ಹಿಮಚಿರತೆಯ ಹೆಜ್ಜೆ ಜಾಡು

ಹಿಮಚಿರತೆಯ ಹೆಜ್ಜೆ ಜಾಡು
Updated on: 

'ನಾನಿಲ್ಲಿ 40 ವರ್ಷದಿಂದ ಇದ್ದೇನೆ. ಒಂದೇ ಒಂದು ಸಲ ಮಾತ್ರ ಹಿಮಚಿರತೆಯನ್ನು ನೋಡಿದ್ದೇನೆ- ದೂರದಿಂದ. ಅದು ಸಂಜೆ ಹೊತ್ತು. ಮೇಲೆ ಕೊಳಕ್ಕೆ ನೀರು ಕುಡಿಯಲು ಬಂದಿತ್ತು. ನನ್ನ ದನಗಳಿಗೆ ಏನಾದರೂ ಮಾಡೀತು ಅಂದುಕೊಂಡೆ. ಏನೂ ಮಾಡಲಿಲ್ಲ, ನನ್ನನ್ನು ನೋಡಿ ಮಾಯವಾಯ್ತು...' ಅಂದವನು ಕಿಬ್ಬರ್ ಗ್ರಾಮವಾಸಿ, ರೈತ ತ್ರಿನ್‌ಲೆ. ಕಿಬ್ಬರ್ ವನ್ಯಜೀವಿಧಾಮ ಈ ಊರಿನ ಪಕ್ಕದಲ್ಲೇ ಇದೆ.
ನಮ್ಮಲ್ಲಿ ಚಿರತೆ- ಮನುಷ್ಯ ಸಹವಾಸ ಕೆಟ್ಟು ಎಷ್ಟೋ ಕಾಲವಾಗಿದೆ. ಕಾಡಿನಂಚಿನ ಹಳ್ಳಿಗರಿಗೆ ಇಂದು ಚಿರತೆಗಳು ದೊಡ್ಡ ತಲೆನೋವು. ಚಿರತೆಗಳಿಗೂ ಮನುಷ್ಯನೇ ತಲೆನೋವು ಎಂಬುದನ್ನು ಬೇರೆ ಹೇಳಬೇಕಿಲ್ಲ. ನಗರಗಳಿಗೂ ಇವು ನುಗ್ಗುವುದನ್ನು ಕಾಣುತ್ತೇವೆ. ಆದರೆ ಹಿಮಚಿರತೆಯ ಕತೆ ಹೀಗಲ್ಲ. ಅಲ್ಲಿ ಹಿಮಚಿರತೆಯನ್ನು ಸ್ಥಳೀಯರು, ಸ್ಥಳೀಯರನ್ನು ಹಿಮಚಿರತೆಗಳು ತುಂಬಾ ಗೌರವಿಸುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ, ಇಬ್ಬರೂ ಪರಸ್ಪರರ ಲಕ್ಷ್ಮಣರೇಖೆಗಳನ್ನು ದಾಟುವುದೇ ಇಲ್ಲ.
ಮನುಷ್ಟ ಮುಟ್ಟಲು ಅಸಾಧ್ಯವಾದ ಹಿಮದ ಮೊರಡಿಗಳಲ್ಲಿ ವಾಸಿಸುವ ಈ ಹಿಮಚಿರತೆ (ಸ್ಪಿಟಿವಾಸಿಗರ ಭಾಷೆಯಲ್ಲಿ 'ಜೆಟ್‌ಪಾ') ಇಂದಿಗೂ ಬಲು ನಿಗೂಢ ಪ್ರಾಣಿ. ಪ್ರಾಣಿಶಾಸ್ತ್ರಜ್ಞರಿಗೂ ಇದರ ಹೆಸರಿನ ವಿವಾದ ಬಗೆಹರಿದಿಲ್ಲ. ಇದು 'ಪ್ಯಾಂಥೆರಾ ಉನ್ಸಿಯಾ'ಎಂದು ಕೆಲವರು, 'ಉನ್ಸಿಯಾ ಉನ್ಸಿಯಾ'ಎಂದು ಇನ್ನು ಕೆಲವರು ವರ್ಗೀಕರಿಸುತ್ತಾರೆ. ಸೂಕ್ಷ್ಮ ತಳಿ ವೈವಿಧ್ಯವೇ ಇದಕ್ಕೆ ಕಾರಣ. ಆದರೆ ಇದು ಅಳಿವಿನಂಚಿನಲ್ಲಿರುವ ಪ್ರಾಣಿ ಎಂಬ ಬಗ್ಗೆ ಎಲ್ಲರಲ್ಲೂ ಒಮ್ಮತವಿದೆ. 11,000 ಅಡಿಗಳಿಂದ 22,000 ಅಡಿಗಳವರೆಗಿನ ಎತ್ತರದಲ್ಲಿ ವಾಸ. ಜಗತ್ತಿನಲ್ಲಿ ಇವುಗಳ ಒಟ್ಟಾರೆ ಸಂಖ್ಯೆ 7,400 ಮಾತ್ರ. ಅದರಲ್ಲಿ ಭಾರತದಲ್ಲಿರುವುದು ಕೇವಲ 600. ಹಿಮಾಚಲ ಪ್ರದೇಶ ತನ್ನ ರಾಜ್ಯಪ್ರಾಣಿ ಎಂದು ಇದನ್ನು ಗುರುತಿಸಿಕೊಂಡಿದೆ.
ಹಿಮಚಿರತೆಯ ದರ್ಶನಭಾಗ್ಯ ಪಡೆಯಲೆಂದೇ ತಪಸ್ಸು ಮಾಡಿದವರಿದ್ದಾರೆ. ಆದರೆ ಅದು ಮಂಜಿನಂತೆ, ಗಾಳಿಯಂತೆ, ಪರಿಮಳದಂತೆ, ಯಾರ ಕೈಗೂ ಸಿಕ್ಕು ಸಿಗದೆ ತಪ್ಪಿಸಿಕೊಂಡಿದೆ. ಪುನರ್ಜನ್ಮ, ಕರ್ಮಗಳಲ್ಲಿ ನಂಬಿಕೆಯಿಟ್ಟ ಟಿಬೆಟಿಯನ್ ಬೌದ್ಧರ ಪಾಲಿಗೆ ಇವು ತೀರಿಹೋದ ತಮ್ಮ ಪೂರ್ವಜರ ಆತ್ಮಗಳು. ಕೆಲವೊಮ್ಮೆ, ಹಿಮಶಿಖರಗಳಲ್ಲಿ ವಾಸಿಸುವ ಪವಿತ್ರ ಯೋಗಿಗಳೂ ಚಿರತೆಯ ರೂಪದಲ್ಲಿ ಕಾಣಿಸಿಕೊಳ್ಳುವುದುಂಟು. ಅದು ಆತ್ಮವಲ್ಲ, ಬರಿಯ ಮೃಗ ಎಂದು ಗೊತ್ತಿರುವವರಿಗೂ ಅದರ ಅಜ್ಞಾತತೆಯ ಸಾಮರ್ಥ್ಯದ ಬಗ್ಗೆ ಅಪಾರ ಅಚ್ಚರಿ.  ಹಿಮದ ನಡುವೆ ಹಿಮವಾಗಿ, ಬಂಡೆಗಳ ನಡುವೆ ಬಂಡೆಯಾಗಿ ಸುಳಿದಾಡುವ, ಕರಗಿಹೋಗುವ ಚಿರತೆ ನೀರಿನಂತೆ ತನ್ನ ಪರಿಸರದಲ್ಲಿ ಒಂದಾಗಿ ಇರಬಲ್ಲುದು. ಹಿಮಾಲಯದಲ್ಲಿ 'ಯೇತಿ'ಯ ಬಗ್ಗೆ ಇರುವಂತಹ ದಂತಕತೆಗಳು ಜೆಟ್‌ಪಾ ಬಗೆಗೂ ಇವೆ.
ಪೀಟರ್ ಮ್ಯಾಥೀಸನ್ ಎಂಬಾತ, ಅಮೆರಿಕದ ಪರಿಸರವಾದಿ ಹಾಗೂ ಪ್ರವಾಸ ಕಥನಕಾರ. 1973ರಲ್ಲಿ ಈತ ಪ್ರಾಣಿಶಾಸ್ತ್ರಜ್ಞ ಜಾರ್ಜ್ ಶಾಲರ್ ಜತೆಗೆ ಟಿಬೆಟ್‌ನ ಪರ್ವತ ಪ್ರದೇಶಗಳಲ್ಲಿ ಹಿಮಚಿರತೆಯ ದರ್ಶನ ಪಡೆಯಲು ಸುತ್ತಾಡಿದ. ಈ ಅನುಭವವನ್ನು 'ದಿ ಸ್ನೋ ಲೆಪರ್ಡ್‌' ಎಂಬ ಕೃತಿಗಿಳಿಸಿದ. ಅದರಲ್ಲಿ ಆತ ಬರೆಯುವುದು ಹೀಗೆ: 'ಅದರ ತಿಳಿಯಾದ ಮಂಜಿನಂತಹ ಕಣ್ಣುಗಳು; ಬೂದುಬಣ್ಣದ ತುಪ್ಪಳ ಕವಿದ ಮೈ; ರೋಮದಿಂದ ಮುಚ್ಚಿದಂತಿರುವ ಕಪ್ಪು ಚುಕ್ಕೆಗಳು; ಅದು ಮಾಯಾಜಾಲದ ಕೋನವೊಂದರಲ್ಲಿ ಹರಿದಾಡುವಂಥದು ಮತ್ತು ತನ್ನ ಪರಿಸರದಲ್ಲಿ ಸಂಪೂರ್ಣ ಹುದುಗಿಹೋಗಿರುವಂಥದು. ಎಷ್ಟೆಂದರೆ, ನೀವು ನೇರವಾಗಿ ಅದನ್ನೇ ದೃಷ್ಟಿಸುತ್ತಿದ್ದರೂ ಅದು ಹಿಮಚಿರತೆಯೆಂದು ಗ್ರಹಿಸಲಾರಿರಿ. ಪರ್ವತಗಳನ್ನು ಚೆನ್ನಾಗಿ ಅರಿತವರಿಗೂ ಅದರ ಅಚ್ಚರಿಯ ದರ್ಶನಭಾಗ್ಯ ಮಾತ್ರ ಲಭ್ಯ...'
ಸ್ಪಿಟಿ ಕಣಿವೆಯಲ್ಲಿ ಹೇರಳವಾಗಿರುವ ಐಬೆಕ್ಸ್, ಭರಾಲ್‌ಗಳೇ ಇದರ ಆಹಾರ. ಕೆಲವೊಮ್ಮೆ, ಇವುಗಳ ಸಂಖ್ಯೆ ವಿರಳವಾದಾಗ, ಊರ ಹೊರಗೆ ಮಂದೆಗಳಲ್ಲಿ ಮೇಯುವ ಕುರಿ, ಆಡು, ದನಗಳ ಮೇಲೆ ಎರಗಿದ್ದು ಉಂಟು. ಆದರೆ ಅಂಥ ಸನ್ನಿವೇಶ ಕಡಿಮೆ. ಹಿಮಚಿರತೆ ನರಭಕ್ಷಕನಾದ ಉದಾಹರಣೆ ಇಲ್ಲವೇ ಇಲ್ಲ ಎನ್ನಬಹುದು. ಕೆಲ ವರ್ಷಗಳ ಹಿಂದೆ, ಬೆಳೆಹಾನಿ ಮಾಡುವ ಐಬೆಕ್ಸ್, ಭರಾಲ್‌ಗಳನ್ನು ಸ್ಥಳೀಯರು ಬೇಟೆಯಾಡುತ್ತಿದ್ದರು. ಇದರಿಂದ ಇವುಗಳ ಸಂಖ್ಯೆ ಕಡಿಮೆಯಾಗಿ ಹಿಮಚಿರತೆಗಳ ಬದುಕಿಗೂ ಕುತ್ತು ಬಂದಿತ್ತು. ಕೆಲ ವರ್ಷಗಳಿಂದೀಚೆಗೆ 'ಪ್ರಾಜೆಕ್ಟ್ ಸ್ನೋ ಲೆಪರ್ಡ್‌' ಜಾರಿಗೆ ಬಂದಿದೆ. ಇಲ್ಲಿನ ಪ್ರವಾಸೋದ್ಯಮ ದೃಷ್ಟಿಯಿಂದ ಬೇಟೆ ನಿಲ್ಲಿಸುವುದು ಅನಿವಾರ್ಯ ಎಂದು ಸ್ಥಳೀಯರಿಗೆ ಮನದಟ್ಟಾಗಿದೆ. ಇಂದು ಇಡೀ ಭಾರತದಲ್ಲೇ ಸ್ಪಿಟಿ ಕಣಿವೆ ಹಿಮಚಿರತೆಗಳನ್ನು ಸಮರ್ಪಕವಾಗಿ ಸಂರಕ್ಷಿಸಿರುವ ಪ್ರದೇಶ ಎಂದು ಖ್ಯಾತಿ ಪಡೆದಿದೆ.
ನಾವು ಹೋದ ಹಿಂದಿನ ದಿನ ಕಿಬ್ಬರ್ ಗ್ರಾಮದಂಚಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಪಿನ್ ಕಣಿವೆಯ ಹಸಿರಿನಲ್ಲಿ ಮೇಯುವ ಭರಾಲ್‌ಗಳ ಮೇಲೆ ಅವುಗಳ ನೆರಳಿತ್ತು. ತಾಬೋಗೆ ಹೋಗುವ ದಾರಿಯಲ್ಲಿ ಕಾಣಿಸಿಕೊಂಡ ಐಬೆಕ್ಸ್‌ಗಳ ಹಿಂಡಿನಾಚೆಗೆ ಅವುಗಳ ಗಸ್ತು ಇತ್ತು. ಆದರೆ ಅದು ತನ್ನ ಝಲಕ್ ತೋರಿಸಿ ನಮ್ಮ ಮೈ ರೋಮಗಳು ನಿಮಿರಿ ನಿಲ್ಲುವಂತೆ ಮಾಡಿದ್ದು ಮಾತ್ರ ಚಂದ್ರತಾಲ್‌ನಲ್ಲಿ.

(ಮುಂದಿನ ವಾರ- ಅರ್ಧದಾರಿಯ ಆಪ್ತರಕ್ಷಕ)

- ಹರೀಶ್ ಕೇರ
harishkhera@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com