ರಂಗದ ಮೇಲೆ ಸಾಹಿತ್ಯದ ಓದು

ರಂಗದ ಮೇಲೆ ಸಾಹಿತ್ಯದ ಓದು
Updated on: 

ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜಿನ ಸಾಂಸ್ಕೃತಿಕ ರಂಗಘಟಕವಾದ 'ಕುಸುಮ ಸಾರಂಗ'ಕ್ಕೆ 20ರ ಸಂಭ್ರಮ. ಆ ನಿಮಿತ್ತ ನಡೆದ ವಿಂಶತಿ ಸಂಭ್ರಮದಲ್ಲಿ ಮಂಗಳೂರಿನ ಜರ್ನಿ ಥಿಯೇಟರ್‌ಗ್ರೂಪ್ ಕಲಾವಿದರು ಪ್ರಸ್ತುತ ಪಡಿಸಿದ ವಿನೂತನ ಕಾರ್ಯಕ್ರಮ 'ಕಾವ್ಯ ಕಥಾ ಪ್ರಸಂಗ'.
ರಂಗಭೂಮಿಯ ಪ್ರೀತಿಗಾಗಿ ಸಮಾನಮನಸ್ಕರು ರಂಗಭೂಮಿಯ ಸಾಧ್ಯತೆಗಳನ್ನು ಬಳಸಿಕೊಂಡು, ಸಿಕ್ಕ ಸಮಯಾವಕಾಶದಲ್ಲಿ ಸೃಜನಾತಾತ್ಮಕ ರಂಗಪ್ರಯೋಗಗಳ ಹುಡುಗಾಟ ನಡೆಸಬೇಕೆಂಬ ಆಶಯ 'ಕಾವ್ಯ ಕಥಾ ಪ್ರಸಂಗ'ದ ಮೂಲಕ ಸಾಕಾರಗೊಂಡಿದೆ. ಇದು ಕಾವ್ಯ, ಕಥೆಯ ಓದು. ಅಂದರೆ ವಾಚಕಾಭಿನಯ. ಸಾಹಿತ್ಯದ ಓದನ್ನು ರಂಗರೂಪಕ್ಕೆ ಇಳಿಸಿ ಜನರ ಮುಂದಿಡುವ ಪ್ರಯತ್ನ. ಒಂದು ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕಲಾವಿದರು ಯಶಸ್ವಿಯಾದರು ಕೂಡ.
ಡಾ.ಶ್ರೀಪಾದ ಭಟ್ ಶಿರಸಿ ಅವರ ಪರಿಕಲ್ಪನೆಯಲ್ಲಿ, ವಿದ್ದು ಉಚ್ಚಿಲ್ ಮತ್ತು ಮಂಜುಳಾ ಸುಬ್ರಹ್ಮಣ್ಯ ಅವರ ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬಂತು. ಇದನ್ನು ಮನರಂಜನೆ ಅಂತ ಅಂದುಕೊಳ್ಳದಿದ್ದರೂ ಇಲ್ಲಿ ಸಾಹಿತ್ಯದ ಕುರಿತಾದ ಅಧ್ಯಯನವಿದೆ, ರಂಗದಲ್ಲಿ ಮನಕ್ಕೊಪ್ಪುವ ಹಾಗೆ ಪ್ರಸ್ತುತಪಡಿಸುವ ಕಲೆ ಇದೆ. ಒಟ್ಟಾರೆಯಾಗಿ ಇದು ನಮ್ಮ ಸಾಹಿತ್ಯದ ಕಲಿಕೆಯ ಹುಡುಕಾಟ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ 'ಹಣತೆ ಹಚ್ಚುತ್ತೇವೆ' ಎಂಬ ಕವನದಿಂದ ಕಾವ್ಯ ಕಥಾ  ರಂಗ-ಪ್ರಸಂಗದ ಆರಂಭ. ಆದಿಕವಿ ಪಂಪನ ಆರಂಕುಸ ವಿಟ್ಟೊಡೆ ಎಂಬ ಹಳೆಗನ್ನಡದ ಮಾತು ಇಲ್ಲಿ ಕವನವಾಗಿ ಬಿಂಬಿತವಾಗಿದೆ. ದುರ್ಗಸಿಂಹನ  ಪಂಚತಂತ್ರ ಕಥೆ ಎಳೆಎಳೆಯಾಗಿ ರೂಪಿತವಾಗಿದೆ. ಬಡವರು ಸತ್ತರೆ ಎಂಬ ಜನಪದ, ಬಸವಣ್ಣನ ವಚನ, ಕುವೆಂಪುರವರ ಕಲ್ಕಿ ಕಾವ್ಯ, ಕೆ.ವಿ.ತಿರುಮಲೇಶ್ ಅವರ ಪೆಂಟಯ್ಯನ ಅಂಗಿ, ಬಾಲವನದಲ್ಲಿ ಕಾರಂತಜ್ಜನ ಪ್ರಶ್ನೆಗಳು, ಪ್ರತಿಭಾ ನಂದಕುಮಾರ್ ಅವರ ನಾವು ಹುಡುಗಿಯರೇ ಹೀಗೆ, ಅಡುಗೆ ಮಾಡುವುದೆಂದರೆ, ವೈದೇಹಿಯ ಗೊತ್ತೆ ತಿಳಿಸಾರ್ ನಿಮಗೆ, ಎಚ್.ಎಸ್.ಅನುಪಮಾರವರ ಪಾಪ, ಓ.. ದೇವರೇ, ಚಿಂತಾಮಣಿ ಕೂಡ್ಲಕೆರೆಯವರ ಬಾಬುವಿನ ಕವನ... ಕಾವ್ಯ ಕಥಾ ಪ್ರಸಂಗದ ನಡೆಯಲ್ಲಿ ಸಾಗಿಬಂದವು.
ಮುಂದೆ ಬಲ್ಗೇರಿಯನ್ ಕಥೆ, ವೇದಾಂತ ಮತ್ತು ರೆಜಿಮೆಂಡ್ ಎಂಬ ಪುಸ್ತಕದ ಮೂರು ಮೆಟ್ಟಿಲ ಕಥೆ, ರಷ್ಯನ್ ಕತೆಯಾದ ತ್ಸಾರ್ ದೊರೆ, ಬ್ರೆಕ್ಟ್ ಕಾವ್ಯವಾದ ಪುಸ್ತಕದಹನ, ಮತ್ತೆ ಕನ್ನಡ ಕವಿ ನಿಸಾರ್ ಅಹಮದ್ ಅವರ ಕುರಿಗಳು ಸಾರ್ ಕುರಿಗಳು, ದುಂಡಿರಾಜರ ನುಂಗೋಣ ಬಾರಾ ನುಂಗೋಣ, ಮೂಡ್ನಾಕೂಡು ಚಿನ್ನಸ್ವಾಮಿಯವರ ನಾನೊಂದು ಮರವಾದರೆ, ಅಂತಿಮವಾಗಿ ಶರಣೆಂಬೆವು ನಾವು.... ಹೀಗೆ ಕನ್ನಡ ಸಾಹಿತ್ಯ ಪ್ರಪಂಚದ ಹಳಗನ್ನಡ, ಜನಪದ, ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಹೊಸಗನ್ನಡ ಸಾಹಿತ್ಯವನ್ನು ಒಂದು ಬಾರಿ ಇಣುಕಿ ನೋಡಲಾಗಿದೆ.
ಹಾಡನ್ನು ಗದ್ಯವಾಗಿ, ಗದ್ಯವನ್ನು ಹಾಡಾಗಿ, ಕವನವನ್ನು ಕಥೆಯಾಗಿ, ಕಥೆಯನ್ನು ರೂಪಕವಾಗಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಸಾಹಿತ್ಯಪ್ರಿಯರಿಗೆ ಇಷ್ಟವಾಗಿದೆ. ರಂಗಭೂಮಿಯ ಇತಿಹಾಸದಲ್ಲೇ ಹೊಸಪ್ರಯೋಗ ಇದು ಎಂದರೆ ತಪ್ಪಲ್ಲ. ಪ್ರಸಂಗದುದ್ದಕ್ಕೂ ಕನ್ನಡ ಸಾಹಿತ್ಯ ಬೆಳೆದು ಬಂದ ಸೊಗಡು-ಸೊಬಗಿನ ನಡೆ ಅಡಗಿದೆ. ಕನ್ನಡ ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳನ್ನು ಜಾಲಾಡಿಸಿ ಅದನ್ನು ಪ್ರೇಕ್ಷಕರಿಗೆ ವಿಭಿನ್ನ ಮಾದರಿಯಲ್ಲಿ ಪ್ರಸ್ತುತಪಡಿಸಿದ ವೈಖರಿ ಕನ್ನಡ ಸಾಹಿತ್ಯ ಲೋಕಕ್ಕೆ ಈ ತಂಡ ನೀಡಿದ ದೊಡ್ಡ ಕೊಡುಗೆಯಾಗಿದೆ. ಎಲ್ಲಾ ಸ್ತರದ ಪ್ರೇಕ್ಷಕರಲ್ಲೂ ಕನ್ನಡ ಸಾಹಿತ್ಯ ದಾರಿಯ ಬಗ್ಗೆ ಕ್ಷಕಿರಣ ಮೂಡಿಸಿ ಚಿಂತನೆಗೆ ಗ್ರಾಸ ಒದಗಿಸುವ ಪುಟ್ಟ ತಂಡದ ಸದಸ್ಯರ ಶ್ರಮ ಸಾರ್ಥಕವಾಗಿದೆ. ಈ ವಿನೂತನ ಪ್ರಯೋಗದಲ್ಲಿ ಸಂಗೀತವಿದೆ. ಸಾಹಿತ್ಯವಿದೆ. ಹಾಡು ಇದೆ. ಅಭಿನಯವಿದೆ. ಕನ್ನಡ ಸಾಹಿತ್ಯವನ್ನು ಓದುವ ಪರಿ ಅದ್ಭುತ ದೃಶ್ಯಗಳಾಗಿ ಮೂಡಿಬಂದಿದೆ.
ಕಾಲೇಜು, ವಿಶ್ವವಿದ್ಯಾನಿಲಯ, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರದರ್ಶನವಾಗಲೇಬೇಕಾದ ಪ್ರಯೋಗವಿದು.

-ಬಿ.ವಿಠಲ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com