

ಸಂಗೀತಕ್ಕೂ ಸ್ವಭಾವಕ್ಕೂ ನಿಕಟ ಸಂಬಂಧವಿದೆ. ಎಷ್ಟರಮಟ್ಟಿಗೆ ಎಂದರೆ ಸಂಗೀತವೆಂದರೆ ಆ ಕಲಾವಿದನ ಸ್ವಭಾವದ ಶುದ್ಧ ಅಭಿವ್ಯಕ್ತಿ ಎಂದು ವ್ಯಾಖ್ಯಾನಿಸಬಹುದಾದಷ್ಟು!
ಉತ್ತಮ ಗುರುಗಳ ಬಳಿ ಕಲಿಯತೊಡಗಿದರೆ, ನಾವು ಒಮ್ಮೆ ಅಥವಾ ಎರಡು ಬಾರಿ ಅವರೆದುರು ಹಾಡಿದರೆ ಸಾಕು. ವ್ಯಕ್ತಿತ್ವ ವಿಕಸನದ ಕಾರ್ಯಾಗಾರಗಳಲ್ಲಿ ಪ್ರಶ್ನೋತ್ತರಗಳ ಮೂಲಕ ನಮ್ಮ ವ್ಯಕ್ತಿತ್ವದ ಬಗ್ಗೆ ನಮಗೆ ಮಹಿತಿ ನೀಡುತ್ತಾರಲ್ಲವೆ, ಹಾಗೆ ನಮ್ಮ ಸ್ವಭಾವದ ಪ್ರತೀ ಮಜಲುಗಳನ್ನೂ ಎಳೆಎಳೆಯಾಗಿ ಬಿಡಿಸಿ ಹೇಳಬಲ್ಲವರಾಗಿರುತ್ತಾರೆ. ಅಂಥ ವಿಶಿಷ್ಟ ಗುರುಗಳು ಒಂದೋ ಎರಡೋ ಬಾರಿ ಹಾಡುವುದನ್ನು ಕೇಳುತ್ತಲೇ ಅವನ ಗಾಯನವನ್ನು ವಿಶ್ಲೇಷಿಸುತ್ತ, 'ಅವನು ಒಳಗೊಂದು ಹೊರಗೊಂದು ಇದ್ದಾನೆ ನೋಡು' ಎಂದುಬಿಟ್ಟಿರುತ್ತಾರೆ. ಅಥವಾ 'ಅವನಿಗೆ ಶಾಂತತೆಯೇ ಇಲ್ಲ' ಎಂದಿರುತ್ತಾರೆ. ಇಲ್ಲವೇ, 'ಇವನ ಪ್ರಾಮಾಣಿಕತೆ ಬಗ್ಗೆ ಸಂದೇಹವಿಲ್ಲ ನೋಡು' ಎಂದು ಹೇಳಿರುತ್ತಾರೆ. ಎಷ್ಟೋ ದಿನಗಳಾದ ಮೇಲೆ, ಅದು ನಿಜವೆಂಬ ಅನುಭವ ನಮಗೆ ಯಾವುದೋ ಘಟನೆಯ ಮೂಲಕ ತಿಳಿಯುತ್ತದೆ.
ಯಾಕೆಂದರೆ, ಸಂಗೀತ ನಮ್ಮ ಅತ್ಯಂತ ಸಹಜ ಪ್ರಕ್ರಿಯೆ. ಒಬ್ಬ ವ್ಯಕ್ತಿ ಹಾಡುತ್ತಿದ್ದಾನೆಂದರೆ ಅವನು ಮಗುವಾಗಬೇಕಾಗುತ್ತದೆ. ಅಂದರೆ ತನ್ನ ಅತ್ಯಂತ ಸಹಜವಾದ, ಯಾವುದೇ ಕೃತ್ರಿಮತೆ-ಡಿಪ್ಲೊಮಸಿ ಇಲ್ಲದ ನಿರಾಳ ಸ್ಥಿತಿಗೆ ತಲುಪಬೇಕಾಗುತ್ತದೆ. ಆ ಮನಸ್ಥಿತಿಯಲ್ಲಿ ಅವನ ಚಿಂತನೆ, ಭಾವ - ಸ್ವಭಾವಗಳ ಮಿಶ್ರಣದೊಂದಿಗೆ ಸಂಗೀತದ ಮೂಲಕ ಹೊರಹೊಮ್ಮುತ್ತದೆ. ಆದ್ದರಿಂದಲೇ ಸ್ವಭಾವದಲ್ಲಿನ ಶಾಂತತೆ, ಗಡಿಬಿಡಿ, ಮುಗ್ಧತೆ, ಪುಕ್ಕಲುತನ, ಧೈರ್ಯ, ಸ್ವಭಾವದಲ್ಲಿಯ ಚಾತುರ್ಯ, ಆಕರ್ಷಕತೆ, ಗಾಂಭೀರ್ಯ, ಭಾವುಕತೆ, ಅಂತರ್ಮುಖೀತನ, ಮುಂದಾಳುತನದ ಸ್ವಭಾವ, ರಸಿಕತೆ ಎಲ್ಲವೂ ಸೂಕ್ಷ್ಮವಾಗಿ ಅಭಿವ್ಯಕ್ತವಾಗುತ್ತಿರುತ್ತವೆ.
ಹೀಗಾಗಿ ಒಂದೇ ರಾಗವನ್ನು ಹತ್ತು ಜನ ಹಾಡಿದರೆ ಹತ್ತು ವಿಧವಾಗಿ ಹಾಡುತ್ತಿರುತ್ತಾರೆ. ಒಂದು ನಾದ ಬ್ರಹ್ಮ ನನ್ನು ತಮ್ಮ ಸ್ವಭಾವದ ಪಾತ್ರೆಯಲ್ಲಿ ಚಿಂತನೆಗಳ ರಸ ತುಂಬಿ ವಿಧವಿಧವಾಗಿ ವರ್ಣಿಸುತ್ತಿರುತ್ತಾರೆ....ಇದನ್ನೇ ಖಯಾಲ್ ಗಾಯನ, ಮನೋಧರ್ಮ ಸಂಗೀತ ಎನ್ನುತ್ತೇವೆ. ಈ ಸಂಗೀತ 'ಖಯಾಲ್ ಗಾಯಕಿ' ಕಲಿಯುವುದೆಂದರೆ ಕೇವಲ ರಾಗ, ಆಲಾಪನೆಗಳ, ಸ್ವರಗಳ ಪರಿಕಲ್ಪನೆ ಮಾತ್ರವಲ್ಲ. ಅದು ವಿಚಾರಧಾರೆಯನ್ನೇ ಬದಲಿಸಿಕೊಳ್ಳುವ, ಗುರುವಿನ ಇಡೀ ಸ್ವಭಾವವನ್ನೇ ತನ್ನದಾಗಿಸಿಕೊಳ್ಳುವ ಪರಿಶ್ರಮ. ತನ್ನ ಸ್ವಭಾವವನ್ನು ತಾನೇ ಸಾಣೆ ಹಿಡಿದು, ದೋಷಗಳನ್ನು ಅರಿತು, ಅದನ್ನು ಕಳೆದುಕೊಳ್ಳುತ್ತ ಬೆಳೆಯುವ ಅದ್ಭುತ ವ್ಯಕ್ತಿತ್ವ ವಿಕಸನ ಪ್ರಕ್ರಿಯೆ.
ಉದಾಹರಣೆಗೆ, ವ್ಯಕ್ತಿತ್ವದಲ್ಲಿ ಆಲಸ್ಯ ಇತ್ತೆಂದರೆ ಅದು ಗಾಯನದಲ್ಲಿ ವ್ಯಕ್ತವಾಗುವುದು. ಆಗ ಗುರುವಾದವನು ಸಂಗೀತದಲ್ಲಿ ಆ ಆಲಸ್ಯವನ್ನು ಗುರುತಿಸಿಕೊಟ್ಟಾಗ, ಅದನ್ನು ಕಳೆದುಕೊಳ್ಳಲು ನಾವು ಪ್ರಯತ್ನಿಸುವಾಗ, ಸ್ವಭಾದಲ್ಲೂ ಅದು ಬದಲಾಗುತ್ತದೆ. ಗುರುಗಳ ಮುಂದೆ ಹಾಡುವಾಗ ಅವರು ಪಟ್ಟು ಬಿಡದೇ ಸಮಾಧಾನದ ಸ್ವರ ಹಾಡುವಂತೆ ಮಾಡಿದಾಗ, ನಮ್ಮ ಸ್ವಭಾವದ ಉದ್ವೇಗ, ಗಡಿಬಿಡಿ ಹೊರಟು ಹೋಗಿ ಮನಸ್ಸೂ ನಿರಾಳ ವಾಗುವುದನ್ನು ನಾವೇ ಅನುಭವಿಸಬಹುದು...ಹೀಗೆ ಇದು ತನ್ನ ತಾನರಿಯುತ್ತ, ತಾನು ಎಂಬುದನ್ನು ಮರೆಯುತ್ತ, ಅಪರಿಮಿತವಾಗಿ ವಿಕಾಸವಾಗುತ್ತ ವಿಶ್ವ ಚೈತನ್ಯದೆಡೆ ನಮ್ಮನ್ನು ಕೊಂಡೊಯ್ಯುವ ಗಂಧರ್ವ ವಿದ್ಯೆ.
- ಶ್ರುತಿ ಭಟ್
shrutikbhat@gmail.com