ಇಳಿವಯಸ್ಸಲ್ಲಿ ಕಾಡುವ ನೆನಪುಗಳ ಕತೆ

Updated on: 

ವಿದ್ಯಾರ್ಥಿ ಜೀವನದ ದಿನಗಳಲ್ಲಿ ಒಂದು ಕತೆ ಬರೆದಿದ್ದ ಇತಿಹಾಸವಷ್ಟೇ ಹೊಂದಿದ್ದ ಶ್ರೀನಿವಾಸ ಜೋಶಿಯವರು, ಬ್ಯಾಂಕ್ ವೃತ್ತಿಯಿಂದ ನಿವೃತ್ತರಾಗಿ ಪುಣೆಯಲ್ಲಿ ನೆಲೆನಿಂತ ನಂತರ ಕನ್ನಡದಲ್ಲಿ ಕತೆ ಬರೆಯ ತೊಡಗಿದ್ದು ಒಂದು ಕುತೂಹಲಕಾರಿ ಸಂಗತಿ. ಇಳಿವಯಸ್ಸಲ್ಲಿ ಬರೆಯತೊಡಗಿದ ಆ ಕತೆಗಳಲ್ಲಿ ಅವರ ಬಾಲ್ಯವನ್ನು ಸಮೃದ್ಧವಾಗಿಸಿದ್ದ ಜೀವನಾನುಭವಗಳ ನೆನಪೇ ಮೂಲದ್ರವ್ಯವಾಗಿ ಮರುಕಳಿಸುತ್ತ ಹೋಗುವುದು ಇನ್ನೊಂದು ವಿಸ್ಮಯಕಾರಿ ವಿಚಾರ. ಎರಡು ವರ್ಷಗಳ ಹಿಂದೆ 'ಮಯೂರ' ಮತ್ತು 'ತುಷಾರ'ಗಳಲ್ಲಿ ಪ್ರಕಟವಾಗಿದ್ದ ಅವರ 'ಬಿಟ್ಟು ಹೋದದ್ದು, ಗಾಳಿ ದುರಗವ್ವ ಮತ್ತು ಸ್ಮಶಾನ ಮೌನ' ಎಂಬ ಮೂರು ಕತೆಗಳನ್ನೋದಿ, ಅಲ್ಲಿ ಕತೆ ಕಟ್ಟುವ ಗದಗದ ಸುತ್ತಮುತ್ತಿನ ಬದುಕು, ಭಾಷೆ ಮಾತ್ರವಲ್ಲ, ಅದನ್ನು ಕತೆಯಾಗಿಸುವ ಪ್ರಕ್ರಿಯೆ ಕೂಡಾ ಕನ್ನಡದ ಪ್ರಮುಖ ಕತೆಗಾರ ಮತ್ತು ವಿಮರ್ಶಕ ಮಾಧವ ಕುಲಕರ್ಣಿಯವರ ಕತೆಗಾರಿಕೆಗೆ ಬಹಳ ಹತ್ತಿರದ್ದು ಅನ್ನಿಸಿ, ಅದನ್ನು ಅವರ ಗಮಕ್ಕೆ ತಂದಾಗ ತಾವೂ ಮಾಧವ ಕುಲಕರ್ಣಿಯವರೂ ಪ್ರಾಥಮಿಕ ಶಾಲಾ ದಿನಗಳಿಂದಲೂ ಸಹಪಾಠಿಗಳೂ ಸ್ನೇಹಿತರೂ ಆಗಿದ್ದನ್ನು ನೆನಪಿಸಿಕೊಂಡರು. ಅಲ್ಲದೆ, ತಾವು ಮತ್ತೆ ಬರೆಯತೊಡಗಿದ್ದಕ್ಕೆ ಮಾಧವ ಕುಲಕರ್ಣಿಯವರ ಒತ್ತಡವೇ ಕಾರಣ ಎಂದೂ ಒಪ್ಪಿಕೊಂಡರು. ಈಗ ಈ ಕತೆಗಳನ್ನು ಒಳಗೊಂಡ ಜೋಶಿಯವರ ಮೊದಲ ಸಂಕಲನಕ್ಕೆ ವಿಸ್ತಾರವಾದ ಮುನ್ನುಡಿಯನ್ನು ಬರೆದಿರುವ ಮಾಧವ ಕುಲಕರ್ಣಿಯವರು ತಮ್ಮಿಬ್ಬರ ಬದುಕಿಗೂ ಸಹಸ್ಪಂದನ ತಂದುಕೊಟ್ಟ ಹಲವು ಸಂಗತಿಗಳನ್ನು ('ಬೆರಗುಗಣ್ಣು' ಎಂಬ ಪ್ರಸ್ತುತ ಪದವನ್ನು ಎರಡು ಬಾರಿ ಬಳಸಿಕೊಂಡು) ನೆನಪಿಸಿಕೊಂಡು, ಉಪಯುಕ್ತವೆನ್ನಿಸುವ ವಿಶ್ಲೇಷಣೆ ಕೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ, ಜೋಶಿಯವರ ಇಳಿವಯಸ್ಸಲ್ಲಿ 'ಹೇಳದೇ ಕೇಳದೇ ಬಂದ ಕಲಾವಂತಿಕೆ'ಯ ಸೊಗಸಿನಂತಿರುವ ಈ ಕತೆಗಳನ್ನು ಮಾಧವ ಕುಲಕರ್ಣಿಯವರ ಆರಂಭಿಕ ಕತೆಗಳೊಂದಿಗೆ ಹೋಲಿಸಿ ನೋಡುವ ಪ್ರಕ್ರಿಯೆಯೊಂದು ಸೃಜಶೀಲತೆಯನ್ನು ಶ್ರೀಮಂತಗೊಳಿಸುವ ಒಂದು ಅತಿ ಪ್ರಸ್ತುತ ಸಂಗತಿಯನ್ನು ನಮ್ಮ ಗಮನಕ್ಕೆ ತರುತ್ತದೆ. ಅದೆಂದರೆ ಇಳಿವಯಸ್ಸಲ್ಲಿ ಆಸರೆ ಕೊಟ್ಟ ಊರಿನೊಂದಿಗೆ ಬಾಲ್ಯವನ್ನು ಸಮೃದ್ಧಗೊಳಿಸಿದ ನೆನಪುಗಳನ್ನು ಎದುರುನಿಲ್ಲಿಸುವುದು ಕತೆಗಾರಿಕೆಗೆ ಕೊಡುವ ಹೊಸ ಆಯಾಮ.
ಈ ಸಂಕಲನದಲ್ಲಿ ಎರಡು ಮೂರು ವರ್ಷಗಳ ಅವಧಿಯಲ್ಲಿ ಜೋಶಿಯವರು ಬರೆದಿರುವ ಏಳು ಕತೆಗಳಿವೆ.  ಬಹುತೇಕ ಕತೆಗಳಲ್ಲಿ ನಿಃಸ್ಸಂದೇಹವಾಗಿ ಬರುವ ಜೋಶಿಯವರ ಬಾಲ್ಯವನ್ನು ಶ್ರೀಮಂತಗೊಳಿಸಿದ ರೋಣ, ನರೆಗಲ್, ಮಾರನಬಸರಿ, ನಿಡಗುಂದಿ, ಹುಬ್ಬಳ್ಳಿ, ಲಕ್ಕುಂಡಿಗಳು ಅವರ ವೃತ್ತಿಜೀವನದ ದಿನಗಳಲ್ಲಿ ಆಸರೆಯಾಗಿದ್ದ ಮಹಾರಾಷ್ಟ್ರದ ಪುಣೆ, ಶಹರೀಭಾಗಗಳಿಗೆ ಮುಖಾಮುಖಿಯಾಗಿ ನಿಲ್ಲುವ ವಿಚಾರಗಳನ್ನು ಮಾಧವ ಕುಲಕರ್ಣಿಯವರ ಕತೆಗಳಲ್ಲಿ ಗದಗವು ಮೈಸೂರಿಗೆ ಮುಖಾಮುಖಿಯಾಗುವುದರೊಂದಿಗೆ ಹೋಲಿಸಿ ನೋಡಬಹುದು. ಅದನ್ನು ಗ್ರಾಮೀಣ ಸಂಸ್ಕೃತಿ ಮತ್ತು ಹೊಸ ತಲೆಮಾರಿ ಆಶೋತ್ತರಗಳ ಮುಖಾಮುಖಿ ಎಂದೂ ಕರೆಯಬಹುದು. 'ಗಾಳಿದುರಗವ್ವ' ಕತೆಯಲ್ಲಿ ಮಹಾರಾಷ್ಟ್ರದ ಶಹರ ಜೀವನವನ್ನು ಬಿಟ್ಟು ತನ್ನ ಹಿರಿಯರ ಬೇರುಗಳಿರುವ ತನ್ನೂರಿಗೆ ಹಿಂದಿರುಗುವ ನಿರೂಪಕ ವಾಸ್ತವ ಜಗತ್ತು ಮತ್ತು ಬಾಲ್ಯದ ಮುಗ್ಧತೆಗಳ ಮುಖಾಮುಖಿಗೆ ಸಾಕ್ಷಿಯಾಗುತ್ತಾನೆ. 'ಇಡೀ ಆಯುಷ್ಯ ಮಹಾರಾಷ್ಟ್ರದಲ್ಲಿ ಕಳೆದು ಈಗ ವಮ್ಮಿಗಲೇ ಬೇರು ಕಂಡವೇನು. ಬೇರು ಭೂಮಿವಳಗ ಇರತಾವ. ಅವು ಹ್ಯಾಂಗ ಕಂಡವರೀ ನಿಮಗ?' ಎಂಬ ನಿರೂಪಕನ ಪತ್ನಿಯ ಮಾತು ಈ ಬೇರುಗಳನ್ನರಸುವ ಒಟ್ಟು ಪ್ರಕ್ರಿಯೆಯನ್ನೇ ಲೇವಡಿ ಮಾಡುವಂತಿದೆ. ಈ ಬೇರುಗಳ ಹುಡುಕಾಟದ ಇನ್ನೊಂದು ಪರ್ಯಾಯವು 'ನೆನಪಿನಿಂದ ಎದ್ದು ಬಂದವನು' ಕತೆಯಲ್ಲಿ ಕಾಣಸಿಗುತ್ತದೆ. ಇದನ್ನು ಮುಂದುವರಿಸಿದ ಕಲ್ಪನೆ 'ಬಿಟ್ಟು ಹೋದದ್ದು' ಕತೆಯಲ್ಲಿದೆ. ಸೋಪಾನ ದೇಸಾಯಿಯ ಬದುಕು ಶ್ರೀಮಂತಗೊಳ್ಳುವುದೂ ಇಳಿವಯಸ್ಸಿನ ನೆನಪುಗಳಲ್ಲಿ. ಅದು ಎದುರು ನಿಲ್ಲಬೇಕಾಗಿರುವುದು ದೊಡ್ಡ ಶಿಕ್ಷಣ ಪಡೆದು ದೊಡ್ಡ ಹುದ್ದೆ ಅಲಂಕರಿಸಿರುವ ಮಗನ ಬದುಕಿನೆದುರು. ಬಣ್ಣ ಹೊಡೆಯುವ ಕಸುಬಿನ ಸೋಪಾನನ ಬದುಕು ಸಾತ್ವಿಕತೆಯಿಂದ ತೇವಗೊಂಡಿದ್ದರೆ, ಮಗನ ಮನಸ್ಸು ವ್ಯಾವಹಾರಿಕತೆಯಿಂದ ಪಾಷಾಣಗೊಂಡಿದೆ. ತಂದೆಯ ಪಾಲಿಗೆ ಬಹಳ ಮೌಲ್ಯಯುತವಾಗಿದ್ದ ಪೂರ್ವಜರ ಸಂಪತ್ತನ್ನು ಮಗ ವ್ಯಾವಹಾರಿಕವಾಗಿ 'ಬೆಲೆಕಟ್ಟಿ' ಪೂರ್ವಜರ ಮನೆಯನ್ನು 'ವಸ್ತು ಸಂಗ್ರಹಾಲಯ'ವನ್ನಾಗಿಸುತ್ತಾನೆ. ಈ ಬೆಲೆಕಟ್ಟುವ ಕ್ರಿಯೆಯ ಮೂಲಕ ಹೊಸ ತಲೆಮಾರು ಕಳೆದುಕೊಳ್ಳುತ್ತಿರುವುದನ್ನು 'ಬಿಟ್ಟು ಹೋದದ್ದು' ಕತೆ ವ್ಯಂಗ್ಯವಾಗಿ ಹೇಳುತ್ತದೆ.
ಈ ಎಲ್ಲ ಕತೆಗಳಲ್ಲಿ ಗಮನಾರ್ಹವಾಗಿರುವುದು ಅಲ್ಲಿನ ಪ್ರಾದೇಶಿಕತೆ, ಖಚಿತತೆ ಮತ್ತು ಎಚ್ಚರ. ತಡವಾಗಿ ಬರವಣಿಗೆಯನ್ನು ಪ್ರಾರಂಭಿಸಿದರೂ ಜನಪ್ರಿಯತೆಗಾಗಿ ಯಾವ ಅಗ್ಗದ ಅನುಸಂಧಾನವನ್ನೂ ಈ ಕತೆಗಾರರು ಮಾಡಿಕೊಂಡಂತಿಲ್ಲ ಎನ್ನುವುದನ್ನು ಈ ಕತೆಗಳು ಸ್ಪಷ್ಟಡಿಸುತ್ತವೆ. ಈ ಸಂಕಲನದಲ್ಲಿ ಜೋಶಿಯವರು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಬರೆದ 'ಗೊಂದಲ' ಎಂಬ ಕತೆಯೂ ಇದೆ. ಈ ಕತೆಯಲ್ಲಿ ಜೋಶಿಯವರು ನಲವತ್ತು ವರ್ಷಗಳ ನಂತರ ಬರೆದ ಕತೆಗಳಲ್ಲಿರುವ ಸಾಧ್ಯತೆಗಳ ಮುನ್ಸೂಚನೆ ಕಾಣಿಸುವುದಿಲ್ಲ ಎನ್ನುವ ಮಾತೂ ನಿಜವೇ. ಆದರೆ ಸುದೀರ್ಘವಾದ ಕಾಯುವಿಕೆ ಅವರನ್ನು ಎಷ್ಟು ಮಾಗಿಸಿದೆ ಎನ್ನುವುದನ್ನು ಈ ಸಂಕಲನದ ಉಳಿದ ಕತೆಗಳು ಸಾಬೀತುಪಡಿಸುತ್ತಿರುವಂತಿವೆ. ಹಾಗೆ ನೋಡಿದರೆ, ಈ ಸಂಕಲನದ ಮೂಲಕ ಈ ಕತೆಗಾರರು ಅವಸರದಲ್ಲಿದ್ದಂತಿರುವ ನಮ್ಮ ಹೊಸತಲೆಮಾರಿನ ಹಲವು ಕತೆಗಾರರಿಗೆ 'ನಪ್ರಮದಿತವ್ಯ' ಎನ್ನುತ್ತಿರುವಂತೆಯೂ ಕಾಣಿಸುತ್ತದೆ.
ಕೃತಿ: ಬಿಟ್ಟು ಹೋದದ್ದು (ಕಥಾ ಸಂಕಲನ)
ಲೇ: ಶ್ರೀನಿವಾಸ ಜೋಶಿ
ಪುಟ 124, ಬೆಲೆ ರು. 70.00
ಪ್ರ: ಆದಿತ್ಯ ಪಬ್ಲಿಕೇಷನ್ಸ್, ಬೆಳಗಾವಿ

ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ
ಕರ್ನಾಟಕದಲ್ಲಿ ಶಾಸನಗಳನ್ನು ಸಂಗ್ರಹಿಸುವುದು, ಸಂಪಾದಿಸುವುದು ಹಾಗೂ ಪ್ರಕಟಿಸುವುದು ಮೊದಲ ಹಂತದಲ್ಲಿ ಸಾಗಿದರೆ ಎರಡನೆ ಹಂತದಲ್ಲಿ ವಿದ್ವಾಂಸರು ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಶಾಸನಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಮೊದಲಿಗೆ ಬರುವ ಹೆಸರು ಡಾ.ಎಂ. ಚಿದಾನಂದ ಮೂರ್ತಿಯವರದು. ಅವರ ಆಚಾರ್ಯ ಕೃತಿ 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ'. ಇದು ಕ್ರಿ.ಶ. 450ರಿಂದ ಕ್ರಿ.ಶ. 1150ರ ವರೆಗಿನ ಅವಧಿಯದು. ಇದೀಗ ಅವರ ಮಾರ್ಗದರ್ಶನದಲ್ಲಿಯೇ ಸಿ.ಯು.ಮಂಜುನಾಥ್ ಅವರು 'ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ' (ಕ್ರಿ.ಶ.1150-ಕ್ರಿ.ಶ.1340) ಸಂಶೋಧನೆ ನಡೆಸಿ ಕೃತಿಯನ್ನು ಹೊರತಂದಿದ್ದಾರೆ. ಕಲ್ಯಾಣದ ಕ್ರಾಂತಿಯಿಂದ ವಿಜಯನಗರದ ಸಾಮ್ರಾಜ್ಯ ಸ್ಥಾಪನೆಯ ವರೆಗಿನ ಕಾಲಘಟ್ಟ ಕರ್ನಾಟಕದ ಚರಿತ್ರೆಯಲ್ಲಿ ಅತ್ಯಂತ ಮಹತ್ವದ್ದು. ಸಾಮಗ್ರಿಯ ವಸ್ತುನಿಷ್ಠ ವಿಶ್ಲೇಷಣೆ, ಸ್ಪಷ್ಟವಾದ ಭಾಷೆ ಈ ಕೃತಿಯ ಹೆಚ್ಚುಗಾರಿಕೆ.
ಕೃತಿ: ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ, ಪ್ರಕಾರ: ಸಂಶೋಧನೆ, ಏಕೆ ಓದಬೇಕು?: ಶಾಸನಗಳ,  ಮೂಲಕ ಸಂಸ್ಕೃತಿ ಅರಿಯಲು, ಪ್ರ: ಚಿತ್ಕಲಾ ಪ್ರಕಾಶನ, ಕುಪ್ಪಂ, ಪುಟಗಳು 572, ಬೆಲೆ ರು. 500

ಕಂಬಾರರನ್ನು ಕಂಡ ಬಗೆ
ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅವರನ್ನು ಮತ್ತು ಅವರ ಕೃತಿಗಳನ್ನು ಅರಿಯಬೇಕು ಎಂದು ಬಯಸುವ ಒಂದು ದೊಡ್ಡ ವರ್ಗವೇ ಇದೆ. ಆ ವರ್ಗದವರ ಬಯಕೆಯನ್ನು ಗಮನದಲ್ಲಿಟ್ಟುಕೊಂಡು 'ಕಂಬಾರರ ಸಾಹಿತ್ಯದ ನೆಲೆ ಬೆಲೆ' ಕೃತಿಯನ್ನು ಬಸವರಾಜ ಕಲ್ಗುಡಿ ಸಂಪಾದಿಸಿದ್ದಾರೆ. ಇದಕ್ಕೊಂದು ವಿದ್ವತ್ತಿನ ಪ್ರಸ್ತಾವನೆ ಬರೆದಿರುವ ಕಲ್ಗುಡಿ, ಕಂಬಾರರ ಸಾಹಿತ್ಯವನ್ನು ವಿಭಿನ್ನ ದೃಷ್ಟಿಯಲ್ಲಿ ನೋಡಿದ ಕನ್ನಡ ಚಿಂತನಾಲೋಕದ ವಿಶಿಷ್ಟವಾದ ಆಯ್ದ ಲೇಖನಗಳನ್ನು ಇಲ್ಲಿ ಸಂಪಾದಿಸಲಾಗಿದೆ ಎಂಬ ಮಾತನ್ನು ಹೇಳಿದ್ದಾರೆ. ಕನ್ನಡದ ಹಿರಿಯ ಮನಸ್ಸುಗಳು ವಿವಿಧ ಸಂದರ್ಭದಲ್ಲಿ ಕಂಬಾರರಿಗೆ ಪ್ರತಿಕ್ರಿಯಿಸಿದ ಬರೆಹಗಳು ಇವು. ರಾಜೀವ ತಾರಾನಾಥ, ರಾಜೇಂದ್ರ ಚೆನ್ನಿ, ಪದ್ಮಾ ಶೇಖರ್, ಜಿ.ಎಸ್. ಆಮೂರ, ಮಾಧವ ಕುಲಕರ್ಣಿ, ಶಾಂತಿನಾಥ ದೇಸಾಯಿ, ಡಿ.ಆರ್. ನಾಗರಾಜ್, ಟಿ.ಪಿ. ಅಶೋಕ, ನರಹಳ್ಳಿ ಬಾಲಸುಬ್ರಹ್ಮಣ್ಯ ಮೊದಲಾದವರ ಬರೆಹಗಳು ಇಲ್ಲಿವೆ. 
ಕೃತಿ: ಕಂಬಾರರ ಸಾಹಿತ್ಯದ ನೆಲೆ ಬೆಲೆ, ಪ್ರಕಾರ: ಸಾಹಿತ್ಯ, ಸಮೀಕ್ಷೆ, ಏಕೆ ಓದಬೇಕು?: ಕಂಬಾರರ ಸಾಹಿತ್ಯದ, ಪರಿಚಯ ಹೊಂದಲು, ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಪುಟಗಳು 328, ಬೆಲೆ ರು. 250

- ವಿಭಾವರಿ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com