ರಾಗ ತಪ್ಪಿದ ಹಾಡು

ರಾಗ ತಪ್ಪಿದ ಹಾಡು
Updated on: 

ರಾಜಸ್ಥಾನದ ತೀರ್ಥಕ್ಷೇತ್ರ ಪುಷ್ಕರದಲ್ಲಿವೆ ಕನ್ನಡದ ಪುಣ್ಯಕೋಟಿಯ ಬೇರುಗಳು. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕೆಂದರೆ ಸಾವಿರಸಾವಿರ ವರ್ಷಗಳ ಹಿಂದಿನ ಋಷಿಮುನಿಗಳ ಕಾಲಕ್ಕೆ ಹೋಗಬೇಕು. 'ಸತ್ಯವೇ ತಾಯಿ ತಂದೆ, ಸತ್ಯವೇ ಭಗವಂತ' ಎಂದು ಸಾರುವುದು ಋಷಿಮುನಿಗಳ ಮತ್ತು ಕನ್ನಡದ ಜಾನಪದ ಕವಿಯ ಆಶಯವಾಗಿತ್ತು. ಆ ಮೌಲ್ಯಗಳನ್ನು ಕನ್ನಡಿಗರು ಒಪ್ಪಿ ಅನುಸರಿಸುತ್ತ ಬಂದಿದ್ದಾರೆ ಕೂಡ. ಆದರೆ, ಇಂದು ಕೆಲವರು ಸತ್ಯಪಾಲನೆಗಿಂತ ಬೇರೆಬೇರೆ ಉದ್ದೇಶಗಳಿಗೆ ಪುಣ್ಯಕೋಟಿಯ ಕಥೆ ಬಳಸಿಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆಯೇ ಎಂದು ಕನ್ನಡಿಗರೆಲ್ಲರೂ ಆಲೋಚಿಸಬೇಕಿದೆ.  
ರಾಜಸ್ಥಾನದಲ್ಲಿರುವ, ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿರುವ, ಪುಣ್ಯಕ್ಷೇತ್ರ ಪುಷ್ಕರ. ಭಾರತದಲ್ಲೆಲ್ಲೂ ಕಾಣಸಿಗದ ಬ್ರಹ್ಮದೇವನ ದೇವಸ್ಥಾನ ಈ ತೀರ್ಥಕ್ಷೇತ್ರದಲ್ಲಿದೆ. ಬ್ರಹ್ಮನಿಗೆ ಪೂಜೆ ಇಲ್ಲ ಎಂಬ ಶಾಪವಿದ್ದರೂ, ಗುಡಿಯಂತೂ ಇದೆ. ಭಾರತದ ಸಾಂಸ್ಕೃತಿಕ ಇತಿಹಾಸ ಹೇಳುವುದೇನೆಂದರೆ ಪುಷ್ಕರದಲ್ಲಿ ಮೊಟ್ಟಮೊದಲ ಬಾರಿಗೆ ಮಹಾಯಜ್ಞವೊಂದನ್ನು ಬ್ರಹ್ಮದೇವನೇ ನಡೆಸಿದ ಎಂದು.
ಆ ಕಾಲದ ಪುಷ್ಕರದಲ್ಲಿ ಮೂರು ದೊಡ್ಡ ಸರೋವರಗಳೂ, ಪರ್ವತಮಾಲೆಗಳೂ ಇದ್ದು, ಇಂದು ಭೂಗತಳಾಗಿರುವ ಸರಸ್ವತಿ ನದಿ ಅಲ್ಲಿಯೇ ಒಂದು ಸರೋವರದಲ್ಲಿ ಹುಟ್ಟಿ ಹರಿದಳು ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿದೆ. ರಾಜಸ್ತಾನದ ಈ ಪುಷ್ಕರದಲ್ಲಿಯೇ ಕನ್ನಡದ ಪುಣ್ಯಕೋಟಿಯ ಬೇರುಗಳಿರುವುದು. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕೆಂದರೆ ಸಾವಿರಸಾವಿರ ವರ್ಷಗಳ ಹಿಂದಿನ ಋಷಿಮುನಿಗಳ ಕಾಲಕ್ಕೆ ಹೋಗಬೇಕು.
ಭಾರತದ ಮಹಾ ಋಷಿಮುನಿಗಳ ದೀರ್ಘ ತಪಸ್ಸಿನ ಫಲವಾಗಿ ಹುಟ್ಟಿಬಂದದ್ದು ವೇದ, ಉಪನಿಷತ್ತುಗಳು. ಕಾಲ ಕಳೆದಂತೆ ಅವು ಸಾಮಾನ್ಯ ಜನರ ತಿಳುವಳಿಕೆಗೆ ಸುಲಭವಾಗಿ ಎಟುಕದಂತಾದಾಗ ಹುಟ್ಟಿದ್ದು ಪುರಾಣಗಳು. ವೇದ, ಉಪನಿಷತ್ತುಗಳ ಹೇಳುವ ಉನ್ನತ ವಿಚಾರಗಳನ್ನು ಸರಳವಾದ ಕತೆಗಳ ಮೂಲಕ ಎಲ್ಲರಿಗೂ ಅರ್ಥವಾಗುವಂತೆ ಜನತೆಯ ಮುಂದಿಟ್ಟರು ಋಷಿಮುನಿಗಳು.
 ವೇದ, ಉಪನಿಷತ್ತುಗಳಂತೆಯೇ ಪುರಾಣಗಳನ್ನೂ ಯಾರೋ ಒಬ್ಬ ಋಷಿ, ಒಂದು ಕಾಲದಲ್ಲಿ ಬರೆದುದಲ್ಲ. ಅನೇಕ ಋಷಿಗಳು ಕಾಲಕಾಲದಲ್ಲಿ ಕತೆಗಳನ್ನು ಹೆಣೆದು ಹೇಳುತ್ತಾ ಬಂದರು. ಒಂದೇ ಕತೆ, ಒಂದು ಪುರಾಣದಲ್ಲಲ್ಲದೆ, ಕೆಲವಾರು ಪುರಾಣಗಳಲ್ಲಿ ದೊರೆಯುವುದುಂಟು. ಹಾಗೆಯೇ ಅನೇಕ ಕತೆಗಳು ಪಂಚತಂತ್ರದಲ್ಲಿಯೂ ಇವೆ. ಇಂತಹ ಕತೆಗಳಲ್ಲಿದೆ ಪುಣ್ಯಕೋಟಿಯ ಮೂಲ. ಸಂಸ್ಕೃತದ 'ಇತಿಹಾಸ ಸಮುಚ್ಛಯ'ದಲ್ಲೂ ಕಾಣಸಿಗುತ್ತದೆ.
18 ಮುಖ್ಯ ಪುರಾಣಗಳಲ್ಲಿ ಅತ್ಯುಚ್ಛ ಸ್ಥಾನ ಪಡೆದಿರುವುದು ಪದ್ಮಪುರಾಣ. ಮಹರ್ಷಿ ವ್ಯಾಸರಿಂದ ರಚಿತವಾದಈ ಪುರಾಣ, ಸತ್ಯ, ಧರ್ಮ, ನೀತಿ ಮುಂತಾದ ವಿಚಾರಗಳನ್ನು ಸರಳವಾದ ಕಥಾ ರೂಪದಲ್ಲಿ ಹೇಳುತ್ತಾ ಹೋಗುತ್ತದೆ. ಈ ಕತೆಗಳಲ್ಲಿ ಒಂದು ನಂದ ಎಂಬ ಹಸುವಿನ ಕತೆ. ಅದು ಹೀಗಿದೆ:
ಪುಷ್ಕರ ಕ್ಷೇತ್ರದಲ್ಲಿ, ಒಂದಾನೊಂದು ಕಾಲದಲ್ಲಿ ಪ್ರಭಂಜನ ಎಂಬ ರಾಜನಿದ್ದ. ಒಮ್ಮೆ ಅಲ್ಲಿಯ ನಿಬಿಡಾರಣ್ಯದಲ್ಲಿ ಮೃಗ ವಿಹಾರಕ್ಕೆ ಹೊರಟ ರಾಜ. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಪೊದೆಯೊಂದರಲ್ಲಿ ಕುಳಿತಿದ್ದ ಪಾರಿವಾಳ ಅವನ ಕಣ್ಣಿಗೆ ಬಿತ್ತು. ರಾಜ, ಪಾರಿವಾಳಕ್ಕೆ ಗುರಿಯಿಟ್ಟು ಬಾಣಬಿಟ್ಟ. ಗಾಯಗೊಂಡ ಪಾರಿವಾಳ ರಾಜನಿಗೆ ಹೇಳಿತು,
 'ರಾಜನೇ, ನಾನು ನನ್ನ ಮರಿಗೆ ಗುಟುಕು ಕೊಡುತ್ತಿದ್ದೆ. ಅಂತಹ ಸಮಯದಲ್ಲಿ ನೀನು ನನ್ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದು ಸರಿಯಲ್ಲ. ಅಲ್ಲದೆ ಇದು ಋಷಿಗಳ ಆಶ್ರಮಗಳಿರುವ ಪ್ರದೇಶ. ಇಲ್ಲಿ ಬೇಟೆಯಾಡುವುದು ನಿಷಿದ್ಧ. ಈ ನಿನ್ನ ತಪ್ಪುಗಳಿಗೆ ನೀನು ಶಿಕ್ಷೆ ಅನುಭವಿಸದೆ ವಿಧಿಯಿಲ್ಲ. ನಿನ್ನ ಕರ್ಮಕ್ಕೆ ಅನುಸಾರವಾಗಿ ನೀನು ಮರುಜನ್ಮದಲ್ಲಿ ಮೃಗವಾಗಿ ಹುಟ್ಟಬೇಕು, ಇತರ ಪ್ರಾಣಗಳನ್ನು ಕೊಂದು ಹಸಿ ಮಾಂಸ ತಿಂದು ಕಾಲಹರಣ ಮಾಡಬೇಕು.'
 ರಾಜ ಹೆದರಿ ಹೋದ. ಪಾರಿವಾಳಕ್ಕೆ ಸಾಷ್ಟಾಂಗವೆರಗಿದ, 'ನನ್ನಿಂದ ತಪ್ಪಾಯಿತು. ನನ್ನನ್ನು ಕ್ಷಮಿಸು. ನನ್ನ ಮೇಲೆ ಕರುಣೆಯಿಡು' ಎಂದು ಮತ್ತೆಮತ್ತೆ ಬೇಡಿದ. ಮೊರೆಯಿಟ್ಟ.
 'ಬೇರೆ ದಾರಿಯಿಲ್ಲ ರಾಜ. ಆದರೆ ಇಂದಿಗೆ ನೂರು ವರ್ಷಗಳ ನಂತರ ನಂದ ಎಂಬ ಹಸು ನಿನ್ನ ಬಳಿಗೆ ಬರುತ್ತದೆ. ಆ ಹಸು ನಿನಗೆ ತನ್ನ ಹೆಸರು ಹೇಳಿದಾಗ ನಿನಗೆ ವಿಮೋಚನೆ ದೊರೆಯುತ್ತದೆ. ಇನ್ನೂ ಒಂದು ಮಾತಿದೆ ಕೇಳು. ಹಿಂಸ್ರ ಪಶು ವ್ಯಾಘ್ರನಾಗಿ ಹುಟ್ಟಿ ಬದುಕುವಾಗ ನೀನು ಒಂದು ನಿಯಮವನ್ನು ಪಾಲಿಸಬೇಕು. ನಿನ್ನ ಬೇಟೆಯನ್ನು ಕೊಂದ ಕೂಡಲೇ ನಿನಗೆ ಎಷ್ಟೇ ಹಸಿವಿದ್ದರೂ ತುಸು ತಡೆಯಬೇಕು. ನಿನ್ನ ಬೇಟೆಗೆ ತಪ್ಪದೆ ಈ ಒಂದು ಮಾತನ್ನು ಹೇಳಬೇಕು. ಅದೇನೆಂದರೆ, 'ನೀನು ನನ್ನ ಬೇಟೆ. ನಾನು ಹಿಡಿದ ಪ್ರಾಣಿಯ ಮೇಲೆ ನನಗೆ ಸಂಪೂರ್ಣ ಅಧಿಕಾರವಿದೆ. ಆದ್ದರಿಂದ ಈಗ ನಾನು ನಿನ್ನನ್ನು ಕೊಂದು ತಿನ್ನುವೆ' ಎಂದು.
ಇದಾದ ನಂತರ ರಾಜ ಸತ್ತು ಹುಲಿಯಾಗಿ ಹುಟ್ಟಿದ. ಬೇಟೆಯಾಡಿ ಬದುಕುತ್ತಾ ನೂರು ವರ್ಷ ಕಾಲ ಕಳೆಯುತ್ತಾ ಬಂದಿತು. ಹೀಗಿರುವಾಗ ಆ ಕ್ಷೇತ್ರಕ್ಕೆ ಕೆಲ ಗೋವಳರು ತಮ್ಮ ಗೋವುಗಳ ಮಂದೆಯೊಡನೆ ಬಂದರು. ಸಮೃದ್ಧವಾದ ಮೇವು, ನೀರನ್ನು ಕಂಡ ಅವರು ಕೆಲ ದಿನ ಅಲ್ಲಿ ತಂಗುವ ಯೋಚನೆ ಮಾಡಿದರು. ಗುಂಪಿನ ಹಸುಗಳು ಅಡವಿಯಲ್ಲಿ ಆನಂದದಿಂದ ಮೇಯುತ್ತಾ ದಿನಗಳೆದವು.
 ಒಮ್ಮೆ ದಿನಿತ್ಯದಂತೆ ಹಸುಗಳು ಮೇಯಲು ಅಡವಿಗೆ ಹೋಗಿದ್ದಾಗ ದಷ್ಟಪುಷ್ಟವಾಗಿದ್ದ ಹಸುವೊಂದು ಹುಲಿಯ ಹಿಡಿತಕ್ಕೆ ಸಿಕ್ಕಿತು. ತನ್ನ ನಿಯಮಾನುಸಾರ ಹುಲಿಯು ಹಸುವಿಗೆ ಹೇಳಿತು, 'ಇಂದು ಭಗವಂತ ನಿನ್ನನ್ನು ನನಗೆ ಆಹಾರವಾಗಿ ಒದಗಿಸಿದ್ದಾನೆ. ನಿನ್ನನ್ನು ತಿಂದು ಹಸಿವು ನೀಗಿಸಿಕೊಳ್ಳುವ ಅಧಿಕಾರ ನನಗಿದೆ.'
 ಹಸು ಉತ್ತರಿಸಿತು, 'ನಿನ್ನಿಂದ ನಾನು ತಪ್ಪಿಸಿಕೊಳ್ಳಲಾರೆನೆಂದು ನಾನು ಬಲ್ಲೆ. ನನ್ನ ಸಾವಿನ ಬಗ್ಗೆ ನನಗೆ ಚಿಂತೆಯೂ ಇಲ್ಲ. ಆದರೆ ನನ್ನದೊಂದು ಬೇಡಿಕೆ. ಕೆಲವೇ ದಿನಗಳ ಹಿಂದೆ ನನಗೆ ಒಂದು ಕರು ಹುಟ್ಟಿದೆ. ನನ್ನ ಹಾಲೇ ಅದಕ್ಕೆ ಆಹಾರ. ಅದು ಹಟ್ಟಿಯಲ್ಲಿ ನನ್ನನ್ನು ಕಾಯುತ್ತಾ ಕುಳಿತಿದೆ.

ದಯವಿಟ್ಟು ನನ್ನನ್ನು ಹಟ್ಟಿಗೆ ಹೋಗಬಿಡು. ಕರುವಿಗೆ ಹಾಲು ಕುಡಿಸಿ ನಾನು ಹಿಂದಿರುಗಿ ಬರುವೆ. ನಂತರ ನೀನು ನನ್ನನ್ನು ತಿನ್ನು. ದಯವಿಟ್ಟು ನನಗೆ ಅಷ್ಟು ಅವಕಾಶ ಕೊಡು'.
 ಹುಲಿ, ಹಾಗೆ ಮಾಡಲುಂಟೇ ಎಂಬಂತೆ ಗಹಗಹಿಸಿ ನಕ್ಕಿತು. ಹಸು ಮತ್ತೆ ಬೇಡಿತು, 'ಅಣ್ಣಾ, ನನ್ನನ್ನು ನಂಬು. ತಪ್ಪದೆ ಹಿಂದಿರುಗಿ ಬರುವೆ. ತಪ್ಪಿದರೆ ನನಗೆ ಋಷಿಮುನಿಗಳನ್ನು ಕೊಂದ ಪಾಪ ಬರಲಿ'. ಹುಲಿಗೆ ಹಸುವಿನ ಮಾತನ್ನು ನಂಬಬಹುದೆನಿಸಿತು. ಸಮ್ಮತಿ ನೀಡಿತು.
ಅಮ್ಮ ಬಂದಳೆಂದು ಕುಪ್ಪಳಿಸುತ್ತಾ ಬಂದ ಕರುವಿಗೆ ಕಂಡದ್ದು ಅಮ್ಮನ ಸಪ್ಪೆ ಮುಖ. ಏನಾಯಿತೆಂದು ಕೇಳಿದ ಮಗುವಿನ ಪ್ರಶ್ನೆಗೆ ಅಮ್ಮ ಹೇಳಿತು, 'ಮಗೂ, ಹೊಟ್ಟೆ ತುಂಬ ಹಾಲು ಕುಡಿದುಬಿಡು. ನಾಳೆಯಿಂದ ನಿನಗೆ ಯಾರು ಹಾಲು ಕೊಡುವರೋ ಅರಿಯೆ. ಹಸಿದ ಹುಲಿ ನನ್ನನ್ನು ಹಿಡಿಯಿತು, ನಿನಗೆ ಹಾಲು ಕೊಟ್ಟು ಹಿಂದಿರುಗಿ ಅದಕ್ಕೆ ಆಹಾರವಾಗುತ್ತೇನೆಂದು ಮಾತು ಕೊಟ್ಟು ಬಂದಿದ್ದೇನೆ. ನಾನು ಹೋಗಲೇಬೇಕಾಗಿದೆ'.
'ಅಮ್ಮ ನಾನೂ ನಿನ್ನೊಡೆ ಬರುವೆ. ನೀನಿಲ್ಲದಿದ್ದರೆ ನಾನೂ ಸಾಯುವುದು ಖಂಡಿತ. ಹಾಗಿರುವಾಗ ನಿನ್ನ ಜತೆ ಬಂದೇ ಸಾಯುವೆ' ಎಂದು ಮಗು ಹಠ ಮಾಡಿತು.
'ಮಗೂ, ಭಾವಾವೇಶದಿಂದ ಸಾಯ ಹೋಗುವುದು ಆತ್ಮಹತ್ಯೆ. ಅದು ಸರಿಯಲ್ಲ. ನನ್ನ ಮಾತು ಕೇಳು. ಈ ಮಾತುಗಳನ್ನು ಸದಾ ನೆನಪಿನಲ್ಲಿಟ್ಟುಕೊ. ಕಾಡಿನಲ್ಲಿ ಮೇಯುವಾಗ, ನೀರು ಕುಡಿಯುವಾಗ ಎಚ್ಚರದಿಂದಿರು. ಮೇವಿನ ಆಸೆಯಿಂದ ಅಪಾಯಕಾರಿ ಜಾಗಗಳಿಗೆ ಹೋಗಬೇಡ. ದುರಾಸೆಯಿಂದ ನಾವು ಎಲ್ಲಿಯೂ ಸಲ್ಲದವರಾಗುತ್ತೇವೆ. ಎಲ್ಲರನ್ನೂ ಮನಸಾರೆ ಪ್ರೀತಿಸು. ದೇವರಲ್ಲಿ ನಂಬಿಕೆ ಇರಲಿ. ಸಾವಿಗೆ ಹೆದರಬೇಡ. ಬದುಕು ನಮಗೆ ನಿಶ್ಚಿತವಾಗಿ ಕೊಡುವ ಒಂದೇ ವಸ್ತು ಸಾವು. ಆದ್ದರಿಂದ ನಾನು ಸಾಯುವೆನೆಂದು ದುಃಖಿಸಬೇಡ'.
ಎಚ್ಚರಿಕೆಯ ಮಾತು ಮುಗಿಸಿದ ಹಸು ಕರುವನ್ನು ತಬ್ಬಿ, ಚುಂಬಿಸಿ, ಗೆಳತಿಯರ ಬಳಿ ಹೋಗಿ ತನ್ನ ತಬ್ಬಲಿ ಕೂಸನ್ನು ನೋಡಿಕೊಳ್ಳುವಂತೆ ಬೇಡಿಕೊಂಡು, 'ಇಲ್ಲಿರುವ ಎಲ್ಲರೂ ನನ್ನ ಕೂಸನ್ನು ಕಾಪಾಡಿ. ಸತ್ಯದ ಹಾದಿಯಲ್ಲಿ ಮುನ್ನೆಡೆಯುವ ಶಕ್ತಿಯನ್ನು ನನಗೆ ಕೊಡಿ' ಎಂದು ಪ್ರಾರ್ಥಿಸಿ ಹುಲಿಯ ಬಳಿಗೆ ಹಿಂದಿರುಗಿತು.
'ಹುಲಿರಾಯ, ಇದೋ ಸಿದ್ಧಳಿದ್ದೇನೆ" ಎಂದು ಹಸು ಹೇಳಿದಾಗ, ಹುಲಿಯಲ್ಲಿ ಬಹಳ ಮಾರ್ಪಾಟಾಗಿತ್ತು. ಹಸಿವು, ನಿದ್ರೆಗಳಿಗಿಂತ ಬೇರೆಯಾದದ್ದು, ಉನ್ನತವಾದದ್ದು ಬದುಕಿನಲ್ಲಿ ಏನೋ ಇದೆ ಎಂದು ಹುಲಿಗರಿವಾಗಿತ್ತು. ಆದರೆ ಆ ಉನ್ನತವಾದದ್ದನ್ನು ಹುಲಿಯಾಗಿದ್ದುಕೊಂಡು ಹೇಗೆ ಸಾಧಿಸುವುದು ಸಾಧ್ಯ ಎಂಬುದು ಅದರ ಸಮಸ್ಯೆಯಾಗಿತ್ತು. ಈ ಸಮಸ್ಯೆಗೆ ಹಸು ಪ್ರೀತಿಯಿಂದ ಉತ್ತರ ಹೇಳಿತು.
'ಈ ಕಾಲಯುಗದಲ್ಲಿ ಬದುಕಿನ ಗುರಿ ಏನೆಂದು ಅರಿಯಲು ಮನಃಶಾಂತಿ ಪಡೆಯಲು ಇರುವುದು ಒಂದೇ ದಾರಿ. ನನ್ನ ಸೋದರಾ, ಅದೇನೆಂದರೆ ದಾನ ಮಾಡುವುದು. ಇತರರಿಗೆ ಸಹಾಯಕನಾಗಿ ಬದುಕಿದವನು ಆ ಬ್ರಹ್ಮನಲ್ಲಿ ಲೀನನಾಗಿ ಶಾಂತಿ ಪಡೆಯುವನು'. ಕ್ಷಣ ತಡೆದು ಹುಲಿ ಹೇಳಿತು, 'ನೀನು ಯಾರಿರಬಹುದೆಂದು ನನಗೆ ತಿಳಿಯಿತು. ಈ ಹುಲಿಯ ಶರೀರದಿಂದ ನನ್ನನ್ನು ಬಿಡುಗಡೆ ಮಾಡು. ದಯವಿಟ್ಟು ನಿನ್ನ ಹೆಸರೇನು ಹೇಳು.'
'ನಾನು ನಂದಾ' ಎಂದಿತು ಹಸು.
ರಾಜನ ಕರ್ಮ ಸವೆದಿತ್ತು. ಹುಲಿಯ ಜನ್ಮ ಮುಗಿಯಿತು. ಇದು ಪದ್ಮಪುರಾಣದ ಕತೆ. ಸತ್ಯ, ಜೀವನಧರ್ಮ ಇವುಗಳನ್ನು ಮನ ಮುಟ್ಟುವಂತೆ ಹೇಳಿರುವ ಕತೆ.
ಎಷ್ಟೋ ಸಾವಿರ ವರ್ಷಗಳ ಹಿಂದೆ ಹುಟ್ಟಿ ಬೆಳೆದಿದ್ದ, ಸತ್ಯ- ಧರ್ಮಗಳನ್ನು ಸಾರಲೆಂದೇ ರೂಪ ತಳೆದಿದ್ದ ಈ ಕತೆಯನ್ನು ಜೀರ್ಣಿಸಿಕೊಂಡ ಜಾನಪದ ಕವಿಯೊಬ್ಬ ಪುಣ್ಯಕೋಟಿಗೆ ಜನ್ಮ ನೀಡಿದ. ಕನ್ನಡದ ಈ ಮಗಳು ನಿರಂತರವಾಗಿ ಬೆಳೆಯುತ್ತಲೇ, ಬದುಕುತ್ತಲೇ ಉಳಿಯುವಳೆಂದು, ಕನ್ನಡಿಗರೆಲ್ಲರ ಮನವನ್ನು ಕರಗಿಸಿ, ಕಣ್ಣೀರಾಗಿ ಹರಿಸುವಳೆಂದು ಆ ಕವಿಯಾಗಲೀ, ಪದ್ಮಪುರಾಣದ ಋಷಿಗಳಾಗಲೀ ಅರಿತಿದ್ದರೆ ಸಾರ್ಥಕತೆಯ ಆನಂದವನ್ನು ಎಷ್ಟು ಕಣ್ಣೀರಾಗಿ ಹರಿಸುತ್ತಿದ್ದರೋ.  ಕನ್ನಡ ಕವಿಯ ಹಾಡಿನಲ್ಲಿ ನಂತರ ಪುಷ್ಕರದಿಂದ ಕರ್ನಾಟ ದೇಶಕ್ಕೆ ಬಂದು ಮಲೆಮಧ್ಯದಲ್ಲಿ ಕಾಳಿಂಗನ ಪುಣ್ಯಕೋಟಿಯಾದಳು. ಪ್ರಭಂಜನ ರಾಜ ದೂರ ಉಳಿದ. ಈ ಕವಿಗೆ ಬೇಕಾಗಿದ್ದುದು ಜನಮನವನ್ನು ಸೂರೆಗೊಂಡು, ಕಣ್ಣೀರು ಉಕ್ಕಿ ಹರಿಯುವ ಸಂದರ್ಭದಲ್ಲಿ 'ಸತ್ಯವೇ ತಾಯಿ ತಂದೆ, ಸತ್ಯವೇ ಭಗವಂತ' ಎಂಬ ಪರಮ ಸತ್ಯವನ್ನು ಜನಮನದಲ್ಲಿ ಬಿತ್ತುವುದು.
ಕನ್ನಡದ ಜನ ಈ ದನಗಾಹಿ ಕಾಳಿಂಗನ ಪುಣ್ಯಕೋಟಿಯ ಘನ ಉದ್ದೇಶವನ್ನು ಮರೆಯಲಿಲ್ಲ. ಇಂದಿಗೂ ಕನ್ನಡಿಗರು ಎಲ್ಲೇ ಇರಲಿ, ಹಳ್ಳಿಯಲ್ಲಿರಲಿ, ದಿಲ್ಲಿಯಲ್ಲಿರಲಿ, ವಿದೇಶದಲ್ಲೇ ಇರಲಿ. ಎಲ್ಲಿದ್ದರೂ ಗೋವಿನ ಹಾಡನ್ನು ಮರೆತಿಲ್ಲ. ಅಕ್ಕರೆಯಿಂದ ಹಾಡುತ್ತಾರೆ. ಮಕ್ಕಳಿಗೆ ಕಲಿಸುತ್ತಾರೆ. ನಾಟಕವಾಡಿ ರಂಗಮಂಚದ ಮೇಲೆ ಅಭಿನಯಿಸುತ್ತಾರೆ. ಮತ್ತೆಮತ್ತೆ ಕನ್ನಡಜನ ಪುಣ್ಯಕೋಟಿ ಮತ್ತು ಅವಳ ಕರುವಿನ ಅಗಲಿಕೆಯ ನೋವಿಗಾಗಿ ಕಣ್ಣೀರು ಸುರಿಸುತ್ತಲೇ ಬಂದಿದ್ದಾರೆ.
ಕಣ್ಣೀರು ಸುರಿಸಿ ಸುಮ್ಮನಾಗದೆ, ಪುಣ್ಯಕೋಟಿಯ ವ್ಯಕ್ತಿತ್ವವನ್ನು, ಅವಳ ತ್ಯಾಗ, ಸತ್ಯಗಳನ್ನು ಗೌರವಿಸಿದ ಹುಲಿಯ ವ್ಯಕ್ತಿತ್ವವನ್ನು ಕತೆಯ ಮೂಲ ಉದ್ದೇಶವನ್ನು ವಿರೂಪಗೊಳಿಸದೆ ಉಳಿಸಿಕೊಂಡೇ ಬಂದಿದ್ದಾರೆ. ಅದು ಅತ್ಯಂತ ಶ್ಲಾಘನೀಯ. ಪುಣ್ಯಕೋಟಿಯ ಸತ್ಯಪ್ರೇಮ, ಹಸಿದ ಹುಲಿಯ ಪ್ರಕೃತಿ ಧರ್ಮವನ್ನೂ ಗೆಲ್ಲುವಷ್ಟು ಪ್ರಭಾವಶಾಲಿ ಎಂಬ ಪರಮಸತ್ಯವನ್ನು ಎತ್ತಿ ಹಿಡಿಯುತ್ತಲೇ ಬಂದಿದ್ದಾರೆ.
ಆದ್ದರಿಂದಲೇ ಯಾರೂ, ಎಂದೂ, ಯಾವುದೇ ಕಾರಣಕ್ಕೂ, ಪುಣ್ಯಕೋಟಿಯ ಕತೆಗೆ ಬೇರೆ ದಿಕ್ಕು ತೋರದಿರಲಿ. ಬೇರೆ ಬೇರೆಯ ಉದ್ದೇಶಗಳಿಗಾಗಿ ಅವಳ ಸ್ವರೂಪವನ್ನು, ಅವಳ ಸತ್ಯಪ್ರೇಮವನ್ನು ಮಾರ್ಪಡಿಸದಿರಲಿ. ಪುಣ್ಯಕೋಟಿ ಸತ್ಯವನ್ನು ಸಾರುವ ತಾಯಿಯಾಗಿಯೇ ಉಳಿಯಲಿ. ಸತ್ಯವೇ ನಮ್ಮ ಭಗವಂತ ಎಂದು ಹೇಳುತ್ತಲೇ ಜನಮನದಲ್ಲಿ ಅವಳು ಚಿರಾಯುವಾಗಿರಲಿ.
ಹಾಗಲ್ಲವಾದರೆ ಪುಣ್ಯಕೋಟಿ ಬೆಟ್ಟದಿಂದ ಹಾರಿಬಿದ್ದು ಪ್ರಾಣ ಕಳೆದುಕೊಂಡಾಳು! ಜೋಕೆ!! <

- ಸಾವಿತ್ರಿ ರೆಡ್ಡಿ
savithrikreddy@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com