ ಗಾಯಕರವರೆಗೂ ಬಂದು ಈ ಪರಂಪರೆ ಅವಿರತವಾಗಿ, ಅಜರಾಮರವಾಗಿ ಮುಂದುವರಿಯುತ್ತಿದೆ.
ಹೀಗೆ ಶತಶತಮಾನಗಳವರೆಗೆ - ಮಿಯಾ ತಾನ್‌ಸೇನ್‌ನಿಂದ ಮೊದಲ್ಗೊಂಡು ಎಷ್ಟೋ ಸಂಗೀತಗಾರರನ್ನು ಬೆಳೆಸಿ, ಪೋಷಿಸಿ, ಉಳಿಸುತ್ತ ಬಂದ ಗ್ವಾಲಿಯರ್ ಇವತ್ತಿಗೂ ಸಂಗೀತಕ್ಕೇ ಒಂದು ಅನ್ವರ್ಥ, ಸಂಗೀತಗಾರರಿಗೆ ಪುಣ್ಯ ಕ್ಷೇತ್ರ.
ಇವತ್ತಿಗೂ ಅಲ್ಲಿ ನಡೆಯುವ 'ತಾನಸೇನ್ ಸಮ್ಮೇಳನ' ಜಗತ್ಪ್ರಸಿದ್ಧ. ಅಲ್ಲಿ ಅತ್ಯಂತ ಜನಸಾಮಾನ್ಯನಲ್ಲೂ ಪ್ರಜ್ವಲವಾಗಿ ಬೆಳಗುತ್ತಿರುವ ಸಂಗೀತ ಪ್ರೀತಿ, ಅವರು ಕೇಳುವ ರೀತಿ , ಸಂಗೀತದ ಬಗ್ಗೆ ಅಲ್ಲಿನ ಕೇಳುಗರಿಗಿರುವ ಜ್ಞಾನ ಗ್ವಾಲಿಯರ್ ಅನ್ನು ಒಂದು ವಿಶಿಷ್ಟ ಸಂಗೀತದ ಕೇಂದ್ರವಾಗಿರಿಸಿದೆ.


- ಶ್ರುತಿ ಭಟ್
shrutikbhat @gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com