ಮುಂದೊಮ್ಮೆ ಹೀಗೆ

Updated on: 

2053ನೇ ಇಸವಿಯಲ್ಲೊಂದು ದಿನ. ರಾತ್ರಿ ಹನ್ನೊಂದು ಗಂಟೆ. ಲಿಯೋನಾರ್ಡ್ ಮೀಡ್ ಎಂಬ ಬರಹಗಾರ ನ್ಯೂಯಾರ್ಕಿನ ಬೀದಿಗಳಲ್ಲಿ ಸುಮ್ಮನೆ ನಡೆಯುತ್ತಿದ್ದಾನೆ. ಅವನ ಉದ್ದೇಶ ಸುತ್ತಮುತ್ತಲನ್ನು ನೋಡುವುದು, ಆಲಿಸುವುದು ಅಷ್ಟೇ. ಬೀದಿಗಳು ನಿರ್ಜನವಾಗಿವೆ. ಜನ ಒಳಗೆ ಸೇರಿಕೊಂಡು, ಟಿವಿ ನೋಡುತ್ತ, ಸುತ್ತಲಿನ ಯಾವ ವಿಚಾರಗಳಿಗೂ ಸ್ಪಂದಿಸದೆ, ಅಕ್ಷರಶಃ ಸತ್ತಂತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮೀಡ್ ಏನನ್ನೂ ಬರೆದಿಲ್ಲ. ಯಾಕೆಂದರೆ ಓದುವವರಿಲ್ಲ, ಪ್ರಕಟಿಸುವವರಿಲ್ಲ.
ನಡೆಯುತ್ತಿರುವ ಮೀಡ್‌ನನ್ನು ಸ್ವಯಂಚಾಲಿತ ಪೊಲೀಸ್ ವಾಹನ ತಡೆದು, ವಿಚಾರಿಸುತ್ತದೆ. ಮೀಡ್ ರಾತ್ರಿ ಸುಮ್ಮನೆ ವಾಕಿಂಗ್ ಮಾಡುತ್ತಿರುವುದು, ಆತ ನಿರುದ್ಯೋಗಿಯಾಗಿರುವುದು... ಆತ ಅಪಾಯಕಾರಿ ಎಂದು ತೀರ್ಮಾನಿಸಲು ಆ ಯಂತ್ರಕ್ಕೆ ಸಾಕು. ಆತನನ್ನು ಯಂತ್ರದ ಹಿಂಬದಿಯ ಲೋಹದ ಪಂಜರ ಸೆಳೆದುಕೊಳ್ಳುತ್ತದೆ. ಮೀಡ್‌ನ ಗತಿ ಏನು? ಗೊತ್ತಿಲ್ಲ.
ಈ ಕತೆಯನ್ನು ಬರೆದಾತ ರೇ ಬ್ರಾಡ್‌ಬರಿ ಎಂಬ ಅಮೆರಿಕದ ಜನಪ್ರಿಯ ವಿಜ್ಞಾನಕಥನ ಸಾಹಿತಿ. ಸಾಹಿತ್ಯವನ್ನು ಗೌರವಿಸದ, ಓದನ್ನು ಮರೆತ, ಸಂವೇದನೆಗಳನ್ನು ತೊರೆದ ಸಮಾಜ ಹೇಗಿರುತ್ತದೆ ಎಂಬುದರ ಸೂಕ್ಷ್ಮ ನೋಟ ತೋರುವ ಕತೆ ಇದು. ನಮ್ಮ ಕೇಂದ್ರ ಸರಕಾರ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಐಚ್ಛಿಕ ಸಾಹಿತ್ಯವನ್ನು ತೆಗೆದು ಹಾಕಿದೆಯಲ್ಲ, ಅದನ್ನು ನೋಡಿದಾಗ ರೇ ಬರೆದ ಈ ಕತೆ ನೆನಪಾಯಿತು.
ಖಲೀಲ್ ಕಂಡಂತೆ
ಖಲೀಲ್ ಗಿಬ್ರಾನ್ ಈ ಜಗತ್ತು ಕಂಡ ಮಹಾ ದಾರ್ಶನಿಕ, ಮಹಾಕವಿಗಳಲ್ಲಿ ಒಬ್ಬ. ಆತ ಸೃಷ್ಟಿಸಿದ ರೂಪಕಗಳು ನಮ್ಮ ನಡುವೆ ಇಂದಿಗೂ ಜೀವಂತವಾಗಿದ್ದು ಹರಿದಾಡುತ್ತಿವೆ. ಲಕ್ಷಾಂತರ ಜನರಿಗೆ ನಿತ್ಯ ಸ್ಫೂರ್ತಿ ಹಾಗೂ ಹೊಸ ರೂಪಕಗಳ ಸೃಷ್ಟಿಗೆ ಪ್ರೇರಣೆಯೂ ಆಗಿವೆ. ಅಂಥ ಕೆಲ ರೂಪಕಗಳು ಇಲ್ಲಿವೆ.
= ಸನಿಹದಲ್ಲಿರುವ ಮಿತ್ರನಿಗಿಂತ ದೂರದಲ್ಲಿರುವ ಗೆಳೆಯನೇ ಕೆಲವೊಮ್ಮೆ ಆಪ್ತ ಅನಿಸುತ್ತಾನೆ. ಪರ್ವತದಲ್ಲಿ ವಾಸಿಸುತ್ತಿರುವವರಿಗಿಂತ, ಅದನ್ನು ದೂರದಿಂದ ನೋಡುವವರಿಗೇ ಅದು ಹೆಚ್ಚು ಸೊಗಸಾಗಿ ಕಾಣುವುದಿಲ್ಲವೇ?
= ತನ್ನ ಬುದ್ಧಿವಂತಿಕೆಯ ಮನೆಯನ್ನು ನಿಮಗೆ ತೆರೆದಿಡುವವನಿಗಿಂತಲೂ, ನಿಮ್ಮ ಪ್ರಜ್ಞೆಯ ಅರಮನೆಯ ಬಾಗಿಲನ್ನು ನಿಮಗೇ ತೆರೆಯಿಸುವವನೇ ಅತ್ಯಂತ ಪರಿಣಾಮಕಾರಿ ಗುರುವು.
=     ಮುಂಜಾನೆ ಕುಳಿತ ಇಬ್ಬನಿಗಳಲ್ಲಿ ಬೆಳಗು ಅತ್ಯಂತ ತಾಜಾ ಆಗಿ ಕಾಣಿಸುತ್ತದೆ. ಹಾಗೆಯೇ, ಸಂತೋಷ ಮತ್ತು ದುಃಖದ ಹನಿಗಳಲ್ಲಿ ಸ್ನೇಹ ಪರಿಣಾಮಕಾರಿಯಾಗಿ ಹೊಳೆಯುತ್ತದೆ.
=     ಚೆಲುವು ಅಂದರೇನು ಗೊತ್ತಾ? ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಳ್ಳುತ್ತಿರುವ ಅನಂತತೆ.
=     ನಂಬಿಕೆ ಎಂಬುದು ಹೃದಯದಲ್ಲಿರುವ ಓಯಸಿಸ್. ಚಿಂತನೆಯ ಪ್ರವಾಸದ ಮೂಲಕ ನಾವದನ್ನು ತಲುಪಲಾರೆವು.
=     ನಿನ್ನೆ ಎಂಬುದು ಇವತ್ತಿನ ನೆನಪು, ನಾಳೆ ಎಂಬುದು ಇಂದಿನ ಕನಸು.
ಒಂದು ಪ್ರಶ್ನೆ
ದನಿ ಹೇಳಿತು: ತಾರೆಗಳಲ್ಲಿ ನನ್ನ ನೋಡಿ
ಮನುಷ್ಯರೇ ನಿಜವಾಗಿ ಹೇಳಿ
ಈ ಮೈ- ಮನದಲ್ಲಿಯ ಕಲೆಗಳು
ಈ ಹುಟ್ಟಿಗೆ ಹೆಚ್ಚಲ್ಲವೆ ಹೇಳಿ?
= ರಾಬರ್ಟ್ ಫ್ರಾಸ್ಟ್

= ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com