ಭಾವನೆಗಳೆಲ್ಲ ಕಟ್ಟಿಟ್ಟು ಬದುಕಿಬಿಡುವ ನಿರ್ಧಾರದಲ್ಲಿ ಹೊರಡುತ್ತೇನೆ. ಯಾರೂ ಬೇಡ. ಸ್ವತಂತ್ರವಾಗಿ ಮನಬಂದಂತೆ ವಿಹರಿಸುತ್ತ ಇದ್ದುಬಿಡಬೇಕೆಂಬ ಹಂಬಲ ಇತ್ತೀಚೆಗೆ ಉತ್ಕಟಗೊಳ್ಳುತ್ತಿದೆ. ಕೆಲ ದಿನಗಳಷ್ಟೆ, ಮತ್ತೆ ಮರೆತೆ ನೀನು ನನ್ನೊಳಗೆ ಎನ್ನುತ್ತ ವಾಪಸು ಬಂದಿರುತ್ತೇನೆ. ಅಲ್ಲ, ಇವರಿಗೆಲ್ಲ ನಾವು ಹುಡುಗಿಯರು ಅರ್ಥವೇ ಆಗುವುದಿಲ್ಲ ಏಕೆ? ಹಾಗಾದರೆ ನಾವು ಅಷ್ಟು ಗೂಢವೇ ಅಥವಾ ನಮ್ಮ ಅನರ್ಥಗಳು ಅಷ್ಟು ಅನಾಹುತಕಾರಿಯೇ? ನಮ್ಮ ಬಗ್ಗೆಯೇ ನಾನು ಯೋಚಿಸಿಕೊಂಡ ಕ್ಷಣ ನನ್ನೊಳಗೇ ಒದ್ದಾಡಿ ಹೋಗಿರುತ್ತೇನೆ. ನಾವು ಹುಡುಗಿಯರೆಂದರೆ ಏನು ಹಾಗಿದ್ದರೆ ?
ಹೌದು, ಒಪ್ಪಿಕೊಳ್ಳಲೇಬೇಕು ನಮ್ಮ ವರ್ತನೆ ಯಾವುದೂ ನೇರವಾಗಿರುವುದಿಲ್ಲ. ಏಕೆಂದರೆ ಅದು ನಮ್ಮ ಲಕ್ಷಣವೇ ಅಲ್ಲ. ಹೇಳಿ ಕೇಳಿ ಅಂಕುಡೊಂಕಿನ ಬಳುಕಿನಿಂದಲೇ ಅಲ್ಲವೇ ನಾವು ಹೆಣ್ಣು ಎಂದೆನಿಸಿಕೊಳ್ಳುವುದು? ಮಾತು ನಮ್ಮ ಆಸ್ತಿ. ತೀರಾ ಮಾತನಾಡುತ್ತೇವಾದರೂ ನಮ್ಮೊಳಗೆ ಹೇಳಬೇಕಾದದ್ದನ್ನು ಹೇಳುವುದೇ ಇಲ್ಲ. ಬಹುಶಃ ಅದನ್ನು ಹೇಳಲೇಬಾರದೆಂಬುದಕ್ಕೆ ಏನೇನೋ ಮಾತನಾಡುತ್ತ ಕುಳಿತುಬಿಡುತ್ತೇವೇನೋ? ಆದರೂ ನಮ್ಮ ಎದೆ ಯಾಳದಲ್ಲಿ ಅಡಗಿರುವ ವಿಚಿತ್ರ ಭಾವವನ್ನು ಅವರು ಅರ್ಥಮಾಡಿಕೊಳ್ಳಲಿ ಎಂಬ ಆಸೆ ನಮ್ಮದಾಗಿರುತ್ತದೆ. ನಮ್ಮನ್ನು ನಿಜಕ್ಕೂ ಅರಿತವರು ನಮ್ಮೊಳಗಿನದ್ದನ್ನೂ ಅರ್ಥಮಾಡಿಕೊಂಡಾಗ ಆಗುವ ಅನುಭವವಿದೆಯಲ್ಲಾ; ಅದಕ್ಕಾಗಿ ಕಾದು ಕುಳಿತಿರುತ್ತೇವೆ. ಆ ಕ್ಷಣದಲ್ಲಿ ಮಿನುಗುವ ಅವರ ಕಣ್ಣುಗಳಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುತ್ತೇವೆ. ಹಾಗೊಮ್ಮೆ ನಮ್ಮನ್ನು ಅರಿತು ಗೆಲ್ಲುವ ಸರದಾರರು ದಿಗ್ವಿಜಯದ ಭಾವದಿಂದ ಬೀಗುತ್ತಿರುತ್ತಾರೆ. ಅವರು ಹಾಗೆ ಗೆದ್ದು ಬೀಗಲಿ ಎಂದೇ ಏನೆಲ್ಲ ಆಟ ಕಟ್ಟಿ ಕುಳಿತಿರುತ್ತೇವೆ ಗೊತ್ತೇ? ಇಷ್ಟಾದರೂ ಅಂಥ ಗೆಲುವಿನಲ್ಲಿ ನಾವೆಂದೂ ಪಾಲು ಕೇಳುವವರಲ್ಲ. ಅದನ್ನು ಇಡಿ ಇಡಿಯಾಗಿ ಅವರಿಗೆ ಕೊಟ್ಟು ಅವರು ಮೀಸೆ ಹುರಿ ಮಾಡಿಕೊಂಡು ಹೊರಡುವುದನ್ನು ಮರೆಯಲ್ಲೇ ನಿಂತು ಕಂಡು ಸಂಭ್ರಮಿಸುತ್ತೇವೆ. ಎಲ್ಲೋ ಒಂದೆಡೆ 'ನಾನು ಗೆದದ್ದು ನಿನ್ನಿಂದಲೇ ಗೆಳತಿ' ಎಂಬ ಒಂದೇ ಒಂದೇ ಒಂದು ವಾಕ್ಯವನ್ನು ಹುಡುಗರಿಂದ ನಿರೀಕ್ಷಿಸಿ ಇಡೀ ಜೀವನ ಕಾದು ಕೂತಿರುತ್ತೇವೆ.
ಹುಡುಕಾಟಕ್ಕಾಗಿಯೇ ಹುಟ್ಟಿದವರು ನಾವು ಹುಡುಗಿಯರು. ಕೊನೆಯಿಲ್ಲದ ಹುಡುಕಾಟ. ಸದಾ ಯಾರನ್ನೋ, ಏನನ್ನೋ ಹುಡುಕುತ್ತಲೇ ಇರುತ್ತೇವೆ. ಹೀಗೆ ಹುಡುಕುತ್ತಿರುವವರು ಇಲ್ಲದ ಊರಲ್ಲೂ, ಅವರಿಲ್ಲದ ಕ್ಷಣದಲ್ಲೂ ನಮ್ಮ ಹುಡುಕಾಟ ನಿಲ್ಲದು. ಒಂದೊಮ್ಮೆ ಅವರೇ ಎದುರಿಗೆ ಬಂದರೆಂದಿಟ್ಟುಕೊಳ್ಳಿ, ಏನೂ ಗೊತ್ತೇ ಇಲ್ಲವೆಂಬಂತೆ ನೆಲ ನೋಡುತ್ತ ಇದ್ದುಬಿಡುತ್ತೇವೆ. ಅವರ ನಿಲುವನ್ನು ಕಣ್ಣತುಂಬಿಕೊಳ್ಳಲೇಬೇಕು ಎಂಬ ಬಯಕೆ ಬೆಟ್ಟದಷ್ಟಿದ್ದರೂ ಸಂಯಮದ ಬೇಲಿ ಕಟ್ಟಿ ಹುಗಿದು ಕುಳಿತುಬಿಡುತೇವೆ.
ಕನಸುಗಳೇ ನಮ್ಮ ಆಸ್ತಿ. ಯಾವ ಶ್ರೀಮಂತಿಕೆಯಿಲ್ಲದೇ, ಯಾರ ಹಂಗಿಲ್ಲದ ದಕ್ಕಿಸಿಕೊಳ್ಳಬಲ್ಲ ಈ ಏಕೈಕ ಸಂಪತ್ತಿನಲ್ಲಿ ನಮ್ಮದು ಚೌಕಾಸಿಯಿಲ್ಲ. ಬಣ್ಣ ಬಣ್ಣದ ಕನಸು ಕಟ್ಟುತ್ತೇವೆ. ಹಗಲೂರಾತ್ರಿ ಅದನದನ್ನೇ ನೆನೆದು ಸಂಭ್ರಮಿಸುತ್ತಿರುತ್ತೇವೆ. ಒಮ್ಮೆಯೂ ಈ ಕನಸುಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳದೇ ನೀರವದಲ್ಲಿ ವಿಹರಿಸುತ್ತೇವೆ. ಕೊನೆಗೊಮ್ಮೆ ನಮ್ಮ ಕನಸುಗಳನ್ನೆಲ್ಲ ಮೂಟೆಕಟ್ಟಿ ಮೂಲೆಗಿಟ್ಟು ಇನ್ನೊಬ್ಬರ ಕನಸನ್ನು ನನಸು ಮಾಡುವ ಕರ್ತವ್ಯಕ್ಕೆ ಎದ್ದು ಟೊಂಕಕಟ್ಟುತ್ತೇವೆ. ಅದೇ ಜೀವನದ ಪರಮಗುರಿಯೆಂದು ಹಂಬಲಿಸುತ್ತೇವೆ, ಹರಕೆ ಕಟ್ಟುತ್ತೇವೆ. ನಮ್ಮಲ್ಲಿ ಅರ್ಧಕ್ಕೇ ಉಳಿದ ಹೋದ ಕನಸಿನ ಬಗ್ಗೆ ಅಪ್ಪಿತಪ್ಪಿಯೂ ಹೊರ ಸುಳಿವು ನೀಡದೇ ಹಾಗೇ ಕಣ್ಣಲ್ಲಿ ಕಟ್ಟಿಕೊಂಡು ಹೋಗಿ ಏಕಾಂತದಲ್ಲಿ ಬಿಸುಟು ಬಂದುಬಿಡುತ್ತೇವೆ. ಹಲವು ರಾತ್ರಿಗಳನ್ನು ಹಾಗೆಯೇ ಕಣ್ಣರಳಿಸಿ ಕುಳಿತು ಕಳೆದು ಬಿಡುತ್ತೇವೆ. ಇಷ್ಟಾದರೂ ವಿಷಾದಕ್ಕೆ ನಮ್ಮೊಳಗೆ ತಾಣವೇ ಇಲ್ಲ.
ಬಣ್ಣದ ಬಟ್ಟೆ-ಚಿಟ್ಟೆ, ಬೆಳ್ಳಿ- ಬಂಗಾರ, ಹೂವು-ಹಣ್ಣು- ಹಸಿರು, ಮುತ್ತು-ಮಾತು, ಚುಕ್ಕಿ- ಚಂದ್ರ... ಹೀಗೆ ಎಲ್ಲವೆಂದರೂ ಬಾಯಿಬಿಡುತ್ತೇವೆ. ಆಸೆಯಿಂದ ಬಾಚಿಕೊಳ್ಳಲು ಹವಣಿಸುತ್ತೇವೆ. ಆಚ್ಚೆಯಿಂದ ಒಟ್ಟುಗೂಡಿಸಿಟ್ಟುಕೊಳ್ಳುತ್ತೇವೆ. ಮತ್ತದನ್ನು ಇನ್ನಾರಿಗಾಗಿಯೋ ದಾನವಾಗಿ ಕೊಟ್ಟೂಬಿಡುತ್ತೇವೆ. ಬಕ್ಕ ಬೈರಾಗಿಯಂತೆಯೇ. ನಾವೇ ನೆಟ್ಟ 'ಕುಂಬಳ ಗಿಡ'ದಲ್ಲಿ ಹೂವು, ಹೀಚಾಗಿ ಬಲಿಯುವುದನ್ನು ರಾತ್ರಿಯಿಡೀ ಕುಳಿತು ನೋಡುತ್ತ ಕಾಯುತ್ತೇವೆ. ಕಾಯಿಕಟ್ಟುವವರೆಗೂ ಕಾಳಜಿಯ ನೀರೆರೆಯುತ್ತೇವೆ. ಕೊಬ್ಬಿದ ಕಾಯನ್ನು ದೇವರಿಗೆ ಕೊಟ್ಟು ಕೃತಾರ್ಥರಾಗಿಬಿಡುತ್ತೇವೆ.
ಎದೆಯಂಗಳದಲ್ಲಿ ಮುಚ್ಚಿಟ್ಟುಕೊಂಡು ನೋಡಿಕೊಳ್ಳುವವರಿದ್ದರೂ ಧೋ ಸುರಿವ ಮಳೆಯಲ್ಲಿ, ಬಿರು ಬಿಸಿಲ ಬಯಲಲ್ಲಿ ಇನ್ನೇನನ್ನೋ ನೆನಪಿಸಿಕೊಂಡು ಧೀರ ನಡಿಗೆಯಲ್ಲಿ ಹೊರಟುಬಿಡುತ್ತೇವೆ. ಮೊದಲಿಂದಲೂ ಲೆಕ್ಕವೆಂದರೆ ಅಚ್ಚುಕಟ್ಟು. ಪರೀಕ್ಷೆಗಳಲ್ಲಿ ನೂರಕ್ಕೆ ನೂರು ನೂರು ಅಂಕ. ಹೀಗಿದ್ದರೂ ಬದುಕಿನ ಗಳಿಕೆಯ ಪ್ರಶ್ನೆ ಬಂದಾಗ ಏಣಿಸಲೂ ಹೋಗದೇ ಎಲ್ಲವನ್ನೂ ಎತ್ತಿಕೊಟ್ಟು, ಅದಕ್ಕೆ ಬದಲಿಗೆ ಏನನ್ನೂ ಕೇಳದೇ ಉಳಿದು ಬಿಡುತ್ತೇವೆ. ಕೊನೆಗೆ 'ಇಷ್ಟಾದರೂ ಕೊಟ್ಟರಲ್ಲ' ಎಂಬ ತೃಪ್ತಿಯಲ್ಲಿಯೇ ಮತ್ತೆ ನಮ್ಮ ಎಲ್ಲವನ್ನೂ ಎತ್ತಿ ಕೊಡುತ್ತಲೇ ಇರುತ್ತೇವೆ.
ನಮ್ಮೊಳಗೆ ಕುದಿವ ಜ್ವಾಲಾಗ್ನಿ ಇದ್ದರೂ ಪಕ್ಕದವರಲ್ಲಿ ಹೊಗೆಯಾಡುತ್ತ ಕುಳಿತ ಚಿಂತೆಗಳನ್ನು ಹೊರದಬ್ಬಲು ಯತ್ನಿಸುತ್ತೇವೆ. ಯಾರದ್ದೋ ಮಗುವನ್ನು ಎತ್ತಿಕೊಂಡು ಮೂಗೊರೆಸಿ ಮುದ್ದಿಸುವುದಕ್ಕೆ ನಮಗೆ ಎಂದಿಗೂ ಹಿಂಜರಿಕೆಯಿಲ್ಲ. ಯಾರದ್ದೋ ಸೋಲನ್ನೂ ಎತ್ತಿ ಎದಗವಚಿಕೊಂಡು ಸಂತೈಸಿ ಕಳುಹಿಸಬಲ್ಲೆವು.
ಧೀರ ವನಿತೆ(?)ಯರು ನಾವು. ಸ್ವಾತಂತ್ರ್ಯಕ್ಕಾಗಿ ಬಡಿದಾಡಿಕೊಂಡೇ ಬಂದಿದ್ದೇವೆ. ಬಂಡಾಯ ಸಾರಿದ್ದೇವೆ. ಕೊನೆಗೊಮ್ಮೆ ಮತ್ಯಾರದ್ದೋ ಸ್ವಂತದವಳು ನಾನೆಂದು ತೋಳಬಂಧನಕ್ಕೆ ಸಿಲುಕಿ ಕರಗಿ ಹೋಗಿದ್ದೇವೆ. ಮುಟ್ಟಿದರೆ ಮುದುಡುವ ನಾವು ನಮ್ಮಂಚಿನಲ್ಲೇ ಮುಳ್ಳುಗಳನ್ನೂ ಇಟ್ಟುಕೊಂಡಿದ್ದೇವೆ. ಬಳ್ಳಿ ಬಳ್ಳಿಯಾಗಿ ಬೇರು ಚಾಚಿ ಮೂಲ ಹಬ್ಬಲೆಂದು ಹಂಬಲಿಸುತ್ತೇವೆ. ಸಿಡಿದರೆ ಎದ್ದು ಚುಚ್ಚುವುದಕ್ಕೂ ಸಿದ್ಧರಿದ್ದೇವೆ. ಸ್ವಾಭಿಮಾನದಲ್ಲಿ ಕೆರಳುತ್ತೇವೆ. ಮನದಲ್ಲಿದ್ದ ತ್ಯಾಗ, ಸಮರ್ಪಣೆಯ ಮಂತ್ರ ಜಪಿಸುತ್ತೇವೆ. 'ಪುಟ್ಟೀ' ಎಂದು ಕರೆಸಿಕೊಳ್ಳುತ್ತಲೇ ಬೆಳೆದು ನಿಂತು, ಪುಟ್ಟ ಮಗುವನ್ನು ಹೆತ್ತು ಕೊಟ್ಟು ಬೆರಗು ಹುಟ್ಟಿಸುತ್ತೇವೆ.
ಹೌದು, ನಮ್ಮದು ಅದೇ ಮಗು ಮನಸು. ಅದನ್ನು ಮೀರಿದ ಪ್ರೌಢಿಮೆ. ಒಮ್ಮೊಮ್ಮೆ ತೀರಾ ಮುಗುದೆಯರಾಗುವ ನಮ್ಮೊಳಗೆ ಗೊತ್ತಿಲ್ಲದ್ದೇನಿಲ್ಲ. ಗೊತ್ತಿದ್ದೂ ಸುಮ್ಮನಿದ್ದು ನೋಡುವ ಕುತೂಹಲ. ಕುಣಿದು ಕುಪ್ಪಳಿಸಿ, ನಕ್ಕು ನಗಿಸಿ ಎಲ್ಲರೂ ನಗುನಗುತ್ತಾ ಇರುವಾಗಲೇ ಗಂಭೀರ ಚಿಂತನೆಗೆ ಹೊರಟುಬಿಟ್ಟಿರುತ್ತೇವೆ. ಎಂಥಾ ಭಾರವಿರಲಿ, ಅದನ್ನು ಹೊತ್ತು ನಡೆಯುವ ಹೆಗಲು ನಮ್ಮದು. ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಬಂದರೂ ಭಾರ ಬಿಡದ ಸ್ವಾಭಿಮಾನಿಗಳು ನಾವು. ಬೆಟ್ಟದಷ್ಟು ನೋವ ನುಂಗಿ ಏನೂ ಆಗಿಯೇ ಇಲ್ಲವೆಂಬಂತೆ ಮುಖವರಳಿಸಿ ಹೊರಟುಬಿಡುವುದು ಹೊಸತೇನಲ್ಲ. ನಾವು ಹುಡುಗಿಯರು ಹಾಗೇನೇ, ಹಠಕ್ಕೆ ಬಿದ್ದರೆ ಬಗ್ಗಿಸಲಾಗದ ಬಿರುಸು. ಪ್ರೀತಿಗೆ ಸೋತು ಕರಗಿ ನೀರಾಗುವ ಮನಸು. ಒಮ್ಮೊಮ್ಮೆ ಅಚ್ಚರಿಯ ತಾಳ್ಮೆ, ಕೆಲವೊಮ್ಮೆ ತೀರಾ ಪುಟ್ಟದ್ದಕ್ಕೂ ಮುನಿಸು...
ಕೊನೆಗೂ ಅರಿತೇನೆಂದರೂ ಅರಿಯಲಾಗದ ಬೆಳಕ ಬೀರುವ ಪುಳಕ. ನಾವು ಹುಡುಗೀರೆಂದರೆ.... ಏನು? ಹೇಗೆಂಬುದು ಇನ್ಯಾರಿಗೂ ಅರಿವಾಗಲು ಸಾಧ್ಯವೇ ಇಲ್ಲವಾ? ಈ ಸ್ಥಿತಿಗೆ ಹೆಮ್ಮೆಪಡಬೇಕಾ ಅಥವಾ ನಮ್ಮೊಳಗೆ ಮುತ್ತುವ ಭಾವಗಳ ಹಂಚಿಕೊಳ್ಳಲಾಗದ ಮನಸ್ಥಿತಿಗೆ ವಿಷಾದಿಸಬೇಕೋ ತಿಳಿಯದಾಗಿದೆ!
= ರಾಧಾ ಸೋಚನಿ
abhyagatha@yahoo.co.in